logo
ಕನ್ನಡ ಸುದ್ದಿ  /  ಕರ್ನಾಟಕ  /  81ರ ಹರೆಯದಲ್ಲೂ ವಿದ್ಯಾರ್ಥಿಗಳಿಗೆ ಮಿಡಿಯುವ ನಿವೃತ್ತ ಶಿಕ್ಷಕ ನಾರಾಯಣ ನಾಯಕ್; ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಪ್ರಸಿದ್ಧ

81ರ ಹರೆಯದಲ್ಲೂ ವಿದ್ಯಾರ್ಥಿಗಳಿಗೆ ಮಿಡಿಯುವ ನಿವೃತ್ತ ಶಿಕ್ಷಕ ನಾರಾಯಣ ನಾಯಕ್; ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಪ್ರಸಿದ್ಧ

HT Kannada Desk HT Kannada

Sep 04, 2023 10:08 PM IST

google News

ನಿವೃತ್ತ ಶಿಕ್ಷಕ ನಾರಾಯಣ ನಾಯಕ್

    • ಸದಾ ಕರಾವಳಿ ಜಿಲ್ಲೆಗಳಲ್ಲಿ 81ರ ಹರೆಯದ ನಾರಾಯಣ ನಾಯಕ್ ಯಾಕೆ ಹೀಗೆ ಓಡಾಡುತ್ತಾರೆ? ಅಸಹಾಯಕ ಮಕ್ಕಳನ್ನು ಗುರುತಿಸಿ ಅಗತ್ಯ ಅನುಕೂಲ ಕಲ್ಪಿಸುವುದೇ ಈ ನಿವೃತ್ತ ಶಿಕ್ಷಕರ ಕಾಯಕ. ಇವರ ಸೇವೆಯನ್ನು ಸ್ಮರಿಸಿ ಅಕ್ಷರ ನಮನ ಸಲ್ಲಿಸಿದ್ದಾರೆ ಪತ್ರಕರ್ತ ಹರೀಶ್ ಮಾಂಬಾಡಿ.
ನಿವೃತ್ತ ಶಿಕ್ಷಕ ನಾರಾಯಣ ನಾಯಕ್
ನಿವೃತ್ತ ಶಿಕ್ಷಕ ನಾರಾಯಣ ನಾಯಕ್

ಮಂಗಳೂರು: ಹೆಗಲಲ್ಲೊಂದು ಚೀಲ, ಸವೆದ ಚಪ್ಪಲಿ, ಕೆದರುಬಿಳಿ ತಲೆಕೂದಲು, ಸಾತ್ವಿಕ ಮನಸ್ಸಿನ ಮುಗ್ಧ ಮುಖದ ಸಜ್ಜನ ನಾರಾಯಣ ನಾಯಕ್ ಕರ್ಪೆ ಅವರು ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮುನ್ನೂರು-ನಾಲ್ಕುನೂರಕ್ಕಿಂತಲೂ ಅಧಿಕ ಶಾಲೆ, ಕಾಲೇಜುಗಳಿಗೆ ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಭೇಟಿ ನೀಡಿದವರು. 2001ರಲ್ಲಿ ಶಿಕ್ಷಕ ವೃತ್ತಿಯಿಂದ ರಿಟೈರ್ ಆದ ಮೇಲೆ ಅವರು ಸುಮ್ಮನೆ ಕೂರಲಿಲ್ಲ. ದಿನಕ್ಕೆ ಮೂರರಿಂದ ಐದು ಮೈಲು ನಡೆದದ್ದೂ ಇದೆ. ಸದಾ ಕರಾವಳಿ ಜಿಲ್ಲೆಗಳಲ್ಲಿ 81ರ ಹರೆಯದ ನಾರಾಯಣ ನಾಯಕ್ ಯಾಕೆ ಹೀಗೆ ಓಡಾಡುತ್ತಾರೆ?

ವಿದ್ಯಾರ್ಥಿಗಳೆಂದರೆ ನಾಯಕ್ ಮಾಸ್ಟರ್‌ಗೆ ಅಚ್ಚುಮೆಚ್ಚು. ಅವರಲ್ಲಿ ಎಲ್ಲರಿಗೂ ಕಲಿಯಲು ಹಲವಾರು ಕಾರಣಗಳಿಂದ ಆಗುವುದಿಲ್ಲ ಎಂಬ ಬೇಸರ. ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂಬ ತುಡಿತ. ತನ್ನ ವಿದ್ಯಾರ್ಥಿಗಳಿಗೆ ಮೇಸ್ಟ್ರಾಗಿದ್ದ ದಿನಗಳಿಂದಲೇ ನೆರವಾಗುತ್ತಿದ್ದ ಅವರು, ತನ್ನ ಶಾಲಾ ವಿದ್ಯಾರ್ಥಿಗಳ ಹಾಗೆಯೇ ಉಳಿದ ಶಾಲೆಗಳಲ್ಲೂ ಕಷ್ಟದಿಂದ ಶಾಲಾ ವಿದ್ಯಾಭ್ಯಾಸ ಮಾಡುವವರು ಇದ್ದಾರೆ ಅವರಿಗೇನಾದರೂ ಮಾಡಬೇಕ ಎಂದು ಹೊರಟರು. ಮಾಸ್ಟ್ರು ಮಾಡುವುದು ಇಷ್ಟೇ. ಶಾಲೆಗಳಿಗೆ ಹೋಗಿ ಅಲ್ಲಿನ ಮುಖ್ಯೋಪಾಧ್ಯಾಯರು, ಪ್ರಿನ್ಸಿಪಾಲರನ್ನು ಮಾತಾಡಿಸುತ್ತಾರೆ. ಅವರ ಬಳಿ ವಿದ್ಯಾರ್ಥಿಗಳಲ್ಲಿ ಅತ್ಯಂತ ಬಡ ವಿದ್ಯಾರ್ಥಿಗಳ ದಾಖಲೆ ಕೇಳುತ್ತಾರೆ. ಕಲಿಯುವ ಆಸಕ್ತರಾಗಿ ಯಾವುದೇ ಹಣಕಾಸಿನ ನೆರವು ದೊರಕದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಮಾತನಾಡಿಸಿ, ಮುಂದೆ ಹೈಯರ್ ಎಜುಕೇಶನ್ ವರೆಗೂ ಕಲಿಯಬೇಕಾದರೆ ಅಗತ್ಯವಿರುವ ಸ್ಕಾಲರ್ ಶಿಪ್ ಗೆ ಕಚೇರಿಗಳಿಗೆ ಮಾಸ್ಟ್ರೇ ಓಡಾಡುತ್ತಾರೆ. ವಿದ್ಯಾರ್ಥಿ ಸ್ಕಾಲರ್ ಶಿಪ್ ಪಡೆದರೆ ಮಾಸ್ಟ್ರ್‌ಗೆ ಸಾರ್ಥಕ್ಯಭಾವ. ಉದ್ಯೋಗ ದೊರಕಿಸಿ, ಹೇಗಿದ್ದೀರಿ ಸರ್ ಎಂದರೆ ಅದೇ ಪಾರಿತೋಷಕ.

ಹತ್ತಾರು ಬಗೆಯ ಸ್ಕಾಲರ್ಶಿಪ್ಪಿನ ಅರ್ಜಿ ಫಾರ್ಮ್ ಗಳನ್ನು ಜಾತಿ, ಪ್ರತಿಭೆ, ಅಂಕ, ತಂದೆ ತಾಯಿಗಳ ಉದ್ಯೋಗ ಆಧರಿತ ಸ್ಕಾಲರ್‌ಶಿಪ್‌ಗಳನ್ನು ತರಗತಿಗಳಿಗೆ ಹೋಗಿ ಸಾದರಪಡಿಸಿ ತುಂಬುವ ಬಗೆಯನ್ನು ಹೇಳಿ, ಜೋಡಿಸಬೇಕಾದ ದಾಖಲೆಗಳನ್ನು ಜೋಡಿಸಿ ತಲುಪಿಸಬೇಕಾದ ಕಡೆ ತಲುಪಿಸಿ, ಹಳ್ಳಿ ಕೇಂದ್ರಿತ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಸಿಗುವಂತೆ ಮಾಡುವ ನಾಯಕ್ ಮಾಸ್ಟರ್, ಈ ಶೈಕ್ಷಣಿಕ ಸೇವೆಗಾಗಿಯೇ ಸಾವಿರಾರು ರೂಗಳನ್ನು ವ್ಯಯಿಸುತ್ತಾರೆ.

ಕೆಲವು ಅರ್ಜಿಗಳನ್ನು ತಾನೇ ಮುದ್ರಿಸಿ, ಜೆರಾಕ್ಸ್ ಮಾಡಿಸಿ ತರುತ್ತಾರೆ. ತನಗೆ ಬರುವ ತಿಂಗಳ ನಿವೃತ್ತಿ ವೇತನದಲ್ಲಿ ಒಂದಂಶ ಇಂತಹ ಶೈಕ್ಷಣಿಕ ಚಟುವಟಿಕೆಗಳಿಗಾಗಿ ವಿನಿಯೋಗಿಸುವ ಸೇವಾಜೀವಿ ಕರಾವಳಿಯ ಕೆಲವು ಸರಕಾರಿ ಕಾಲೇಜುಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಕನಿಷ್ಠ ಮೊತ್ತಕ್ಕೆ ಬಿಸಿ ಊಟ ಕೊಡುವ ಕ್ರಮವಿದೆ. ಅಂತಹ ಸಂಸ್ಥೆಗಳಿಗೆ ತಿಂಗಳಿಗೆ ಐದು ಸಾವಿರ ಹಣವನ್ನು ಉದಾರವಾಗಿ ನೀಡುವ ಇವರು ಮಕ್ಕಳಿಗೆ ನಾಲ್ಕು ನಮೂನೆಯ ಸ್ಕಾಲರ್ಶಿಪ್ ಗಳನ್ನು ಪರಿಚಯಿಸುತ್ತಾರೆ. ಹಾಗೆಯೇ ಉನ್ನತ ಶಿಕ್ಷಣ ಬಯಸುವ ಮಕ್ಕಳಿಗೆ ಉಳ್ಳವರಿಂದ ದಾನಿಗಳಿಂದ ಆರ್ಥಿಕ ಸಹಾಯ, ಲ್ಯಾಪ್‌ಟಾಪ್, ಪುಸ್ತಕ ಇತ್ಯಾದಿಗಳನ್ನು ಸಂಗ್ರಹಿಸಿ ತಲುಪಿಸುವುದೂ ಇದೆ. ನಿವೃತ್ತಿಯ ಬದುಕನ್ನು ಪರಿಪೂರ್ಣ ಸಮಾಜ ಸೇವೆಗೆಂದು ಅದರಲ್ಲೂ ಶೈಕ್ಷಣಿಕ ಕಾಳಜಿಯಿಂದ ವಿನಿಯೋಗಿಸುತ್ತಿರುವ ಈ ನಾರಾಯಣ ನಾಯಕರ ಸಮಾಜಸೇವೆಯ ಲಾಭ ಪಡೆದು ಉನ್ನತಿಗೇರಿದ ಬದುಕು ಕಟ್ಟಿಕೊಂಡ ಮಕ್ಕಳು ಅದೆಷ್ಟೋ.

ಎಂಬತ್ತೊಂದರ ಇಳಿ ವಯಸ್ಸಿನಲ್ಲೂ ಏರು ಜವ್ವನದ ಯುವಕನಂತೆ ಪ್ರತಿದಿನ ಬಸ್ಸಿನಲ್ಲಿ, ದ್ವಿಚಕ್ರವಾಹನದಲ್ಲಿ, ಕಾಲ್ನಡಿಗೆಯಲ್ಲಿ ಸಂಚರಿಸುತ್ತಾ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಿಗೆ, ಖಾಸಗಿ ಸಂಘ ಸಂಸ್ಥೆಗಳಿಗೆ, ಎನ್. ಜಿ. ಒ ಗಳಿಗೆ, ಸರಕಾರಿ ಕಚೇರಿಗಳಿಗೆ, ಆರ್ಥಿಕ ನೆರವಿನ ಅಗತ್ಯವಿರುವ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿಯಿತ್ತು, ಈ ವಿದ್ಯಾರ್ಥಿ ವೇತನದ ಬಗ್ಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡುತ್ತಿರುವ ನಿವೃತ್ತ ಶಿಕ್ಷಕ ನಾರಾಯಣ ನಾಯಕ್ ಅವರಿಂದ ಸಾವಿರಾರು ವಿದ್ಯಾರ್ಥಿಗಳು ಲಾಭ ಪಡೆದು ಭದ್ರ ನೆಲೆ ಕಂಡುಕೊಂಡಿದ್ದಾರೆ.

ಸ್ಕಾಲರ್‌ಶಿಪ್ ಮಾಸ್ಟರ್ ನಾರಾಯಣ ನಾಯಕ್ ಕುರಿತು

ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಜನಪ್ರಿಯರಾದ ನಿವೃತ್ತ ಶಿಕ್ಷಕ ನಾರಾಯಣ ನಾಯಕ್, ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕಿನ್ಯಾಜೆಯವರು. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಅಧ್ಯಾಪನವೃತ್ತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಪದವಿನಲ್ಲಿ ಆರಂಭಿಸಿದರು. 38 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಅನುಭವವನ್ನು ಪಡೆದು 2001 ನೇ ಇಸವಿಯಲ್ಲಿ ವಾಮದಪದವು ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿಯಿಂದ ನಿವೃತ್ತರಾದರು. ಆದರೆ ಪ್ರವೃತ್ತಿಗೆ ವಿಶ್ರಾಂತ ಜೀವನವನ್ನು ನೀಡದೆ ತಮ್ಮ ಬದುಕಿನ ರೀತಿಯನ್ನೇ ಸಮಾಜಕ್ಕೆ ನೈಜ ನಿದರ್ಶನವಾಗಿಸಿಕೊಂಡರು.

ಪ್ರತಿಯೊಬ್ಬರನ್ನು ಈ ಸೌಲಭ್ಯದ ಬಗ್ಗೆ ಪ್ರಜ್ಞಾವಂತರನ್ನಾಗಿ ಮಾಡುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸುವ ಮೂಲಕ ಸ್ಕಾಲರ್ ಶಿಪ್ ನ ಸಂಪನ್ಮೂಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿ, ಇದೀಗ ಉತ್ತರ ಕನ್ನಡ ಜಿಲ್ಲೆಯತ್ತ ತಮ್ಮ ಪಯಣ ಬೆಳೆಸಿದ್ದಾರೆ. ವಿವಿಧ ಇಲಾಖೆಗಳಿಂದ ಕೊಡಲ್ಪಡುವ ಅದೆಷ್ಟೋ ಲಕ್ಷ ಮೊತ್ತದ ವಿದ್ಯಾರ್ಥಿವೇತನದ ಸೌಲಭ್ಯಗಳು ಇವರ ಅವಿರತ ಪರಿಶ್ರಮದಿಂದ ಅರ್ಹ ಹಾಗೂ ಯೋಗ್ಯ ವಿದ್ಯಾರ್ಥಿಗಳಿಗೆ ದೊರಕಿದೆ.

ವಿಶೇಷ ವರದಿ: ಹರೀಶ್ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ