logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಗೊರವನಹಳ್ಳಿ ಸನ್ನಿಧಿಯಲ್ಲಿ ಅದ್ದೂರಿ ಬ್ರಹ್ಮರಥೋತ್ಸವ, ಮಹಾಲಕ್ಷ್ಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

Tumkur News: ಗೊರವನಹಳ್ಳಿ ಸನ್ನಿಧಿಯಲ್ಲಿ ಅದ್ದೂರಿ ಬ್ರಹ್ಮರಥೋತ್ಸವ, ಮಹಾಲಕ್ಷ್ಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

Umesha Bhatta P H HT Kannada

Nov 29, 2024 08:16 PM IST

google News

ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ರಥೋತ್ಸವ ಶುಕ್ರವಾರ ಶ್ರದ್ದಾ ಭಕ್ತಿಯಿಂದ ನೆರವೇರಿತು.

  • ತುಮಕೂರು ಜಿಲ್ಲೆಯ ಪ್ರಸಿದ್ದ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದ ಆವರಣದಲ್ಲಿ ಬ್ರಹ್ಮರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ನಡೆಯಿತು.

    ವರದಿ: ಈಶ್ವರ್‌ ತುಮಕೂರು

ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ರಥೋತ್ಸವ ಶುಕ್ರವಾರ ಶ್ರದ್ದಾ ಭಕ್ತಿಯಿಂದ ನೆರವೇರಿತು.
ತುಮಕೂರು ಜಿಲ್ಲೆ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ರಥೋತ್ಸವ ಶುಕ್ರವಾರ ಶ್ರದ್ದಾ ಭಕ್ತಿಯಿಂದ ನೆರವೇರಿತು.

ತುಮಕೂರು: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಭಕ್ತರನ್ನು ಹೊಂದಿರುವ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಅಮ್ಮನವರ ದೇವಾಲಯದಲ್ಲಿ ಕಾರ್ತಿಕ ಮಾಸದ ಕಡೆ ಶುಕ್ರವಾರ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದರು. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಶ್ರೀಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಕೊನೆಯ ಕಾರ್ತಿಕ ಮಾಸದ ಅಂಗವಾಗಿ ಶುಕ್ರವಾರ ಮುಂಜಾನೆಯಿಂದಲೇ ಅಭಿಷೇಕ, ಹೋಮ, ವಿಶೇಷ ಅಲಂಕಾರ, ವಿಶೇಷ ಪೂಜೆಗಳು, ದಿನವೀಡಿ ಲಲಿತಾ ಸಹಸ್ರನಾಮ ನಡೆದಿದ್ದು, ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ರಾಮಕೃಷ್ಣ ಆಶ್ರಮ ತಗ್ಗಿಹಳ್ಳಿ ಶ್ರೀಮಠದ ರಮಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಮಧ್ಯಾಹ್ನ 12.30ರ ವೇಳೆಗೆ ಬ್ರಹ್ಮರಥೋತ್ಸವ ಜರುಗಿತು.

ಭಕ್ತರ ಉದ್ಘೋಷ

ಪ್ರತಿ ವರ್ಷದಂತೆ ಈ ವರ್ಷವು ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ ಭಕ್ತರ ದರ್ಶನಕ್ಕೆ ಅನುಕೂಲ ಕಲ್ಪಿಸಿ, ಅಮ್ಮನವರ ದರ್ಶನದ ಬಳಿಕ ಭಕ್ತರಿಗೆ 9 ಕೋಟಿ ವೆಚ್ಚದಲ್ಲಿ ನಿರ್ಮಿಸಿಲಾದ ನೂತನ ದಾಸೋಹ ನಿಲಯದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಶರ್ಮ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಸಹ ಕಡೆ ಕಾರ್ತಿಕ ಮಾಸದ ಶುಕ್ರವಾರ ಶ್ರೀಮಹಾ ಲಕ್ಷ್ಮೀತಾಯಿಯ ಅನುಗ್ರಹದಿಂದ ಧಾರ್ಮಿಕಾ ಪೂಜಾ ಕಾರ್ಯಕ್ರಮ ನಡೆದಿದೆ, ಬೆ.5.30ರಿಂದಲೇ ಹೋಮ, ಅಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ, ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಲಕ್ಷದೀಪೋತ್ಸವ ನಡೆದಿದೆ, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ ಎಂದು ಹೇಳಿದರು.

ಮುತ್ತಿನ ಪಲ್ಲಕ್ಕಿ ಉತ್ಸವ, ಲಕ್ಷ ದೀಪೋತ್ಸವಕ್ಕೆ ಚಾಲನೆ

ಸಿದ್ಧರಬೆಟ್ಟ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ಸಾನಿಧ್ಯ, ಟ್ರಸ್ಟ್‌ ಅಧ್ಯಕ್ಷ ವಾಸುದೇವ್ ಸಮ್ಮುಖದಲ್ಲಿ ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಿದ್ದು, ಸಿದ್ಧರಬೆಟ್ಟ ಶ್ರೀಗಳು ಮತ್ತು ಎಲೆರಾಂಪುರ ಶ್ರೀಗಳು ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೊರವನಹಳ್ಳಿ, ಗೊಲ್ಲರಹಟ್ಟಿ, ನರಸಯ್ಯನ ಪಾಳ್ಯದ ಗ್ರಾಮಸ್ಥರಿಂದ ಆರತಿ ಸೇವೆ ಹಾಗೂ ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಿದವು.

ಈ ವೇಳೆ ಆಡಳಿತ ಮಂಡಳಿಯ ಕೇಶವಮೂರ್ತಿ, ಕಾರ್ಯದರ್ಶಿ ಮುರುಳಿಕೃಷ್ಣ, ಖಚಾಂಚಿ ಆರ್.ಜಗದೀಶ್, ಧರ್ಮದರ್ಶಿಗಳಾದ ಡಾ.ಲಕ್ಷ್ಮೀಕಾಂತ ಟಿ.ಎಸ್, ನಟರಾಜು, ಶ್ರೀಪ್ರಸಾದ್, ರವಿರಾಜೇ ಅರಸ್, ಮಂಜುನಾಥ್, ಓಂಕಾರೇಶ್, ಚಿಕ್ಕನರಸಯ್ಯ, ವಿ.ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ಎನ್.ಜಿ ನಾಗರಾಜು, ವಿಶೇಷ ಅಧಿಕಾರಿ ಕೇಶವಮೂರ್ತಿ, ಕಾರ್ಯ ನಿರ್ವಾಹಣಾಧಿಕಾರಿ ಲಕ್ಷ್ಮಯ್ಯ ಇತರರು ಪಾಲ್ಗೊಂಡಿದ್ದರು.

(ವರದಿ: ಈಶ್ವರ್‌ ತುಮಕೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ