Nalin Kumar Kateel: ಮೇಡಂ ಸೋನಿಯಾಗೆ ಸೂಟ್‌ಕೇಸ್ ಕಳುಹಿಸಿಯೇ ಸಿದ್ದರಾಮಯ್ಯ ಸಿಎಂ ಆಗಿದ್ದು: ಕಟೀಲ್ ಆರೋಪ!
Sep 27, 2022 06:50 PM IST
ನಳಿನ್ ಕುಮಾರ್ ಕಟೀಲ್
- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಣ ನೀಡಿದ್ದನ್ನು ಮರೆತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಕಟೀಲ್ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ತಾವು ಈ ರಾಜ್ಯದ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಣ ನೀಡಿದ್ದನ್ನು ಮರೆತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ರಾಜ್ಯದ ಸಿಎಂ ಆಗಲು ಸೋನಿಯಾ ಗಾಂಧಿ ಅವರಿಗೆ ಯಾವು ಕೊಟ್ಟಿದ್ದ ಹಣವೆಷ್ಟು ಎಂಬುದನ್ನು ಸಿದ್ದರಾಮಯ್ಯ ಘೋಷಿಸಲಿ ಎಂದು ಸವಾಲು ಹಾಕಿದರು.
ಭ್ರಷ್ಟಾಚಾರದ ಆರೋಪದಡಿ ತಾವು ಜೈಲಿಗೆ ಹೋಗಬಾರದು ಎಂದು ಸಿದ್ಧರಾಮಯ್ಯ ಲೋಕಾಯುಕ್ತವನ್ನು ಮುಚ್ಚಿ ಹಾಕಿದ್ದರು. ಈಗ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ. ಸಿದ್ದರಾಮಯ್ಯ ಅವಧಿಯ ಹಗರಣಗಳನ್ನು ಬಯಲಿಗೆಳೆಯದೇ ಬಿಡುವುದಿಲ್ಲ ಎಂದು ಕಟೀಲ್ ಇದೇ ವೇಳೆ ಗುಡುಗಿದರು.
ಹಗರಣಗಳ ಬಗ್ಗೆ ಮತ್ತು ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಿರುವ ಸಿದ್ದರಾಮಯ್ಯ, ತಮ್ಮ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳನ್ನು ಮರೆಮಾಚಿದ್ದಾರೆ. ನಮ್ಮ ಸರ್ಕಾರ ಈ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಈ ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಇದ್ದರೆ, ಅದು ಸಿದ್ದರಾಮಯ್ಯ ಮಾತ್ರ ಎಂದು ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು.
2013ರ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಮತ್ತು ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದರು. ಆಗ ದಲಿತ ಸಿಎಂ ವಿಷಯ ಭಾರಿ ಚರ್ಚೆಯಲ್ಲಿತ್ತು. ಡಿ. ಕೆ. ಶಿವಕುಮಾರ್ ಮತ್ತು ಆರ್‌ವಿ ದೇಶಪಾಂಡೆ ಕೂಡ ಸಿಎಂ ರೇಸ್‌ನಲ್ಲಿದ್ದರು. ಆದರೆ ಸಿದ್ದರಾಮಯ್ಯ ಅವರು ಸೋನೊಯಾ ಗಾಂಧಿಗೆ ಅಪಾರ ಪ್ರಮಾಣದ ಹಣ ನೀಡಿ ಸಿಎಂ ಆದರು ಎಂದು ಕಟೀಲ್ ಆರೋಪಿಸಿದರು.
‘ಮೇಡಂ ಸೋನಿಯಾ ಅವರಿಗೆ ಹಣ ನೀಡಿ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ನಡೆಸಿದ್ದಾರೆ. ಪೇ- ಸಿಎಂ ಎಂಬುದರಲ್ಲಿ ಎರಡು ಅರ್ಥವಿದೆ. ಪೇ -ಕಾಂಗ್ರೆಸ್ ಮೇಡಂ ಮತ್ತೊಂದು ಪೇ -ಸಿಎಂ ಸಿದ್ದರಾಮಯ್ಯ. ಪೇಮೆಂಟ್ ಮಾಡಿ ಸಿದ್ದರಾಮಯ್ಯ ತಮ್ಮ ಸೀಟನ್ನು ಗಟ್ಟಿಮಾಡಿಕೊಂಡರು ಎಂದು ಬಿಜೆಪಿ ರಾಜ್ಯಾಧಕ್ಷರು ಹರಿಹಾಯ್ದರು.
ಇನ್ನು ಪೇಸಿಎಂ ಪೋಸ್ಟರ್ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರೂಪಿಸಿದ ಒಳತಂತ್ರ. ಸಿದ್ದರಾಮಯ್ಯ ಅವರು ಸೋನಿಯಾ ಅವರಿಗೆ ಹಣ ನೀಡಿ ಸಿಎಂ ಆಗಿದ್ದರು ಎಂಬುದನ್ನು ನೆನೆಸಲು ಡಿಕೆಶಿ ಪೇಸಿಎಂ ಅಭಿಯಾನ ನಡೆಸಿದರು ಎಂದು ಕಟೀಲ್ ಕಾಂಗ್ರೆಸ ನಾಯಕರ ಕಾಲೆಳೆದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಿಎಸ್ಐ ನೇಮಕಾತಿ ಹಗರಣ ನಡೆದಿತ್ತು. ಆದರೆ ಆಗ ಯಾರನ್ನೂ ಬಂಧಿಸಲಿಲ್ಲ. ನಾವು ಈಗ ಓರ್ವ ಎಡಿಜಿಪಿಯನ್ನು ಬಂಧಿಸಿದ್ದೇವೆ. ಶಿಕ್ಷಕರ ನೇಮಕಾತಿ ಹಗರಣ ಕೂಡ ಕಾಂಗ್ರೆಸ್ ಅವಧಿಯಲ್ಲೇ ನಡೆದಿತ್ತು ಎಂದು ಕಟೀಲ್ ಗಂಭೀರ ಆರೋಪಗಳನ್ನು ಮಾಡಿದರು.
ಡ್ರಗ್ ಮತ್ತು ಮರಳು ಮಾಫಿಯಾ ಹಣದಿಂದಾಗಿ ಕಾಂಗ್ರೆಸ್ ಸರ್ಕಾರ ಉಸಿರಾಡುತ್ತಿತ್ತು. ಕಾಂಗ್ರೆಸ್‌ನವರಿಗೆ ಮೌಲ್ಯಾಧಾರಿತ ರಾಜಕಾರಣ ಮಾಡಿ ಗೊತ್ತಿಯೇ ಇಲ್ಲ ಎಂದು ನಳಿನ್ ಕುಮಾರ್ ಹರಿಹಾಯ್ದರು. ಬಿಎಸ್ ಯಡಿಯೂರಪ್ಪ ಸಿಎಂ ಆದ ಮೇಲೆ ಹಾಗೂ ಬಸವರಾಜ ಬೊಮ್ಮಾಯಿ ಗೃಹ ಸಚಿವರಾದ ಮೇಲೆ ಈ ಮಾಫಿಯಾವನ್ನು ನಿಯಂತ್ರಣಕ್ಕೆ ತರಲಾಯಿತು. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂಬುದು ಈ ರಾಜ್ಯದ ಜನರಿಗೆ ಗೊತ್ತು ಎಂದು ಕಟೀಲ್ ಕಿಡಿಕಾರಿದರು.
ಕೆಎಫ್‌ಡಿ, ಎಸ್‌ಡಿಪಿಐ ರಾಜ್ಯದಲ್ಲಿ ಗೊಂದಲ ಹಾಗೂ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಇದಕ್ಕೆ ಸಿದ್ಧರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದ ಕಟೀಲ್, ಕೋಮು ಧ್ರುವೀಕರಣಕ್ಕೆ ಸಿದ್ದರಾಮಯ್ಯ ಮತೀಯ ಶಕ್ತಿಗಳನ್ನು ಬಳಸಿಕೊಂಡರು ಎಂದು ಆರೋಪಿಸಿದರು. ನಮ್ಮ ಸರ್ಕಾರ ಬಂದ ಮೇಲೆ ಕೋಮು ವಿಚಿದ್ರಕಾರಿ ಶಕ್ತಿಗಳನ್ನು ನಿಯಂತ್ರಿಸುವ ಕಾರ್ಯ ಆಗುತ್ತಿದೆ. ಗಲಭೆ, ಹತ್ಯೆ, ಕೋಮುಭಾವನೆ ಕೆರಳಿಸುವವರ ಕೆಲಸ ಮಾಡುವವರ ವಿರುದ್ಧ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಟೀಲ್ ಸ್ಪಷ್ಟಪಡಿಸಿದರು.