Udupi News: ಪಶ್ಚಿಮ ಘಟ್ಟದ ತಪ್ಪಲಲ್ಲಿ ಮತ್ತೆ ನಕ್ಸಲ್ ಚಟುವಟಿಕೆ, ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಕೂಂಬಿಂಗ್ ಚುರುಕು
Feb 13, 2024 02:50 PM IST
ನಕ್ಸಲ್ ಚಟುವಟಿಕೆ ಮಾಹಿತಿ ಹಿನ್ನೆಲೆಯಲ್ಲಿ ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ್ ನಿಗ್ರಹ ದಳದ ಕೂಂಬಿಂಗ್ ಚುರುಕುಗೊಂಡಿದೆ.
- ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ್ ಚಟುವಟಿಕೆ ಚುರುಕುಗೊಂಡಿರುವ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಕೂಡ ಕೂಂಬಿಂಗ್ ಹೆಚ್ಚಿಸಿದೆ.
- ವರದಿ: ಹರೀಶ್ ಮಾಂಬಾಡಿ, ಮಂಗಳೂರು
ಉಡುಪಿ: ಕರ್ನಾಟಕ ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಚುರುಕಾಗಿದೆಯೇ? ಕೆಲ ದಿನಗಳ ಹಿಂದೆ ನಡೆದ ಘಟನಾವಳಿಗಳನ್ನು ಗಮನಿಸಿದಾಗ ಈ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿ ಕಾಡುತ್ತಿದೆ. ಈಗಾಗಲೇ ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಈ ಕುರಿತು ತೀವ್ರ ನಿಗಾ ವಹಿಲಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಿಕ್ರಮ್ ಗೌಡ ಓಡಾಟದ ಸುಳಿವು ಸಿಕ್ಕಿದೆ ಎನ್ನಲಾಗಿದೆ. ನಕ್ಸಲರ ಓಡಾಟದ ಹಿನ್ನಲೆ ಎ.ಎನ್.ಎಫ್. ನಿಂದ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಮಲೆನಾಡು-ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ನಕ್ಸಲ್ ನಿಗ್ರಹ ದಳಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ.
ಉದಯನಗರ ಪ್ರದೇಶದಲ್ಲಿ ಕಂಡುಬಂದಿದ್ದರೇ?
ಪಶ್ಚಿಮ ಘಟ್ಟದ ತಪ್ಪಲಿನ ಉದಯನಗರದ ಮನೆಯೊಂದರ ಮುಂಭಾಗ ನಕ್ಸಲರು ಕಾಣಿಸಿಕೊಂಡಿರುವ ವಿಚಾರವೀಗ ಬೆಳಕಿಗೆ ಬಂದಿದೆ. ದಟ್ಟ ಹಸಿರು ಅಥವಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದು, ಕೈಯಲ್ಲಿ ಬಂದೂಕು ಹಿಡಿದಿದ್ದರು ಎಂದು ಹೇಳಲಾಗಿದೆ.
ಉದಯನಗರ ಗುಂಡನ ಹೊಳೆ ಎಂಬಲ್ಲಿ ಮಾಹಿತಿ ಆಧರಿಸಿ ಎಎನ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಹಾಗೂ ವಿಚಾರಣೆ ನಡೆಸಿದೆ. ನಕ್ಸಲರ ಮುಖ ಚಹರೆ, ಎಷ್ಟು ಮಂದಿ ಇದ್ದರು, ಯಾವ ಆಯುಧಗಳನ್ನು ಹೊಂದಿದ್ದರು ಎಂಬ ಕುರಿತು ಇನ್ನೂ ಸ್ಪಷ್ಟತೆ ದೊರಕಿಲ್ಲ.
ಬೈಂದೂರಿನತ್ತಲೂ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉದಯನಗರ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿರುವ ವಿಚಾರ ಈ ಅಲರ್ಟ್ ಗೆ ಕಾರಣ. ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿದೆ.
ಈ ತಂಡ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರಿಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿರುವ ನಂತರ ಕೂಂಬಿಂಗ್ ಚುರುಕುಗೊಂಡಿದೆ.
ಕೆಲವು ದಿನಗಳಿಂದ ಮಂಗಳೂರು, ಶಿವಮೊಗ್ಗ, ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾಗಿತ್ತು. ಕೇರಳ ಭಾಗದಲ್ಲಿ ಸಕ್ರಿಯವಾಗಿದ್ದವರು ಇಲ್ಲಿನ ಕೆಲವರೊಂದಿಗೆ ಸಂಪರ್ಕ ಸಾಧಿಸಿರುವ ಮಾಹಿತಿ ಇದೆ. ಈ ಕಾರಣದಿಂದಲೇ ನಮ್ಮ ತಂಡಗಳು ಸಕ್ರಿಯವಾಗಿದೆ. ಈಗಾಗಲೇ ಅಲ್ಲಲ್ಲಿ ಕೂಂಬಿಂಗ್ ಹೆಚ್ಚಿಸಿದ್ದೇವೆ. ನಕ್ಸಲ್ ಸಂಘಟನೆಗಳು ಸಕ್ರಿಯವಾಗಿವೆ ಎನ್ನುವ ಮಾಹಿತಿ ಲಭಿಸಿದೆ. ತಮ್ಮ ಕೆಲಸ ಮುಂದುವರೆಯಲಿದೆ ಎಂದು ಮಲ್ಪೆ ಕೇಂದ್ರಿತವಾಗಿರುವ ನಕ್ಸಲ್ ನಿಗ್ರಹ ಪೊಲೀಸ್ ದಳದ ಅಧಿಕಾರಿಯೊಬ್ಬರು ಖಚಿತಪಡಿಸಿದರು.
ಲಾಲ್ ಸಲಾಂ ಕಾರ್ಯಕ್ರಮ
ಕೊಲ್ಲೂರು ವ್ಯಾಪ್ತಿಯಲ್ಲೂ ನಕ್ಸಲರ ಓಡಾಟ ಕಂಡುಬಂದಿದೆ ಎನ್ನಲಾಗಿದ್ದು, ಕೊಲ್ಲೂರಿನ ಹಲವೆಡೆ ಎಎನ್‌ಎಫ್ ಬಿಗಿ ಭದ್ರತೆ ಮಾಡಿದೆ. ಕೊಲ್ಲೂರು ಠಾಣಾ ವ್ಯಾಪ್ತಿಯ ಹಲವೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಉದಯನಗರಕ್ಕೆ ಎಎನ್‌ಎಫ್ ಎಸ್ಪಿ ಜಿತೇಂದ್ರ ಭೇಟಿ ನೀಡಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ಬೈಂದೂರು ತಾಲೂಕಿನ ಕಾಡಿನ ಒಳಗೆ ನಕ್ಸಲರಿಂದ ಲಾಲ್ ಸಲಾಂ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‌ಕೌಂಟರ್ ನಡೆದು 19 ವರ್ಷಗಳಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂದು ತಿಳಿದುಬಂದಿದೆ. ಈ ವಿಚಾರ ಸ್ಥಳೀಯರಿಗೆ ತಿಳಿದು ಅದು
2005ರ ಫೆಬ್ರವರಿ 6ರಂದು ಉಡುಪಿ ಜಿಲ್ಲೆಯ ಮೆಣಸಿನಹಾಡ್ಯದಲ್ಲಿ ಸಾಕೇತ್ ಎನ್‌ಕೌಂಟರ್ ನಡೆದಿತ್ತು. ಇದರಿಂದ ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ನಿಂತುಹೋಗಿತ್ತು. ಇದೀಗ ಹಲವು ವರ್ಷಗಳ ಬಳಿಕ ಪಶ್ಚಿಮ ಘಟ್ಟದಲ್ಲಿ ಮತ್ತೆ ಕೆಂಪು ಧ್ವಜ ಹಾರಾಡುತ್ತಿದ್ದು, ನಕ್ಸಲೀಯ ಚಟುವಟಿಕೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿವೆ ಎನ್ನಲಾಗಿದೆ.
(ವರದಿ: ಹರೀಶ್ ಮಾಂಬಾಡಿ, ಮಂಗಳೂರು)