logo
ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಚಿರತೆಗಳಿಗೆ ಬಾವಲಿಯೂ ಆಹಾರ: ತುಮಕೂರು ದೇವರಾಯನದುರ್ಗದಲ್ಲಿ ಸಂಶೋಧನೆ ವೇಳೆ ಬಯಲು

Forest tales: ಚಿರತೆಗಳಿಗೆ ಬಾವಲಿಯೂ ಆಹಾರ: ತುಮಕೂರು ದೇವರಾಯನದುರ್ಗದಲ್ಲಿ ಸಂಶೋಧನೆ ವೇಳೆ ಬಯಲು

HT Kannada Desk HT Kannada

Oct 22, 2023 01:51 PM IST

google News

ಚಿರತೆಗಳು ಬಾವಲಿಗಳನ್ನು ಬೇಟೆಯಾಡಿ ತಿನ್ನುವುದು ದೇವರಾಯನದುರ್ಗ ಅರಣ್ಯದಲ್ಲಿ ಕಂಡು ಬಂದಿದೆ.

    • Leopards food ಚಿರತೆಗಳು ಸಾಮಾನ್ಯವಾಗಿ ನಾಯಿ, ಮೇಕೆ, ಜಿಂಕೆ, ಸಾರಂಗ, ಕಾಡುಹಂದಿ ಸೇವಿಸುವುದು ಗೊತ್ತು. ತುಮಕೂರು( Tumkur) ಜಿಲ್ಲೆಯ ದೇವರಾಯನದುರ್ಗದಲ್ಲಿ ನಡೆಸಿದ ಸಂಶೋಧನೆಯಲ್ಲಿ ಬಾವಲಿ( Bats)ಯನ್ನು ಚಿರತೆ ಹಿಡಿದಿರುವುದು ಕಂಡು ಬಂದಿದೆ.
ಚಿರತೆಗಳು ಬಾವಲಿಗಳನ್ನು ಬೇಟೆಯಾಡಿ ತಿನ್ನುವುದು ದೇವರಾಯನದುರ್ಗ ಅರಣ್ಯದಲ್ಲಿ ಕಂಡು ಬಂದಿದೆ.
ಚಿರತೆಗಳು ಬಾವಲಿಗಳನ್ನು ಬೇಟೆಯಾಡಿ ತಿನ್ನುವುದು ದೇವರಾಯನದುರ್ಗ ಅರಣ್ಯದಲ್ಲಿ ಕಂಡು ಬಂದಿದೆ.

ಬೆಂಗಳೂರು: ಚಿರತೆಗಳ ಬೇಟೆ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಕಾಡಿನಲ್ಲಿದ್ದರೆ ಜಿಂಕೆ,ಸಾರಂಗ, ಊರಿನಲ್ಲಾದರೆ ನಾಯಿ, ಮೇಕೆ ಎಂದು ಉತ್ತರಿಸಿಬಿಡಬಹುದು. ಆದರೆ ಚಿರತೆಗಳ ಆಹಾರ ಭಿನ್ನವಾಗಿರುವುದು ಸಂಶೋಧನೆಯಿಂದ ಕಂಡು ಬಂದಿದೆ.

ಕರ್ನಾಟಕದ ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ಹಾಗೂ ಅವರ ತಂಡವು ತುಮಕೂರು ಜಿಲ್ಲೆಯಲ್ಲಿ ನಡೆಸಿರುವ ಸಂಶೋಧನೆ ಹಾಗೂ ಕ್ಷೇತ್ರ ಕಾರ್ಯದ ವೈಜ್ಞಾನಿಕ ಮಾಹಿತಿಯು ಹಲವು ಅಂಶಗಳನ್ನು ಹೊರಗೆಡಹಿದೆ.

ಚಿರತೆಗಳು (ಪ್ಯಾಂಥೇರಾ ಪಾರ್ಡಸ್) ಹಲವು ವಿಧದ ಪ್ರಾಣಿಗಳನ್ನು ಭಕ್ಷಿಸುವುದು ವೈಜ್ಞಾನಿಕವಾಗಿ ದಾಖಲಾಗಿದೆ. ಜಿಂಕೆ, ಕಡವೆ, ಸಾರಂಗ, ಕಾಡು ಹಂದಿಯಂತಹ ದೊಡ್ಡ ಬಲಿ ಪ್ರಾಣಿಗಳು, ಕೊಂಡುಕುರಿ, ಕಾಡುಕುರಿಯಂತಹ ಮಧ್ಯಮ ಗಾತ್ರದ ಪ್ರಾಣಿಗಳು ಮತ್ತು ಮೊಲ, ಮುಳ್ಳುಹಂದಿ, ಚಿಪ್ಪು ಹಂದಿಯಂತಹ ಸಣ್ಣ ಗಾತ್ರದ ಪ್ರಾಣಿಗಳನ್ನು ತಿನ್ನುತ್ತವೆ. ಅದರೊಡನೆ ಕುರಿ, ಮೇಕೆ, ಸಾಕು ನಾಯಿಗಳನ್ನು ಸಹ ಚಿರತೆಗಳು ಆಹಾರವಾಗಿ ಬೇಟೆಯಾಡುತ್ತವೆ.

ವಿವಿಧ ಗಾತ್ರದ ಬಲಿ ಪ್ರಾಣಿಗಳನ್ನು ತಿಂದು ಬದುಕುವುದೇ ಚಿರತೆಗಳು ಎಲ್ಲ ಪ್ರದೇಶಗಳಲ್ಲೂ ಹೊಂದಿಕೊಂಡು ಬದುಕುವುದಕ್ಕೆ ಕಾರಣವಾಗಿದೆ. ಹೆಗ್ಗಣ, ಉಡ, ಮೀನಿನಂತಹ ಆಸಕ್ತಿದಾಯಕ ಪ್ರಾಣಿಗಳು ಕೂಡ ಅವುಗಳ ಆಹಾರದ ಪದ್ಧತಿಯಲ್ಲಿರುವುದು ದಾಖಲಾಗಿದೆ.

ತುಮಕೂರಲ್ಲಿ ಕಂಡಿದ್ದೇನು

ಆದರೆ ತುಮಕೂರು ಜಿಲ್ಲೆಯ ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯದಲ್ಲಿ ಇತ್ತೀಚಿಗೆ ದಾಖಲಾಗಿರುವ, ಚಿರತೆಗಳ ನಡವಳಿಕೆಯ ವಿಶಿಷ್ಟ ಸಂಗತಿ ಬಹುಶಃ ಪ್ರಪಂಚದಲ್ಲೇ ಮೊಟ್ಟ ಮೊದಲ ಕಂಡುಬಂದಿರುವ ಮಾಹಿತಿ.

ಈ ವರ್ಷದ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ತುಮಕೂರು ನಗರದ ಹತ್ತಿರದಲ್ಲಿರುವ ದೇವರಾಯನದುರ್ಗದಲ್ಲಿ ಚಿರತೆಗಳ ಬಗ್ಗೆ ಅಧ್ಯಯನಕ್ಕಾಗಿ ಹೊಳೆಮತ್ತಿ ನೇಚರ್ ಫೌಂಡೇಶನ್ ಮತ್ತು ನೇಚರ್ ಕನ್ಸರ್ವೇಷನ್ ಫೌಂಡೇಶನ್ ನ, ಡಾ ಸಂಜಯ್ ಗುಬ್ಬಿ ಮತ್ತು ತಂಡದವರು ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್ ನಲ್ಲಿ ಚಿರತೆಯೊಂದು ದೊಡ್ಡ ಬಾವಲಿಯೊಂದನ್ನು (Pteropus medius) ಕಚ್ಚಿಕೊಂಡು ಹೋಗುತ್ತಿರುವ ಆಸಕ್ತಿದಾಯಕ ಚಿತ್ರ ದಾಖಲಾಗಿದೆ.

ಬಾವಲಿಗಳ ವಿಶೇಷ

ಎರಡು ಸಂದರ್ಭಗಳಲ್ಲಿ, ಸುಮಾರು 5 ರಿಂದ 6 ವರ್ಷದ ಹೆಣ್ಣು ಚಿರತೆಯೊಂದು ಬಾವಲಿಗಳನ್ನು ಬೇಟೆಯಾಡಿ ಕಚ್ಚಿಕೊಂಡು ಹೋಗುತ್ತಿರುವ ಅಪರೂಪದ ಸಂಗತಿ ದಾಖಲಾಗಿದೆ. ಚಿರತೆಗಳು ಬಾವಲಿಗಳನ್ನು ತಿನ್ನುತ್ತಿರುವ ವಿಚಾರ ಬಹುಶಃ ಪ್ರಪಂಚದಲ್ಲಿ ಇನ್ನೆಲ್ಲೂ ದಾಖಲಾಗಿರುವ ಪ್ರಸಂಗಗಳಿಲ್ಲ. ಆದರೆ ಚಿರತೆ, ಬಾವಲಿಗಳಿರುವ ಮರ ಹತ್ತಿ ಬೇಟೆಯಾಡಿತೇ ಅಥವಾ ಇನ್ಯಾವುದಾದರೂ ವಿಧಾನವನ್ನು ಉಪಯೋಗಿಸಿ ಬೇಟೆಯಾಡುತ್ತಿದೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಆಂಗ್ಲದಲ್ಲಿ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಮತ್ತು ಕನ್ನಡದಲ್ಲಿ ಹಾಲಕ್ಕಿ ಎಂದು ಕರೆಯಲ್ಪಡುವ ಈ ಬಾವಲಿಗಳು ಪ್ರಪಂಚದಲ್ಲೇ ಅತಿ ದೊಡ್ಡದಾದ ಬಾವಲಿಗಳಲ್ಲೊಂದು. ಸುಮಾರು 1.5 ಕೆ.ಜಿಯಷ್ಟು ತೂಗುವ ಈ ಬಾವಲಿಗಳು ಸುಮಾರು 5 ಅಡಿಯಷ್ಟು ಅಗಲದ ರೆಕ್ಕೆಗಳನ್ನು ಹೊಂದಿರುತ್ತವೆ.

ಬಾವಲಿ ಬೇಟೆ ಏಕೆ

ಈ ಹೆಣ್ಣು ಚಿರತೆ ಅದೇ ಸ್ಥಳದಲ್ಲಿ ತನ್ನ ಆರು ತಿಂಗಳ ಮರಿಯೊಡನೆ ಕೂಡ ದಾಖಲಾಗಿದೆ. ಹಾಗಾಗಿ ಈ ಮರಿಯೂ ಕೂಡ ಬಾವಲಿಗಳನ್ನು ಬೇಟೆಯಾಡುವ ಈ ವಿಶೇಷ ಗುಣವನ್ನು ಕಲಿಯಬಹುದು ಎನ್ನುತ್ತಾರೆ ಈ ಅಧ್ಯಯನವನ್ನು ಮಾಡುತ್ತಿರುವ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ.

ಇದನ್ನೂ ಓದಿರಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ