Operation Lotus: 'ಆಪರೇಷನ್ ಕಮಲ'ದ ಪರಿಸ್ಥಿತಿ ಬರಲ್ಲ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದ ಶೋಭಾ ಕರಂದ್ಲಾಜೆ
May 11, 2023 06:14 PM IST
ಶೋಭಾ ಕರಂದ್ಲಾಜೆ
- Shobha Karandlaje on Operation Lotus: ನಾವು ಬಹುಮತದ ಸರ್ಕಾರ ರಚಿಸುತ್ತೇವೆ, 'ಆಪರೇಷನ್ ಕಮಲ' ಮಾಡುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರು: ಎಕ್ಸಿಟ್ ಪೋಲ್ (Exit Poll) ವರದಿ ಸುಳ್ಳಾಗಲಿದೆ. ನಾವು ಈ ಬಾರಿ ಸರ್ಕಾರ ರಚಿಸಲಿದ್ದೇವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದ್ದು, 'ಆಪರೇಷನ್ ಕಮಲ' (Operation Lotus) ಮಾಡುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ (Shobha Karandlaje) ಹೇಳಿಕೆ ನೀಡಿದ್ದಾರೆ.
ನಗರದ ಕ್ಯಾಪಿಟಲ್ ಹೋಟೆಲ್‍ನಲ್ಲಿ ಇಂದು (ಮೇ 11) ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ, ನಮ್ಮ ಕಾರ್ಯಕರ್ತರ ಸಮೀಕ್ಷೆ ಆಧಾರದಲ್ಲಿ ನೂರಕ್ಕೆ 100 ಬಿಜೆಪಿ ಬಹುಮತದ ಸರಕಾರವನ್ನು ರಚಿಸುವ ವಿಶ್ವಾಸ ಇದೆ. ಜನರ ಉತ್ಸಾಹದ ಮತದಾನ ಇದಕ್ಕೆ ಕಾರಣ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರ ಪ್ರಾಥಮಿಕ ವರದಿಯಂತೆ 120-125 ಕಡೆ ನಾವು ಲೀಡ್‍ನಲ್ಲಿದ್ದೇವೆ. ನಾವು ಬಹುಮತದ ಸರ್ಕಾರ ರಚಿಸುತ್ತೇವೆ. ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷದಿಂದ ಸುಶಿಕ್ಷಿತ, ಯುವ ಅಭ್ಯರ್ಥಿಗಳಿದ್ದರು. ಅಲ್ಲಿ ಅತ್ಯುತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ ಎಂದರು.
ಇಂದು ಕಾರ್ಯಕರ್ತರು ಗೆಲುವಿನ ಕುರಿತು ಲೆಕ್ಕಾಚಾರ ಮಾಡಲಿದ್ದಾರೆ. ನಮ್ಮ ವರದಿ, ಯಡಿಯೂರಪ್ಪ ಅವರ ವರದಿ ಸುಳ್ಳಾಗಿಲ್ಲ. ಯಡಿಯೂರಪ್ಪನವರು 120 ಸೀಟು ದಾಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದು ನಿಜವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದ ಜನರು ಅಭಿವೃದ್ಧಿಗಾಗಿ ಬಹುಮತದ ಬಿಜೆಪಿ ಸರಕಾರ ಕೊಡಲಿದ್ದಾರೆ. ಅತಂತ್ರ ಸ್ಥಿತಿ ಖಂಡಿತವಾಗಿ ಬರುವುದಿಲ್ಲ, ಕಾಯೋಣ ಎಂದರು.
ಕೆಲವು ಜಿಲ್ಲೆಗಳಲ್ಲಿ ಶೇಕಡಾ 80- 83 ರಷ್ಟು ಮತ ಚಲಾವಣೆ ಆಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಿದ ಮತದಾರರಿಗೆ ಅಭಿನಂದನೆಗಳು. ಬೂತ್‍ಗೆ ಬಂದು ಕ್ಯೂನಲ್ಲಿ ನಿಂತು ಮತದಾನ ಮಾಡಿದ ಹಿರಿಯರಿಗೆ, ಪ್ರಚಾರದಲ್ಲಿ ಸಹಕರಿಸಿದ ಮಾಧ್ಯಮಗಳಿಗೆ ಧನ್ಯವಾದ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ಒಂದು ಒಳ್ಳೆಯ ಸರಕಾರವನ್ನು ರಾಜ್ಯ ಮತ್ತು ದೇಶದಲ್ಲಿ ತರಲು ಹಾಗೂ ನಮ್ಮ ಸ್ಥಳೀಯ ಸಂಸ್ಥೆಯಲ್ಲಿ ಒಳ್ಳೆಯ ವ್ಯವಸ್ಥೆಯನ್ನು ತರಲು ಮತದಾನ ಅಗತ್ಯವಾಗಿ ಬೇಕಾಗಿದೆ. ಜನರ ಅಭಿಪ್ರಾಯದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಿಂತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಆಯೋಗ, ಪಕ್ಷಗಳ ಪ್ರಯತ್ನದ ಬಳಿಕವೂ ಕೇವಲ ಶೇ 52-53 ಮತದಾನ ಆಗಿದೆ. ಕಡಿಮೆ ಮತದಾನ ಆಗಿರುವುದು ಬೇಸರದ ವಿಚಾರ ಎಂದ ಅವರು, ಬೆಂಗಳೂರಿಗರು ಸಾಕಷ್ಟು ಪ್ರಮಾಣದಲ್ಲಿ ಮತದಾನ ಮಾಡುವುದಿಲ್ಲ ಎಂಬ ಬೇರೆ ಜಿಲ್ಲೆಯವರ ಮಾತು ನಿಜವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನತೆ ಪ್ರಜಾತಂತ್ರದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿ ಎಂದು ಆಶಿಸಿದರು. ಇದಕ್ಕಾಗಿ ಇನ್ನಷ್ಟು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.