Tumakuru News: ನ್ಯಾ. ನೂರುನ್ನೀಸಾ ಸೂಚನೆ ಬಳಿಕ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲು
Jul 29, 2023 03:51 PM IST
ತಂಬಾಗನ್ನ ಹಟ್ಟಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ (ಎಡಚಿತ್ರ), ತಂಬಾಗನ್ನ ಹಟ್ಟಿಗೆ ಭೇಟಿ ನೀಡಿದ ನ್ಯಾಯಾಧೀಶೆ (ಬಲಚಿತ್ರ)
Tumakuru News: ದೇಶದ ಗಮನಸೆಳೆದ ತುಮಕೂರಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ ಕಾರಣ ಮಗು ಮೃತಪಟ್ಟ ಘಟನೆಗೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ನಡುವೆ, ನ್ಯಾಯಾಧೀಶೆ ನೂರುನ್ನೀಸಾ ಅವರುತಂಬಾಗನ್ನ ಹಟ್ಟಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಿದರು.
ತುಮಕೂರು: ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಮೌಢ್ಯಚಾರಣೆ ಕಾರಣದಿಂದ ಬಾಣಂತಿ ಮತ್ತು ಹಸುಗೂಸನ್ನು ಮನೆಯಿಂದ ಹೊರಗಿಟ್ಟು ಮಗು ಸಾವನಪ್ಪಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ.
ಈ ಪ್ರಕರಣ ಸಂಬಂಧ ಸಂತ್ರಸ್ತೆಯ ಪತಿ ಹಾಗೂ ಆಕೆಯ ತಂದೆಯ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆ - 2017 ಹಾಗೂ ಐ.ಪಿ.ಸಿ ಅಧಿನಿಯಮ 304, 34ರಡಿ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲೇನಹಳ್ಳಿ ಗ್ರಾಮದ ಹೊರಗಿನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿಟ್ಟ ಕಾರಣ ಸೂಕ್ತ ಆರೈಕೆ ಸಿಗದೆ ಜು.23ರಂದು ಮಗು ಮೃತಪಟ್ಟಿತ್ತು. ಈ ಪ್ರಕರಣದ ರಾಜ್ಯಾದ್ಯಂತ ಟೀಕೆ ಚರ್ಚೆಗೊಳಗಾಗಿದ್ದು, ಮಗು ಸಾವಿನ ಘಟನೆಗೆ ಪತಿ ಸಿದ್ದೇಶ್ ಹಾಗೂ ಆಕೆಯ ತಂದೆ ಚಿಕ್ಕಹುಲಿಗೆಪ್ಪ ಕಾರಣವೆಂದು ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮಹಿಳಾ ಮೇಲ್ವಿಚಾರಕಿ ರಾಜೇಶ್ವರಿ ಅವರು ಗೊಲ್ಲರಹಟ್ಟಿಯಲ್ಲಿ ಜು.27ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸಾ ಅವರ ಸೂಚನೆ ಬಳಿಕ ಪ್ರಕರಣ ಸಂಬಂಧ ಪ್ರಥಮ ವರ್ತಮಾನ ವರದಿ ದಾಖಲಾಗಿದೆ.
ತಂಬಾಗನ್ನ ಹಟ್ಟಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ತುಮಕೂರು ಜಿಲ್ಲೆಯ ತಂಬಾಗನ್ನ ಹಟ್ಟಿಗೆ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸಾ ಅವರು ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಹಮ್ಮಿಕೊಂಡು, ಪೋಕ್ಸೋ ಕಾಯ್ದೆ ಹಾಗೂ,ಕರ್ನಾಟಕ ಅಮಾನವೀಯ ಕೆಟ್ಟ ಪದ್ಧತಿ ಪ್ರತಿಬಂಧ ಮತು ನಿರ್ಮೂಲನೆ ಅಧಿನಿಯಮ -2017 ಮೊದಲಾದ ಕಾನೂನು ಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ತಂಬಾಗನ್ನ ಹಟ್ಟಿಯ ಮನೆಗಳಿಗೆ ಬೇಟಿ ನೀಡಿದ ನ್ಯಾಯಾಧೀಶರು ಬಾಣಂತಿ ಹಾಗೂ ಹಸುಗೂಸು ಮನೆಯ ಪ್ರತ್ಯೇಕ ಕೊಠಡಿಯಲ್ಲಿ ರುವುದು ಕಂಡು ಮಾತನಾಡಿಸಿ ಹರ್ಷ ವ್ಯಕ್ತಪಡಿಸಿ, ಇದೆ ರೀತಿ ಜನರಲ್ಲಿ ಮಾನವೀಯತೆಯ ಹಾಗೂ ಮೌಢ್ಯಚಾರಣೆ ವಿರುದ್ಧದ ಅರಿವು ಮೂಡಬೇಕು ಎಂದರು
ಈ ಸಂದರ್ಭದಲ್ಲಿ ಗೊಲ್ಲರ ಸಮುದಾಯದ ರಾಜ್ಯ ಅದ್ಯಕ್ಷರು, ಜಿಲ್ಲಾ ಅಧ್ಯಕ್ಷ, ಸಮುದಾಯದ ಚಲನ ಚಿತ್ರ ಸಂಗೀತ ಗಾರ ಮೋಹನ್, ತಹಶೀಲ್ದಾರ್, ಸ್ಥಳೀಯ ಜನ ಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು , ಮತ್ತಿತರರು ಹಾಜರಿದ್ದರು