ಊರಿಗೆ ಊರೇ ಮೋಸಹೋಯ್ತು: ದೂರು ನೀಡಲೆಂದು ಪೊಲೀಸ್ ಠಾಣೆ ಎದುರು ಸಾಲುಗಟ್ಟಿ ನಿಂತ ಹಳ್ಳಿ ಜನರು ಕಳೆದುಕೊಂಡಿದ್ದು 5 ಕೋಟಿ
Jul 27, 2024 10:28 AM IST
ಗುಬ್ಬಿ ತಾಲ್ಲೂಕು ಕಲ್ಲೂರು ಗ್ರಾಮದ ನೂರಾರು ಜನರು ಮೋಸ ಹೋಗಿದ್ದಾರೆ. ಸಿಎಸ್ ಪುರ ಪೊಲೀಸ್ ಠಾಣೆ ಎದುರು ಜನರು ಶುಕ್ರವಾರ (ಜುಲೈ 26) ದೂರು ನೀಡಲು ಸಾಲುಗಟ್ಟಿ ನಿಂತಿದ್ದರು.
- ಕಲ್ಲೂರು ಗ್ರಾಮದ 500 ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಮತ್ತು ರೈತರೇ ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ. (ವರದಿ: ಈಶ್ವರ್)
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರಿನಲ್ಲಿ ದೊಡ್ಡಮಟ್ಟದ ಆನ್‌ಲೈನ್ ವಂಚನೆ ನಡೆದಿದೆ. ಗ್ರಾಮಸ್ಥರು ಸುಮಾರು 4 ರಿಂದ 5 ಕೋಟಿ ರೂಪಾಯಿಯಷ್ಟು ಹಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಕೇವಲ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಈ ವಹಿವಾಟು ನಡೆದಿದೆ. ಬೆಂಗಳೂರಿನ ವ್ಯಕ್ತಿಯೊಬ್ಬ ಕಲ್ಲೂರಿನ ಜನರಿಗೆ 'ಡಾಟಾಮೀರ್ ಎಐ' ಆಪ್ ಸಹಾಯದಿಂದ ಆರಂಭವಾಗಿರುವ ಒಂದು ಹಣಕಾಸು ಆಪ್ ಮೋಸ ಮಾಡಿದೆ.
ಕಲ್ಲೂರು ಗ್ರಾಮದ 500 ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಮತ್ತು ರೈತರೇ ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ. ಕೆಲವರು 300 ರೂಪಾಯಿ ಕಳೆದುಕೊಂಡಿದ್ದರೆ, ಕೆಲವರು ಮೂರು ಲಕ್ಷ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಈ ಆಪ್ ಮೂಲಕ ಹಣ ಹೂಡಿಕೆ ಮಾಡಿದರೆ ಅದು ಬೇಗನೇ ಡಬಲ್ ಆಗುತ್ತದೆ ಎಂದು ನಂಬಿಸಲಾಗಿತ್ತು. ಅದರಂತೆ ಮೊದಮೊದಲು ಹಣ ಪಡೆದಿದ್ದ ಕಲ್ಲೂರಿನ ಜನತೆ ಕಡಿಮೆ ಮೊತ್ತದ ಹಣ ಹಾಕಿದಾಗ ಹೆಚ್ಚಿನ ಪ್ರತಿಫಲ ಪಡೆದಿದ್ದರು. ಆದರೆ ನಂತರದ ದಿನಗಳಲ್ಲಿ ದೊಡ್ಡಮಟ್ಟದ ಹಣ ಹಾಕಿದಾಗ ಅದು ವಾಪಸ್ ಬರಲಿಲ್ಲ. ಆಪ್ ಸಹ ಕಾರ್ಯನಿರ್ವಹಿಸುವುದು ಸ್ಥಗಿತಗೊಳಿಸಿತು. ಹಣ ಕಳೆದುಕೊಂಡವರು ದೂರು ನೀಡಲೆಂದು ಶುಕ್ರವಾರ ಸಿ.ಎಸ್.ಪುರ ಪೊಲೀಸ್ ಠಾಣೆಯ ಎದುರು ಸರದಿಸಾಲಿನಲ್ಲಿ ನಿಂತಿದ್ದರು.
ಸ್ಥಳಕ್ಕೆ ಡಿವೈಎಸ್‌ಪಿ ಶೇಖರ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಆನ್‌ಲೈನ್ ದಂಧೆಯಲ್ಲಿ ಸಾಕಷ್ಟು ಜನರು ಹಣ ಕಳೆದುಕೊಂಡಿದ್ದಾರೆ. ತನಿಖೆ ಮಾಡಲಾಗುತ್ತದೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರು ಮಾತನಾಡಿ, ಕಲ್ಲೂರಿನ ಬಹುತೇಕ ಜನರು ಹಣ ಕಳೆದುಕೊಂಡಿದ್ದಾರೆ. ಕೆಲವರು ಒಡವೆಗಳನ್ನು ಅಡ ಇಟ್ಟು ಹಣ ಹಾಕಿದ್ದಾರೆ. ಹಣ ದುಪ್ಪಟ್ಟು ಆಗಬಹುದು ಎಂಬ ಆಸೆಯಿಂದ ಹಲವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮೊದಲಿಗೆ ಹೂಡಿಕೆ ಮಾಡಿದವರಿಗೆ ಸಂಸ್ಥೆಯು ಹಣವನ್ನು ವಾಪಸ್ ಕೊಡುತ್ತಿತ್ತು. ಆದರೆ ಗುರುವಾರದಿಂದ ಆಪ್ ಕೆಲಸ ಮಾಡುತ್ತಿಲ್ಲ. ಹೀಗಾಗಿ ಹಣ ಹಾಕಿದವರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.
‘ಸಾವಿರಾರು ಜನರು ಜನರು ಆನ್‌ಲೈನ್ ಆಪ್‌ನಲ್ಲಿ ಹಣ ತೊಡಗಿಸಿದ್ದಾರೆ, ಮೊದಲು ಹಾಕಿದ ಹಣಕ್ಕೆ ಆಪ್ ಮೂಲಕ ಪ್ರತಿಫಲ ಬರುತ್ತಿತ್ತು. ಆಸೆಗೆ ಬಿದ್ದ ಜನ ಹೆಚ್ಚು ಹಣ ಹಾಕಿದರು. ಹೆಂಡತಿ, ಮಕ್ಕಳ ಹೆಸರಲ್ಲೂ, ಬಂಧುಗಳ ಹೆಸರಲ್ಲೂ ಹಣ ಹಾಕಿಸಲಾಗಿದೆ. ಸಾವಿರ ರೂಪಾಯಿಂದ 3 ಲಕ್ಷ, 5 ಲಕ್ಷದ ವರೆಗೂ ಜನರು ಹಣ ತೊಡಗಿಸಿದ್ದಾರೆ. ಹಣ ಹಾಕಿದವರಿಗಾಗಿ ವಾಟ್ಸ್ಆಪ್ ಗ್ರೂಪ್ ಸಹ ಮಾಡಲಾಗಿತ್ತು. ಈ ಗ್ರೂಪ್‌ನಲ್ಲಿ ಇದರಲ್ಲಿ 900 ಜನರನ್ನು ಸೇರಿಸಲಾಗಿತ್ತು, ಒಬ್ಬರ ಬಾಯಿಂದ ಒಬ್ಬರು ಮಾತು ಕೇಳಿ ಹಣ ಹಾಕಿದ್ದಾರೆ. ಅದೇ ರೀತಿ ನಾವು ಕೂಡ ಹಣ ಹೆಚ್ಚುವರಿ ಬರುತ್ತದೆ ಎಂಬ ನಂಬಿಕೆಯೊಂದಿಗೆ ಹಣ ಹಾಕಿದೆವು ಆದರೆ ಈಗ ಆಪ್ ಬಂದ್ ಆಗಿದೆ. ನ್ಯಾಯಕ್ಕಾಗಿ ಈಗ ಪೊಲೀಸ್ ಠಾಣೆಗೆ ಬಂದಿದ್ದೇವೆ. ಎಲ್ಲರೂ ಸೇರಿ ಒಂದು ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ. ಪೊಲೀಸರು ನಮಗೆ ನ್ಯಾಯ ಕೊಡಿಸುವ ವಿಶ್ವಾಸವಿದೆ. ನಮ್ಮ ಹಣ ನಮ್ಮ ಕೈಸೇರುವ ನಿರೀಕ್ಷೆಯಿದೆ’ ಎಂದು ಆಪ್ ನಂಬಿ ಹಣ ತೊಡಗಿಸಿರುವ ಕಲ್ಲೂರು ಗ್ರಾಮದ ಕಲ್ಲೇಶ್, ಯೋಗೀಶ್, ಮಂಜುನಾಥ್, ಪರಪ್ಪ, ನಾಗರಾಜು ಸೇರಿದಂತೆ ಇನ್ನಿತರರು ಪ್ರತಿಕ್ರಿಯಿಸಿದರು.
1.4 ಕೆಜಿ ಗಾಂಜಾ ಸಹಿತ ಆರೋಪಿ ವಶಕ್ಕೆ
ಕೊಡಿಗೇನಹಳ್ಳಿ: ಕಂಬಿ ಕೆಲಸ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಖಚಿತ ಒಡಿಶಾ ಮೂಲದ ವ್ಯಕ್ತಿಯಿಂದ ಸುಮಾರು 64 ಸಾವಿರ ಮೌಲ್ಯದ ಗಾಂಜಾ ಪ್ಯಾಕೇಟ್‌ಗಳನ್ನು ಕೊಡಿಗೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧುಗಿರಿ ತಾಲೂಕಿನ ಗಡಿಭಾಗದ ತಿಂಗಳೂರು- ಚಂದನದೂರು ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಶಂಕರ್ ಸ್ವಾಯಿನ್ ಯತ್ನಿಸುತ್ತಿದ್ದ. ಆರೋಪಿಯು ಆಂಧ್ರಪ್ರದೇಶದ ಹಿಂದೂಪುರದಲ್ಲಿ ಕಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ. ಹಿಂದೂಪುರ, ಗೌರಿಬಿದನೂರು, ಹಾಗೂ ಮಧುಗಿರಿ ತಾಲೂಕಿನ ವ್ಯಾಪ್ತಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.