logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್​ ನ್ಯೂಸ್​: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ

ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್​ ನ್ಯೂಸ್​: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ

Meghana B HT Kannada

Sep 09, 2023 10:44 AM IST

google News

ಮುಖ್ಯಮಂತ್ರಿ ಸಿದ್ದರಾಮಯ್ಯ

    • ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮ ಆಯ್ಕೆಯ ಆಟೋ ರಿಕ್ಷಾ, ಟ್ಯಾಕ್ಸಿ ಅಥವಾ ಮೂರು-ನಾಲ್ಕು ಚಕ್ರದ ಗೂಡ್ಸ್​ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇಕಡಾ 50 ರಷ್ಟು ಸಬ್ಸಿಡಿ ಅಥವಾ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗಲಿದೆ. ಅಲ್ಲದೇ ಉಳಿದ ಮೊತ್ತಕ್ಕೆ ಸರ್ಕಾರವು ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ವಾಹನ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮ ಆಯ್ಕೆಯ ಆಟೋ ರಿಕ್ಷಾ, ಟ್ಯಾಕ್ಸಿ ಅಥವಾ ಮೂರು-ನಾಲ್ಕು ಚಕ್ರದ ಗೂಡ್ಸ್​ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇಕಡಾ 50 ರಷ್ಟು ಸಬ್ಸಿಡಿ ಅಥವಾ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗಲಿದೆ. ಅಲ್ಲದೇ ಉಳಿದ ಮೊತ್ತಕ್ಕೆ ಸರ್ಕಾರವು ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

ಅರ್ಹತೆಗಳು

- ಯೋಜನೆಯ ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು

- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು

- 18 ರಿಂದ 55 ವರ್ಷದವರಾಗಿರಬೇಕು

- ವಾರ್ಷಿಕ ಆದಾಯವು 4.5 ಲಕ್ಷಕ್ಕಿಂತ ಕಡಿಮೆ ಇರಬೇಕು

- ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, "ಚಾಲಕ ಚಾಲಕನಾಗಿ ಉಳಿಯಬಾರದು. ವಾಹನದ ಮಾಲೀಕರೂ ಆಗಬೇಕು. ಅವನು ತನ್ನ ಆಯ್ಕೆಯ 8 ಲಕ್ಷದವರೆಗಿನ ಮೌಲ್ಯದ ನಾಲ್ಕು ಚಕ್ರದ ವಾಹನವನ್ನು ಖರೀದಿಸಬಹುದು. ಸರ್ಕಾರವು 3 ಲಕ್ಷ ಸಹಾಯಧನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ನಾವು ಸಾಲಕ್ಕೂ ಸಹಾಯ ಮಾಡುತ್ತೇವೆ. ಅವರು ಕಾರಿನ ಮೌಲ್ಯದ 10% ಮುಂಗಡ ಪಾವತಿಯನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ಕಾರಿನ ಮೌಲ್ಯವು 8 ಲಕ್ಷ ರೂ ಆಗಿದ್ದರೆ, ಅವರು 80,000 ಆರಂಭಿಕ ಪಾವತಿಯನ್ನು ಮಾಡಬೇಕಾಗುತ್ತದೆ. ನಾವು 3 ಲಕ್ಷ ಸಬ್ಸಿಡಿ ನೀಡುತ್ತೇವೆ. ಉಳಿದ ಮೊತ್ತಕ್ಕೆ ಬ್ಯಾಂಕ್‌ ಸಾಲ ನೀಡಲು ಸಹಾಯ ಮಾಡುತ್ತೇವೆ. ಹಿಂದಿನ ಸಿದ್ದರಾಮಯ್ಯನವರ ಆಡಳಿತದಲ್ಲಿ ಈ ಯೋಜನೆ ಇತ್ತು. ಬಿಜೆಪಿ ಅದನ್ನು ತೆಗೆದುಹಾಕಿದೆ" ಎಂದು ಹೇಳಿದರು.

ಬಿಜೆಪಿ ಟೀಕೆ

ಸಿದ್ದರಾಮಯ್ಯ ಸರ್ಕಾರದ ಈ ಯೋಜನೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು, ಇದೊಂದು 'ಧರ್ಮ ಉದ್ದೇಶಿತ ಯೋಜನೆ' ಎಂದು ಹೇಳಿದೆ. "ಕಾಂಗ್ರೆಸ್​ ಸರ್ಕಾರ ವಿದ್ಯುತ್ ಶುಲ್ಕವನ್ನು ದ್ವಿಗುಣಗೊಳಿಸಿದೆ. ಅಬಕಾರಿ ಸುಂಕ, ಹಾಲಿನ ಬೆಲೆಗಳು, ರಸ್ತೆ ತೆರಿಗೆ ಹೆಚ್ಚಿಸಿದೆ. ಇದೀಗ ನಿರ್ದಿಷ್ಟವಾಗಿ ಅಲ್ಪಸಂಖ್ಯಾತರಿಗಾಗಿ 'ಧರ್ಮ ಉದ್ದೇಶಿತ ಯೋಜನೆ'ಗೆ ನಿಧಿಯನ್ನು ನೀಡುತ್ತಿದೆ. ಕಷ್ಟಪಟ್ಟು ದುಡಿದು ತೆರಿಗೆ ಪಾವತಿಸುವ ಮಧ್ಯಮ ವರ್ಗದ ಕುಟುಂಬಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್ ತನ್ನ ಪ್ರಮುಖ ಮತದಾರರನ್ನು ಸಮಾಧಾನಪಡಿಸಲು ಯಾವುದೇ ಹಂತಕ್ಕೆ ಹೋಗುತ್ತದೆ" ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

"ನಾಚಿಕೆಗೇಡಿತನಕ್ಕೆ ಹೆಸರಿದ್ದರೆ ಖಂಡಿತಾ ಅದನ್ನು ಕಾಂಗ್ರೆಸ್ ಎಂದು ಕರೆಯಲಾಗುತ್ತಿತ್ತು. ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಸರ್ಕಾರವು ತನ್ನ ಕೋರ್ ಮತದಾರರ ಮೇಲೆ ದೊಡ್ಡ ಪ್ರಮಾಣದ ಆಫರ್​ ಮೂಲಕ ತನ್ನ ತುಷ್ಟೀಕರಣ ರಾಜಕಾರಣವನ್ನು ಮುಂದುವರೆಸಿದೆ. ಇದು ಸುಳ್ಳು ಮತ್ತು ಭರವಸೆಗಳಿಗೆ ಬಿದ್ದು ಕೋಮುವಾದಿ ಕಾಂಗ್ರೆಸ್‌ಗೆ ಮತ ಹಾಕಿದ ಬಹುಸಂಖ್ಯಾತರಿಗೆ ಮಾಡಿದ ದೊಡ್ಡ ಅವಮಾನ" ಎಂದು ಸಿಟಿ ರವಿ ಟ್ವೀಟ್​ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ