ವೇತನ ಹೆಚ್ಚಳವಾಗದ ಬೇಸರ, ತಾರತಮ್ಯ ನೀತಿ ವಿರೋಧಿಸಿ ರಾಜೀನಾಮೆ ಸಲ್ಲಿಸಿದ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್
Aug 29, 2024 08:21 PM IST
ಸಾಂಕೇತಿಕ ಚಿತ್ರ
Trending News; ವೇತನ ಹೆಚ್ಚಳವಾಗದ ಬೇಸರ, ತಾರತಮ್ಯ ನೀತಿ ವಿರೋಧಿಸಿ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ರಾಜೀನಾಮೆ ಸಲ್ಲಿಸಿದ ಘಟನೆ ಸಾಮಾಜಿಕ ತಾಣದಲ್ಲಿ ಬಹಳ ಚರ್ಚೆಗೆ ಒಳಗಾಗಿದೆ.
ಬೆಂಗಳೂರು: ಬಹುತೇಕ ಕೆಲಸದ ಸ್ಥಳದಲ್ಲಿ ರಾಜಕೀಯ ನಡೆಯೋದು ಸಾಮಾನ್ಯ. ಇದರಿಂದ ಶಿಕ್ಷಣ ಸಂಸ್ಥೆಗಳೂ ಹೊರತಲ್ಲ. ಪೂರ್ವ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ಇಂತಹ ರಾಜಕೀಯದಿಂದ ಬೇಸತ್ತು, ಅದೇ ಕಾರಣ ನೀಡಿ ಕೆಲಸಕ್ಕೆ ರಾಜೀನಾಮೆ ನೀಡಿದ ಘಟನೆ ಸಾಮಾಜಿಕ ತಾಣದಲ್ಲಿ ಬಹಳ ಚರ್ಚೆಗೆ ಒಳಗಾಗಿದೆ.
ಪೂರ್ವ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ 10 ವರ್ಷ ಕಾಲ ಬೋಧನೆ ಮಾಡಿದ ನಂತರವೂ ಸಂಬಳವನ್ನು ಹೆಚ್ಚಿಸದೇ ಕೆಲಸ ಮಾಡಿಸುತ್ತಿರುವುದನ್ನು ಹತಾಶೆಯಿಂದ ಉಲ್ಲೇಖಿಸಿ 37 ವರ್ಷದ ಸಹಾಯಕ ಪ್ರಾಧ್ಯಾಪಕರು ರಾಜೀನಾಮೆ ನೀಡಿರುವುದಾಗಿ ಹೇಳಿದ್ದು ಗಮನಸೆಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಹಾಯಕ ಪ್ರಾಧ್ಯಾಪಕ ಹೇಳಿದ್ದೇನು
ನಾಡಿನ ವಿವಿಧೆಡೆ ಜನರು ತಮ್ಮ ಹತಾಶೆ ಮತ್ತು ಇತರೆ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಬಳಸುವ ರೆಡ್ಡಿಟ್ ತಾಣದಲ್ಲಿ "SquashImmediate6693" ಎಂಬ ಹೆಸರಿನಲ್ಲಿ ಈ ಸಹಾಯಕ ಪ್ರಾಧ್ಯಾಪಕ ಪೋಸ್ಟ್ ಮಾಡಿದ್ದು ಅದರಲ್ಲಿ ರಾಜೀನಾಮೆ ನೀಡಿದ ವಿಷಯ ಪ್ರಸ್ತಾಪಿಸಿದ್ದಾರೆ. ಈ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಯಾವುದೇ ಅರ್ಥವಿಲ್ಲ ಎಂದು ಬರೆದುಕೊಂಡಿದ್ದಾರೆ. ರಾಜೀನಾಮೆ ನೀಡುವ ಮೊದಲು ಪ್ರಾಂಶುಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಪ್ರಯತ್ನಿಸಿದ್ದೆ ಎಂದು ಹೇಳಿರುವ ಸಹಾಯಕ ಪ್ರಾಧ್ಯಾಪಕ, ಇಲಾಖಾ ಮುಖ್ಯಸ್ಥ (ಎಚ್‌ಒಡಿ) ಇಲ್ಲದೆ ಮಾತನಾಡಲು ಪ್ರಾಂಶುಪಾಲರು ಒಪ್ಪಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಇಂಜಿನಿಯರಿಂಗ್ ಕಾಲೇಜಿನಲ್ಲಿ 2019ರ ತನಕ ಎಲ್ಲವೂ ಸರಿಯಾಗಿಯೇ ಇತ್ತು. ಯಾವಾಗ ಹೊಸ ಪ್ರಾಂಶುಪಾಲರು ಕೆಲಸಕ್ಕೆ ಸೇರಿದರೋ ಅದಾದ ಬಳಿಕ ಕಾಲೇಜಿನ ಮೂರು ವಿಭಾಗಗಳು ಮುಚ್ಚಲ್ಪಟ್ಟವು ಎಂದೂ ಅವರು ಹೇಳಿಕೊಂಡಿದ್ದಾರೆ.
ಮಕ್ಕಳಿಂದ ಉತ್ತಮ ಹಿಮ್ಮಾಹಿತಿ ಇದ್ದಾಗ್ಯೂ ಮತ್ತು ವೈಯಕ್ತಿಕ ತ್ಯಾಗಗಳನ್ನು ಮಾಡಿದ ಬಳಿಕವೂ ಅಂದರೆ ಸ್ಪರ್ಧೆಗಳ ಶುಲ್ಕ ಭರಿಸುವುದು, ಅವಧಿ ಮೀರಿ ದುಡಿಮೆ ಮಾಡಿದರೂ, ವೇತನ ಹೆಚ್ಚಿಸಬೇಕೆಂಬ ಬೇಡಿಕೆ ಸದಾ ಕಡೆಗಣಿಸಲ್ಪಟ್ಟಿದೆ. ನನ್ನ ಜ್ಯೂನಿಯರ್‌ಗಳಿಗೆ ಹೆಚ್ಚು ವೇತನ ನೀಡಲಾಗುತ್ತಿದೆ ಎಂಬುದು ಪ್ರಾಧ್ಯಾಪಕರ ಅಳಲು.
ತಾರತಮ್ಯವಷ್ಟೇ ಅಲ್ಲ, ವೇತನ ರಚನೆಯಲ್ಲೂ ವ್ಯತ್ಯಾಸ
ಯಾವುದೇ ಇಪಿಎಫ್ ಪಾವತಿಗಳಿಲ್ಲದೇ ಇರುವಂತೆ ವೇತನ ರಚನೆಯನ್ನು ಪರಿಷ್ಕರಿಸಲಗಿದೆ. ತುಟ್ಟಿಭತ್ಯೆ, ಗ್ರಾಚ್ಯುಟಿಯನ್ನೂ ಕಡಿಮೆ ಮಾಡಲಾಗಿದೆ ಎಂದು ಅವರು ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
“ ನನಗೆ ಯಾವುದೇ ಇಪಿಎಫ್ ಪಾವತಿಸುತ್ತಿಲ್ಲ. ಇತ್ತೀಚೆಗೆ ವೇತನ ರಚನೆ ಬದಲಾಗಿದೆ. ಡಿಎಯನ್ನು ಶೇಕಡ 115 ರಿಂದ ಶೇಕಡ 30ಕ್ಕೆ ಇಳಿಸಿದ್ದಾರೆ. ಉಳಿದ ಶೇಕಡ 85 ಅನ್ನು ಇತರೆ ಭತ್ಯೆಗೆ ಸೇರಿಸಿದ್ದಾರೆ. ಇದು ನನ್ನ ಗ್ರಾಚ್ಯುಟಿಯನ್ನು ಶೇಕಡ 50ರಷ್ಟು ಕಡಿಮೆ ಮಾಡಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರಾಂಶುಪಾಲರು ಇಲಾಖಾ ಮುಖ್ಯಸ್ಥರಿಲ್ಲದೇ ಏನೂ ಮಾತನಾಡುತ್ತಿರಲಿಲ್ಲ. ಯಾರಾದರೂ ಬೆಂಬಲಿಸಿದರೆ, ಎಚ್‌ಒಡಿ ಅಂಥವರಿಗೆ ಹೆಚ್ಚು ಕೆಲಸ ಕೊಟ್ಟು, ಟಾರ್ಗೆಟ್ ಮಾಡಿ ಕಿರುಕುಳ ಕೊಡುತ್ತಾರೆ. ಯಾರು ಬೆಂಬಲಿಸುತ್ತಾರೋ ಅವರು ಆರಾಮ ಇದ್ದಾರೆ. ನಾನು ರಾಜೀನಾಮೆ ಕೊಡುವಾಗ ಯಾಕೆ ಎಂದು ಯಾರೂ ಕೇಳಿಲ್ಲ. ಬೇಡ ಎಂದೂ ಹೇಳಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಲವತ್ತುಕೊಂಡಿದ್ದಾರೆ.
www.reddit.com/r/bangalore/comments/1f1pq5j/resigned_from_my_job/
ಕಂಪನಿಗಳು, ಉದ್ಯೋಗದಾತರು ಉದ್ಯೋಗಿಗಳ ಇಪಿಎಫ್ ಹಿಡಿದಿಡುವಂತೆ ಇಲ್ಲ. ಅದು ಅಪರಾಧ. ಹಾಗೆ ಮಾಡಿದರೆ ಅವರ ವಿರುದ್ಧ ಕಾನೂನು ಸಮರ ಮಾಡಬಹುದು ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.