logo
ಕನ್ನಡ ಸುದ್ದಿ  /  ಕರ್ನಾಟಕ  /  Sslc Exam Karnataka 2025: ಕನ್ನಡಕ್ಕಿಂತಲೂ ಇಂಗ್ಲೀಷ್‌ ಪ್ರಶ್ನೆಪತ್ರಿಕೆಯೇ ಸುಲಭ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮಕ್ಕಳು ಖುಷ್

SSLC Exam Karnataka 2025: ಕನ್ನಡಕ್ಕಿಂತಲೂ ಇಂಗ್ಲೀಷ್‌ ಪ್ರಶ್ನೆಪತ್ರಿಕೆಯೇ ಸುಲಭ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಮಕ್ಕಳು ಖುಷ್

Umesha Bhatta P H HT Kannada

Published Mar 26, 2025 04:54 PM IST

google News

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಕ್ಕಳು ಖುಷಿಯಿಂದಲೇ ಮಾತನಾಡಿದ್ದಾರೆ. (ಪ್ರಾತಿನಿಧಿಕ ಚಿತ್ರ)

    • SSLC Exam Karnataka 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೂರನೇ ಪತ್ರಿಕೆಯಾಗಿ ಇಂಗ್ಲೀಷ್‌ ವಿಷಯದ ಪರೀಕ್ಷೆಗಳು ಬುಧವಾರ ಮುಗಿದವು. ಇಂಗ್ಲೀಷ್‌ ಪ್ರಶ್ನೆ ಪತ್ರಿಕೆ ಕುರಿತು ಮಕ್ಕಳು ಹೀಗೆ ಪತ್ರಿಕ್ರಿಯಿಸುತ್ತಾರೆ.
    • ವರದಿ: ಎಚ್‌.ಮಾರುತಿ. ಬೆಂಗಳೂರು
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಕ್ಕಳು ಖುಷಿಯಿಂದಲೇ ಮಾತನಾಡಿದ್ದಾರೆ. (ಪ್ರಾತಿನಿಧಿಕ ಚಿತ್ರ)
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಕ್ಕಳು ಖುಷಿಯಿಂದಲೇ ಮಾತನಾಡಿದ್ದಾರೆ. (ಪ್ರಾತಿನಿಧಿಕ ಚಿತ್ರ)

SSLC Exam Karnataka 2025:ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಈಗಾಗಲೇ ಹಲವು ವಿಷಯಗಳ ಪರೀಖ್ಷೆ ಮುಗಿದಿದೆ. ಇಂದು ಇಂಗ್ಲೀಷ್‌ ಪತ್ರಿಕೆಯ ಪರೀಕ್ಷೆ ನಡೆದಿದೆ. ಪತ್ರಿಕೆ ಸುಲಭವಾಗಿತ್ತು ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಭಿಪ್ರಾಯಪಡುತ್ತಾರೆ. ಕೇವಲ ನಗರಪ್ರದೇಶ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಖುಷಿಯಿಂದ ಇಂಗ್ಲೀಷ್‌ ಪರೀಕ್ಷೆ ಬರೆದಿದ್ದಾರೆ. ಗ್ರಾಮೀಣ ಪ್ರದೇಶದ ಇಂಗೀಷ್‌ ಭೋದಿಸುವ ಶಿಕ್ಷಕರೂ ಪತ್ರಿಕೆ ಸುಲಭವಾಗಿತ್ತು. ಕಬ್ಬಿಣದ ಕಡಲೆ ಅನ್ನಿಸಿಕೊಳ್ಳಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.‌ ಇನ್ನು ನಗರ ಪ್ರದೇಶದ ವಿದ್ಯಾರ್ಥಿಗಳು ಸುಲಲಿತವಾಗಿ ಪರೀಕ್ಷೆ ಬರೆದಿದ್ದು ಮುಂದಿನ ಪತ್ರಿಕೆಗೆ ತಯಾರಿ ಆರಂಭಿಸಿದ್ದಾರೆ. ಕಳದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಂಗ್ಲೀಷ್‌ ಪತ್ರಿಕೆ ಸುಲಭವಾಗಿತ್ತು. ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಕಳೆದ ವರ್ಷ ಕೆಲವೊಂದು ತಿರುವು ಮುರುವು ಪ್ರಶ್ನೆಗಳಿದ್ದವು. ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಲು ಈ ಪ್ರಶ್ನೆಗಳು ಕಾರಣವಾಗಿದ್ದವು. ಆದರೆ ಈ ವರ್ಷ ಪ್ರಶ್ನೆಗಳು ನೇರವಾಗಿದ್ದ ಕಾರಣ ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸಲು ಸಾಧ್ಯವಾಯಿತು ಎನ್ನುತ್ತಾರೆ ಮಕ್ಕಳು.

ಮಕ್ಕಳ ಅಭಿಪ್ರಾಯವೇನು

ಖಾಸಗಿ ಶಾಲೆಯಲ್ಲಿ ಇಂಗ್ಲೀಷ್‌ ಬೋಧಿಸುವ ಶಿಕ್ಷಕರೊಬ್ಬರು ನಮ್ಮ ಶಾಲೆಯ ಅನೇಕ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸುತ್ತಾರೆ. ಬಹುತೇಕ ವಿದ್ಯಾರ್ಥಿಗಳು 95 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ.

ವಿದ್ಯಾರ್ಥಿಗಳದ್ದೂ ಇದೇ ಅಭಿಪ್ರಾಯ. ಆಂಗ್ಲ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಭಾಷಾ ವಿಷಯಗಳಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಕೇವಲ ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಮಾತ್ರ ಇಂಗ್ಲೀಷ್‌ ಭಾಷೆಯನ್ನು ಪೆಡಂಬೂದಂತೆ ಕಾಣುತ್ತಾರೆ. ಎಲ್ಲ ವಿಷಯಗಳಲ್ಲಿ ಪಾಸಾಗಿದ್ದರೂ ಇಂಗ್ಲೀಷ್‌ ಭಾಷೆಯಲ್ಲಿ ನಪಾಸಾಗುವ ವಿದ್ಯಾರ್ಥಿಗಳು ಇದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಕಡಿಮೆಅಂಕಗಳನ್ನು ಗಳಿಸುವುದನ್ನು ಕಾಣಬಹುದಾಗಿದೆ.

ಈ ವರ್ಷ ಕನ್ನಡದಲ್ಲಿ ಕೆಲವು ಕ್ಲಿಷ್ಟಕರ ಪ್ರಶ್ನೆಗಳಿದ್ದದ್ದು ಕಂಡು ಬಂದಿತ್ತು. ಹಳೆಗನ್ನಡ ಪದ್ಯವನ್ನು ಕಂಠಪಾಠ ಮಾಡಿ ಬರೆಯಲು ಕೇಳಲಾಗಿತ್ತು. ಆದರೆ ಇಂಗ್ಲೀಷ್‌ ವಿಷಯಕ್ಕೆ ಹೋಲಿಸಿದರೆ ಕನ್ನಡ ಪತ್ರಿಕೆಯೇ ಕಷ್ಟವಾಗಿತ್ತು ಎಂದೂ ಕೆಲವು ವಿದ್ಯಾರ್ಥಿಗಳು ಹೇಳುತ್ತಾರೆ.

ಸುಲಭ ಪ್ರಶ್ನೆಗಳಿಗೆ ಖುಷ್

ಪ್ರಶ್ನೆಪತ್ರಿಕೆಯತ್ತ ಒಮ್ಮೆ ಕಣ್ಣಾಡಿಸಿದರೆ ಅರೆ! ಎಷ್ಟೊಂದು ಸುಲಭವಾಗಿದೆ ಎಂದು ಅನ್ನಿಸದೆ ಇರದು. ಪ್ಯಾಸೇಜ್‌ ನೋಡಿ ಪ್ರಶ್ನೆಗಳಿಗೆ ಉತ್ತರಿಸುವುದು, ಸುಳಿವುಗಳನ್ನು ಆಧರಿಸಿ ಕಥೆಯನ್ನು ಮುಂದುವರೆಸುವುದು, ಬಿಟ್ಟ ಸ್ಥಳ ತುಂಬುವ ಪ್ರಶ್ನೆಗಳು ಸುಲಭವಾಗಿದ್ದವು.

ಕಳೆದ ವರ್ಷ ಗ್ರಾಮರ್‌ ಗೆ ಸಂಬಂಧಪಟ್ಟ ಪ್ರಶ್ನೆಗಳು ತುಸು ಕಷ್ಟವಾಗಿದ್ದವು. ಆದರೆ ಈ ವರ್ಷ ಗ್ರಾಮರ್‌ ಗೆ ಸಂಬಂಧಪಟ್ಟ ಪ್ರಶ್ನೆಗಳೂ ಸುಲಭವಾಗಿದ್ದವು. ಇವತ್ತಿನ ಪರೀಕ್ಷೆ ಒಟ್ಟಾರೆ ಸ್ಕೋರ್‌ ಮಾಡಲು ಸುಲಭವಾಗಿದೆ ಎಂಬ ಅಭಿಪ್ರಾಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ.

ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವಪ್ರಯತ್ನ ಮಾಡಿದ್ದವರಿಗೆ ಇನ್ನೂ ಸುಲಭವಾಗಿದೆ. ಕೆಲವು ಶಾಲೆಗಳಲ್ಲಿ 5 ರಿಂದ 10 ವರ್ಷಗಳ ಪ್ರಶ್ನೆಪತ್ರಿಕೆಗಳ ಆಧಾರದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಿದ್ದಾರೆ.ಬಹುತೇಕ ಪ್ರಶ್ನೆಗಳು ಪುನರಾವರ್ತನೆಯಾಗಿವೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಓದಿದ್ದು ಬಂದಿದೆ

ಇಂಗ್ಲೀಷ್‌ ಪತ್ರಿಕೆಯಲ್ಲಿ ನಿರೀಕ್ಷೆಯಂತೆಯೇ ಪ್ರಶ್ನೆಗಳು ಬಂದಿದ್ದವು. ಈ ವಿಷಯಗಳನ್ನು ಓದಿಕೊಳ್ಳಿ ಎನ್ನುವ ಸಲಹೆಯನ್ನು ಶಿಕ್ಷಕರು ಹೇಳಿದ್ದರು. ಎರಡು, ಮೂರು ಹಾಗೂ ನಾಲ್ಕು ಅಂಕದ ಬರಬಹುದಾದ ಪ್ರಮುಖ ಭಾಗವನ್ನೂ ಓದಿಕೊಂಡಿದ್ದೆವು. ಇದರಿಂದ ಚೆನ್ನಾಗಿಯೇ ಪರೀಕ್ಷೆ ಬರೆಯಲು ಸಾಧ್ಯವಾಯಿತು ಎನ್ನುವುದು ನಂಜನಗೂಡಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶ್ರೀರಾಮ್‌ ನುಡಿ.

ಎಸ್‌ಎಸ್‌ಎಲ್‌ಸಿ ಇಂಗ್ಲೀಷ್‌ ಪ್ರಶ್ನೆ ಪತ್ರಿಕೆ ಬಗ್ಗೆ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆಯೇ ಬಂದಿದೆ. ಪಠ್ಯದಾಚೆ ಯಾವ ಪ್ರಶ್ನೆಯೂ ಬಂದಿರಲಿಲ್ಲ. ಗೊಂದಲಕಾರಿಯಾಗಿಯೂ ಪ್ರಶ್ನೆ ಇರಲಿಲ್ಲ ಎಂದು ಮಕ್ಕಳು ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನುತ್ತಾರೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ನೊಣವಿನಕೆರೆ ಸಮೀಪದ ಹೊಂಗೆ ಲಕ್ಷ್ಮಿ ಕ್ಷೇತ್ರ ಗ್ರಾಮದ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಎಸ್.ಭೀಮಾಚಾರಿ.

ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ 2018 ಕೇಂದ್ರಗಳಲ್ಲಿ 3,35,468 ಬಾಲಕರು, 3,78,389 ಬಾಲಕಿಯರು ಸೇರಿ 8,96,447 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು