Karnataka Toll Rate Hike: ಕರ್ನಾಟಕದಲ್ಲಿ ಟೋಲ್ ದರ ದುಬಾರಿ, ಏಪ್ರಿಲ್ 1ರಿಂದಲೇ ಜಾರಿ ಸಾಧ್ಯತೆ, ಎಷ್ಟಾಗಲಿದೆ ಹೆಚ್ಚಳ
Published Mar 26, 2025 05:31 PM IST
ಕರ್ನಾಟಕದ ಟೋಲ್‌ಗಳಲ್ಲಿ ದರ ಏರಿಕೆಯಾಗುವ ಸಾಧ್ಯತೆಗಳಿವೆ.
- Karnataka Toll Rate Hike: ಕರ್ನಾಟಕದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ಗಳಲ್ಲಿ ದರ ದುಬಾರಿಯಾಗಲಿದೆ. ಬರುವ ಏಪ್ರಿಲ್ 1ರಿಂದಲೇ ಇದು ಜಾರಿಯಾಗುವ ಸಾಧ್ಯತೆಗಳಿವೆ.

Karnataka Toll Rate Hike: ಈಗಾಗಲೇ ವಿದ್ಯುತ್, ಬಸ್ ಪ್ರಯಾಣ, ಮೆಟ್ರೋ ದರ ಏರಿಕೆಯಾಗಿದೆ. ಹಾಲು, ಆಟೋರಿಕ್ಷಾ ಸಹಿತ ವಿವಿಧ ಪ್ರಯಾಣ ದರಗಳು ಏರಿಕೆ ಹಂತದಲ್ಲಿವೆ. ಇದರ ನಡುವೆ ಕರ್ನಾಟಕದಲ್ಲಿ ಸ್ವಂತ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರು ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ದರವನ್ನು ತೆರಬೇಕು. ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ( ಎಚ್‌ಎಎಐ) ಟೋಲ್ ದರದಲ್ಲಿ ಬದಲಾವಣೆ ಮಾಡಲಿದೆ. ಈಗಿರುವ ಮಾಹಿತಿ ಪ್ರಕಾರದ ಸದ್ಯದ ದರದ ಮೇಲೆ ಶೇ. 3 ರಿಂದ 5ರಷ್ಟು ದರ ಹೆಚ್ಚಳ ಪ್ರಸ್ತಾವನೆಯಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳ ಟೋಲ್ ದರಗಳಲ್ಲಿ ಏರಿಕೆ ಕಾಣಲಿದ್ದು, ಹೆಚ್ಚಿನ ದರವನ್ನು ಹೆದ್ದಾರಿಗಳಲ್ಲಿ ಸಂಚರಿಸಲು ನೀಡಬೇಕಿದೆ.
ಕರ್ನಾಟಕದಲ್ಲಿ ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮಾರ್ಗ, ಚಿತ್ರದುರ್ಗದಿಂದ ಹೊಸಪೇಟೆ, ವಿಜಯಪುರ, ಸೊಲ್ಲಾಪುರ ಮಾರ್ಗ, ಬೆಂಗಳೂರಿನಿಂದ ಮೈಸೂರು, ಮಂಗಳೂರಿನಿಂದ ಕಾರವಾರ ಸೇರಿದಂತೆ ನಾನಾ ಭಾಗಗಳಲ್ಲಿ ಟೋಲ್‌ಗಳು ನಿರ್ಮಾಣಗೊಂಡಿವೆ. ಭಾರತೀಯ ಹೆದ್ದಾರಿ ರಾಷ್ಟ್ರೀಯ ಪ್ರಾಧಿಕಾರವೇ ಕರ್ನಾಟಕದ ನಾನಾ ಹೆದ್ದಾರಿಗಳಲ್ಲಿ 66 ಟೋಲ್‌ಗಳನ್ನು ಹೊಂದಿದೆ. ಕಾಲಕಾಲಕ್ಕೆ ಹೆದ್ದಾರಿ ನಿರ್ವಹಣೆ ನೆಪದಲ್ಲಿ ವಾಹನಗಳ ಟೋಲ್ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಕಾರು, ಬಸ್, ಲಾರಿಗಳ ಸಹಿತ ವಿವಿಧ ಸಾರಿಗೆಗಳಿಗೆ ವಿವಿಧ ರೀತಿಯಲ್ಲಿ ಟೋಲ್ ಅನ್ನು ನಿಗದಿ ಮಾಡಲಾಗಿದೆ.
ಈಗ ಪ್ರಾಧಿಕಾರವು ಮತ್ತೊಮ್ಮೆ ಟೋಲ್ ದರ ಏರಿಕೆಗೆ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಅಂದಾಜು ಶೇ 3 ರಿಂದ 5 ರಷ್ಟು ಹೆಚ್ಚಾಗಬಹುದು. ಮೂರ್ನಾಲ್ಕು ದಿನದಲ್ಲಿ ಅಧಿಸೂಚನೆ ಹೊರ ಬೀಳಬಹುದು ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಜಯಕುಮಾರ್ ಖಚಿತಪಡಿಸಿದ್ದಾರೆ.
ಎರಡು ವರ್ಷದ ಹಿಂದೆಯಷ್ಟೇ ಬೆಂಗಳೂರು ಮೈಸೂರು ನಡುವೆ ಹೆದ್ದಾರಿ ಟೋಲ್ ಆರಂಭಿಸಲಾಗಿತ್ತು. ಇದಾದ ನಾಲ್ಕೈದು ತಿಂಗಳಿಗೆ ಅಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು. ವರ್ಷದ ಅಂತರದಲ್ಲೇ ಮತ್ತೆ ಈ ಟೋಲ್‌ನಲ್ಲಿ ದರ ಹೆಚ್ಚಳವಾಗಲಿದೆ. ಬೆಂಗಳೂರು ಮೈಸೂರು ನಡುವೆ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಸಹಿತ ಎರಡು ಕಡೆಗಳಲ್ಲಿ ಟೋಲ್ ಇದ್ದು. ಸುಮಾರು ಹತ್ತು ರೂ.ವರೆಗೂ ದರ ಹೆಚ್ಚಾಗಬಹುದು. ಬೆಂಗಳೂರು ಮೈಸೂರು ನಡುವೆ ಒಮ್ಮೆ ಹೋಗಿ ಬರಲು ಕನಿಷ್ಠ 50 ಹೆಚ್ಚು ಪಾವತಿಸಬೇಕಾಗುತ್ತದೆ.
ಅದೇ ರೀತಿ ಪ್ರಮುಖ ಹೆದ್ದಾರಿಗಳಲ್ಲಿ ಎಂಟರಿಂದ ಹತ್ತು ಟೋಲ್‌ಗಳಿವೆ. ಕೆಲವೆಡೆ ಮೂರ್ನಾಲ್ಕು ಟೋಲ್‌ಗಳಿವೆ. ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ), ನಂಗ್ಲಿ (ಬೆಂಗಳೂರು-ತಿರುಪತಿ) ಟೋಲ್‌ಗಳಿವೆ. ಶಿರಾ, ಹಿರಿಯೂರು, ಚಿತ್ರದುರ್ಗ ಬಳಿಯೂ ಟೋಲ್‌ಗಳಿವೆ. ಹೊಸಪೇಟೆ, ಕುಷ್ಠಗಿ ಆಲಮಟ್ಟಿಯೂ ಟೋಲ್‌ಗಳಿವೆ.
ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಉದ್ದೇಶದೊಂದಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಯೋಜನೆ ರೂಪಿಸಿಕೊಂಡಿದೆ. ಅದು ಮುಂದಿನ ಒಂದೆರಡು ವರ್ಷಗಳಲ್ಲಿ ಜಾರಿಯಾಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.
ಅಲ್ಲದೇ ಟೋಲ್‌ಗಳಲ್ಲಿ ಎಐ ಆಧರಿತ ತಂತ್ರಜ್ಞಾನವನ್ನು ಬಳಸಿಕೊಂಡು ಶುಲ್ಕ ಸಂಗ್ರಹ ಮಾಡುವ ಪದ್ದತಿ ಜಾರಿ ಮಾಡಲಾಗುತ್ತದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುವುದು ತಪ್ಪಲಿದೆ ಎಂದು ಹೇಳಿದ್ದರು.
ಭಾರತದಲ್ಲಿ 2019-20 ರಲ್ಲಿ ಟೋಲ್ ಶುಲ್ಕ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು. 2023-24 ರಲ್ಲಿ ಟೋಲ್ ಸಂಗ್ರಹದ ಪ್ರಮಾಣವು 64,809.86 ಕೋಟಿ ರೂ.ಗಳನ್ನು ತಲುಪಿತ್ತು. ಈಗ ದರ ಏರಿಸಿದರೆ ಇನ್ನಷ್ಟು ಹೆಚ್ಚಬಹುದು .
ವಿಭಾಗ