Tumkur News: ಬಸ್‌ನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ; ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ತುಮಕೂರು ಕೆಎಸ್‌ಆರ್‌ಟಿಸಿ ಸಿಬ್ಬಂದಿ
Jul 24, 2023 10:41 PM IST
ಪ್ರಯಾಣಿಕನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ
- Tumkur KSRTC: ಚಲಿಸುತ್ತಿದ್ದ ಬಸ್‌ನಲ್ಲೇ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಿ ತುಮಕೂರಿನ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ತುಮಕೂರು: ಪ್ರಯಾಣಿಕರೊಬ್ಬರಿಗೆ ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತವಾಗಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಿ ತುಮಕೂರಿನ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಹೊಸದುರ್ಗದಿಂದ ಬೆಂಗಳೂರು ಮಾರ್ಗವಾಗಿ ಚಲಿಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊಸದುರ್ಗ ತಾಲೂಕಿನ ಅಲಘಟ್ಟ ಗ್ರಾಮದ 65 ವರ್ಷ ವಯಸ್ಸಿನ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಸಮೇತ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದರು.
ಮಾರ್ಗ ಮಧ್ಯೆ ಅವಳಗೆರೆ ಬಳಿ ಕುಮಾರಸ್ವಾಮಿ ಅವರ ದೇಹದಲ್ಲಿ ವಿಪರೀತ ಬೆವರು ಹಾಗೂ ಎದೆ ನೋವಿನಿಂದ ಬಸ್‌ನಲ್ಲಿ ಕುಸಿದು ಬೀಳುತ್ತಾರೆ, ಈ ಸಂದರ್ಭದಲ್ಲಿ ವಾಹನದ ನಿರ್ವಾಹಕಿ ರಾಣಿಯವರು ಚಾಲಕ ಕಂಸಾರಪ್ಪ ಅವರಿಗೆ ತಿಳಿಸಿ ಪ್ರಯಾಣಿಕರ ಸಹಕಾರದಿಂದ ಮಾರ್ಗ ಮಧ್ಯೆ ಯಾವುದೇ ಸ್ಟಾಪ್ ಕೊಡದೆ ನೇರವಾಗಿ ಚಿಕ್ಕನಾಯಕನ ಹಳ್ಳಿ ಸರ್ಕಾರಿ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಆದರೆ ದುರಾದೃಷ್ಟವಶಾತ್ ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಸಾವನ್ನಪ್ಪಿದರು, ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಚಾಲಕ ಹಾಗೂ ನಿರ್ವಾಹಕರನ್ನು ಸದರಿ ಬಸ್ ನಲ್ಲಿದ್ದ ಪ್ರಯಾಣಿಕರು ಅಭಿನಂದಿಸಿದ್ದಾರೆ.
ಕುಮಾರಸ್ವಾಮಿ ಎಂಬುವವರು ಬಸ್ ಹತ್ತಿ ಆರಾಮಗಿ ಪ್ರಯಾಣಿಸುತ್ತಿದ್ದರು, ಆದರೆ ಮಾರ್ಗ ಮಧ್ಯೆ ಅವರಿಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು, ತಕ್ಷಣ ನಮ್ಮ ಬಸ್‌ನ ನಿರ್ವಾಹಕಿ ಸಮಯ ಪ್ರಜ್ಞೆ ಮೆರೆದು ಕೂಡಲೇ ಆಸ್ಪತ್ರೆ ಹೋಗಿ ಅವರ ಪ್ರಾಣ ಉಳಿಸೋಣ ಎಂದು ತಿಳಿಸಿದ ಮೇರೆ ನಾನು ನೇರವಾಗಿ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಬಸ್ ಓಡಿಸಿದೆ, ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ ವ್ಯಕ್ತಿ ಬದುಕುಳಿಯಲಿಲ್ಲ, ನಮ್ಮ ಪ್ರಯತ್ನಕ್ಕೆ ಫಲ ಸಿಗಲಿಲ್ಲ ಎಂಬ ಬೇಸರವಿದೆ ಎಂದು ಚಾಲಕ ಕಂಸಾರಪ್ಪ ತಿಳಿಸಿದ್ದಾರೆ.
ಒಟ್ಟಾರೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕಿಯ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ದೊಡ್ಡ ಗುಣ, ಇದನ್ನು ದೇವರೂ ಮೆಚ್ಚುತ್ತಾನೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವರದಿ: ಈಶ್ವರ್ ಎಂ