Tumkur Politics: ತುಮಕೂರು ನಗರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ; ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳಿಗೆ ಒಳೇಟಿನದ್ದೇ ಚಿಂತೆ
Apr 22, 2023 05:34 PM IST
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಪಕ್ಷದೊಳಗಿನಿಂದಲೇ ಪೆಟ್ಟು ಬೀಳುವ ಆತಂಕ ಈ ಆಭ್ಯರ್ಥಿಗಳದ್ದು. ಇದಕ್ಕೆ ಕಾರಣವೂ ಇದೆ.
ತುಮಕೂರು: ಬಿಸಿಲಿನ ತಾಪ ಏರುತ್ತಿರುವ ರೀತಿ ಚುನಾವಣೆ ಕಾವು ಕೂಡ ಹೆಚ್ಚಾಗ್ತಾ ಇದೆ. ಮತದಾನಕ್ಕೆ ಕೇವಲ 18 ದಿನಗಳಷ್ಟೇ ಬಾಕಿ ಉಳಿದಿದ್ದು, ಇದರ ಮಧ್ಯೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಮತದಾರರ ಸೆಳೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ. ಗೆದ್ದೇ ಗೆಲ್ಲಬೇಕು ಎಂದು ಪಣತೊಟ್ಟು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.
ತುಮಕೂರು ನಗರ ಕ್ಷೇತ್ರದಲ್ಲೂ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಗಲು ರಾತ್ರಿ ಎನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾರೆಲ್ಲಾ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ರಣತಂತ್ರಗಳು ಹೇಗಿವೆ ಅನ್ನೋದರ ಮಾಹಿತಿ ಇಲ್ಲಿದೆ.
ಜ್ಯೋತಿಗಣೇಶ್: ಬಿಜೆಪಿ ಅಭ್ಯರ್ಥಿಯಾಗಿರುವ ಜ್ಯೋತಿಗಣೇಶ್ ಹಾಲಿ ಶಾಸಕರಾಗಿದ್ದು, ಟಿಕೆಟ್ ಕೈ ತಪ್ಪುವ ಆತಂಕದ ನಡುವೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ನಾಮಪತ್ರ ಸಲ್ಲಿಸಿದ್ದು, ಭರ್ಜರಿಯಾಗಿ ಪ್ರಚಾರ ಆರಂಭಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗಿರುವ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿರುವ ಇವರು, ಮತ್ತೊಂದು ಅವಕಾಶ ಕೊಡಿ ಮಾದರಿ ತುಮಕೂರು ಮಾಡುವೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ, ಡಬಲ್ ಇಂಜಿನ್ ಸರ್ಕಾರದ ಸಾಧನೆ ಬಗ್ಗೆಯು ತಿಳಿಸಿ ಮತಯಾಚನೆ ಮಾಡುತ್ತಿದ್ದಾರೆ.
ಗೋವಿಂದರಾಜು: ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ಮೂರನೆ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತದಾರರಿಗೆ ಸೀರೆ, ಹಣ ಕೊಟ್ಟು ದೇವಸ್ಥಾನ ಗಳಿಗೆ ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸಿಕೊಂಡ ಅಪವಾದ ಹಾಗೂ ಮಹಿಳೆಯೊಬ್ಬರ ಜೊತೆ ನಡೆಸಿದ ಅಸಭ್ಯ ಮಾತುಕತೆ ಆಡಿಯೊ ವೈರಲ್ ಆಗಿತ್ತು. ಸ್ವಪಕ್ಷದವರಿಂದಲೇ ಅಸಮಾಧಾನಕ್ಕೆ ಗುರಿಯಾಗಿರುವ ಗೋವಿಂದರಾಜುಗೆ ಈ ಚುನಾವಣೆ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿದೆ. ಎರಡು ಬಾರಿ ಸೋಲಿಸಿದ್ದೀರಿ, ಇದೊಂದು ಬಾರಿ ನನ್ನ ಗೆಲ್ಲಿಸಿ, ಇದು ನನ್ನ ಅಳಿವು ಉಳಿವಿನ ಪ್ರಶ್ನೆ ಎಂದು ಮತದಾರರ ಬಳಿಗೆ ಹೋಗುತ್ತಿದ್ದಾರೆ.
ಇಕ್ಬಾಲ್ ಅಹಮದ್: ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ. ತನಗೆ ಟಿಕೆಟ್ ಸಿಗುತ್ತೆ ಎಂದು ನಿರೀಕ್ಷೆಯನ್ನೇ ಮಾಡದ ಇಕ್ಬಾಲ್ ಅಹಮದ್ ಅಪ್ಪಟ ಕಾಂಗ್ರೆಸ್ ಕಟ್ಟಾಳು, ಆದರೆ ಈ ನಾಯಕನ ಹೆಸರು ತುಮಕೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ. ಆದರೂ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ. ನಿಮ್ಮ ಸೇವೆ ಮಾಡಲು ನನಗೊಂದು ಚಾನ್ಸ್ ನೀಡಿ, ಕೊರೊನಾ ಸಮುದಲ್ಲಿ ಜನರ ಸಹಾಯಕ್ಕೆ ನಿಂತಿದ್ದೆ, ಬಡವರಿಗೆ ಆಹಾರ ಪದಾರ್ಥಗಳನ್ನು ನೀಡಿದೆ ಎಂಬ ತೃಪ್ತಿ ವ್ಯಕ್ತಪಡಿಸುವ ಇಕ್ಬಾಲ್ ಅಹಮದ್ ಗೆ ಕಾಂಗ್ರೆಸ್ ಟಿಕೆಟ್ ವಂಚಿತವಾಗಿರುವ ಮಾಜಿ ಶಾಸಕ ರಫಿಕ್ ಅಹಮದ್ ಕುಟುಂಬ ಮಗ್ಗುಲ ಮುಳ್ಳಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ.
ಸೊಗಡು ಶಿವಣ್ಣ: ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಸೊಗಡು ಶಿವಣ್ಣರಿಗೆ ಬಿಜೆಪಿ ಮಣೆ ಹಾಕಲಿಲ್ಲ. ತುಮಕೂರಲ್ಲಿ ಬಿಜೆಪಿ ಬೆಳವಣಿಗೆಗೆ ಕಾರಣರಾದ ಸೊಗಡು ಶಿವಣ್ಣರನ್ನು ಪಕ್ಷ ಅದ್ಯಾಕೊ ಅಂಗಳದಾಚೆ ಇಟ್ಟು ಬಿಟ್ಟಿದೆ. ಇದರಿಂದ ಬೇಸತ್ತ ಶಿವಣ್ಣ ಬಿಜೆಪಿಗೆ ಗುಡ್ ಬೈ ಹೇಳಿ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಜನರಿಗೆ ನಾನು ದುಡ್ಡು ಹಂಚಲ್ಲ, ನಾನೇ ಅವರ ಬಳಿ ದುಡ್ಡು ಮತ್ತು ಮತ ಕೇಳುತ್ತೇನೆ ಎಂದು ಹೆಗಲಿಗೆ ಜೋಳಿಗೆ ಹಾಕಿಕೊಂಡು ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಭಿಕ್ಷೆ ಕೇಳುತ್ತಿದ್ದಾರೆ. ಜೋಳಿಗೆ ಜಂಗಮನ ಸ್ಟೈಲ್ ಬಿಜೆಪಿ ಅಭ್ಯರ್ಥಿಗೆ ದೊಡ್ಡ ಹೊಡೆತ ಕೊಡಲಿದೆ ಎನ್ನಲಾಗ್ತಿದೆ.
ನರಸೇಗೌಡ: ಜೆಡಿಎಸ್ ವರಿಷ್ಠ ದೇವೇಗೌಡರ ಮಾನಸ ಪುತ್ರ ಎಂದೇ ಕರೆಯಲ್ಪಡುವ ಮುಖಂಡ ನರಸೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ, ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಪಕ್ಷ ಸಿಹಿ ಸುದ್ದಿ ನೀಡಲಿಲ್ಲ. ಇದರಿಂದ ಬೇಸತ್ತು ಇಂಡಿಪೆಂಡೆಂಟ್ ಆಗಿ ಮತದಾರರ ಬಳಿಗೆ ಹೋಗುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯ ನಡೆಯನ್ನೇ ಇಷ್ಟಪಡದ ನರಸೇಗೌಡ ಜೆಡಿಎಸ್ ಮತಬ್ಯಾಂಕ್ ಛಿದ್ರ ಮಾಡುತ್ತಾರಾ ಕಾದು ನೋಡಬೇಕು.
ಇಷ್ಟೇ ಅಲ್ಲದೆ ಎಎಪಿ, ಕೆಆರ್ ಎಸ್, ಕಮ್ಯುನಿಸ್ಟ್ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ರೇಸ್ ನಲ್ಲಿ ಇದ್ದಾರೆ. ಅಂತಿಮವಾಗಿ ಯಾರಿಗೆ ಮತದಾರನ ಮುದ್ರೆ ಬೀಳುತ್ತೆ ಅನ್ನೋದು ಮೇ 13ರ ಫಲಿತಾಂಶದಿಂದ ಗೊತ್ತಾಗುತ್ತೆ.
(ವರದಿ: ಈಶ್ವರ್ ಎಂ. ತುಮಕೂರು)
ಇದನ್ನೂ ಓದಿ: ಕೃಷ್ಣನೂರಿನಲ್ಲಿ ಹೊಸಮುಖಗಳ ಸೆಣಸಾಟ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ನೋಟ