logo
ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಂ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್​; ಕಳ್ರು ಒಂದಾಗಿದ್ದಾರೆ ಎಂದ ಸ್ನೇಹಮಯಿ ಕೃಷ್ಣ, ಸಾರಾ ಮಹೇಶ್-ವಿಶ್ವನಾಥ್ ಕಿಡಿ

ಸಿಎಂ ಸಿದ್ದರಾಮಯ್ಯ ಪರ ಜಿಟಿಡಿ ಬ್ಯಾಟಿಂಗ್​; ಕಳ್ರು ಒಂದಾಗಿದ್ದಾರೆ ಎಂದ ಸ್ನೇಹಮಯಿ ಕೃಷ್ಣ, ಸಾರಾ ಮಹೇಶ್-ವಿಶ್ವನಾಥ್ ಕಿಡಿ

Prasanna Kumar P N HT Kannada

Oct 04, 2024 05:34 PM IST

google News

ಸಿದ್ದರಾಮಯ್ಯ ವಿರುದ್ಧ, ಸಾರಾ ಮಹೇಶ್, ಸ್ನೇಹಮಯಿ ಕೃಷ್ಣ, ಹೆಚ್ ವಿಶ್ವನಾಥ್.

    • Mysore Dasara 2024: ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಜಿಟಿ ದೇವೇಗೌಡ ಬ್ಯಾಟಿಂಗ್ ನಡೆಸಿದ ಹಿನ್ನೆಲೆ ಸ್ನೇಹಮಯಿ ಕೃಷ್ಣ, ಸಾರಾ ಮಹೇಶ್, ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ, ಸಾರಾ ಮಹೇಶ್,  ಸ್ನೇಹಮಯಿ ಕೃಷ್ಣ, ಹೆಚ್ ವಿಶ್ವನಾಥ್.
ಸಿದ್ದರಾಮಯ್ಯ ವಿರುದ್ಧ, ಸಾರಾ ಮಹೇಶ್, ಸ್ನೇಹಮಯಿ ಕೃಷ್ಣ, ಹೆಚ್ ವಿಶ್ವನಾಥ್.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ನೀಡಲಾಗಿದ್ದ 14 ಸೈಟ್​​ಗಳ ಮಹಜರು ಲೋಕಾಯುಕ್ತ ಎಸ್‌ಪಿ ಉದೇಶ್ ನೇತೃತ್ವದಲ್ಲಿ ನಡೆಯಿತು. ವಿಜಯನಗರ 3ನೇ ಹಂತದ ಸಿ ಬ್ಲಾಕ್ ಸೈಟ್ ನಂ.25ರ ಪರಿಶೀಲನೆ ನಡೆಸಲಾಯಿತು. ಲೋಕಾಯುಕ್ತ ಅಧಿಕಾರಿಗಳ ಜೊತೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಮುಡಾ ಅಧಿಕಾರಿಗಳು ಭಾಗಿಯಾಗಿದ್ದರು. ಮಹಜರು ಮುಗಿಸಿದ ಬೆನ್ನಲ್ಲೇ ಜಿಟಿ ದೇವೇಗೌಡ ಅವರು, ಸಿಎಂ ಸಿದ್ದರಾಯಮ್ಮ ಪರ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ ಅವರು, ಕಳ್ಳರು ಕಳ್ಳರು ಒಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ. ಜಿಟಿ ದೇವೇಗೌಡರು 3 ತಿಂಗಳಿನಿಂದ ಏನು ಮಾಡುತ್ತಿದ್ದರು. ದಸರಾದಂತಹ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು. ಮುಡಾದಲ್ಲಿ ಜಿಟಿ ದೇವೇಗೌಡರ ಅಕ್ರಮವಿರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಸೇಲ್ ಡೀಡ್ ಮೂಲಕ ಮುಡಾದಲ್ಲಿ ಅಕ್ರಮ ಆಗಿದೆ. ಆ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಹೆಚ್​ಸಿ ಮಹದೇವಪ್ಪ ಸಹೋದರನ ಮಗನಿಗೆ ಸೆಟಲ್ಮೆಂಟ್ ಡೀಡ್ ಮೂಲಕ ಕೊಡಲಾಗಿದೆ ಎಂಬ ಮಾಹಿತಿ ಇದೆ. ಮರಿಗೌಡ ಸಹೋದರ ಶಿವಣ್ಣನಿಗೂ ಸೆಟಲ್ಮೆಂಟ್ ಡೀಡ್ ಮೂಲಕ ಸೈಟು ಕೊಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಇಡಿಗೆ 500 ಪುಟಗಳ ದೂರನ್ನು ನೀಡಿದ್ದೇನೆ. ಎಲ್ಲಾ ದಾಖಲೆಗಳು ಕನ್ನಡದಲ್ಲಿ ಇದ್ದವು. ಅಧಿಕಾರಿಗಳು ಅದನ್ನೆಲ್ಲಾ ನೋಡಿಕೊಳ್ಳುತ್ತಾರೆ. ಅವರಿಗೆ ಬೇಕಾದ ದಾಖಲೆ ಎಲ್ಲಾ ನೀಡಿದ್ದೇನೆ. ವಿಜಯನಗರ ಸೈಟ್ ಸ್ಥಳ ಮಹಜರಿನ ತನಿಖೆ ಹೇಗೆ ಇರುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮುಡಾದ ಪ್ರಕರಣದಲ್ಲಿ ಆರೋಪಿಗಳಿಗೆ ನೋಟಿಸ್ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ನೇಹಮಯಿ ಕೃಷ್ಣ, ಮುಡಾದಲ್ಲಿ ದಾಖಲೆಗಳನ್ನು ಸಂಗ್ರಹಿಸಬೇಕಿದೆ. ಮೂಲ ದಾಖಲೆಗಳು ಸೇರಿ ಹಲವು ದಾಖಲೆಗಳನ್ನೂ ಸಂಗ್ರಹಿಸಿದ ಬಳಿಕ ನೋಟಿಸ್ ಜಾರಿ ಮಾಡಬಹುದು ಎಂದು ತಿಳಿಸಿದ್ದಾರೆ.

ಸಾರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ

ಮೈಸೂರಿನ ಗಾಂಧಿ ವೃತ್ತದಲ್ಲಿ ಮಾಜಿ ಸಚಿವ ಸಾರಾ ಮಹೇಶ್ ನೇತೃತ್ವದಲ್ಲಿ ಜೆಡಿಎಸ್ ನಾಯಕರು ದಿಢೀರ್ ಪ್ರತಿಭಟನೆ ಕೈಗೊಂಡಿದ್ದಾರೆ. ಎಡಿಜಿಪಿ ಚಂದ್ರಶೇಖರ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದರು. ಎಂಎಲ್​ಸಿ ಎನ್ ಮಂಜೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಸಾರಾ ಮಹೇಶ್ ಮಾತನಾಡಿ, ದಸರಾ ಉದ್ಘಾಟನಾ ಸಮಾರಂಭದಲ್ಲಿ ಜಿಟಿ ದೇವೇಗೌಡ ನೀಡಿದ ಹೇಳಿಕೆ ಅವರ ವೈಯುಕ್ತಿಕ. ಜೆಡಿಎಸ್​ಗೂ, ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಮೇಲೆ ಕಳಂಕಿತರು ಎಂಬ ಆಪಾದನೆ ಬಂದಿದೆ. ಅವರು ತಾತ್ಕಾಲಿಕವಾಗಿಯಾದರೂ ಸಿಎಂ ಹುದ್ದೆಯಲ್ಲಿರುವುದು ಸೂಕ್ತವಲ್ಲ. ಈ ಕುರಿತು ಅವರೇ ಪರಾಮರ್ಶೆ ಮಾಡಿಕೊಳ್ಳಬೇಕು. ಜಿಟಿ ದೇವೇಗೌಡರು ಮಾತನಾಡಿರುವುದನ್ನು ನೋಡಿದ್ದೇನೆ. ಅದು ಅವರ ವೈಯುಕ್ತಿಕ ಅಭಿಪ್ರಾಯ. ಪಕ್ಷದ ಅಭಿಪ್ರಾಯವೇ ಬೇರೆ. ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ತನಿಖೆ ಮಾಡುತ್ತಿರುವುದು ರಾಜ್ಯದ ತನಿಖಾ ಸಂಸ್ಥೆ. ಕುಮಾರಸ್ವಾಮಿ ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಆದರೆ ಸಿಎಂ ವಿರುದ್ಧ ತನಿಖೆ ಮಾಡುತ್ತಿರುವುದು ಅವರ ಕೈಕೆಳಗಿರುವ ಸಂಸ್ಥೆ. ಹೀಗಾಗಿ ಅವರು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ನಮ್ಮಂತಹವರಿಗೆ ಮಾದರಿಯಾಗಲಿ ಎಂದು ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ ಸಾರಾ ಮಹೇಶ್.

ನಾನು ರಾಂಗ್ ಪರ್ಸನ್ ಎಂದ ಸಾರಾ ಮಹೇಶ್

ಜಿ ಟಿ ದೇವೇಗೌಡರು ಇಂದಿನ ಪ್ರತಿಭಟನೆಗೆ ಗೈರಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾರಾ ಮಹೇಶ್, ಅವರು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು. ರಾಜ್ಯ ಸುತ್ತಾಡಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಹೀಗಾಗಿ ಬಂದಿಲ್ಲ ಎಂದು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಮೇಲೆ ಜಿಟಿ ದೇವೇಗೌಡರಿಗೆ ದಿಢೀರ್ ಪ್ರೀತಿ ಹುಟ್ಟಿರುವ ವಿಚಾರಕ್ಕೆ ಉತ್ತರಿಸಿದ ಮಾಜಿ ಸಚಿವ, ಈ ಪ್ರಶ್ನೆಯನ್ನು ಅವರಿಗೇ ಕೇಳಿ. ಈ ಬಗ್ಗೆ ಪ್ರತಿಕ್ರಿಯಿಸಲು ನಾನು ರಾಂಗ್ ಪರ್ಸನ್ ಎಂದು ಹೇಳಿದ್ದಾರೆ.

ಈ ಸರ್ಕಾರ ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ನಮ್ಮ ನಾಯಕರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕುವ ಕೆಲಸವನ್ನು ಮಾಡುತ್ತಿದೆ. ಸರ್ಕಾರಿ ನೌಕರ ತನ್ನ ಕೈಕೆಳಗಿನ ಅಧಿಕಾರಿಗಳಿಗೆ ದೇಶದ ಘನತೆವೆತ್ತ ಸಚಿವರ ವಿರುದ್ಧ ಪತ್ರ ಬರೆದಿದ್ದಾರೆ. ರಜಾ ದಿನಗಳಲ್ಲಿ ಪತ್ರವನ್ನು ಬರೆದಿದ್ದಾರೆ. ಡಿಜಿ ಮತ್ತು ಐಜಿ ಏನು ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿಲ್ಲ? ನೀವು ಪ್ರಾಮಾಣಿಕ ಅಧಿಕಾರಿಯಾಗಿದ್ದರೆ ರಾಜ್ಯದಲ್ಲಿ ಹನ್ನೊಂದು ವರ್ಷಗಳಿಂದ ಏಕೆ ಇದ್ದೀರಾ ? ಎಂದು ಪ್ರಶ್ನಿಸಿದ್ದಾರೆ.

ಹೆಚ್​ ವಿಶ್ವನಾಥ್ ಕೂಡ ಕಿಡಿ

ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಭಾಷಣದಿಂದ ದಸರಾ ಉದ್ಘಾಟನೆಯ ಪಾವಿತ್ರ್ಯತೆಯೇ ಹಾಳಾಗಿದೆ. ಈ ಸಮಾರಂಭ ರಾಜಕೀಯ ನಾಯಕರ ವೇದಿಕೆಯಾಗಿತ್ತು. ಇಬ್ಬರೂ ರಾಜಕೀಯ ಭಾಷಣ ಮಾಡಿದರು. ಇಡೀ ಕಾರ್ಯಕ್ರಮ ಹೊಲಸು ಆಗೋಯ್ತು. ಚಾಮುಂಡಿ ಮಹಿಮೆ, ಜನರ ಸಹಕಾರದ ಮಾತುಗಳೇ ಇರಲಿಲ್ಲ. ಇನ್ನೆಂದು ದಸರಾ ಉದ್ಘಾಟನೆ ಕಾರ್ಯಕ್ರಮವೇ ಬೇಡ ಅನಿಸಿದೆ. ಆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಾನೇನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ದರು. ಜಿ‌ಟಿ ದೇವೇಗೌಡರ ಭಾಷಣ ಅಬ್ಬಾ ಅಬ್ಬಬ್ಬಾ. ಈ ಪರಾಕ್ರಮ ನೋಡಿದ್ರೇ ಅವರೂ ಮುಡಾ ಫಲಾನುಭವಿ ಇರಬೇಕು. ಇಡೀ ದಸರಾ ಕಾರ್ಯಕ್ರಮವನ್ನು ರಾಜಕೀಯ ನುಂಗಿದೆ. ಸರ್ಕಾರ ಬೀಳಿಸುವ ಮಾತು ಯಾರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಕುಣಿಯುತ್ತಿರುವುದು. 14ಸೈಟ್, ರಾಜಭವನ, ಹೈ ಕೋರ್ಟ್, ಲೋಕಾಯುಕ್ತ ಎಲ್ಲವನ್ನೂ ಬಳಸಿದೆ. ಅಯ್ಯೋ ದೇವರೆ ನಾಗಪ್ರಸನ್ನ ಅವರ ತೀರ್ಪನ್ನು ಒಮ್ಮೆ ಓದಿ. ಇ ಡಿ ಎಂಟ್ರಿ ಅದ ಮೇಲೆ ಭಾವನಾತ್ಮಕ ಕಾಗದದ ಮೂಲಕ ಹಿಂದುರಿಗಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ