Tumkur News: ಹಲಸಿನ ವಡೆ, ಕಡುಬು, ಕಬಾಬ್ ಬಗೆ ಬಗೆಯ ಖಾದ್ಯಗಳು, ತಿಪಟೂರಿನಲ್ಲಿ ಜನಮನ ಗೆದ್ದ ಹಲಸು ಮೇಳ
Jul 17, 2024 04:41 PM IST
ತಿಪಟೂರಿನಲ್ಲಿ ಜನಾಕರ್ಷಿಸಿದ ಹಲಸಿನ ಹಬ್ಬ.
- Tiptur Jackfruit Festival ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದ ಹಲಸಿನ ಹಬ್ಬವು ರುಚಿಕರ ಖಾದ್ಯಗಳು, ಬಗೆಬಗೆಯ ಹಲಸಿನ ಹಣ್ಣಿನಿಂದ ಆಕರ್ಷಿಸಿತು.
- ವರದಿ: ಈಶ್ವರ್ ತುಮಕೂರು
ತುಮಕೂರು: ಈಗ ಹಲಸಿನ ಸಮಯ. ಎಲ್ಲೆಡೆ ಹಲಸಿನ ಘಮಲು. ಅದರಲ್ಲೂ ತುಮಕೂರು ಜಿಲ್ಲೆ ಕಲ್ಪತರು ನಾಡಿನ ಜತೆಗೆ ಹಲಸಿನ ಜಿಲ್ಲೆಯಾಗಿಯೂ ಮಾರ್ಪಟ್ಟಿದೆ. ಅಷ್ಟರ ಮಟ್ಟಿಗೆ ಹಲಸನ್ನು ರೈತರು ಬೆಳೆಯುತ್ತಿದ್ದಾರೆ. ಕರ್ನಾಟಕದ ಹಲವೆಡೆ ಮಾತ್ರವಲ್ಲದೇ ಇತರೆ ಜಿಲ್ಲೆಗಳಿಗೂ ಹಲಸಿನ ಹಣ್ಣನ್ನು ಸರಬರಾಜು ಮಾಡುತ್ತಿದ್ದಾರೆ. ಈ ಬಾರಿಯೂ ಹಲಸಿನ ಹಣ್ಣಿನ ಫಸಲು ಚೆನ್ನಾಗಿಯೇ ಬಂದಿದೆ. ಇದೇ ಕಾರಣದಿಂದ ತಿಪಟೂರಿನಲ್ಲಿ ಹಲಸಿನ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ತಿಪಟೂರು ನಗರದ ಗಣಪತಿ ಆಸ್ಥಾನ ಮಂಟಪದಲ್ಲಿ ಸೊಗಡು ಜನಪದ ಹೆಜ್ಜೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮೂಲಕ ಆಯೋಜನೆಗೊಂಡಿದ್ದ ಎರಡು ದಿನಗಳ ಹಲಸಿನ ಹಬ್ಬ ತಿಪಟೂರು ನಾಗರಿಕ ಜನರನ್ನು ಆಕರ್ಷಣೆ ಮಾಡಿತು.
ಹಲಸಿನಿಂದ ಮಾಡಿದ ಪಾಯಸ, ಉಸಿರು ಕಡುಬು, ಬಿರಿಯಾನಿ, ಚಿಪ್ಸ್, ಹಲಸಿನ ವಡೆ, ದೋಸೆ, ಚಪಾತಿ, ನಿಪ್ಪಟ್ಟು, ಜಾಮ್, ಪಕೋಡ ಒಬ್ಬಟ್ಟು, ಕಬಾಬ್, ಕೆತ್ತಕಾಯಿ ಸಾರು, ಮುದ್ದೆ ಊಟ ಇನ್ನು ಮುಂತಾದ ಖಾದ್ಯಗಳು ಜನರ ಆಕರ್ಷಿಸಿದವು. ಶಂಕರ ಹಲಸು, ಸಿದ್ದು ಹಲಸು, ರೈತಾಪಿ ಜನರಿಗೆ ಕೊಳ್ಳುವಿಕೆಗೆ ಉತ್ತಮ ವೇದಿಕೆಯಾಗಿತ್ತು.
ಕಾರ್ಯಕ್ರಮದಲ್ಲಿ ತಲೆಮಾರುಗಳಿಂದಲೂ ಪಾರಂಪರಿಕ ಹಲಸಿನ ಮರ ಸಂರಕ್ಷಕ ರೈತ ಮಲ್ಲಿಕಾರ್ಜುನಯ್ಯ ಹಾಗೂ ಭಾರತೀಯ ಸೇನೆಯ ಸಿಯಾಚೀನ್‌ನ ನಾರ್ಥ್ ಗ್ಲೇಸಿಯಿರ್ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಸಾಸಲಹಳ್ಳಿ ಗ್ರಾಮದ ಶಿವಕುಮಾರ್ ಆತ್ಮೀಯವಾಗಿ ಅಭಿನಂದಿಸಲಾಯಿತು.
ತಿಪಟೂರು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಜನರು ಹಲಸಿನಹಬ್ಬದಲ್ಲಿ ಭಾಗಿಯಾಗಿ ಹಲಸಿನ ಹಣ್ಣು, ಖಾದ್ಯಗಳನ್ನು ಸವಿಯುತ್ತ ಅಪರೂಪದ ಹಲಸಿನ ತಳಿಗಳನ್ನು ಮನೆಗೂ ಕೊಂಡುಕೊಂಡರು. ಖುಷಿಯನ್ನೂ ಪಟ್ಟರು.
ಹೊರ ಜಿಲ್ಲೆಗಳಾದ ಉಡುಪಿ, ದಕ್ಷೀಣ ಕನ್ನಡ, ಧಾರಾವಾಡ, ಕಾರವಾರ, ಮಂಗಳೂರು ಜಿಲ್ಲೆಗಳ ಮಳಿಗೆಗಳು ಕಲ್ಪತರು ನಾಡಿನಲ್ಲಿ ಕಂಡು ಬಂದವು. ಅವುಗಳ ಸ್ವಾದವನ್ನೂ ತಿಪಟೂರಿನ ಜನ ಮಾಡಿದರು.
ಹಲಸಿನ ಎಲೆಗಳಿಂದ ಆಯೋಜಕರು ಬ್ಯಾಡ್ಜ್ ಗಳನ್ನು ತಯಾರಿಕೆ ಮಾಡಲಾಗಿತ್ತು, ತಳಿರು ತೋರಣವನ್ನು ಸಿದ್ದ ಮಾಡಿ ಅಲ್ಲಿಲ್ಲಿ ಹಲಸಿನ ಕಾಯಿಗಳನ್ನು ಮೇಲಿಂದ ಇಳಿ ಬಿಡಲಾಗಿದ್ದ ದೃಶ್ಯಗಳು ಕಂಡು ಬಂದಿತು. 26 ಕೆ.ಜಿ 400 ಗ್ರಾಂ ತೂಕ ಹೊಂದಿದ ಹಲಸಿನ ಹಣ್ಣು ಪ್ರಥಮ ಸ್ಥಾನ ಪಡೆಯಿತು.
ಹೇಮಾದ್ರಿ ನೈಸರ್ಗೀಕ ಆಹಾರ ಉತ್ಪನ್ನಗಳ ಮಳಿಗೆಗಳು, ತೆಂಗಿನ ಉತ್ಪನ್ನಗಳು, ದೇಶಿ ಗೋ ಉತ್ಪನ್ನಗಳು, ಮೈಸೂರಿನ ದೇಸಿರಿ ಗಾಣದಿಂದ ಎಣ್ಣೆ ಮಳಿಗೆ, ಚನ್ನಪಟ್ಟಣದ ಗೊಂಬೆಗಳು, ಗಿಡಮೂಲಿಕೆಯ ಮಳಿಗೆಗಳ ಜೊತೆಯಲ್ಲಿ ಕಲ್ಪರಸ (ನೀರಾ) ಮಾರಾಟ ಮಳಿಗೆಗಳಲ್ಲಿ ಜನಸಂದಣಿ ಕಂಡುಬಂದಿತು.
ಕಾರ್ಯಕ್ರಮವನ್ನು ಕೆರೆಗೋಡಿ ರಂಗಾಪುರದ ಮಠದ ಗುರುಪರದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಈ ಭಾಗದ ರೈತರು ಆರ್ಥಿಕವಾಗಿ ತೆಂಗು ಬೆಳೆ ಅವಲಂಬಿಸಿದ್ದು ಜೊತೆಯಾಗಿ ಹಲಸಿನ ಬೆಳೆ ಬೆಳೆಯುತ್ತಾ ಆರ್ಥಿಕ ಸದೃಢವಾಗ ಬಹುದು, ಹಲಸು ಸಹ ಒಂದು ಉತ್ತಮ ಆಹಾರವಾಗಿದ್ದು ಇತ್ತೀಚೀನ ದಿನಗಳಲ್ಲಿ ಹಲಸಿನಿಂದ ವಿವಿಧ ಖಾದ್ಯ ತಯಾರಿಸಿ ಹಣ ಗಳಿಸ ಬಹುದಾಗಿದೆ. ಬೇರೆ ಬೇರೆ ಭಾಗಗಳಲ್ಲಿ ಬೆಳೆಯುವ ಹಲಸಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಬಿ.ಸಿ.ನಾಗೇಶ್, ಶಾಸಕ ಕೆ.ಷಡಕ್ಷರಿ, ಸೊಗಡು ಜನಪದ ಹೆಜ್ಜೆಯ ಸಿರಿಗಂಧ ಗುರು, ಸೊಗಡು ಜನಪದ ಹೆಜ್ಜೆ ಗೌರವಾಧ್ಯಕ್ಷ ಮುರುಳೀಧರ್, ಸತ್ಯ ಗಣಪತಿ ಸೇವಾ ಸಂಘ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಶ್ರೀಕಂಠ, ಕೆ.ವಿ.ಕೆ.ಕೊನೇಹಳ್ಳಿಯ ಕಿರಣ್, ಚೌಡೇಶ್ವರಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಸೋಮಶೇಖರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್ ಪಾಲ್ಗೊಂಡರು.
(ವರದಿ: ಈಶ್ವರ್ ತುಮಕೂರು)