Siddaramaiah: 'ಕೈ ನಾಯಕರ ಮೇಲೆ ದಾಳಿ ನಡೆಸಲು ಐಟಿ, ಇಡಿ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿದೆ' - ಸಿದ್ದರಾಮಯ್ಯ ಆರೋಪ
Apr 05, 2023 08:01 AM IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
- ಐಟಿ, ಇಡಿ ಹಾಗೂ ಸಿಬಿಐ ಮುಂತಾದ ಸ್ವಾಯತ್ತ ಸಂಸ್ಥೆಗಳನ್ನು ಛೂ ಬಿಟ್ಟು ರಾಜ್ಯದ ಕಾಂಗ್ರೆಸ್ ನಾಯಕರನ್ನು ಬೆದರಿಸಲು ಬಿಜೆಪಿ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: “ಕಾಂಗ್ರೆಸ್ ಅಭ್ಯರ್ಥಿಗಳು, ನಾಯಕರು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಬಗ್ಗೆ ಒಲವು ಹೊಂದಿರುವರ ಮೇಲೆ ದಾಳಿ ಮಾಡಿ ಬೆದರಿಸಲು ಕೇಂದ್ರ ಬಿಜೆಪಿ ಸರ್ಕಾರ ಸಾವಿರಕ್ಕೂ ಹೆಚ್ಚು ಐಟಿ, ಇಡಿ ಮತ್ತು ಸಿಬಿಐ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಿದೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಬಿಜೆಪಿ ಸರ್ಕಾರದ ಈ ಷಡ್ಯಂತ್ರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಹೋರಾಟದ ಮೂಲಕವೇ ಬಿಜೆಪಿ ಪಕ್ಷದ ಈ ದಮನಕಾರ್ಯವನ್ನು ಎದುರಿಸುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಭೀತಿಗೀಡಾಗದೆ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು” ಎಂದು ಕರೆ ನೀಡಿದ್ದಾರೆ.
“ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ತತ್ತರಿಸಿಹೋಗಿದ್ದಾರೆ. ಅವರ ಪಕ್ಷದೊಳಗೆ ಜಗಳ-ಬಂಡಾಯಗಳು ಹೆಚ್ಚಿವೆ, ಅವರಲ್ಲಿ ಹಲವಾರು ಮಂದಿ ನಮ್ಮ ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದರಿಂದ ಭೀತಿಗೀಡಾಗಿರುವ ಬಿಜೆಪಿ ನಾಯಕರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ದಾಳಿಗಿಳಿದಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಟ್ವೀಟ್ಗೂ ಮುನ್ನ ಮಂಗಳವಾರ ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜತೆಗೂಡಿ ನಡೆಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಐಟಿ, ಇಡಿ ದಾಳಿ ಮಾಡಿಸಲು ಬಿಜೆಪಿ ಸರ್ಕಾರ ಸಜ್ಜಾಗಿರುವ ಕುರಿತು ಆರೋಪ ಮಾಡಿದ್ದರು.
ನಮಗೆ ನಂಬಿಕಾರ್ಹ ಮೂಲದಿಂದ ಮಾಹಿತಿ ಸಿಕ್ಕಿದ್ದು, ಬಿಜೆಪಿಯವರು ಐಟಿ, ಇಡಿ ಹಾಗೂ ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಈಗಾಗಲೇ ಅವರು ಸಾವಿರಕ್ಕೂ ಅಧಿಕ ಆದಾಯ ತೆರಿಗೆ ಹಾಗೂ ಇಡಿ ಅಧಿಕಾರಿಗಳನ್ನು ಕಳುಹಿಸಿದ್ದು, ಅವರ ಮೂಲಕ ಕಾಂಗ್ರೆಸ್ ನ ಅಭ್ಯರ್ಥಿಗಳು, ಕಾಂಗ್ರೆಸ್ ಪರವಾಗಿ ಕೆಲಸ ಮಾಡುವವರು ಹಾಗೂ ಕಾಂಗ್ರೆಸ್ ಬಗೆಗೆ ಸಹಾನುಭೂತಿ ಹೊಂದಿರುವ ಜನರ ಮೇಲೆ ದಾಳಿ ಮಾಡಲು ಯೋಜಿಸಲಾಗಿದೆ. ಈ ಅಧಿಕಾರಿಗಳು ನಮ್ಮ ಪಕ್ಷದವರನ್ನು ಬೆದರಿಸುತ್ತಿದ್ದಾರೆ. ಇದು ಸ್ಪಷ್ಟವಾಗಿ ಅಧಿಕಾರದ ದುರುಪಯೋಗ ಪ್ರಕರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಯಾರೂ ಬೆಂಬಲ ನೀಡಬಾರದು ಎಂಬುದು ಬಿಜೆಪಿಯವರ ಉದ್ದೇಶ. ಇದಕ್ಕೆ ನಮ್ಮ ಕಾರ್ಯಕರ್ತರು ಮತ್ತು ನಾಯಕರು ಬಗ್ಗುವವರಲ್ಲ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಿಜೆಪಿ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾವು ಬಿಜೆಪಿಯ ಹೀನ ರಾಜಕೀಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿಗೆ ಕರ್ನಾಟಕದಲ್ಲಿ ಸೋಲಿನ ಭೀತಿ ಆರಂಭವಾಗಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳುತ್ತಿವೆ. ಸುರ್ಜೇವಾಲಾ ಅವರು ಹೇಳಿದಂತೆ ಹಲವು ಹಾಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಯ ಅಧ್ಯಕ್ಷರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂದು ಕರ್ನಾಟಕದ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಕಾರಣದಿಂದ ಹಾಲಿ ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರ್ಯಾರು ಮೂರ್ಖರಲ್ಲ, ತಾವು ಬಿಜೆಪಿಯಲ್ಲಿಯೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದು ಅವರಿಗೆ ಗೊತ್ತಾಗಿದೆ ಎಂದರು.
ಬಿಜೆಪಿ ಹೈಕಮಾಂಡ್ ಗೆ ಕೂಡ ಕರ್ನಾಟಕದ ಬಿಜೆಪಿ ಮುಳುಗುತ್ತಿದೆ, ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಿದೆ. ತಮ್ಮ ದ್ವೇಷ ರಾಜಕೀಯ ಮತ್ತು ಹಿಂದುತ್ವದ ಅಜೆಂಡಾ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ಅವರಿಗೆ ಅರ್ಥವಾಗಿದೆ. ಅವರಿಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಅಧಿಕಾರದ ದುರುಪಯೋಗ ಮತ್ತು ತಮ್ಮ ಹಣಬಲದ ಬಳಕೆ. ಹಣ ನೀಡಿದರೂ ಕೂಡ ರಾಜ್ಯದ ಜನ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಬಿಜೆಪಿ ಸರ್ಕಾರ ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರ್ಕಾರ. ರಾಜ್ಯದ ಮತದಾರರಿಗೆ ತಾವು ಹಿಂದಿನ ಚುನಾವಣೆಯಲ್ಲಿ ಮಾಡಿದ ತಪ್ಪಿನ ಅರಿವಾಗಿದೆ, ಜನ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಸ್ಮರಿಸುತ್ತಿದ್ದಾರೆ. ರಾಜ್ಯದ ಎಲ್ಲಿಗೇ ಹೋದರು ಬಹುತೇಕ ಜನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ, ಇದರಿಂದ ಬಿಜೆಪಿಗರು ಬೆದರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಭಾಗ