ರಾಜ್ಯದಲ್ಲಿ ಸಿಬಿಐ ತನಿಖೆಗಿದ್ದ ಮುಕ್ತ ಅವಕಾಶ ರದ್ದುಪಡಿಸಿದ ಸಿದ್ದರಾಮಯ್ಯ ಸರ್ಕಾರ; ಸಿಬಿಐ ಕಂಡರೆ ಭಯವೇಕೆ? ಬಿಜೆಪಿ ಪ್ರಶ್ನೆ
Sep 26, 2024 08:21 PM IST
ರಾಜ್ಯದಲ್ಲಿ ಸಿಬಿಐ ತನಿಖೆಗಿದ್ದ ಮುಕ್ತ ಅವಕಾಶ ರದ್ದುಪಡಿಸಿದ ಸಿದ್ದರಾಮಯ್ಯ ಸರ್ಕಾರ
- ಮುಡಾ ಹಗರಣಕ್ಕೆ ಸಂಬಂಧಿಸಿ ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಸಿಬಿಐ ತನಿಖೆಗೆ ಇದ್ದ ಮುಕ್ತ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ರದ್ದುಪಡಿಸಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ, ಸಿಬಿಐ ಕಂಡರೆ ಭಯವೇಕೆ ಎಂದು ಪ್ರಶ್ನಿಸಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ರಾಜ್ಯದಲ್ಲಿ ನೀಡಲಾಗಿದ್ದ ಮುಕ್ತ ಮತ್ತು ಸಾಮಾನ್ಯ ಅವಕಾಶವನ್ನು ಹಿಂಪಡೆದಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಡಾ ಹಗರಣ ಕುರಿತು ತನಿಖೆಗೆ ರಾಜ್ಯ ಹೈಕೋರ್ಟ್ ಆದೇಶ ನೀಡಿದ ಮರುದಿನವೇ ಈ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ. ಸಿಬಿಐ ತಪ್ಪು ಹಾದಿಯಲ್ಲಿ ನಡೆಯಬಾರದು ಎಂಬ ಏಕೈಕ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಕಾಯಿದೆ-1946 ಸೆಕ್ಷನ್ 6 ಪ್ರಕಾರ ಸಿಬಿಐ ತನಿಖೆ ನಡೆಸಲು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕಾಗುತ್ತದೆ.
ರಾಜ್ಯ ಸರ್ಕಾರ ವರ್ಗಾಯಿಸಿದ ಅನೇಕ ಪ್ರಕರಣಗಳಲ್ಲಿ ಸಿಬಿಐ ಚಾರ್ಜ್ ಶೀಟ್ ಹಾಕಿಲ್ಲ. ಅನೇಕ ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ ಅನೇಕ ಪ್ರಕರಣಗಳನ್ನು ಕುರಿತು ತನಿಖೆ ನಡೆಸಲು ನಿರಾಕರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ಸಿಬಿಐ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಹಾಗಾಗಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸಿಬಿಐ ಸಂಸ್ಥೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಆದ್ದರಿಂದ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಪ್ರಕರಣ ಕುರಿತು ಸಿಬಿಐ ಮೂಲಕ ತನಿಖೆ ನಡೆಯಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕಾಗುತ್ತದೆ. ರಾಜ್ಯದಲ್ಲಿನ ಪ್ರಕರಣಗಳನ್ನು ಪರಿಶೀಲನೆ ನಡೆಸಿ ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿಬಿಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ನಿರ್ಧರಿಸಿದೆ.
ಸಚಿವ ಸಂಪುಟದ ಅನುಮತಿ ಪಡೆದರೆ ರಾಜ್ಯಪಾಲರಿಗೆ ಉತ್ತರಿಸಲು ಅವಕಾಶ
ಇನ್ನು ಮುಂದೆ ಸಚಿವ ಸಂಪುಟದ ಅನುಮತಿ ಇಲ್ಲದೆ ಮುಖ್ಯ ಕಾರ್ಯದರ್ಶಿ ಅಥವಾ ಯಾವುದೇ ಅಧಿಕಾರಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಯಾವುದೇ ಮಾಹಿತಿ ನೀಡುವಂತಿಲ್ಲ ಎಂಬ ನಿರ್ಧಾರವನ್ನು ಸಚಿವ ಸಂಪುಟ ತೆಗೆದುಕೊಂಡಿದೆ. ರಾಜ್ಯಪಾಲರ ಕಚೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅಥವಾ ಸರ್ಕಾರದ ಯಾವುದೇ ಅಧಿಕಾರಿಗೆ ಸ್ವೀಕೃತವಾಗುವ ಪತ್ರಗಳ ವಿಲೇವಾರಿ ಕೈಗೊಳ್ಳುವ ಮುನ್ನ ಸಚಿವ ಸಂಪುಟದ ಗಮನಕ್ಕೆ ತರಬೇಕು. ತದನಂತರ ಸಚಿವ ಸಂಪುಟದ ನಿರ್ಣಯದಂತೆ ಕಾರ್ಯದರ್ಶಿಗಳು ರಾಜಭವನಕ್ಕೆ ಮಾಹಿತಿ ಒದಗಿಸಬಹುದಾಗಿದೆ.
ರಾಜಭವನವನ್ನೂ ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಮುಡಾ ಪ್ರಕರಣ ಕುರಿತು ಲೋಕಾಯುಕ್ತ ತನಿಖೆ ನಡೆಸಲು ಹೈ ಕೋರ್ಟ್ ಆದೇಶ ನೀಡಿದೆ. ಆದ್ದರಿಂದ ಇಲ್ಲಿ ಸಿಬಿಐ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವ ಪಾಟೀಲ ಹೇಳಿದ್ದಾರೆ.
ಸಿಬಿಐ ಬಗ್ಗೆ ಭಯವೇಕೆ ಬಿಜೆಪಿ ಪ್ರಶ್ನೆ
ನಾನು ಯಾವುದೇ ತನಿಖೆಗೂ ಸಿದ್ಧ, ಯಾವ ತನಿಖೆಗೂ ಹೆದರಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ರಾಜ್ಯದಲ್ಲಿ ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನು ಸಂಪುಟ ಸಭೆಯಲ್ಲಿ ಹಿಂಪಡೆಯುವ ಮೂಲಕ ತಾವು ತಪ್ಪಿತಸ್ಥರು ಎಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ತಿಳಿಸಿದೆ. ತಮ್ಮದೇನೂ ತಪ್ಪಿಲ್ಲದಿದ್ದರೆ ಸಿಬಿಐ ತನಿಖೆ ಕಂಡರೆ ಭಯವೇಕೆ ಸಿದ್ದರಾಮಯ್ಯ ಅವರೇ? ಈ ರೀತಿ ಅಡ್ಡದಾರಿ ಹುಡುಕಿ ರಾಜ್ಯದ ಜನರ ಮುಂದೆ ಇನ್ನಷ್ಟು ಸಣ್ಣವರಾಗುವ ಬದಲು, ಆದಷ್ಟು ಬೇಗ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ರಾಜೀನಾಮೆ ನೀಡಿ ತನಿಖೆ ಎದುರಿಸುವುದು ಒಂದೇ ತಮ್ಮ ಮುಂದಿರುವ ಏಕೈಕ ದಾರಿ. ರಾಜ್ಯ ಸರ್ಕಾರದ ಅವ್ಯವಹಾರಗಳು ಮತ್ತು ಅಕ್ರಮಗಳ ಬಗ್ಗೆ ಪತ್ರ ಮುಖೇನ ಸರ್ಕಾರವನ್ನು ಪ್ರಶ್ನಿಸಿ ತಮ್ಮ ಸಂವಿಧಾನದತ್ತ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಘನತೆವೆತ್ತ ರಾಜ್ಯಪಾಲರಿಗೆ ಅಂಕುಶ ಹಾಕಲು ಹೊರಟಿರುವ ಸಿದ್ದರಾಮಯ್ಯ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಈಗ ಸಿಬಿಐ, ರಾಜ್ಯಪಾಲರ ಮೇಲೆ ತಮ್ಮ ಹಿಟ್ಲರ್ ಧೋರಣೆ ಪ್ರದರ್ಶನ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರು ಒಂದು ವೇಳೆ ಅವಕಾಶವಿದ್ದರೆ, ತಮ್ಮ ವಿರುದ್ಧ ತೀರ್ಪು ನೀಡುತ್ತಿರುವ ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೂ ಅಂಕುಶ ಹಾಕುತಿದ್ದರೇನೋ ಎಂದು ಅಶೋಕ್ ಕುಟುಕಿದ್ದಾರೆ.