logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರು ಶೆಟ್ಟಿಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿತ; ಸವಾರರಲ್ಲಿ ಆತಂಕ, ಮುಂದುವರೆದ ಅಧ್ವಾನ

Tumkur News: ತುಮಕೂರು ಶೆಟ್ಟಿಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿತ; ಸವಾರರಲ್ಲಿ ಆತಂಕ, ಮುಂದುವರೆದ ಅಧ್ವಾನ

Umesha Bhatta P H HT Kannada

May 23, 2024 08:11 PM IST

google News

ತುಮಕೂರಿನಲ್ಲಿ ಅಂಡರ್‌ಪಾಸ್‌ ರಸ್ತೆ ಕುಸಿದು ಹೋಗಿದೆ.

    • ಮಳೆಯಿಂದಾಗಿ ತುಮಕೂರು ನಗರದಲ್ಲಿ( Tumkur City) ಅಂಡರ್‌ಪಾಸ್‌ ರಸ್ತೆ ಕುಸಿದು ವಾಹನ ಸವಾರರಿಗೆ ಸಮಸ್ಯೆಯಾಗಿದೆ.
    • ವರದಿ: ಈಶ್ವರ್‌ ತುಮಕೂರು
ತುಮಕೂರಿನಲ್ಲಿ ಅಂಡರ್‌ಪಾಸ್‌ ರಸ್ತೆ ಕುಸಿದು ಹೋಗಿದೆ.
ತುಮಕೂರಿನಲ್ಲಿ ಅಂಡರ್‌ಪಾಸ್‌ ರಸ್ತೆ ಕುಸಿದು ಹೋಗಿದೆ.

ತುಮಕೂರು: ನಗರದಲ್ಲಿ ಕಳೆದ ಐದಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ನಗರದ ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಬಿರುಕು ಬಿಟ್ಟು ಕುಸಿತಗೊಂಡಿದ್ದು, ಈ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಶೆಟ್ಟಿಹಳ್ಳಿಗೇಟ್ ಸಮೀಪವಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ತಿರುವು ಪಡೆಯುವ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದಿದ್ದು, ಅಂಡರ್ ಪಾಸ್‌ಗೆ ಹೊಂದಿಕೊಂಡಂತೆ ರಸ್ತೆ ಕುಸಿದಿದೆ. ಶೆಟ್ಟಿಹಳ್ಳಿ ಅಂಡರ್‌ಪಾಸ್ ಮಳೆ ಆರಂಭವಾದರೆ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ, ಇದುವರೆಗೂ ಮಳೆಯಿಂದ ಅಂಡರ್‌ಪಾಸ್ ನೀರು ತುಂಬಿ ವಾಹನ ಸವಾರರು ಸಂಚರಿಸಲಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು, ಆದರೆ ಇದೀಗ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿಯುವ ಮೂಲಕ ಈ ಭಾಗದ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿದೆ, ರಸ್ತೆ ಕುಸಿದು ಗುಂಡಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹಾ ನಗರ ಪಾಲಿಕೆ ಆಯುಕ್ತೆ ಅಶ್ವಿಜ ಮತ್ತು ಸಿಬ್ಬಂದಿ ರಸ್ತೆ ಕುಸಿದಿರುವುದನ್ನು ವೀಕ್ಷಿಸಿ ಕುಸಿದಿರುವ ರಸ್ತೆ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡಿದ್ದಾರೆ.

ಸದ್ಯವೇ ಬೆಂಗಳೂರಿನಿಂದ ತಜ್ಞರು ನಗರಕ್ಕೆ ಆಗಮಿಸಿ ಶೆಟ್ಟಿಹಳ್ಳಿ ಅಂಡರ್‌ಪಾಸ್ ಮೇಲ್ಭಾಗದಲ್ಲಿ ರಸ್ತೆ ಕುಸಿದಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಎನ್ನಲಾಗಿದೆ.

ಅವ್ಯವಸ್ಥೆಯ ಹಾದಿ

ರಸ್ತೆ ಕುಸಿದಿರುವುದರಿಂದ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ, ಶೆಟ್ಟಿಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆಯಲ್ಲಿ ಮಳೆಯಿಂದಾಗಿ ಗುಂಡಿ ಬಿದ್ದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ನಮ್ಮ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಾತ್ಕಾಲಿಕವಾಗಿ ರಸ್ತೆ ಗುಂಡಿ ಮುಚ್ಚಿದ್ದಾರೆ.

ನಾವು ಈ ಮೊದಲು ಕಸ ಬರುತ್ತಿದೆ ಎಂದುಕೊಂಡಿದ್ದೆವು, ಆದರೆ ಪರಿಶೀಲಿಸಿದಾಗ ರಸ್ತೆ ಕುಸಿದು ಮಣ್ಣು ಬರುತ್ತಿರುವುದು ಸ್ಪಷ್ಟವಾಗಿದೆ, ಹಾಗಾಗಿ ಬಂದ್ ಮಾಡಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗಿದೆ. ಬೆಂಗಳೂರಿನಿಂದ ಎಕ್ಸ್‌ಫರ್ಟ್‌ಗಳು ಬಂದು ಶಾಶ್ವತ ಪರಿಹಾರ ಕಂಡು ಹಿಡಿಯಲಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

ಶಾಸಕರ ಭೇಟಿ ಪರಿಶೀಲನೆ

ಶೆಟ್ಟಿಹಳ್ಳಿ ಅಂಡರ್ ಪಾಸ್ ಮೇಲ್ಭಾಗದಲ್ಲಿ ರಸ್ತೆ ಕುಸಿದಿರುವ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಭೇಟಿ ನೀಡಿ ರಸ್ತೆಗುಂಡಿ ಬಿದ್ದಿರುವುದನ್ನು ವೀಕ್ಷಿಸಿದರು, ನಂತರ ಮಾತನಾಡಿದ ಅವರು ಈ ಜಾಗದಲ್ಲಿ ಗುಂಡಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆ ಬಂದ್ ಮಾಡಿ ಗುಂಡಿ ಮುಚ್ಚಿದ್ದಾರೆ, ಈಗಾಗಲೇ ನಾನು ಮಹಾನಗರ ಪಾಲಿಕೆ ಆಯುಕ್ತರ ಜೊತೆ ಈ ಸಂಬಂಧ ಮಾತನಾಡಿದ್ದು, ಬೆಂಗಳೂರಿನಿಂದ ತಜ್ಞರನ್ನು ಕರೆಸಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ನೀರು ಸರಾಗವಾಗಿ ಹರಿಯಲಾಗದೆ ಹೂಳು ತುಂಬಿರುವ ಚರಂಡಿಗಳನ್ನು ಗಮನಿಸಿ ಸ್ವಚ್ಛಗೊಳಿಸುವ ಮೂಲಕ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮಳೆ ಬಂದು ರಸ್ತೆಗಳಲ್ಲಿ ನೀರು ಹರಿಯುವ ಸಂದರ್ಭದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು, ನೀರು ಹರಿಯುವ ಚರಂಡಿಗಳ ಅಕ್ಕಪಕ್ಕದಲ್ಲಿರುವ ಮನೆಗಳ ನಿವಾಸಿಗಳು ಬಹಳ ಎಚ್ಚರಿಕೆಯಿಂದ ಇರುವಂತೆಯೂ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್ ಹಾಗೂ ಈ ಭಾಗದ ಸ್ಥಳೀಯರು ಇದ್ದು ಆಗಿರುವ ಅನಾಹುತದ ವಿವರಗಳನ್ನು ಒದಗಿಸಿದರು.

( ವರದಿ: ಈಶ್ವರ್‌ ತುಮಕೂರು)


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ