logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur Rains: ಅಬ್ಬರಿಸಿದ ಭರಣಿ, ತುಮಕೂರು ರೈತರಲ್ಲಿ ಹರ್ಷ, ಬಿಸಿಲ ತಾಪಮಾನಕ್ಕೆ ತಂಪೆರೆದ ಮಳೆರಾಯ

Tumkur Rains: ಅಬ್ಬರಿಸಿದ ಭರಣಿ, ತುಮಕೂರು ರೈತರಲ್ಲಿ ಹರ್ಷ, ಬಿಸಿಲ ತಾಪಮಾನಕ್ಕೆ ತಂಪೆರೆದ ಮಳೆರಾಯ

Umesha Bhatta P H HT Kannada

May 11, 2024 05:44 PM IST

google News

ತುಮಕೂರಿನಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆಯಿಂದ ಭೂಮಿ ಹಸಿಯಾಗಿದೆ.

    • ಕಲ್ಪತರು ನಾಡು ತುಮಕೂರಿನಲ್ಲೂ ಉತ್ತಮ ಮಳೆಯಾಗಿರುವುದು  ರೈತಾಪಿ ವರ್ಗದಲ್ಲಿ ಸಮಾಧಾನ ತಂದಿದೆ. ಗುಬ್ಬಿ, ಪಾವಗಡ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು. ಇನ್ನೂ ಒಂದು ವಾರ ಮಳೆ ಮುನ್ಸೂಚನೆ ನೀಡಲಾಗಿದೆ.
    • (ವರದಿ: ಈಶ್ವರ್‌ ತುಮಕೂರು)
ತುಮಕೂರಿನಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆಯಿಂದ ಭೂಮಿ ಹಸಿಯಾಗಿದೆ.
ತುಮಕೂರಿನಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆಯಿಂದ ಭೂಮಿ ಹಸಿಯಾಗಿದೆ.

ತುಮಕೂರು: ಕಳೆದ 7-8 ತಿಂಗಳಿಂದ ಮಳೆಯಿಲ್ಲದೆ ಭೀಕರ ಬರ, ಮಿತಿ ಮೀರಿದ ಬಿಸಿಲಿನ ಝಳದಿಂದ ಬಸವಳಿದು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದ ರೈತ ಸಮೂಹ ಹಾಗೂ ಜನಸಾಮಾನ್ಯರ ಮೊಗದಲ್ಲಿ ರಾತ್ರಿ ಸುರಿದ ವರ್ಷಧಾರೆ ಮಂದಹಾಸ ಮೂಡಿಸಿದೆ. ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಆರಂಭ ಎಂಬ ಗಾದೆ ಮಾತಿದೆ, ಹಾಗಾಗಿ ಭರಣಿ ಮಳೆಗಾಗಿ ರೈತ ಸಮೂಹ ಆಗಸದತ್ತ ಮುಖಮಾಡಿ ಕುಳಿತಿದ್ದರು, ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಇತರೆಡೆಗಳಲ್ಲಿ ಭರಣಿ ಮಳೆಯಾಗುತ್ತಿದ್ದರೂ ಅದೇಕೋ ಏನೋ ತುಮಕೂರು ಸುತ್ತಮುತ್ತ ಮಾತ್ರ ಮಳೆಯ ಲಕ್ಷಣವೇ ಕಾಣುತ್ತಿರಲಿಲ್ಲ, ಮೊದಲೇ ಭೀಕರ ಬರದಿಂದ ಕಂಗೆಟ್ಟಿದ್ದ ಕಲ್ಪತರು ನಾಡಿನ ಜನತೆಗೆ ಭರಣಿ ಮಳೆ ಬಾರದಿರುವುದು ಮತ್ತಷ್ಟು ಆತಂಕಕ್ಕೆ ದೂಡಿತ್ತು,

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಶುಕ್ರವಾರ ರಾತ್ರಿ ಸುಮಾರು 11.20 ರಿಂದ 1 ಗಂಟೆ ವರೆಗೂ ಸಿರಿದ ಭರಣಿ ಮಳೆ ಕೊನೆ ಹಂತದಲ್ಲಿ ಇಳೆಗೆ ತಂಪೆರೆದಿರುವುದು ರೈತರಲ್ಲಿ ಎಲ್ಲಿಲ್ಲದ ಸಂತಸ ತಂದಿದೆ.

ಆರು ತಿಂಗಳ ನಂತರ ಮಳೆ

ಕಳೆದ 7-8 ತಿಂಗಳಿಂದ ವರ್ಷಧಾರೆ ಇಲ್ಲದೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನ ಸಾಮಾನ್ಯರಿಗೆ ರಾತ್ರಿ ಸುರಿದ ಮಳೆ ಇಳೆಗೆ ತಂಪೆರೆದಿದ್ದು, ಬಿಸಿಲಿನ ಬೇಗೆಯಿಂದ ಬಾಡುತ್ತಿದ್ದ ಅಡಿಕೆ, ತೆಂಗು, ಬಾಳೆ ಸೇರಿದಂತೆ ಇನ್ನಿತರೆ ಬೆಳೆ ವರುಣ ಕೃಪೆಯಿಂದ ಕೊಂಚ ನಳನಳಿಸುವಂತಾಗಿದೆ.

ರಾತ್ರಿ ಭರಣಿ ಮಳೆ ಕೊನೆಯ ಹಂತದಲ್ಲಿ ಸುರಿದಿರುವುದು ಕೃಷಿ ಚಟುವಟಿಕೆ ಆರಂಭಿಸಲು ಶುಭ ಸೂಚನೆಯಾಗಿದೆ ಎಂಬುದು ರೈತರ ಸಂತಸದ ಮಾತು.

ಬಿರು ಬೇಸಿಗೆ, ಅತಿಯಾದ ತಾಪಮಾನದಿಂದ ಜನಸಾಮಾನ್ಯರು ಮಧ್ಯಾಹ್ನ ಇರಲಿ, ರಾತ್ರಿ ವೇಳೆ ಗಲಿ ಮನೆಯಲ್ಲಿ ಇರಲಾರದೆ, ನಿದ್ದೆ ಮಾಡಲಾಗದೆ ಬಸವಳಿಯುತ್ತಾ ಮಳೆಗಾಗಿ ದೇವರಲ್ಲಿ ಮೊರೆಯಿಡುತ್ತಿದ್ದರು, ಕೊನೆಗೂ ವರುಣ ಕೃಪೆ ತೋರಿ ರಾತ್ರಿ ಭೂಮಿಗೆ ತಂಪೆರೆದಿರುವುದು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರಲ್ಲಿ ಹರ್ಷ ಮೂಡಿಸಿದೆ.

ಭರಣಿ ಮಳೆ ಇಳೆಗೆ ತಂಪೆರೆದಿದ್ದು, ಕೃತಿಕಾ ಮಳೆ ಆರಂಭವಾಗಲಿದೆ, ಇನ್ನು ಮುಂದಿನ ಮಳೆ ನಕ್ಷತ್ರಗಳು ಕೃಪೆ ತೋರಿದರೆ ಸಾಕು, ಇಷ್ಟು ಭೀಕರ ಬರದ ಬೇಗೆಯಿಂದ ಬೇಯ್ದಿದ್ದೇವೆ, ಈ ಭೀಕರತೆಯಿಂದ ಹೊರ ಬರಲು ಮಳೆರಾಯ ಬಂದರೆ ಸಾಕು ಎಂಬ ಮಾತುಗಳು ತುಮಕೂರು ಸೇರಿದಂತೆ ಜಿಲ್ಲೆಯಾದ್ಯಂತ ರೈತರಿಂದ ಕೇಳಿ ಬಂದಿವೆ.

ರೈತರು ಖುಷ್‌

ಕಳೆದ ವರ್ಷ ಬರದಿಂದಾಗಿ ಇಟ್ಟಿದ್ದ ಬೆಳೆಯೂ ಕೈಗೆ ಸಿಗದೆ ನಷ್ಟ ಅನುಭವಿಸಿದ್ದೆವು, ಈ ಬಾರಿಯಾದರೂ ಸಂತೃಪ್ತಿಯಾಗಿ ಬೆಳೆಯಾಗುವಂತೆ ಮಳೆ ಆಶೀರ್ವದಿಸಿದರೆ ಸಾಕು ಎಂದು ರೈತರು ದೇವರಲ್ಲಿ ಮೊರೆಯಿಡುತ್ತಿದ್ದರು, ರೈತರ ಬೇಡಿಕೆಯಂತೆಯೇ ರಾತ್ರಿ ಕೊನೆ ಹಂತದಲ್ಲಿ ಭರಣಿ ಮಳೆ ಅಬ್ಬರಿಸಿರುವುದು ಅನ್ನದಾತರಲ್ಲಿ ಸಮಾಧಾನ ತಂದಿದೆ.

ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿಯೂ ನಿತ್ಯ ಸಂಜೆ ಮಳೆ ಸುರಿಯುತ್ತಿದೆ. ತುಮಕೂರಿನಲ್ಲಿ ಅಲ್ಲಲ್ಲಿ ಒಂದೆರಡು ಮಳೆಯಾದರೂ ಸಮಾಧಾನ ತಂದಿರಲಿಲ್ಲ. ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿರುವುದು ನಮಗೆಲ್ಲಾ ಖುಷಿ ತಂದಿದೆ. ಈಗಲೂ ಮೋಡ ಕಟ್ಟಿದೆ. ಶನಿವಾರವೂ ಸಾಕಷ್ಟು ಮಳೆಯಾಗಬಹುದು. ಇನ್ನೂ ಕೆಲವು ದಿನ ಹೀಗೆಯೇ ಮಳೆಯಾದರೆ ರೈತಾಪಿ ಚಟುವಟಿಕೆಗಳಿಗೆ ದಾರಿಯಾಗಲಿದೆ ಎನ್ನುವುದು ತುಮಕೂರು ಜಿಲ್ಲೆಯ ರೈತರ ಅಭಿಪ್ರಾಯ.

ಎಷ್ಟು ಮಳೆಯಾಗಿದೆ?

ಶುಕ್ರವಾರ ರಾತ್ರಿ ತುಮಕೂರು ಜಿಲ್ಲೆಯ ಹಲವು ಕಡೆ ಮಳೆಯಾಗಿದೆ. ಅದೂ ಗುಬ್ಬಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 6 ಸೆ.ಮೀನಷ್ಟು ಮಳೆ ಸುರಿದಿದೆ. ಪಾವಗಡ ತಾಲ್ಲೂಕಿನಲ್ಲಿ 1 ಸೆ.ಮೀ. ಮಳೆಯಾಗಿದೆ.

ಮೇ 18ರವರೆಗೆ ಅಂದರೆ ಒಂದು ವಾರ ಕಾಲ ತುಮಕೂರು ಜಿಲ್ಲೆಯ ನಾನಾ ಕಡೆಗೆ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.

(ವರದಿ: ಈಶ್ವರ್‌. ತುಮಕೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ