logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಕೊಬ್ಬರಿ ನೇರ ಖರೀದಿಗೆ ಹೆಚ್ಚಿದ ಒತ್ತಡ: ತುಮಕೂರಲ್ಲಿ ರೈತಸಂಘ ಅಹೋರಾತ್ರಿ ಧರಣಿ

Tumkur News: ಕೊಬ್ಬರಿ ನೇರ ಖರೀದಿಗೆ ಹೆಚ್ಚಿದ ಒತ್ತಡ: ತುಮಕೂರಲ್ಲಿ ರೈತಸಂಘ ಅಹೋರಾತ್ರಿ ಧರಣಿ

HT Kannada Desk HT Kannada

Jan 08, 2024 07:47 PM IST

google News

ಕೊಬ್ಬರಿ ಖರೀದಿ ಹಾಗೂ ದರ ಹೆಚ್ಚಳಕ್ಕೆ ಒತ್ತಾಯಿಸಿ ತುಮಕೂರಿನಲ್ಲಿ ರೈತಸಂಘದವರು ಧರಣಿ ಆರಂಭಿಸಿದ್ದಾರೆ.

    • Tumkur Farmers ಕೊಬ್ಬರಿ ಖರೀದಿಯನ್ನು ನಾಫೆಡ್‌ನಿಂದಲೇ ನಡೆಸಬೇಕು ಹಾಗೂ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ತುಮಕೂರಿನಲ್ಲಿ ರೈತಸಂಘದಿಂದ ಅಹೋರಾತ್ರಿ ಧರಣಿ ಆರಂಭಗೊಂಡಿದೆ.
ಕೊಬ್ಬರಿ ಖರೀದಿ ಹಾಗೂ ದರ ಹೆಚ್ಚಳಕ್ಕೆ ಒತ್ತಾಯಿಸಿ ತುಮಕೂರಿನಲ್ಲಿ ರೈತಸಂಘದವರು ಧರಣಿ ಆರಂಭಿಸಿದ್ದಾರೆ.
ಕೊಬ್ಬರಿ ಖರೀದಿ ಹಾಗೂ ದರ ಹೆಚ್ಚಳಕ್ಕೆ ಒತ್ತಾಯಿಸಿ ತುಮಕೂರಿನಲ್ಲಿ ರೈತಸಂಘದವರು ಧರಣಿ ಆರಂಭಿಸಿದ್ದಾರೆ.

ತುಮಕೂರು: ತುಮಕೂರು, ಹಾಸನ, ರಾಮನಗರ, ಕೋಲಾರ, ಮಂಡ್ಯ ಭಾಗದಲ್ಲಿ ಬೆಳೆಯುವ ಕೊಬ್ಬರಿ ಖರೀದಿಗೆ ಕೂಡಲೇ ದಿನಾಂಕ ನಿಗದಿಪಡಿಸಿ ನಾಫೆಡ್‌ ಸಹಯೋಗದೊಂದಿಗೆ ಖರೀದಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಎನ್ನುವ ಒತ್ತಡ ಈ ಬಾರಿಯೂ ಜೋರಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಕೊಬ್ಬರಿ ಖರೀದಿಗೆ ಹೆಚ್ಚುವರಿ ಸಹಾಯಧನ ನೀಡುವ ಘೋಷಣೆಯನ್ನು ಬೆಳಗಾವಿ ಅಧಿವೇಶನದಲ್ಲಿಯೇ ಮಾಡಿದೆ. ಆದರೆ ಈ ಹಿಂದಿನಂತೆಯೇ ರೈತರು ನಾಫೆಡ್‌ ಮೂಲಕವೇ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಕೇಂದ್ರ ಸರ್ಕಾರ ದಿನಾಂಕ ಪ್ರಕಟಿಸುವ ಮುನ್ನವೇ ಹೋರಾಟವೂ ಜೋರಾಗಿದೆ.

ರೈತ ಸಂಘ ಅಹೋರಾತ್ರಿ ಧರಣಿ

ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರೂಪಾಯಿ ಜೊತೆಗೆ ರಾಜ್ಯ ಸರ್ಕಾರ 3 ಸಾವಿರ ರೂಪಾಯಿ ಸೇರಿಸಿ ಕೊಬ್ಬರಿ ಖರೀದಿಸಲು ನಾಫೆಡ್ ಮೂಲಕ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಆಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಸೋಮವಾರ ನಗರದ ಟೌನ್‌ಹಾಲ್ ವೃತ್ತದಿಂದ ಮೆರವಣಿಗೆಯಲ್ಲಿ ಆಗಮಿಸಿದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು, ಈ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಕೇಂದ್ರ ಸರ್ಕಾರ ನಿಗದಿ ಮಾಡಿರುವ 12 ಸಾವಿರ ರೂ. ಗಳ ಜೊತೆಗೆ ರಾಜ್ಯ ಸರ್ಕಾರ 3 ಸಾವಿರ ರೂ. ಸೇರಿಸಿ ನಾಫೆಡ್ ಕೇಂದ್ರದ ಮೂಲಕ ಖರೀದಿಸಲು ಕ್ರಮ ತೆಗೆದುಕೊಳ್ಳಬೇಕು, ಅಲ್ಲಿಯವರೆಗೂ ಬಿಡದೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ರೈತರು, ಕಾರ್ಮಿಕರು, ಸೈನಿಕರು ಉಳಿದರೆ ಮಾತ್ರ ದೇಶದ ಅಭಿವೃದ್ಧಿ, ಹೀಗಿರುವಾಗ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೇ ಬರುತ್ತಿವೆ, ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚು ಮಾಡಬೇಕು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ, ಸಮರ್ಪಕ ನಿರ್ಧಾರ ಪ್ರಕಟಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ವಿದೇಶಗಳಿಂದ ಕೊಬ್ಬರಿ ಎಣ್ಣೆ ಹಾಗೂ ಪೌಡರ್ ಆಮದನ್ನು ಸರ್ಕಾರ ನಿಲ್ಲಿಸದ ಕಾರಣ ಕೊಬ್ಬರಿ ಬೆಲೆ ಕುಸಿಯಲು ಕಾರಣವಾಗಿದೆ, ಸರ್ಕಾರಗಳಿಗೆ ತೆಂಗು ಬೆಳೆಗಾರರ ಹಿತ ಕಾಯುವ ಕಾಳಜಿಯಿಲ್ಲ, ಅರಸೀಕೆರೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ತೆಂಗು ಬೆಳೆಗಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು, ಆದರೆ ತೆಂಗು ಬೆಳೆಗಾರರ ಪರವಾಗಿ ಜಿಲ್ಲೆಯ ಯಾವೊಬ್ಬ ಶಾಸಕರೂ ಅಧಿವೇಶನದಲ್ಲಿ ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದರ ಹೆಚ್ಚಿಸಿ

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ ಮಾತನಾಡಿ, ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿಮಾಡಿ ಸರ್ಕಾರ ಖರೀದಿ ಮಾಡಿ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸದಿದ್ದರೆ ಆಹೋರಾತ್ರಿ ಧರಣಿ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಮೊದಲಿದ್ದ ಕ್ವಿಂಟಾಲ್ ಕೊಬ್ಬರಿಯ 11750 ರೂ. ದರವನ್ನು 250 ರೂ. ಸೇರಿಸಿ 12 ಸಾವಿರ ರೂ.ಗೆ ಹೆಚ್ಚಿಸಿದ್ದು ತೆಂಗು ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ, ಈಗ ಎಲ್ಲಾ ದಿನಬಳಕೆ ಪದಾರ್ಥಗಳ ಬೆಲೆ ಶೇಕಡ 30 ರಷ್ಟು ಹೆಚ್ಚಾಗಿದೆ, ಹೀಗಿರುವಾಗ ಅದೇ ಪ್ರಮಾಣದಲ್ಲಿ ಕೊಬ್ಬರಿಗೂ ಶೇಕಡ 30 ರಷ್ಟು ಬೆಲೆ ಹೆಚ್ಚಿಸಿದರೆ ಕ್ವಿಂಟಾಲ್‌ಗೆ 16 ಸಾವಿರ ರೂ. ನೀಡಬೇಕಾಗುತ್ತದೆ, ಸಾಲ ಬಾಧೆಯಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ, ತೆಂಗು ಬೆಳೆಗಾರರು ಕೊಬ್ಬರಿ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿದ್ದಾರೆ, ಕೇಂದ್ರ ಸರ್ಕಾರ ನಿಗದಿಪಡಿಸಿರುವ 12 ಸಾವಿರ ರೂ. ಗಳಿಗೆ ರಾಜ್ಯ ಸರ್ಕಾರ 3 ಸಾವಿರ ರೂ. ಸೇರಿಸಿ ತುರ್ತಾಗಿ ನಾಫೆಡ್ ಕೇಂದ್ರ ತೆರೆದು ಖರೀದಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ವಿ.ಲೋಕೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಿವರತ್ನಮ್ಮ, ಮುಖಂಡರಾದ ಸಣ್ಣ ದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು, ಸರ್ವಮಂಗಳ, ಶಾಂತಕ್ಕ, ದೇವಮ್ಮ, ರೇಣುಕಮ್ಮ, ನಾಗೇಂದ್ರ, ರಾಜಣ್ಣ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ