Aadhaar Bank Link: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ, ಮನೆಯಲ್ಲಿಯೇ ಕುಳಿತು ಲಿಂಕ್ ಮಾಡುವ ಅವಕಾಶ ಗೃಹಲಕ್ಷ್ಮಿಯರಿಗುಂಟು
Jul 21, 2023 05:49 PM IST
Aadhaar Bank Link: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ
- ಗೃಹಲಕ್ಷ್ಮಿ ಯೋಜನೆ (gruhalakshmi scheme karnataka) ಸೇರಿದಂತೆ ವಿವಿಧ ಯೋಜನೆಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Link Aadhaar Card to Bank Account) ಮಾಡಬೇಕಿರುತ್ತದೆ. ಇಂಟರ್‌ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಎಸ್‌ಎಂಎಸ್, ಎಟಿಎಂ ಇತ್ಯಾದಿ ಆಯ್ಕೆಗಳ ಮೂಲಕ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು.
ಬೆಂಗಳೂರು: ಕರ್ನಾಟಕ ಗೃಹಲಕ್ಷ್ಮಿ ಯೋಜನೆ (gruhalakshmi scheme karnataka) ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈಗ ಕೆಲವೊಂದು ತೊಂದರೆಗಳು ಎದುರಾಗುತ್ತಿವೆ. ರೇಷನ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ ಮಾಡಬೇಕಿರುವುದು, ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡದೆ ಇರುವುದು, ಮೊಬೈಲ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಸಂಪರ್ಕವಾಗದೆ ಇರುವುದು, ಬ್ಯಾಂಕ್ ಖಾತೆಗೆ ಸಂಪರ್ಕಗೊಂಡ ಮೊಬೈಲ್ ಸಂಖ್ಯೆ ಅಸ್ತಿತ್ವದಲ್ಲಿರದೆ ಇರುವುದು, ಜನ ಸಾಮಾನ್ಯರಿಗೆ ಇಂತಹ ಪುಟ್ಟ ತೊಂದರೆಗಳು ದೊಡ್ಡದಾಗಿ ಕಾಡುವುದುಂಟು. ಮನೆಯಲ್ಲಿ ಇಂಟರ್‌ನೆಟ್ ಇರುವ ಮೊಬೈಲ್ ಇದ್ದರೆ, ಮನೆಯಲ್ಲಿ ಸ್ವಲ್ಪ ತಂತ್ರಜ್ಞಾನ ಬಲ್ಲವರಿದ್ದರೆ ಇಂತಹ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಸರಿಪಡಿಸಿಕೊಳ್ಳಬಹುದು. ಇದಕ್ಕಾಗಿ ಗ್ರಾಮ ಒನ್ ಅಥವಾ ಜೆರಾಕ್ಸ್ ಸೆಂಟರ್‌ಗಳಲ್ಲಿ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಉದ್ದದ ಕ್ಯೂನಲ್ಲಿ ಕಾದು ಸರಿಪಡಿಸಿಕೊಳ್ಳಬೇಕಾಗಿಲ್ಲ.
ಹಿಂದೂಸ್ತಾನ್ ಟೈಮ್ಸ್ ಕನ್ನಡವು ಈಗಾಗಲೇ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಇತ್ಯಾದಿ ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಹಲವು ಹೌಟು ಲೇಖನಗಳನ್ನು ಬರೆದಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಮಾಡುವುದು ಹೇಗೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಉಂಟಾಗುವ ತೊಂದರೆಗಳು, ಗೃಹಲಕ್ಷ್ಮಿ ಯೋಜನೆಗೆ ಹೆಲ್ಪ್‌ಲೈನ್ ಮಾಹಿತಿ ಸೇರಿದಂತೆ ಹಲವು ಲೇಖನಗಳನ್ನು ಪ್ರಕಟಿಸಲಾಗಿದೆ. ಇಂದಿನ ಲೇಖನದಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ ಎಂದು ತಿಳಿಯೋಣ. ಮನೆಯಲ್ಲಿಯೇ ಕುಳಿತು ಮೊಬೈಲ್‌ನಲ್ಲಿಯೇ ಈ ರೀತಿ ಲಿಂಕ್ ಮಾಡಬಹುದೇ? ಎಸ್‌ಎಂಎಸ್ ಮೂಲಕ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಬಹುದೇ ಎಂದು ತಿಳಿಯೋಣ.
ಗೃಹಲಕ್ಷ್ಮಿ ಯೋಜನೆ: ಆಧಾರ್ ಕಾರ್ಡ್ ಬ್ಯಾಂಕ್‌ಗೆ ಲಿಂಕ್ ಆಗದಿದ್ದರೆ ಏನಾಗುತ್ತದೆ?
ಗೃಹಲಕ್ಷ್ಮಿ ಯೋಜನೆಯ ಮೂಲಕ ಮಾಸಿಕ 2 ಸಾವಿರ ರೂಪಾಯಿ ಹಣ ಪಡೆಯಲು ಆಧಾರ್ ಕಾರ್ಡ್‌ಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವುದು ಅವಶ್ಯ. ಆದರೆ, ಸಾಕಷ್ಟು ಜನರ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಆಗಿಲ್ಲ. ಈ ರೀತಿ ಲಿಂಕ್ ಆಗದೆ ಇರುವವರಿಗೆ ತಾತ್ಕಾಲಿಕವಾಗಿ ಹಣ ಸಿಗುವ ವ್ಯವಸ್ಥೆ ಇದೆ. ಆದರೆ, ಲಿಂಕ್ ಆಗದೆ ಇದ್ದರೆ ಅದಕ್ಕೆ ಬೇರೆ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಇತ್ತೀಚೆಗೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದರು. ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರದ ಫಲಾನುಭವಿಗಳಿಗೂ ಹಣ ದೊರಕುತ್ತದೆ ಎಂದು ಅವರು ಹೇಳಿದ್ದಾರೆ. ಇವರು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಜತೆ ಪಡಿತರ ಚೀಟಿ, ಆಧಾರ್ ಕಾರ್ಡ್, ಮೊಬೈಲ್ ಮತ್ತು ಬ್ಯಾಂಕ್ ಪುಸ್ತಕವನ್ನು ತೆಗೆದುಕೊಂಡು ಹೋಗಬೇಕು. ಸಿಡಿಒಗಳು ಇಂತಹ ಫಲಾನುಭವಿಗಳ ಅರ್ಜಿಗಳನ್ನು ಪ್ರತ್ಯೇಕವಾಗಿ ತುಂಬಿಕೊಳ್ಳುತ್ತಾರೆ. ಆದರೆ, ಈ ಪ್ರತ್ಯೇಕವಾಗಿ ತುಂಬಿಕೊಳ್ಳುವ ಕಷ್ಟವನ್ನು ಕಡಿಮೆ ಮಾಡಲು ನೀವು ಮನೆಯಲ್ಲಿಯೇ ಕುಳಿತು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳಬಹುದು. ಇದು ತುಂಬಾ ಸುಲಭ.
ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಹೇಗೆ?
ಈಗ ಕೆಲವರ ಮನೆಯಲ್ಲಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇರಬಹುದು. ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಬಳಸಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬಹುದು. ಇದು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ರೀತಿ ಇರಬಹುದು. ನೆನಪಿಡಿ, ಸೈಬರ್ ಸೆಂಟರ್‌ಗಳಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಬಳಸಬೇಡಿ.
- ಮೊದಲಿಗೆ ನಿಮ್ಮ ಇಂಟರ್‌ನೆಟ್ ಬ್ಯಾಂಕ್‌ಗೆ ಲಾಗಿನ್ ಆಗಿ. ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆದ ಬಳಿಕ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವ ಕೊಂಡಿಯನ್ನು ಹುಡುಕಿ.
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲವಾದರೆ ಕೆಲವು ಬ್ಯಾಂಕ್‌ಗಳು ಅದನ್ನು ಎಚ್ಚರಿಸುವಂತಹ ಸೂಚನೆಯನ್ನು ನೀಡಿರುತ್ತವೆ. ಆ ಲಿಂಕ್ ಕ್ಲಿಕ್ ಮಾಡಿ ಅಪ್ಡೇಟ್ ಮಾಡಬಹುದು.
- ಪ್ರೊಫೈಲ್ ಅಥವಾ ಅಕೌಂಟ್ ವಿಭಾಗ ಕ್ಲಿಕ್ ಮಾಡುವ ಮೂಲಕ ಅಲ್ಲಿ ಇಂತಹ ಆಯ್ಕೆ ಇರುವುದೇ ಎಂದು ಪರಿಶೀಲಿಸಬಹುದು. ಉದಾಹರಣೆಗೆ ಎಸ್‌ಬಿಐ ಬ್ಯಾಂಕ್‌ನ ಇಂಟರ್‌ನೆಟ್ ಬ್ಯಾಂಕಿಂಗ್‌ನಲ್ಲಿ ಮೈ ಅಕೌಂಟ್ ವಿಭಾಗದಲ್ಲಿ ಅಪ್‌ಡೇಟ್ ಆಧಾರ್ ವಿದ್ ಬ್ಯಾಂಕ್ ಅಕೌಂಟ್ಸ್ ಆಯ್ಕೆ ಇರುತ್ತದೆ.
ಮೊಬೈಲ್ ಬ್ಯಾಂಕಿಂಗ್ ಮೂಲಕ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಹೇಗೆ?
ಈಗ ಬಹುತೇಕರು ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಬಳಸುತ್ತಾರೆ. ಗ್ರಾಮೀಣ ಜನರ ಮೊಬೈಲ್‌ಗಳಲ್ಲಿಯೂ ಈಗ ಇಂಟರ್‌ನೆಟ್ ಬ್ಯಾಂಕಿಂಗ್ ಆಪ್ ಇರುವುದು ನಿಜಕ್ಕೂ ಖುಷಿಯ ಸಂಗತಿ. ಇದೇ ಇಂಟರ್‌ನೆಟ್ ಬ್ಯಾಂಕಿಂಗ್ ಆಯ್ಕೆಯ ಮೂಲಕವೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಬಹುದು.
- ನಿಮ್ಮ ಮೊಬೈಲ್‌ನಲ್ಲಿರುವ ಬ್ಯಾಂಕ್‌ನ ಆಪ್ ತೆರೆಯಿರಿ
- ಸರ್ವೀಸ್ ವಿಭಾಗದಡಿ ಮೈ ಅಕೌಂಟ್ಸ್ ಕ್ಲಿಕ್ ಮಾಡಿ. ಅಲ್ಲಿ View/Update Aadhaar card details ಆಯ್ಕೆ ಇರುತ್ತದೆ.
- ಆಧಾರ್ ಸಂಖ್ಯೆ ನಮೂದಿಸಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.
ಆಯಾ ಬ್ಯಾಂಕ್‌ಗೆ ತಕ್ಕಂತೆ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡುವ ವಿಭಾಗ ಬೇರೆಬೇರೆ ಕಡೆ ಇರಬಹುದು, ಕೊಂಚ ಸಾವಧಾನವಾಗಿ ಹುಡುಕಿ ನೋಡಿದರೆ ಸಿಗುವುದು.
SMS ಮೂಲಕ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಹೇಗೆ?
ಎಸ್‌ಎಂಎಸ್ ಮೂಲಕವೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇದು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸ ಇರಬಹುದು. ಇದರ ಕುರಿತಂತೆ ಬ್ಯಾಂಕ್‌ನ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಯಾವ ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು ಎಂದು ತಿಳಿದುಕೊಳ್ಳಬಹುದು. ಗೂಗಲ್‌ನಲ್ಲಿ ಹುಡುಕಿದರೂ ಮಾಹಿತಿ ದೊರಕುತ್ತದೆ. ಉದಾಹರಣೆಗೆ ನಿಮ್ಮದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆಯಾಗಿದ್ದರೆ ನೀವು 567676 ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು. ( UID Aadhaar numberAccount number and send it to 567676.) ಅಂದರೆ, ಯುಐಡಿ ಆಧಾರ್ ಸಂಖ್ಯೆ ಬ್ಯಾಂಕ್ ಅಕೌಂಟ್ ಸಂಖ್ಯೆ ಟೈಪಿಸಿ 567676 ಸಂಖ್ಯೆಗೆ ಕಳುಹಿಸಬೇಕು.
ಎಟಿಎಂ ಕೇಂದ್ರದ ಮೂಲಕ ಲಿಂಕ್
ಕೆಲವು ಬ್ಯಾಂಕ್‌ಗಳು ಎಟಿಎಂ ಸೆಂಟರ್‌ಗಳಲ್ಲಿಯೂ ಈ ರೀತಿ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಅಪ್‌ಡೇಟ್ ಮಾಡುವ ಅವಕಾಶ ನೀಡುತ್ತವೆ. ಎಟಿಎಂನಲ್ಲಿ ಅಪ್‌ಡೇಟ್ ಆಧಾರ್ ಕಾರ್ಡ್ ಆಯ್ಕೆ ಕ್ಲಿಕ್ ಮಾಡಿ ಲಿಂಕ್ ಮಾಡಿ. ಕೆಲವು ಎಟಿಎಂನಲ್ಲಿ ಸರ್ವೀಸ್ ಎಂಬ ವಿಭಾಗ ಕ್ಲಿಕ್ ಮಾಡಿ, ಅಲ್ಲಿ ರಿಜಿಸ್ಟ್ರೇಷನ್ ವಿಭಾಗ ಕ್ಲಿಕ್ ಮಾಡಿದ ಬಳಿಕ ಈ ರೀತಿ ಅಪ್‌ಡೇಟ್ ಮಾಡುವ ಆಯ್ಕೆ ದೊರಕುತ್ತದೆ.