Tribal status to Betta-Kuruba: ರಾಜ್ಯದ ಬೆಟ್ಟ ಕುರುಬರಿಗೆ ಬುಡಕಟ್ಟು ಸ್ಥಾನಮಾನ; ಮಸೂದೆ ಅಂಗೀಕರಿಸಿದ ಲೋಕಸಭೆ
Dec 21, 2022 11:57 AM IST
ಸಂಸತ್ ಅಧಿವೇಶನದ ಒಂದು ನೋಟ
Tribal status to Betta-Kuruba: ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ಮತ್ತು ನಿಯಮಗಳನ್ನು ರೂಪಿಸಿದ ನಂತರ, ಬೆಟ್ಟ-ಕುರುಬ ಸಮುದಾಯದ ಸದಸ್ಯರು ಪರಿಶಿಷ್ಟ ಪಂಗಡದ ಸದಸ್ಯರಿಗೆ ಒದಗಿಸುವ ಎಲ್ಲ ಪ್ರಯೋಜನಗಳಿಗೆ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಅರ್ಹರಾಗುತ್ತಾರೆ.
ಲೋಕಸಭೆಯಲ್ಲಿ ʻಬೆಟ್ಟ-ಕುರುಬʼ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಮಸೂದೆ ಅಂಗೀಕಾರವಾಗಿದೆ. ಪೈಲಟಿಂಗ್ ದ ಕಾನ್‌ಸ್ಟಿಟ್ಯೂಶನ್ (ಷೆಡ್ಯೂಲ್ಡ್ ಟ್ರೈಬ್ಸ್) ಆರ್ಡರ್ (ಫೋರ್ತ್ ಅಮೆಂಡಮೆಂಟ್) ಬಿಲ್ 2022 ಎಂಬ ಮಸೂದೆಯನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿದೆ. ಇದೇ ಮಸೂದೆಯಲ್ಲಿ ಕರ್ನಾಟಕದ ಬೆಟ್ಟ ಕುರುಬ ಸಮುದಾಯವನ್ನು ಬುಡಕಟ್ಟು ಎಂದು ಪರಿಗಣಿಸುವ ಅಂಶವೂ ಸೇರಿದೆ.
ಕರ್ನಾಟಕದ ಬೆಟ್ಟ-ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಇದು ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ 'ಬೆಟ್ಟ-ಕುರುಬ' ಸಮುದಾಯವನ್ನು 'ಕಾಡು ಕುರುಬ' ಎಂಬ ಪದದ ಸಮಾನಾರ್ಥಕ 16 ರಲ್ಲಿ ಸೇರಿಸಲು ವಿನಂತಿಸಿದೆ ಎಂಬ ಅಂಶ ಮಸೂದೆಯ ಒಬ್ಜೆಕ್ಟ್ಸ್ ಮತ್ತು ರೀಸನ್ಸ್‌ನಲ್ಲಿ ಉಲ್ಲೇಖವಾಗಿದೆ. ಕರ್ನಾಟಕದಲ್ಲಿ ಕೇವಲ 5000 ಸಮುದಾಯದವರು ವಾಸಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಪ್ರತಿಪಕ್ಷದ ಸದಸ್ಯರು ಪ್ರಸ್ತಾಪಿಸಿದ ವಿಷಯಗಳಿಗೆ ಪ್ರತಿಕ್ರಿಯಿಸಿದ ಅರ್ಜುನ್ ಮುಂಡಾ, ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಏನೂ ಮಾಡಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಆರೋಪಿಸಿದರು.
ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ಮತ್ತು ನಿಯಮಗಳನ್ನು ರೂಪಿಸಿದ ನಂತರ, ಬೆಟ್ಟ-ಕುರುಬ ಸಮುದಾಯದ ಸದಸ್ಯರು ಪರಿಶಿಷ್ಟ ಪಂಗಡದ ಸದಸ್ಯರಿಗೆ ಒದಗಿಸುವ ಎಲ್ಲ ಪ್ರಯೋಜನಗಳಿಗೆ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಅರ್ಹರಾಗುತ್ತಾರೆ. ಹೀಗೆ ಸಮಾಜದ ಎಲ್ಲ ವರ್ಗದವರಿಗೂ ನ್ಯಾಯ ಕೊಡಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮುಂಡಾ ಹೇಳಿದ್ದಾರೆ.
ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷಗಳ ಹಲವು ಸದಸ್ಯರು, ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಿದರೆ ಮಾತ್ರ ಪ್ರಯೋಜನವಾಗುವುದಿಲ್ಲ ಮತ್ತು ಅವರಿಗಾಗಿಯೂ ಕಲ್ಯಾಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಪರಿಗಣಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಕೆ.ಸುರೇಶ್ ಮಾತನಾಡಿ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸರಕಾರ ಈ ಮಸೂದೆ ತಂದಿದೆ. ಬುಡಕಟ್ಟು ಸಮುದಾಯಗಳು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಅವರು ಆರೋಪಿಸಿದರು.
ಸರ್ಕಾರವು ಬುಡಕಟ್ಟು ಜನಾಂಗದ ವಿರೋಧಿಯಾಗಿದೆ ಮತ್ತು ಅವರು ಆ ಸಮುದಾಯದ ವಿರುದ್ಧ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ ಬಿಎಸ್‌ಪಿ ಸದಸ್ಯ ಡ್ಯಾನಿಶ್ ಅಲಿ ದೇಶದಲ್ಲಿ ಜಾತಿ ಗಣತಿ ನಡೆಸಿ ಅದರ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು. ಜೆಡಿ (ಯು) ಸದಸ್ಯ ಡಿ ಕಾಮೈತ್ ಕೂಡ ಬುಡಕಟ್ಟು ಜನಾಂಗದವರಿಗೆ ಮೀಸಲಿಡುವಂತೆ ಒತ್ತಾಯಿಸಿದರು.
ಪ್ರತಿಮಾ ಮಂಡಲ್ (ಎಐಟಿಸಿ) ಮಾತನಾಡಿ, ಆದಿವಾಸಿಗಳು ಭೂರಹಿತ ನಿರಾಶ್ರಿತರಾಗಿದ್ದಾರೆ ಮತ್ತು ಅವರ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಹೇಳಿದರು. ಇದೇ ವೇಳೆ, ಆರ್ ಶೆವಾಲೆ (ಎಸ್‌ಎಸ್) ಮೀಸಲಾತಿಯ ಮೇಲೆ ಶೇಕಡಾ 50 ರಷ್ಟು ಮಿತಿಯನ್ನು ಪ್ರಸ್ತಾಪಿಸಿದರು. ಸರ್ಕಾರ ಸದನದಲ್ಲಿ ಸಮಗ್ರ ಮಸೂದೆ ತರಬೇಕು ಎಂದು ಸುಪ್ರಿಯಾ ಸುಳೆ (ಎನ್‌ಸಿಪಿ) ಹೇಳಿದರು.
ಸಿಪಿಐ (ಎಂ) ಸದಸ್ಯ ಎಂ.ಆರಿಫ್ ಮಾತನಾಡಿ, ಎಸ್‌ಸಿ ಮತ್ತು ಎಸ್‌ಟಿಗಳ ಕಲ್ಯಾಣಕ್ಕೆ ಸರ್ಕಾರ ಕ್ರಮಕೈಗೊಂಡಿಲ್ಲ ಎಂದರು.
ಇಟಿಎಂ ಬಶೀರ್ (ಐಯುಎಂಎಲ್) ಅವರು "ಅವರು ತೀರಾ ಕಳಪೆ ಸ್ಥಿತಿಯಲ್ಲಿರುವುದರಿಂದ ಅವರನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದು ಮಾತ್ರ ಸಹಾಯ ಮಾಡುವುದಿಲ್ಲ" ಎಂದು ಹೇಳಿದರು.
ಎನ್‌ಕೆ ಪ್ರೇಮಚಂದ್ರನ್ (ಆರ್‌ಎಸ್‌ಪಿ) ಅವರು, ಸಂಸತ್ತಿನ ಶಾಸಕಾಂಗ ಆಚರಣೆಗಳ ಬಗ್ಗೆ ಈ ಸರ್ಕಾರ ಗಂಭೀರವಾಗಿಲ್ಲ. ಸಮಗ್ರ ಮಸೂದೆಯನ್ನು ತರಬೇಕು. ಖಾಸಗೀಕರಣದಿಂದ ಅವರಿಗೆ ಉದ್ಯೋಗಗಳಿಲ್ಲದ ಕಾರಣ ಪಟ್ಟಿಯಲ್ಲಿ ಸೇರಿಸುವುದು ಸಹಾಯ ಮಾಡುವುದಿಲ್ಲ. ಸಮುದಾಯಕ್ಕೆ ವಿದ್ಯಾರ್ಥಿವೇತನವನ್ನು ಮರು ಪರಿಚಯಿಸಬೇಕು ಎಂದು ಕೇಳಿಕೊಂಡರು.
ಅರವಿಂದ್ ಸಾವಂತ್ (ಎಸ್‌ಎಸ್), ಜುಯಲ್ ಓರಂ (ಬಿಜೆಪಿ), ಎಸ್‌ಎಸ್ ಉಲಕಾ (ಐಎನ್‌ಸಿ), ಎಸ್ ಕೆ ಉದಾಸಿ (ಬಿಜೆಪಿ), ತಾಪಿರ್ ಗಾವೊ (ಬಿಜೆಪಿ), ಎ ಸಮಂತ (ಬಿಜೆಡಿ), ಸಿ ಅನುರಾಧ (ವೈಎಸ್‌ಆರ್‌ಸಿಪಿ), ಮತ್ತು ಉಮೇಶ್ ಜಾಧವ್ (ಬಿಜೆಪಿ) ಈ ಚರ್ಚೆಯಲ್ಲಿ ಭಾಗವಹಿಸಿದ ಇತರ ಸದಸ್ಯರು.