Tumkur News: ಮೂರನೇ ಬಾರಿಗೆ ಉಸ್ತುವಾರಿ ಸಿಕ್ಕಿದೆ, ತುಮಕೂರು ಅಭಿವೃದ್ಧಿಗೆ ಕ್ರಮ ಕೈಗೊಳ್ಳುವೆ ಎಂದ ಜಿ ಪರಮೇಶ್ವರ್
Jun 09, 2023 08:31 PM IST
ಜಿ ಪರಮೇಶ್ವರ್
- G Parameshwar: ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ. ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ನಿರೀಕ್ಷೆ ಹಾಗೂ ಅಪೇಕ್ಷೆ. ಎಲ್ಲರೂ ಶಾಂತಿಯಿಂದ ಬಾಳೋಣ ಎಂದು ತುಮಕೂರು ಉಸ್ತುವಾರಿ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರು: ಮೂರನೇ ಬಾರಿ ತುಮಕೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಸಿಎಂ ಎಲ್ಲಾ ಸಚಿವರಿಗೂ ಉಸ್ತುವಾರಿ ಕೊಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ಶಾಂತಿ ಕಾಪಾಡುವ ಜವಾಬ್ದಾರಿ ಉಸ್ತುವಾರಿ ನಮ್ಮ ಮೇಲಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇರುತ್ತದೆ. ಮಳೆ ಪ್ರವಾಹದಿಂದ ಬೆಳೆ ಹಾನಿ, ನೀರಿನ ಸಮಸ್ಯೆ ಹೀಗೆ ಜಿಲ್ಲೆಯ ಸಮಸ್ಯೆಗಳಿಗೆ ತಕ್ಕಂತೆ ಸಚಿವರು ಕ್ರಮಕೈಗೊಳ್ಳಬೇಕು. ನಮ್ಮ ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ, ಶಿರಾದಲ್ಲಿ ಮಳೆ ಕಡಿಮೆ. ಅಲ್ಲಿ ಬರ ಹೆಚ್ಚು. ಕುಣಿಗಲ್, ಗುಬ್ಬಿ ,ತಿಪಟೂರಿನಲ್ಲಿ ಉತ್ತಮ ಮಳೆಯಾಗುತ್ತದೆ. ಹೇಮಾವತಿ ನೀರು ಸಹ ಬರುತ್ತದೆ. ಅಲ್ಲಿನ ಸಮಸ್ಯೆಗಳೇ ಬೇರೆ. ರೈತರಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜವನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕೆಂದು ಸಿಎಂ ಕ್ರಮ ಕೈಗೊಂಡಿದ್ದಾರೆ ಎಂದರು.
ಗೃಹ ಇಲಾಖೆಯಲ್ಲಿ ನಾನೊಂದು ಕಾನೂನು ಮಾಡಲು ಬರಲ್ಲ. ಕುಂಕುಮ, ವಿಭೂತಿ ಇಟ್ಟುಕೊಳ್ಳಬಾರದು ಎಂದು ನಾನು ಹೇಳಿರುವುದಾಗಿ ವೈರಲ್ ಮಾಡಿದ್ದಾರೆ. ಅದನ್ನು ನಾನು ಹೇಳಿಯೇ ಇಲ್ಲ. ನನಗೆ ಪ್ರಜ್ಞೆಯಿದೆ. ನಾನು ಮೂರು ಬಾರಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಮಾನ್ಯೂಯಲ್ ಇದೆ. ಅದನ್ನು ಬಿಟ್ಟು ಬೇರೊಂದು ಮಾಡಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ಮಾನ್ಯೂಯಲ್ ಅನುಷ್ಠಾನ ಮಾಡುತ್ತಾರೆ ಎಂದರು.
ನಾನು ಗೃಹ ಸಚಿವನಾಗಿದ್ದಾಗ ಒಂದು ಕಾನೂನು ಮಾಡಲು ಹೋಗುವುದು, ಇನ್ನೊಬ್ಬರು ಇನ್ನೊಂದು ಕಾನೂನು ಮಾಡುವುದಕ್ಕೆ ಅವಕಾಶವಿಲ್ಲ. ಯಾರು ವೈರಲ್ ಮಾಡಿದ್ದಾರೋ ಅವರನ್ನು ಹುಡುಕುತ್ತಿದ್ದೇವೆ. ಇಂಥವರನ್ನೆಲ್ಲಾ ಸುಮ್ಮನೆ ಬಿಡಲು ಆಗುವುದಿಲ್ಲ. ಸುಳ್ಳು ಸುದ್ದಿಗಳನ್ನು ಮಾಡಬಾರದು ಎಂದರು.
ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ. ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ನಿರೀಕ್ಷೆ ಹಾಗೂ ಅಪೇಕ್ಷೆ. ನಮ್ಮ ಪ್ರಣಾಳಿಕೆ ಶೀರ್ಷಿಕೆಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀವಿ ಅಂತಾ ಹೇಳಿದ್ದೇವೆ. ಎಲ್ಲರೂ ಶಾಂತಿಯಿಂದ ಬಾಳೋಣ. ಅದು ನಮ್ಮ ಅಪೇಕ್ಷೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ. ನಾವು ಪೇ ಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೇನಾದರೂ ಅಂತಹದ್ದು ಮಾಹಿತಿ ಇದ್ರೆ ಅಂಟಿಸಲಿ. ಪಾಪ ನಾನ್ಯಾಕೆ ಬೇಡ ಅನ್ನಲಿ ಎಂದರು.
ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶವಾಗಿದೆ. ಶೀಘ್ರದಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆಗಳಿರುತ್ತವೆ. ಮಳೆ ಹೆಚ್ಚಾಗಿ, ಅತಿವೃಷ್ಟಿಯಾಗಿ ಪ್ರವಾಹ, ಬೆಳೆನಷ್ಟ ಕೆಲವು ಜಿಲ್ಲೆಗಳಲ್ಲಿರುತ್ತವೆ. ಕೆಲವು ಜಿಲ್ಲೆಗಳಲ್ಲಿ ಮಳೆಯೇ ಬರುವುದಿಲ್ಲ. ಬೇಸಿಗೆಯಂತೆ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಆಯಾ ಸಚಿವರು ಎಲ್ಲವನ್ನೂ ಗಮನಿಸಿ ಸರಕಾರದ ವತಿಯಿಂದ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕಾಗುತ್ತದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಎಲ್ಲರಿಗೂ ಗೊತ್ತಿರುವಂತೆ ಕೆಲವು ಸಮಸ್ಯೆ ಕೃಷಿಗೆ ಸಂಬಂಧಿಸಿದಂತೆ ಇವೆ. ಒಂದು ಕಡೆ ಪಾವಗಡ, ಶಿರಾ, ಕೊರಟಗೆರೆಯ ಅರ್ಧಭಾಗ, ಮಧುಗಿರಿ ಇವೆಲ್ಲಾ ಒಣ ಪ್ರದೇಶಗಳು. ಬಹಳಷ್ಟು ಸಂದರ್ಭದಲ್ಲಿ ಕುಡಿಯುವ ನೀರು, ಕೃಷಿಗೆ ಸಮಸ್ಯೆ ಆಗಿದೆ. ಹಾಗಾಗಿ ಆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.