Tumkuru News: ಬಾಣಂತಿ-ಮಗುವನ್ನು ಗುಡಿಸಲಲ್ಲಿ ಇಟ್ಟು ಮೌಢ್ಯಾಚರಣೆ; ಕುಟುಂಬಸ್ಥರಿಗೆ ನ್ಯಾಯಾಧೀಶೆ ಎಚ್ಚರಿಕೆ
Feb 10, 2024 07:19 PM IST
ಬಾಣಂತಿ-ಮಗುವನ್ನು ಗುಡಿಸಲಲ್ಲಿ ಇಟ್ಟು ಮೌಢ್ಯೌಚರಣೆ; ಕುಟುಂಬಸ್ಥರಿಗೆ ನ್ಯಾಯಾಧೀಶೆ ಎಚ್ಚರಿಕೆ
- ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಬಾಣಂತಿ, ಮಗುವನ್ನು ಗುಡಿಸಲಿನಲ್ಲಿ ಇಡುವ ಮೌಢ್ಯಾಚರಣೆ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ನಡೆದಿದ್ದು, ಈ ಬಗ್ಗೆ ಎಚ್ಚರಿಕೆಯ ಜಾಗೃತಿ ಮೂಡಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಇಂಥದ್ದೇ ಇನ್ನೊಂದು ಘಟನೆ ನಡೆದಿದೆ.
ತುಮಕೂರು: ಜಿಲ್ಲೆಯಲ್ಲಿ ಆಗಾಗ ಮೌಢ್ಯಾಚರಣೆಗೆ ಸಂಬಂಧಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ತುಮಕೂರು ತಾಲ್ಲೂಕು, ಗುಬ್ಬಿ ತಾಲ್ಲೂಕಿನ ಗೊಲ್ಲರ ಹಟ್ಟಿಗಳಲ್ಲಿ ಬಾಣಂತಿ, ಮಗುವನ್ನು ಗುಡಿಸಲಿನಲ್ಲಿ ಇಡುವ ಮೂಲಕ ಮೂಢನಂಬಿಕೆ ಮುಂದುವರೆಸಿದ್ದರು, ಸ್ಥಳೀಯ ಆಡಳಿತ, ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ಕುಟುಂಬಸ್ಥರಿಗೆ ಎಚ್ಚರಿಕೆಯ ಜಾಗೃತಿ ಮೂಡಿಸಿದ್ದರು, ಈ ಘಟನೆ ಮಾಸುವ ಮುನ್ನವೇ ಇದೀಗ ಶಿರಾ ತಾಲ್ಲೂಕಿನಲ್ಲಿ ಮೌಢ್ಯಾಚರಣೆ ಬೆಳಕಿಗೆ ಬಂದಿದೆ.
ಸಂಪ್ರದಾಯದ ಹೆಸರಿನಲ್ಲಿ ಮನೆಯಿಂದ ಹೊರಗಡೆ ಗುಡಿಸಿಲಿನಲ್ಲಿ ಇಟ್ಟಿದ್ದ ಬಾಣಂತಿಯನ್ನು ಮತ್ತೆ ಮನೆಗೆ ಸೇರಿಸುವಲ್ಲಿ ನ್ಯಾಯಾಧೀಶರಾದ ಗೀತಾಂಜಲಿ. ಈ ಘಟನೆ ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕುಂಟನಹಟ್ಟಿ ಗೊಲ್ಲರ ಹಟ್ಟಿಯಲ್ಲಿ ಶನಿವಾರ ನಡೆದಿದೆ.
ಗೊಲ್ಲರಹಟ್ಟಿಯ 25 ವರ್ಷದ ಬಾಲಮ್ಮ ಎಂಬ ಒಂದು ತಿಂಗಳ ಬಾಣಂತಿಯನ್ನು ಆಕೆಯ ಮನೆಯವರು ಸಂಪ್ರದಾಯದ ಹೆಸರಿನಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಗುಡಿಸಿಲಿನಲ್ಲಿ ಇರಿಸಿ ಪೋಷಿಸುತ್ತಿದ್ದರು, ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಾಧೀಶೆ ಗ್ರಾಮಸ್ಥರ ಸಮ್ಮುಖದಲ್ಲಿ ಮನೆಯವರಿಗೆ ಕ್ಲಾಸ್ ತೆಗೆದುಕೊಂಡಿದ್ದು, ಭಾರತೀಯ ದಂಡ ಸಂಹಿತೆ ಅನ್ವಯ ಯಾವುದೇ ರೀತಿಯ ಅಸ್ಪೃಶ್ಯತೆ ಶಿಕ್ಷಾರ್ಹ ಅಪರಾಧವಾಗಿದೆ, ಒಂದರಿಂದ ಏಳು ವರ್ಷದ ವರೆಗೆ ಜೈಲು ಶಿಕ್ಷೆ, ಐವತ್ತು ಸಾವಿರ ರೂಪಾಯಿವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, ದಂಡನೆಗೆ ಅವಕಾಶ ನೀಡದಂತೆ ಮಾನವೀಯತೆ ಪಾಲಿಸಬೇಕು ಎಂದು ತಿಳಿಸಿದರು.
ಬಾಣಂತಿಯ ಗಂಡ ಶಿವಕುಮಾರ ಕುರಿ ಕಾಯಲು ತೆರಳಿದ್ದು, ಮನೆಯಲ್ಲಿದ್ದ ಅತ್ತೆ ಕರಿಯಮ್ಮನಿಗೆ ನ್ಯಾಯಾಧೀಶರು ಎಚ್ಚರಿಕೆ ನೀಡಿದರು, ಬಾಣಂತಿಗೆಂದು ಹಾಕಲಾಗಿದ್ದ ಗುಡಿಸಲನ್ನು ಪೊಲೀಸರ ಸಹಾಯದಿಂದ ತೆರವುಗೊಳಿಸಲಾಯಿತು, ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಗ್ರಾಮದ ಹೆಣ್ಣು ಮಕ್ಕಳನ್ನು ಕುರಿತು ಮಾತನಾಡಿದ ನ್ಯಾಯಾಧೀಶೆ ಸಂಪ್ರದಾಯದ ಹೆಸರಿನಲ್ಲಿ ಆಚರಿಸುವ ಮೌಢ್ಯ ಮತ್ತು ಅಮಾನವೀಯ ಆಚರಣೆಗಳ ವಿರುದ್ಧ ಜಾಗೃತರಾಗಿರುವಂತೆ ಕರೆ ನೀಡಿದರು.
ತಾಲ್ಲೂಕು ಕಾಡುಗೊಲ್ಲರ ಸಂಘದ ಕಾರ್ಯದರ್ಶಿ ಚಂದ್ರಣ್ಣ, ತಾವರೆಕೆರೆ ಪೊಲೀಸ್ ಠಾಣೆ ಎಂಎಸ್‌ಐ ಶ್ರೀನಿವಾಸ್ ಇತರರು ಇದ್ದರು.
ಇದನ್ನೂ ಓದಿ
Tumkur News: ಗುಬ್ಬಿ ಗೊಲ್ಲರಹಟ್ಟಿ ಗುಡಿಸಲಲ್ಲಿದ್ದ ಬಾಣಂತಿ, ಮಗು ಕಾಪಾಡಿದ ನ್ಯಾಯಾಧೀಶೆ
Gollarhatti News ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗೊಲ್ಲರಹಟ್ಟಿಯ ಬಾಣಂತಿ ಹಾಗೂ ಮಹಿಳೆಯನ್ನು ತುಮಕೂರು ನ್ಯಾಯಾಧೀಶರಾದ ಉಂಡಿ ಮಂಜುಳಾ ಅವರು ರಕ್ಷಿಸಿ ಜಾಗೃತಿ ಮೂಡಿಸಿದ್ದಾರೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಜಾರಿಯಲ್ಲಿರುವ ಮೂಢನಂಬಿಕೆ ಅಳಿಸಲು ನ್ಯಾಯಾಂಗ ಇಲಾಖೆ ಕ್ರಮ ಕೈಗೊಂಡಿದೆ.
ವಿಭಾಗ