Tumkur News: ತುಮಕೂರು ನಗರ ಮಧ್ಯದಲ್ಲೇ ಬೆಳೆದಿದ್ದಾರೆ ಗಾಂಜಾ ಗಿಡ: ಖಾಲಿ ನಿವೇಶನದಲ್ಲಿ ಪತ್ತೆ
Nov 17, 2023 10:11 AM IST
ತುಮಕೂರು ನಗರದಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ಪೊಲೀಸರು ವಶಪಡಿಸಿಕೊಂಡರು.
- Tumkur Crime News ತುಮಕೂರು ನಗರದ( tumkur city) ಬಡಾವಣೆಯೊಂದರ ಖಾಲಿ ನಿವೇಶನದಲ್ಲಿ ಗಾಂಜಾ ಗಿಡ(Marijuana plant) ಬೆಳೆದು ಅದನ್ನು ಸ್ಥಳೀಯವಾಗಿ ಯುವಕರು ಬಳಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸ್( Tumkur Police) ತನಿಖೆ ಚುರುಕುಗೊಂಡಿದೆ.
ತುಮಕೂರು: ಗಾಂಜಾ ಗಿಡವನ್ನು ಜಮೀನುಗಳಲ್ಲೋ ಅಥವಾ ಅಜ್ಞಾತ ಸ್ಥಳಗಳಲ್ಲಿ ಬೆಳೆಯುವುದನ್ನು ನೋಡಿದ್ದೇವೆ. ಆದರೆ ತುಮಕೂರು ನಗರದಲ್ಲೇ ಗಾಂಜಾ ಗಿಡ ಬೆಳೆಯಲಾಗಿದೆ.
ಅದೂ ತುಮಕೂರು ನಗರದ ಪ್ರಮುಖ ಬಡಾವಣೆಯೊಂದರಲ್ಲಿ.
ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ತುಮಕೂರಿನ ಜಯನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದನ್ನು ಗಂಭೀರವಾಗಿಯೇ ಸ್ವೀಕರಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನಗರದ ದೇವರಾಜ ಅರಸು ರಸ್ತೆಯ ಸರಸ್ವತಿಪುರಂನ 5ನೇ ಕ್ರಾಸ್‌ನಲ್ಲಿರುವ ಖಾಲಿ ನಿವೇಶನದಲ್ಲಿ ಗಾಂಜಾ ಗಿಡ ಬೆಳೆದಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಅಡಿಷನಲ್ ಎಸ್ಪಿ ವಿ.ಮರಿಯಪ್ಪ ಮಾರ್ಗದರ್ಶನದಲ್ಲಿ ನಗರ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ತಿಲಕ್ ಪಾರ್ಕ್ ಸಿಪಿಐ ಪುರುಷೋತ್ತಮ್ ನೇತೃತ್ವದಲ್ಲಿ ಜಯನಗರ ಸಬ್ ಇನ್‌ಸ್‌ಪೆಕ್ಟರ್ ಹೆಚ್.ಎನ್.ಮಹಾಲಕ್ಷ್ಮಮ್ಮ, ಪಿಎಸ್‌ಐ-2 ಹನುಮಂತರಾಯಪ್ಪ ಮತ್ತು ಸಿಬ್ಬಂದಿ ಸುರೇಶ್ ಖಾಲಿ ನಿವೇಶನಕ್ಕೆ ಭೇಟಿ ನೀಡಿ ಅಲ್ಲಿ ಬೆಳೆದಿದ್ದ ಗಾಂಜಾ ಗಿಡ ಕಟಾವು ಮಾಡಿಸಿ ವಶಕ್ಕೆ ಪಡೆದಿದ್ದಾರೆ.
ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ಸ್ಥಳೀಯ ಹುಡುಗರು ಕಿತ್ತುಕೊಂಡು ಹೋಗುತ್ತಿದ್ದರು. ಅಲ್ಲದೇ ಅದನ್ನು ಸದ್ದಿಲ್ಲದೇ ಬಳಕೆ ಮಾಡುತ್ತಿದ್ದರು ಎನ್ನುವುದನ್ನು ಕೆಲವು ಸ್ಥಳೀಯರು ನಿಯಮಿತವಾಗಿ ವೀಕ್ಷಿಸಿದ್ಧಾರೆ. ಇದು ನಿರಂತರವಾವಿ ನಡೆಯುತ್ತಿದ್ದುದನ್ನು ಗಮನಿಸಿದ ಸ್ಥಳೀಯ ನಾಗರಿಕರು ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ನಂತರ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಗಾಂಜಾ ಗಿಡ ಬೆಳೆದಿದ್ದ ಖಾಲಿ ನಿವೇಶನದ ಮಾಲೀಕನ ಪತ್ತೆಗಾಗಿ ಜಯನಗರ ಪೊಲೀಸರು ಶೋಧನಾ ಕಾರ್ಯ ಕೈಗೊಂಡಿದ್ದಾರೆ. ಅವರು ಯಾರು, ಯಾಕೆ ನಿವೇಶನ ಖಾಲಿ ಬಿಟ್ಟಿದ್ದಾರೆ. ಇಲ್ಲಿ ಗಾಂಜಾ ಬೆಳೆದು ಬಳಕೆ ಮಾಡುತ್ತಿದ್ದುದು ಮಾಲೀಕರಿಗೆ ಗೊತ್ತಿತ್ತಾ ಎನ್ನುವುದು ಸೇರಿದಂತೆ ಹಲವು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗಾಂಜಾ ಬೆಳೆಯುವುದೇ ಅಕ್ರಮ. ಅದೂ ನಗರ ಪ್ರದೇಶದಲ್ಲಿ ಹೀಗೆ ಬೆಳೆಯುವುದು ಕಾನೂನು ಬಾಹಿರ. ಮಾಹಿತಿ ಆಧರಿಸಿ ಗಾಂಜಾ ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ. ಮನೆ ಮಾಲೀಕರಿಂದ ಮಾಹಿತಿ ಪಡೆದ ನಂತರ ಸ್ಪಷ್ಟ ಉತ್ತರ ಸಿಗಲಿದೆ ಎನ್ನುವುದು ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ.