logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರು-ಸಿಂಧನೂರು ನಡುವೆ ಸಂಪರ್ಕಕ್ಕೆ ಬಂತು ಭಾರೀ ಉದ್ದದ ಕಲ್ಯಾಣ ರಥ

Bengaluru News: ಬೆಂಗಳೂರು-ಸಿಂಧನೂರು ನಡುವೆ ಸಂಪರ್ಕಕ್ಕೆ ಬಂತು ಭಾರೀ ಉದ್ದದ ಕಲ್ಯಾಣ ರಥ

HT Kannada Desk HT Kannada

Aug 28, 2023 01:42 PM IST

google News

ಬೆಂಗಳೂರು ಹಾಗೂ ಸಿಂಧನೂರು ನಡುವೆ ಕಲ್ಯಾಣ ರಥ ಬಸ್‌ ಸೇವೆ ಆರಂಭವಾಗಿದೆ

    • Kalyan Rath for Bengaluru ಬೆಂಗಳೂರು ಹಾಗೂ ಸಿಂಧನೂರು ನಗರಗಳ ನಡುವೆ ಸಂಪರ್ಕಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ( KKRTC) ಸಂಸ್ಥೆ ಕಲ್ಯಾಣ ರಥ ಎನ್ನುವ ವಿಶಿಷ್ಟ ಬಸ್‌ ಸೇವೆ ಆರಂಭಿಸಿದೆ. 
ಬೆಂಗಳೂರು ಹಾಗೂ ಸಿಂಧನೂರು ನಡುವೆ ಕಲ್ಯಾಣ ರಥ ಬಸ್‌ ಸೇವೆ ಆರಂಭವಾಗಿದೆ
ಬೆಂಗಳೂರು ಹಾಗೂ ಸಿಂಧನೂರು ನಡುವೆ ಕಲ್ಯಾಣ ರಥ ಬಸ್‌ ಸೇವೆ ಆರಂಭವಾಗಿದೆ

ಕಲಬುರಗಿ: ಬೆಂಗಳೂರು ಹಾಗೂ ಸಿಂಧನೂರು ನಡುವಿನ ಪ್ರಯಾಣ ಈಗ ಆರಾಮದಾಯಕ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಕಲ್ಯಾಣ ರಥ ಎನ್ನುವ ಸಂಪೂರ್ಣ ಹೈಟೆಕ್‌ ಬಸ್‌ ಸೇವೆಯನ್ನು ಪರಿಚಯಿಸಿದೆ.

ಉತ್ತರ ಕರ್ನಾಟಕದಲ್ಲಿ ಹೈಟೆಕ್‌ ಸೇವೆಯ ಸಾರಿಗೆ ಬಸ್‌ಗಳನ್ನು ಕರ್ನಾಟಕ ಸರ್ಕಾರ ಪರಿಚಯಿಸುತ್ತಿದೆ. ಅದರಲ್ಲೂ ರೈಲು ಸಂಪರ್ಕ ಇಲ್ಲದ ಊರುಗಳನ್ನು ಆಯ್ಕೆ ಮಾಡಿಕೊಂಡು ರಾಜಧಾನಿ ನಗರಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಾಗಿತ್ತಿದೆ.

ಸೋಮವಾರ ಚಾಲನೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ ಕಲ್ಯಾಣ ರಥ ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಆಗಸ್ಟ್ 28 ರಂದು ಸಿಂಧನೂರಿನಲ್ಲಿ ಚಾಲನೆ ದೊರೆತಿದೆ.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದ್ದಾರೆ.

ಸಂಸ್ಥೆಗೆ “ಕಲ್ಯಾಣ ರಥ” ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆಯಾಗಿದ್ದು, ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಆರಂಭಿಕವಾಗಿ ಸೇವೆಗೆ ಇಳಿಸಲಾಗುತ್ತಿದೆ. ತದನಂತರ ಪ್ರದೇಶದ ಇತರೆ ಭಾಗಕ್ಕೂ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸಂಚಾರದ ಸಮಯ

ಸಿಂಧನೂರು-ಬೆಂಗಳೂರು ನಡುವಿನ ಈ ಐಷರಾಮಿ ಬಸ್ ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ- ಗಂಗಾವತಿ- ಬೂದುಗುಂಪ ಕ್ರಾಸ್- ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ 5.30 ಗಂಟೆಗೆ ತಲುಪಲಿದೆ. ಅದೇ ರೀತಿ ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ರಾತ್ರಿ 10.15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.45 ಗಂಟೆಗೆ ಸಿಂಧನೂರು ತಲುಪಲಿದೆ.

ಕಲ್ಯಾಣ ರಥದ ವಿಶೇಷತೆ

ಕಲ್ಯಾಣ ರಥ ಬ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ 40 ಆಸನಗಳ ಈ ಐಷರಾಮಿ ಬಸ್ 350 ಬಿ.ಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೋಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.

ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿಯಾಗಿರುವ ಸಿಂಧನೂರಿಗೆ ಈವರೆಗೂ ರೈಲ್ವೆ ಸಂಪರ್ಕ ಸಾಧ್ಯವಾಗಿಲ್ಲ. ಈ ಭಾಗದಿಂದ ಬೆಂಗಳೂರಿಗೆ ಹೋಗುವವರು ಸಾರಿಗೆ ಸೇವೆಯನ್ನೇ ಅವಲಂಬಿಸುತ್ತಾರೆ. ಅದರಲ್ಲೂ ಕೆಲವೇ ಇರುವ ಸ್ಲೀಪರ್‌ ಬಸ್‌ ಅಥವಾ ಕೆಂಪು ಬಸ್‌ ಅವಲಂಬಿಸುವವರೇ ಹೆಚ್ಚು. ಈ ಕಾರಣದಿಂದ ಸಿಂಧನೂರು ಹಾಗೂ ಅಕ್ಕಪಕ್ಕದ ಭಾಗದವರು ಬೆಂಗಳೂರಿಗೆ ಸುಲಭವಾಗಿ ಹಾಗೂ ಸುರಕ್ಷಿತವಾಗಿ ತಲುಪಲಿ ಎನ್ನುವ ಉದ್ದೇಶದಿಂದ ಹೈಟೆಕ್‌ ಸೇವೆ ಶುರು ಮಾಡಲಾಗಿದೆ. ಈ ಬಸ್‌ಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಮುಂದೆ ಪ್ರಮುಖ ನಗರಿಗಳಿಗೂ ಕಲ್ಯಾಣ ರಥ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.

(ವರದಿ: ಎಸ್‌ಬಿ ರೆಡ್ಡಿ ಕಲಬುರಗಿ)

ಇದನ್ನೂ ಓದಿರಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ