logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News : ತುಮಕೂರು ಜಿಲ್ಲೆ ಈ ಹಳ್ಳಿಗೆ 20 ವರ್ಷಗಳಿಂದ ಸರಿಯಾದ ರಸ್ತೆಯಿಲ್ಲ; ರಸ್ತೆಯಲ್ಲೇ ಸಸಿ ನಾಟಿ ಮಾಡಿ ಪ್ರತಿಭಟಿಸಿದರು ಗ್ರಾಮಸ್ಥರು

Tumkur News : ತುಮಕೂರು ಜಿಲ್ಲೆ ಈ ಹಳ್ಳಿಗೆ 20 ವರ್ಷಗಳಿಂದ ಸರಿಯಾದ ರಸ್ತೆಯಿಲ್ಲ; ರಸ್ತೆಯಲ್ಲೇ ಸಸಿ ನಾಟಿ ಮಾಡಿ ಪ್ರತಿಭಟಿಸಿದರು ಗ್ರಾಮಸ್ಥರು

Umesha Bhatta P H HT Kannada

Jul 21, 2024 12:55 PM IST

google News

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮಸ್ಥರು ರಸ್ತೆಗಾಗಿ ಹೋರಾಟ ಮಾಡಿದ್ದು ಹೀಗೆ.

    • Tumkur villagers demand ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮಸ್ಥರ ರಸ್ತೆ ಬೇಡಿಕೆ ಮಾತ್ರ ಈಡೇರುತ್ತಿಲ್ಲ. ಅವರು ಬೇಡಿಕೆ ಮುಂದಿಡುವುದು ಬಿಡುತ್ತಿಲ್ಲ.
    • ವರದಿ: ಈಶ್ವರ್‌ ತುಮಕೂರು
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮಸ್ಥರು ರಸ್ತೆಗಾಗಿ ಹೋರಾಟ ಮಾಡಿದ್ದು ಹೀಗೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಾರೇಹಳ್ಳಿ ಗ್ರಾಮಸ್ಥರು ರಸ್ತೆಗಾಗಿ ಹೋರಾಟ ಮಾಡಿದ್ದು ಹೀಗೆ.

ತುಮಕೂರು: ಯಾರಿಗೆ ಬಂತು. ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎನ್ನುವ ಕವಿ ಸಿದ್ದಲಿಂಗಯ್ಯ ಅವರ ಸಾಲುಗಳು ನಿಜಕ್ಕೂ ಈ ಹಳ್ಳಿಗರ ಆಕ್ರೋಶ ನೋಡಿದರೆ ಖಂಡಿತಾ ಸರಿ ಎನ್ನಿಸಿಬಿಡುತ್ತದೆ. ನಮ್ಮೂರಿಗೆ ಸರಿಯಾಗಿ ಒಂದು ರಸ್ತೆ ಮಾಡಿಕೊಡಿ ಎಂದು ಇಲ್ಲಿನ ಜನ ಹೋರಾಟ ಮಾಡುತ್ತಲೇ ಇದ್ದಾರೆ. ಅದರಲ್ಲೂ ಮಳೆಗಾಲದಲ್ಲಿ ನಮ್ಮೂ ರಸ್ತೆ ಸ್ಥಿತಿ ಹೇಳತೀರದು. ಇದಕ್ಕೆ ಕಾಯಂ ಪರಿಹಾರ ಕಲ್ಪಿಸಿ ಎನ್ನುವ ಬೇಡಿಕೆಗೆ ಪರಿಹಾರ ಮರೀಚಿಕೆ ಎನ್ನುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡವಳಿಕೆಯಿಂದ ರೋಸಿ ಹೋಗಿರುವ ಈ ಜನ ಹಾಗೆಂದು ಸುಮ್ಮನೇ ಕುಳಿತಲೇ ಇಲ್ಲ. ತಮ್ಮ ಹಕ್ಕನ್ನು ಮಂಡಿಸುತ್ತಲೇ ಇದ್ದಾರೆ. ರಸ್ತೆ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಈ ಬಾರಿ ಮಳೆಗಾಲದಲ್ಲಿ ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಕಾರೇಹಳ್ಳಿ ಗ್ರಾಮಕ್ಕೆ ಸುಮಾರು 20 ವರ್ಷಗಳಿಂದ ಸರಿಯಾದ ರಸ್ತೆ ಇಲ್ಲದೆ ಇಲ್ಲಿನ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಮಳೆ ಬಂತು ಎಂದರೆ ಊರಿನಿಂದ ಒಬ್ಬರೂ ಆಚೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದ್ದು, ಶನಿವಾರ ಇಡೀ ಊರಿನ ಜನರು ರಸ್ತೆಯಲ್ಲಿಯೇ ಸಸಿ ನಾಟಿ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ. ಗ್ರಾಮದಿಂದ ಬೇರೆ ಊರಿಗೆ ಮಕ್ಕಳು ಶಾಲೆಗೆ ಹೋಗಲು ಆಗಲ್ಲ, ಹಾಲಿನ ವಾಹನ ಊರಿನ ಒಳಗಡೆ ಬಂದಿಲ್ಲ, ಇಡೀ ಊರಿಗೆ ಊರೇ ಊರಿನಿಂದ ಹೊರ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ, ಸುಮಾರು 20 ವರ್ಷಗಳಿಂದಲೂ ಈ ಸಮಸ್ಯೆ ಇದೆ, ಹಲವು ಬಾರಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು ಯಾವುದೇ ಉಪಯೋಗಿಲ್ಲ ಎಂದು ಊರಿನ ಜನರು ಆಕ್ರೋಶ ಹೊರ ಹಾಕಿದ್ದಾರೆ.

2003 ರಲ್ಲಿ ಒಮ್ಮೆ ಇಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಮಾಡಿತ್ತು, ಆದರೆ ಹೇಮಾವತಿ ನಾಲೆಯ ದಂಡೆಯಲ್ಲಿ ಗ್ರಾಮ ಇರುವುದರಿಂದ ನೀರಿನ ಜೋಪು ಅತ್ಯಧಿಕವಾಗಿರುವುದರಿಂದ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದೆ, ಅಲ್ಲಿಂದ ಇಲ್ಲಿವರೆಗೆ ರಸ್ತೆಯನ್ನು ಯಾರು ಮಾಡದೆ ಇರುವುದು ದೊಡ್ಡ ದುರಂತವಾಗಿದೆ, ಮನೆಯಿಂದ ಯಾರು ಹೊರ ಬಾರದಂತಹ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಶಾಸಕರು, ಸಂಸದರು, ಜನಪ್ರತಿನಿಧಿಗಳು ಇತ್ತ ಬಗ್ಗೆ ಗಮನ ಹರಿಸಿ ಸಿಸಿ ರಸ್ತೆ ಮಾಡಿಕೊಟ್ಟಲ್ಲಿ ಮಾತ್ರ ನಮ್ಮೂರಿನ ಜನ ಓಡಾಡಲು ಸಾಧ್ಯ ಎಂದು ಜನರು ಬೇಸರ ವ್ಯಕ್ತಪಡಿಸಿದರು.

ಸ್ಥಳಕ್ಕೆ ಎಇಇ, ತಾಲೂಕು ಪಂಚಾಯಿತಿ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿದ್ದು ಮೇಲಾಧಿಕಾರಿಗಳಿಗೆ ಮನವಿ ಮಾಡಿ ಖಂಡಿತವಾಗಿ ರಸ್ತೆ ಮಾಡುವ ಭರವಸೆ ನೀಡಿದ್ದಾರೆ.

ಹಲವು ಬಾರಿ ನಾವು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಶಾಲೆಗಳಿಗೆ, ಆಸ್ಪತ್ರೆಗಳಿಗೆ ತೆರಳದಂತಹ ಸ್ಥಿತಿ ನಮ್ಮೂರಿನದ್ದು ದಯವಿಟ್ಟು ನಮಗೆ ರಸ್ತೆ ಮಾಡಿಕೊಡಿ ಗ್ರಾಮದ ಮುಖಂಡ ನಿತ್ಯಾನಂದ ಮೂರ್ತಿ ಆಗ್ರಹಿಸಿದ್ದಾರೆ.

ಪ್ರತಿನಿತ್ಯ ಇಲ್ಲಿ ಬಿದ್ದು ಎದ್ದು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಮಕ್ಕಳು, ವಯಸ್ಸಾದವರು ಗ್ರಾಮದಿಂದ ಮೂರು ದಿನಗಳಿಂದ ಹೊರಗೆ ಬಂದಿಲ್ಲ, ಕೂಡಲೇ ರಸ್ತೆ ಸರಿ ಮಾಡಿ, ಇಲ್ಲದೆ ಹೋದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಗ್ರಾಮದ ಮಹಿಳೆ ಕೆಂಪಮ್ಮ ಎಚ್ಚರಿಕೆ ನೀಡಿದ್ದಾರೆ.

ವರದಿ: ಈಶ್ವರ್‌ ತುಮಕೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ