ಮುಡಾಗೆ ಪತ್ರ ಬರೆದ ಪತ್ನಿ ಪಾರ್ವತಿ ನಿರ್ಧಾರ ಸಮರ್ಥಿಸಿದ ಸಿದ್ದರಾಮಯ್ಯ; ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದ ಬಿಜೆಪಿ
Oct 01, 2024 08:26 AM IST
ಮುಡಾಗೆ ಪತ್ರ ಬರೆದ ಪತ್ನಿ ಪಾರ್ವತಿ ನಿರ್ಧಾರ ಸಮರ್ಥಿಸಿದ ಸಿದ್ದರಾಮಯ್ಯ
- MUDA Site Scam: ಮುಡಾ ಆಯುಕ್ತರಿಗೆ ಪತ್ರ ಬರೆದು 14 ಸೈಟ್ಗಳು ವಾಪಸ್ ನೀಡುವ ತೆಗೆದುಕೊಂಡ ಬಳಿಕ ಪತ್ನಿ ಪಾರ್ವತಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ನನ್ನ ಮೇಲಿನ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಪಡೆದಿದ್ದ ಬದಲಿ 14 ಸೈಟ್ಗಳ ವಿವಾದದ ಸ್ವರೂಪ ದಿನೆದಿನೇ ತೀವ್ರವಾಗುತ್ತಿರುವ ಕಾರಣ ಪತ್ನಿ ಪಾರ್ವತಿ ಅವರು ನಿವೇಶನ ಮರಳಿಸುವುದಾಗಿ ಪತ್ರ ಬರೆದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಪತ್ನಿಯ ನಡೆ ಸಮರ್ಥಿಸಿಕೊಂಡಿದ್ದಾರೆ. ಪಾರ್ವತಿ ಅವರು ಮುಡಾಗೆ 2 ಪುಟಗಳ ಪತ್ರ ಬರೆದಿದ್ದು, ನನ್ನ ಪತಿಗಿಂತ ಯಾವುದೂ ದೊಡ್ಡದಲ್ಲ ಎಂದು ಉಲ್ಲೇಖಿಸಿದ್ದಾರೆ. ಆದರೆ, ಬಿಜೆಪಿ, ಸಿದ್ದರಾಮಯ್ಯ ಟ್ವೀಟ್ಗೆ ತಿರುಗೇಟು ನೀಡಿದೆ. ಸೆಪ್ಟೆಂಬರ್ 30ರ ತಡರಾತ್ರಿ ಮುಡಾ ಆಯುಕ್ತರಿಗೆ ಬರೆದ ಪತ್ರವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಪತ್ನಿ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ಈ ಹಗರಣದ ಎ1, ಪಾರ್ವತಿ ಎ2 ಆರೋಪಿಯಾಗಿದ್ದಾರೆ. ಅಲ್ಲದೆ, ಸಿಎಂ ವಿರುದ್ಧ ಇ.ಡಿ ಕೂಡ ಪ್ರಕರಣ ದಾಖಲಿಸಿಕೊಂಡಿದೆ. ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿ ಸಿದ್ದರಾಮಯ್ಯ ವಿರುದ್ಧ ಟೀಕೆಗಳ ದಂಡಯಾತ್ರೆ ನಡೆಸುತ್ತಿದ್ದಾರೆ. ಅಲ್ಲದೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪೋಸ್ಟ್ನಲ್ಲಿ ಏನಿದೆ?
ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ. ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ. ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದು, ಮುಡಾ, ದ್ವೇಷರಾಜಕಾರಣ, ಸತ್ಯಮೇವಜಯತೆ ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಮತ್ತೊಂದೆಡೆ ಬಿಜೆಪಿ ತಿರುಗೇಟು ನೀಡಿದೆ. ಸಿದ್ದರಾಮಯ್ಯ ಹಂಚಿಕೊಂಡ ಪೋಸ್ಟ್ಗೆ ಪ್ರತಿಕ್ರಿಯಿಸಿ ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ವಾಗ್ದಾಳಿ ನಡೆಸಿದೆ. ಅಲ್ಲದೆ ಅದಕ್ಕೊಂದು ವಿಡಿಯೋ ಸೇರಿಸಿದ್ದು, ಆ್ಯನಿಮೇಷನ್ನಲ್ಲಿ ಸಿಎಂ ಮಾತನಾಡಿ ಸೈಟ್ ವಾಪಸ್ ಕೊಡ್ತೀನಿ ನನ್ನ ಈ ಕೇಸ್ನಿಂದ ಬಿಟ್ಟುಬಿಡಿ ಎನ್ನುವಂತೆ ಎಡಿಟ್ ಮಾಡಲಾಗಿದೆ.
ವಿರೋಧ ಪಕ್ಷ ನಾಯಕ ಆರ್ ಅಶೋಕ್ ಟ್ವೀಟ್
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ಪಡೆದಿದ್ದ ಸೈಟುಗಳನ್ನು ವಾಪಸ್ಸು ನೀಡುವ 'ದೊಡ್ದ' ಮನಸ್ಸು ಮಾಡಿರುವುದು. ಇದು ಸಂವಿಧಾನವನ್ನು ರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ. ರಾಜ್ಯಪಾಲರ ನಿರ್ಧಾರವನ್ನ ಎತ್ತಿ ಹಿಡಿದ ನ್ಯಾಯಾಂಗಕ್ಕೆ ಸಿಕ್ಕ ದೊಡ್ಡ ಜಯ. ಜಗ್ಗಲ್ಲ, ಬಗ್ಗಲ್ಲ ಎಂದು ಅಧಿಕಾರದ ಮದದಿಂದ ಮೆರೆಯುತ್ತಿದ್ದವರ ವಿರುದ್ಧ ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನಕ್ಕೆ ಸಿಕ್ಕ ದೊಡ್ಡ ಜಯ ಎಂದು ಪೋಸ್ಟ್ ಮಾಡಿದ್ದಾರೆ.
ರಾಜೀನಾಮೆಯೊಂದೇ ನಿಮಗೆ ಉಳಿದಿರುವ ದಾರಿ ಎಂದ ವಿಜಯೇಂದ್ರ
ಕೆಟ್ಟ ಮೇಲೆ ಬುದ್ಧಿ ಬಂತು' ಎಂಬ ಗಾದೆ ಮಾತು ಮುಖ್ಯಮಂತ್ರಿಗಳಿಗೆ ಅನ್ವಯಿಸುತ್ತಿದೆ. ಮುಖ್ಯಮಂತ್ರಿ ಮನೆಯವರು ಎಂದರೆ ಬಿಟ್ಟುಬಿಡಬೇಕಾ? 62 ಕೋಟಿ ಕೊಟ್ಟರೆ ನಿವೇಶನಗಳನ್ನು ಹಿಂದಿರುಗಿಸುತ್ತೇನೆ" ಎಂದು ಅಂದು ಆರ್ಭಟಿಸಿದ್ದ ಸಿದ್ದರಾಮಯ್ಯ ಅವರು ಇಂದು ಬೇಷರತ್ತಾಗಿ ಅವರ ಪತ್ನಿಯವರಿಂದ ನಿವೇಶನ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದರು, ನಿಮಗೆ ದೊರೆತ 14 ಅಕ್ರಮ ನಿವೇಶನಗಳು 5000 ಸಾವಿರಕ್ಕೂ ಹೆಚ್ಚು ನಿವೇಶನಗಳ ಲೂಟಿಕೋರತನಕ್ಕೆ ರಕ್ಷಣೆಯಾಗಿ ನಿಂತಿದೆ ಎಂದು ಆರೋಪಿಸಿ ನಾವು ನಡೆಸಿದ ‘ಮೈಸೂರು ಚಲೋ’ ಪಾದಯಾತ್ರೆಗೆ ಪರ್ಯಾಯ ಸಮಾವೇಶ ಆಯೋಜಿಸಿ ಭಂಡತನದ ಸಮರ್ಥನೆಗಿಳಿದರು ಎಂದು ಬಿಜಪಿ ರಾಜ್ಯಾಧ್ಯಕ್ಷ ಕಿಡಿಕಾರಿದ್ದಾರೆ.
ಸಾಮಾಜಿಕ ಕಾರ್ಯಕರ್ತರ ನ್ಯಾಯಾಲಯದ ಹೋರಾಟಕ್ಕೆ ಅಸ್ತು ಎಂದ ಘನತೆವೆತ್ತ ರಾಜ್ಯಪಾಲರನ್ನು ಅವಹೇಳನ ಮಾಡಿದರು, ಅವರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿದರು, ನ್ಯಾಯಾಲಯದಲ್ಲಿ ಜಯ ದೊರಕದ ಹಿನ್ನಲೆಯಲ್ಲಿ ಕಾನೂನಿನ ಕುಣಿಕೆ ಬಿಗಿತ ಹೆಚ್ಚಾದಂತೆ, CBI-ED ತನಿಖೆಗಳ ನಿರೀಕ್ಷೆಯಿಂದ ಬೆದರಿದ ಮುಖ್ಯಮಂತ್ರಿಗಳು ಏಕಾಏಕಿ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿರುವುದು ಅವರು ಕಾನೂನು ಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ. ಅಂದ ಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಹುದು ಎಂದು ಅಂದುಕೊಂಡಿದ್ದರೆ ಅದು ಅವರ ಅಜ್ಞಾನವನ್ನು ಪ್ರತಿಬಿಂಬಿಸುತ್ತದೆ, ನೀವೇಶನಗಳನ್ನು ಹಿಂದಿರುಗಿಸಿ ತಪ್ಪೊಪ್ಪಿಕೊಂಡಂತೆ ಮುಖ್ಯಮಂತ್ರಿ ಸ್ಥಾನಕ್ಕೂ ರಾಜಿನಾಮೆ ನೀಡಿದರೆ ಮರೆತು ಹೋಗಿರುವ ತಮ್ಮ ನೈತಿಕತೆ ಪ್ರಜ್ಞೆ ಪ್ರದರ್ಶಿಸಿದಂತಾಗುತ್ತದೆ ಎಂದಿದ್ದಾರೆ.