ತುಮಕೂರು ಸಿದ್ಧಗಂಗಾ ಜಾತ್ರೆಗೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; 3 ಆರೋಪಿಗಳ ಬಂಧನ
Mar 07, 2024 01:00 PM IST
ತುಮಕೂರು ಸಿದ್ಧಗಂಗಾ ಜಾತ್ರೆಗೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)
ತುಮಕೂರು ನಗರದ ಬಂಡೇಪಾಳ್ಯದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬಹಿರಂಗವಾಗಿದೆ. ಸಿದ್ದಗಂಗಾ ಜಾತ್ರೆಗೆ ಬಂದಿದ್ದ ಬಾಲಕಿಯನ್ನು ಬಂಡೇಪಾಳ್ಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ ಇಲ್ಲಿದೆ ವಿವರ. (ವರದಿ- ಈಶ್ವರ್, ತುಮಕೂರು)
ತುಮಕೂರು: ಸಿದ್ದಗಂಗಾ ಮಠ ಜಾತ್ರೆಗೆ ಬಂದ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಈ ಘಟನೆ ನಡೆದಿದ್ದು, ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಡೇಪಾಳ್ಯದ ಅಮೋಘ, ಹನುಮಂತ, ಪ್ರತಾಪ್ ಎಂದು ಗುರುತಿಸಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ. ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.
ಸಿದ್ದಗಂಗಾ ಜಾತ್ರೆಗೆ ಬಂದಾಗ ನಡೆದ ಘಟನೆಯನ್ನು ಬಾಲಕಿ ಮನೆಗೆ ಹೋದ ಬಳಿಕ ತಿಳಿಸಿದ್ದು, ಕೂಡಲೇ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಏನಿದು ಪ್ರಕರಣ
ತುಮಕೂರಿನ ಸಿದ್ದಗಂಗಾ ಜಾತ್ರೆಗೆ ಸ್ನೇಹಿತ ಜೊತೆಗೆ ಬಾಲಕಿ ಬಂದಿದ್ದಳು. ಕುಳಿತುಕೊಂಡು ಮಾತನಾಡುವುದಕ್ಕಾಗಿ ಪಕ್ಕದಲ್ಲೇ ಇರುವ ಬೆಟ್ಟದ ಮೇಲೆ ಹೋಗಿದ್ದರು. ಈ ಬಾಲಕಿ ಮತ್ತು ಆಕೆಯ ಸ್ನೇಹಿತನನ್ನು ಹಿಂಬಾಲಿಸಿ ಬಂದ ಕಿಡಿಗೇಡಿಗಳು ಆರಂಭದಲ್ಲಿ ಅವರ ವಿಡಿಯೋ ಮಾಡಿಕೊಂಡರು. ಅದಾಗಿ ಆ ಬಾಲಕಿ ಮತ್ತು ಆಕೆಯ ಸ್ನೇಹಿತ ಬಳಿ ಹೋಗಿ ವಿಡಿಯೋ ತೋರಿಸಿ ಬೆದರಿಸಿದ್ದಾರೆ.
ವಿರೋಧಿಸಿದ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಬಾಲಕಿಯನ್ನು ಬಂಡೇಪಾಳ್ಯಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗುವಾಗಲೂ ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ, ಈ ವಿಚಾರ ಬಹಿರಂಗಪಡಿಸಿದರೆ ವಿಡಿಯೋ ಬಹಿರಂಗಗೊಳಿಸುವದಾಗಿ ಬೆದರಿಸಿ ಕಳುಹಿಸಿದ್ದಾರೆ.
ತೀವ್ರ ಹಲ್ಲೆಗೊಳಗಾಗಿದ್ದ ಬಾಲಕಿ ಮನೆಗೆ ಬಂದಾಗ ನಿತ್ರಾಣಗೊಂಡಿದ್ದಳು. ಪಾಲಕರು ವಿಚಾರಿಸಿದಾಗ ಸಾಮೂಹಿಕ ಅತ್ಯಾಚಾರವಾಗಿರುವ ವಿಚಾರ ಬಹಿರಂಗಗೊಳಿಸಿದ್ದಾಳೆ. ಕೂಡಲೇ ಪೋಷಕರು ದೂರು ದಾಖಲಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರದ ಆರೋಪಿಗಳು ಬಂಡೇಪಾಳ್ಯದವರು
ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾದ ಬೆನ್ನಿಗೆ ಪೊಲೀಸರು ಬಂಡೇಪಾಳ್ಯಕ್ಕೆ ತೆರಳಿದ್ದು, ಆರೋಪಿಗಳಿಗೆ ಶೋಧ ನಡೆಸಿದ್ದಾರೆ. ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, ಅವರಿಂದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಅಮೋಘ, ಹನುಮಂತ, ಪ್ರತಾಪ್ ಎಂದು ಗುರುತಿಸಲಾಗಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
(ವರದಿ- ಈಶ್ವರ್, ತುಮಕೂರು)
(This copy first appeared in Hindustan Times Kannada website. To read more like this please logon to kannada.hindustantimes.com)