Talent Award for children of state level journalists: ರಾಜ್ಯ ಮಟ್ಟದ ಪತ್ರಕರ್ತರ ಮಕ್ಕಳಿಗೆ KUWJ ವತಿಯಿಂದ ಪ್ರತಿಭಾ ಪುರಸ್ಕಾರ
Oct 16, 2022 06:01 AM IST
ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಪತ್ರಕರ್ತರು ದಿನ ನಿತ್ಯವೂ ಸವಾಲಿನ ನಡುವೆಯೇ ವೃತ್ತಿ ಜೀವನ ನಡೆಸುತ್ತಿದ್ದು, ಅವರಿಗೂ ಸೂರು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಪತ್ರಕರ್ತರು ದಿನ ನಿತ್ಯವೂ ಸವಾಲಿನ ನಡುವೆಯೇ ವೃತ್ತಿ ಜೀವನ ನಡೆಸುತ್ತಿದ್ದು, ಅವರಿಗೂ ಸೂರು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ದಿಂದ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಿದ್ದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು ಪತ್ರಕರ್ತರ ಪಾತ್ರ ಬಹಳ ಹಿರಿದಾದು ಎಂದರು.
ವೃತ್ತಿ ಜೀವನದಲ್ಲಿ ಕಠಿಣ ಪರಿಸ್ಥಿತಿಗಳನ್ನು ಆಗಾಗ ಎದುರಿಸುತ್ತಾರೆ. ಇಂದಿನ ವ್ಯವಸ್ಥೆಗೆ ತಕ್ಕಂತೆ ಪೂರಕವಾಗಿ ಮುನ್ನಡೆಯುತ್ತಿರುವ ಪತ್ರಕರ್ತರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಮಕ್ಕಳಿಗೆ ಏರ್ಪಡಿಸಿರುವ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ನಾನು ಎರಡೂವರೆ ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು.
ಪತ್ರಕರ್ತರು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರರು. ರಾಜ್ಯಕಾರಣಿಗಳಿಗೂ ಮಾರ್ಗದರ್ಶಕರಾಗಿದ್ದಾರೆ. ರಾಜ್ಯದ ಪತ್ರಕರ್ತರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು, ನಿವೇಶನ ರಹಿತರಾಗಿಯೂ ಇದ್ದಾರೆ. ರಾಜ್ಯದ ಪತ್ರಕರ್ತರಿಗೆ ನಿವೇಶನದ ವ್ಯವಸ್ಥೆಗೆ ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿಯ ಜೊತೆ ಸಮಾಲೋಚಿಸಿ ಶೀಘ್ರವೇ ಕ್ರಮ ತೆಗೆದುಕೊಳ್ಳುವೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಸಂಘಟನೆಯ ಅಧ್ಯಕ್ಷರಾಗಿ ಮಾಡಿದ ಸೇವೆ ಅನನ್ಯವಾದದ್ದು. ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಜೊತೆಗೆ ಅವರು ಇಟ್ಟುಕೊಂಡಿರುವ ಸೌಹಾರ್ದ ಸಂಬಂಧದಿಂದ ಪತ್ರಕರ್ತರಿಗೆ ವರವಾಗಿದೆ ಎಂದರು.
ಸಕ್ಕರೆ ಮತ್ತು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಕಾರ್ಯ ನಿರತ ಪತ್ರಕರ್ತರ ಸಂಘವು ಮೊದಲ ಬಾರಿಗೆ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿರುವುದು ಪ್ರಶಂಸಾರ್ಹ ಕಾರ್ಯವಾಗಿದೆ. ಗಡಿಪ್ರದೇಶದ ಪತ್ರಕರ್ತರ ಮಕ್ಕಳಿಗೆ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗಡಿನಾಡ ಅಭಿವೃದ್ಧಿ ಪ್ರಾಧಿಕಾರವೂ ಕೈ ಜೋಡಿಸಲಿದೆ ಎಂದರು.
ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಆಗಮಿಸಿದ ಖ್ಯಾತ ಚಿತ್ರನಟಿ ತಾರಾ ಅನುರಾಧ ಮಾತನಾಡಿ, ಪತ್ರಕರ್ತರ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಕೆಯುಡಬ್ಲ್ಯೂಜೆ ಇಂತಹದೊಂದು ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿರುವುದು ನಿಜಕ್ಕೂ ಮೆಚ್ಚತಕ್ಕ ವಿಷಯ ಎಂದು ಶ್ಲಾಘಿಸಿದರು.
ಕೋವಿಡ್ ಸಮಯದಲ್ಲಿ ಪತ್ರಕರ್ತರ ಸಂಘವು ತನ್ನ ಸದಸ್ಯರಿಗೆ ನೆರಳಾಗಿದ್ದು, ವಿಶೇಷವಾಗಿ ಶಿವಾನಂದ್ ಅವರ ಶ್ರಮ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕಾರ್ಯ ನಿರತ ಪತ್ರಕರ್ತರ ಸಂಘವು ಹೋಬಳಿ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ಬಲಿಷ್ಠ ಸಂಘಟನೆಯಾಗಿ ರೂಪುಗೊಳ್ಳಲು ಸದಸ್ಯರ ಸಹಕಾರವೇ ಕಾರಣ. ಇದೇ ಮೊದಲ ಬಾರಿಗೆ ಪ್ರಾರಂಭಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಮುಂದುವರಿಸಲಾಗುವುದು ಎಂದರು.
ಐಎಫ್‌ಡಬ್ಲೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನ ಮಾತನಾಡಿ, ಪತ್ರಕರ್ತರು ತಮ್ಮ ಒತ್ತಡದ ವೃತ್ತಿಯ ಜೊತೆಗೆ ಮನೆ ಮಕ್ಕಳ ಬೆಳವಣಿಗೆಗೂ ಪೂರಕ ಮಾರ್ಗದರ್ಶನ ನೀಡಬೇಕು ಎಂದರು.
ಕರ್ನಾಟಕದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಪತ್ರಕರ್ತರ ಮಕ್ಕಳ ಪತ್ರಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಿದ ಕೆಯುಡಬ್ಲ್ಯೂಜೆ ನಡೆಯನ್ನು ಮುಕ್ತಕಂಠದಿಂದ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ನೂರರವತ್ತಕ್ಕೂ ಹೆಚ್ಚಿನ ರಾಜ್ಯದ ಪತ್ರಕರ್ತರ ಮಕ್ಕಳನ್ನು ಪುರಸ್ಕರಿಸಲಾಯಿತು.
ಸಂಘದ ಉಪಾಧ್ಯಕ್ಷರುಗಳಾದ ಪುಂಡಲೀಕ ಭೀ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿ ಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ್ ಕೆರಗೋಡು, ನಿಂಗಪ್ಪ ಚಾವಡಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.