logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ರೈತರು ಭೂಮಿ ನೀಡಿದ್ರೆ ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆ ಮಾಡ್ತೀವಿ ಎಂದ ಡಿಸಿಎಂ ಡಿಕೆ ಶಿವಕುಮಾರ್​

Tumkur News: ರೈತರು ಭೂಮಿ ನೀಡಿದ್ರೆ ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆ ಮಾಡ್ತೀವಿ ಎಂದ ಡಿಸಿಎಂ ಡಿಕೆ ಶಿವಕುಮಾರ್​

HT Kannada Desk HT Kannada

Jun 14, 2023 05:39 PM IST

google News

ಪಾವಗಡ ಸೋಲಾರ್ ಪಾರ್ಕ್​ಗೆ ಡಿಕೆಶಿ ಭೇಟಿ

    • Pavagada Solar Park in Tumakuru: ಪಾವಗಡ ತಾಲ್ಲೂಕಿನ ರೈತರು ಭೂಮಿ ನೀಡಲು ಮುಂದೆ ಬಂದಲ್ಲಿ ಸೋಲಾರ್ ವಿಸ್ತರಿಸಲಾಗುವುದು, ಇಲ್ಲಿ ಯಾರಿಗೂ ಲಂಚ ಕೊಡುವ ಅಗತ್ಯವಿಲ್ಲ, ಭೂಮಿ ನೀಡಿರುವ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತಗುತ್ತದೆ ಎಂದು ಡಿಕೆಶಿ ಹೇಳಿದರು.
ಪಾವಗಡ ಸೋಲಾರ್ ಪಾರ್ಕ್​ಗೆ ಡಿಕೆಶಿ ಭೇಟಿ
ಪಾವಗಡ ಸೋಲಾರ್ ಪಾರ್ಕ್​ಗೆ ಡಿಕೆಶಿ ಭೇಟಿ

ತುಮಕೂರು: ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್‌ಗಳಲ್ಲಿ ಒಂದಾದ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಬಳಿಯಿರುವ ಸೋಲಾರ್ ಪಾರ್ಕ್‌ಗೆ (Pavagada Solar Park in Tumakuru) ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಇಂದು (ಜೂನ್​ 14, ಬುಧವಾರ) ಭೇಟಿ ನೀಡಿದರು.

ಸೋಲಾರ್ ಪಾರ್ಕ್‌ನ ಆಡಳಿತ ಕಟ್ಟಡದ ಸಭಾಂಗಣಕ್ಕೆ ಸಚಿವರನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಇಂಧನ ಇಲಾಖೆ ಅಧಿಕಾರಿಗಳು, 13,000 ಎಕರೆಯ ವಿಶಾಲ ವ್ಯಾಪ್ತಿಯ ಸೌರ ಸ್ಥಾವರದ 2,000- ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಬಗ್ಗೆ ವಿಸ್ತೃತ ವಿವರಣೆ ನೀಡಿದರು.

ನಂತರ ಇಬ್ಬರು ಸಚಿವರು ಸೋಲಾರ್ ಪಾರ್ಕ್ ಮತ್ತು ಕೆಎಸ್‌ಪಿಡಿಸಿಎಲ್ ಮಾಸ್ಟರ್ ಸಬ್‌ಸ್ಟೇಷನ್, ಪಿಜಿಸಿಐಎಲ್ ಸಬ್‌ಸ್ಟೇಷನ್ ಮತ್ತು ಬ್ಲಾಕ್ ಸಂಖ್ಯೆ 40ಕ್ಕೆ ಭೇಟಿ ನೀಡಿದರು. ಇಂಧನ ಅಭಿವೃದ್ಧಿಯಲ್ಲಿ ರಾಜ್ಯದ ಸಾಧನೆ ಮತ್ತು ಇಡೀ ರಾಷ್ಟ್ರಕ್ಕೆ ಅದರ ಪ್ರಯೋಜನದ ಬಗ್ಗೆ ಸಚಿವರಿಗೆ ಅಧಿಕಾರಿಗಳು ವಿವರಿಸಿದರು, ಅಲ್ಲದೇ ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ರೋಬೋಟ್‌ಗಳನ್ನು ಬಳಸುವ ಕುರಿತು ಪ್ರಾತ್ಯಕ್ಷಿಕೆಯನ್ನು ಸಚಿವರು ವೀಕ್ಷಿಸಿದರು.

ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಮಾತನಾಡಿ, ಪಾವಗಡ ಸೋಲಾರ್ ಪಾರ್ಕ್ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕದ ಬದ್ಧತೆಗೆ ಸಾಕ್ಷಿಯಾಗಿದೆ, ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಅತಿದೊಡ್ಡ ಸೋಲಾರ್ ಪಾರ್ಕ್ ಶುದ್ಧ- ಹಸಿರು ಇಂಧನ ಮೂಲಗಳನ್ನು ಬಳಸಿಕೊಳ್ಳುವಲ್ಲಿ ನಮ್ಮ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಹವಾಮಾನ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಇಂಗಾಲದ ಹೊರ ಸೂಸುವಿಕೆ ಕಡಿಮೆ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವ ಖಚಿತಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಪಾವಗಡ ತಾಲ್ಲೂಕಿನ ರೈತರು ಭೂಮಿ ನೀಡಲು ಮುಂದೆ ಬಂದಲ್ಲಿ ಸೋಲಾರ್ ವಿಸ್ತರಿಸಲಾಗುವುದು, ಇಲ್ಲಿ ಯಾರಿಗೂ ಲಂಚ ಕೊಡುವ ಅಗತ್ಯವಿಲ್ಲ, ಭೂಮಿ ನೀಡಿರುವ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತಗುತ್ತದೆ ಎಂದರು.

ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಪಾವಗಡ ಸೋಲಾರ್ ಪಾರ್ಕ್ ಸ್ವಚ್ಛ ಮತ್ತು ಸುಸ್ಥಿರ ಇಂಧನ ಪರಿಹಾರಗಳಿಗೆ ನಮ್ಮ ಬದ್ಧತೆಯ ಕುರುಹಾಗಿದೆ, ಸರ್ಕಾರ ಮತ್ತು ನವೀಕರಿಸಬಹುದಾದ ಇಂಧನ ಉದ್ಯಮದ ನಡುವಿನ ಬಾಂಧವ್ಯ ಉತ್ತಮ ಪಡಿಸುವ ಜೊತೆಗೆ ಹೂಡಿಕೆ, ಸಹಯೋಗವನ್ನು ಉತ್ತೇಜಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ, ಮುಖ್ಯವಾಗಿ, ಉದ್ಯೋಗ ಸೃಷ್ಟಿಗೆ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ನಮ್ಮ ಗುರಿ ಎಂದು ವಿವರಿಸಿದರು.

ಶುದ್ಧ ಇಂಧನ ಉತ್ಪಾದನೆಗೆ ರಾಷ್ಟ್ರ ಹಾಕಿಕೊಂಡಿರುವ ಗುರಿಗೆ ನಮ್ಮ ಸೋಲಾರ್ ಪಾರ್ಕ್ ಈಗಾಗಲೇ ದೊಡ್ಡ ಕೊಡುಗೆ ನೀಡಿದೆ, ಅದರ ಅತ್ಯಾಧುನಿಕ ದ್ಯುತಿವಿದ್ಯುಜ್ಜನಕ ಫಲಕಗಳು, ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ವಿದ್ಯುತ್ ಸಂಗ್ರಹ ವ್ಯವಸ್ಥೆ ಮತ್ತು ಸಮರ್ಥ ಗ್ರಿಡ್ ಏಕೀಕರಣದೊಂದಿಗೆ, ಸೋಲಾರ್ ಪಾರ್ಕ್ ವರ್ಷಕ್ಕೆ 4.5 ಶತಕೋಟಿ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ, ಆ ಮೂಲಕ ವಾರ್ಷಿಕ 3.6 ಮಿಲಿಯನ್ ಟನ್‌ಗಳಷ್ಟು CO2 ಹೊರ ಸೂಸುವಿಕೆ ತಗ್ಗಿಸಲು ನೆರವಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳು ನಮ್ಮ ಪರಿಸರ ಮತ್ತು ಆರ್ಥಿಕತೆಯ ಮೇಲೆ ಬೀರಬಹುದಾದ ಪ್ರಭಾವವನ್ನು ಈ ಅಂಕಿ ಅಂಶಗಳೇ ಸಾರಿ ಹೇಳುತ್ತವೆ ಎಂದರು.

ಸಚಿವರೊಂದಿಗೆ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL)ದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ (KSPCDL)ದ ಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವರದಿ: ಈಶ್ವರ್ ಎಂ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ