Inspirational Story: ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡರೂ ಕಲಿಕೆಯಲ್ಲಿ ಮುನ್ನಡೆದ ಛಲಗಾತಿ, ಉಡುಪಿಯ ಕೀರ್ತನಾ ಯಶೋಗಾಥೆ
Apr 23, 2023 10:04 AM IST
Inspirational Story: ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡರೂ ಕಲಿಕೆಯಲ್ಲಿ ಮುನ್ನಡೆದ ಛಲಗಾತಿ, ಉಡುಪಿಯ ಕೀರ್ತನಾ ಯಶೋಗಾಥೆ
- ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ (Karnataka 2nd PUC Result) ಉಡುಪಿಯ ಕೀರ್ತನಾ ಭಂಡಾರಿ ಸಾಧನೆ ಸ್ಫೂರ್ತಿದಾಯಕ. ರೆಟಿನಾ ಬ್ಲಾಸ್ಟೊಮಾ (Retinoblastoma) ಕಣ್ಣಿನ ಕ್ಯಾನ್ಸರ್‌ನಿಂದ ದೃಷ್ಟಿ ಕಳೆದುಕೊಂಡಿದ್ದ ಇವರ ಯಶೋಗಾಥೆ (Success Story)ಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಮಂಗಳೂರು ಪ್ರತಿನಿಧಿ ಹರೀಶ ಮಾಂಬಾಡಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಉಡುಪಿ: ಇವಳ ಹೆಸರು ಕೀರ್ತನಾ ಭಂಡಾರಿ(Keerthana Bhandari). ಉಡುಪಿ ಜಿಲ್ಲೆಯ ಸಿದ್ಧಾಪುರದ ಮಹಾಬಲ ಭಂಡಾರಿ ಅವರ ಮೂರು ಹೆಣ್ಣುಮಕ್ಕಳಲ್ಲಿ ಒಬ್ಬಳು. ಹತ್ತು ತಿಂಗಳ ಶಿಶುವಾಗಿದ್ದಾಗಲೇ ಕಣ್ಣಿನ ಕ್ಯಾನ್ಸರ್ (Retinoblastoma)ಗೆ ತುತ್ತಾದಳು. ಆಗ ಒಂದು ಕಣ್ಣು ಹೋದರೆ, ಇನ್ನೊಂದು ಕಣ್ಣಿಗೂ ಹಬ್ಬಿತು. ಹೀಗೆ ಹದಿನೆಂಟು ವರ್ಷಗಳಲ್ಲಿ ಸುಮಾರು 28 ಬಾರಿ ಆಸ್ಪತ್ರೆಯ ಮೆಟ್ಟಿಲು ಹತ್ತಿದ ಕೀರ್ತನಾ ಅಳುತ್ತಾ ಕೂರಲಿಲ್ಲ. ನಾನು ಬದುಕಿನಲ್ಲಿ ಸಾಧಿಸಲು ಬೆಟ್ಟದಷ್ಟಿದೆ ಎನ್ನುತ್ತ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಳು. ಅದರ ಪ್ರತಿಫಲವೇ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗಲ್ಲಿ ಶೇ.89.83 ಅಂಕ ಗಳಿಸಿದ್ದಾಳೆ. ಅಂದರೆ 539 ಮಾರ್ಕುಗಳು. ಇದೇನೂ ಸಣ್ಣ ಸಾಧನೆಯಲ್ಲ.
ಉಡುಪಿ ಜಿಲ್ಲೆ ಕೆರಾಡಿಯ ವರಸಿದ್ಧಿ ವಿನಾಯಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿದ್ಧಾಪುರ ಮಹಾಬಲ ಭಂಡಾರಿ ಜಯಶ್ರೀ ದಂಪತಿಯ ಹಿರಿಯ ಪುತ್ರಿ ಕೀರ್ತನಾ ಯಶೋಗಾಥೆ ಇದು.
ನನಗೆ ಶೇ.75 ಅಂಕಗಳು ಬರುವುದು ಎಂಬ ನಿರೀಕ್ಷೆ ಇತ್ತು. ಇಷ್ಟೊಂದು ಅಂಕ ದೊರಕುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಹೆತ್ತವರು, ಮನೆಯವರು, ಉಪನ್ಯಾಸಕರು, ಸ್ನೇಹಿತರ ಸಹಕಾರ ಇಲ್ಲಿ ಮಹತ್ವದ್ದು. ಮುಂದೆ ಬಿಎ ಓದಬೇಕು, ಸರಕಾರಿ ಅಧಿಕಾರಿಯಾಗಬೇಕು ಎಂಬ ಆಸೆ ನನಗಿದೆ ಎನ್ನುತ್ತಾಳೆ ಕೀರ್ತನಾ.
ಕೀರ್ತನಾ ಸಾಧನೆಗೆ ಆಕೆಯ ತಂದೆ, ಸಿದ್ಧಾಪುರದಲ್ಲಿ ಕಳೆದ 30 ವರ್ಷಗಳಿಂದ ಸೆಲೂನ್ ನಡೆಸುತ್ತಿರುವ ಮಹಾಬಲ ಭಂಡಾರಿ ಅವರ ಸಂತೋಷಕ್ಕೆ ಪಾರವೇ ಇಲ್ಲ. ನನ್ನ ಮಗಳು ಸಾಧಿಸಿದ್ದಾಳೆ ಎನ್ನುತ್ತಾರೆ ಅವರು. ‘’ನನ್ನ ಮಗಳು ಯಾವಾಗಲೂ ಹೇಳುತ್ತಾಳೆ, ನಾವು ನಿಮಗೆ ಮೂರು ಹೆಣ್ಣುಮಕ್ಕಳು. ನಿಮಗೆ ಕಷ್ಟ ಆಗದ ಹಾಗೆ ನಾವೇ ಓದಿ, ಏನಾದರೂ ಮಾಡಬೇಕು . ನಿಮಗೆ ತೊಂದರೆ ಆಗದಂತೆ ನಾವೇ ಸಾಧನೆ ಮಾಡಬೇಕು. ಅದನ್ನು ಸಾಧಿಸಿ ತೋರಿಸಿದ್ದಾಳೆ’’ ಎಂದು ಖುಷಿಪಟ್ಟರು ಕೀರ್ತನಾ ತಂದೆ.
ಕೀರ್ತನಾ ಪರೀಕ್ಷೆ ಬರೆದದ್ದು ಸಹಾಯಕರನ್ನು ಇಟ್ಟುಕೊಂಡು. ಆದರೆ ತಾನೇ ಬರೆಯುವುದು ಕೀರ್ತನಾಗೆ ಸವಾಲೇನಲ್ಲ, ಸ್ಮಾರ್ಟ್ ಫೋನ್ ಅನ್ನು ಬಳಸುವ ಕೀರ್ತನಾ ಹಲವು ವಿಚಾರಗಳನ್ನು ಅರಿತುಕೊಳ್ಳುತ್ತಾಳೆ. ಅಂಧರ ಆಪ್ ಮೂಲಕ ವಿವಿಧ ವಿಚಾರಗಳ ಅಧ್ಯಯನವನ್ನೂ ಮಾಡುತ್ತಾಳೆ. ವಿಡಿಯೋ ಕಾಲ್ ಮಾಡುವ ಮೂಲಕ ಬೆಂಗಳೂರಿನ ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಿ ಅವರೊಂದಿಗೆ ಸಲಹೆಗಳನ್ನೂ ಪಡೆಯುತ್ತಾಳೆ.
ಏನು ಸಮಸ್ಯೆ?
ಹತ್ತು ತಿಂಗಳ ಶಿಶುವಾಗಿದ್ದಾಗ ಕೀರ್ತನಾಗೆ ಕಣ್ಣಿನ ಕ್ಯಾನ್ಸರ್ ಎಂದು ಗೊತ್ತಾಯಿತು. ಇದಕ್ಕೆ ರೆಟಿನಾ ಬ್ಲಾಸ್ಟೊಮೆ ಎನ್ನುತ್ತಾರೆ. ಆಗ ಒಂದು ಕಣ್ಣನ್ನು ಉಳಿಸಿಕೊಳ್ಳಲಾಗಲಿಲ್ಲ. ಕೆಲ ವರ್ಷಗಳಲ್ಲೇ ಇನ್ನೊಂದು ಕಣ್ಣಿಗೂ ಈ ಸಮಸ್ಯೆ ತಲೆದೋರಿತು. ತೆಂಗಿನಕಾಯಿಯಷ್ಟು ದೊಡ್ಡ ಗಡ್ಡೆ ಸಮೀಪ ಬಂತು. ಅದನ್ನೂ ತೆಗೆಯಬೇಕಾಗಿ ಬಂತು. ಈ ಸಂದರ್ಭ ಬೇರೆ ಬೇರೆ ಆಸ್ಪತ್ರೆಗಳಿಗೆ ನಾವು ಎಡತಾಕಿದೆವು. ಆರು ವರ್ಷವಾಗುವಾಗಲೇ ಎಂಟು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಇದಕ್ಕೂ ಮೊದಲು ಸುಮಾರು 20 ಬಾರಿ ಆಸ್ಪತ್ರೆಗಳಿಗೆ ತಿರುಗಿದ್ದೆವು. ಕೊನೆಗೂ ಕ್ಯಾನ್ಸರ್ ನಿಂದ ಗುಣಮುಖಳಾದಳು. ಆದರೆ ಶಾಲೆಗೆ ಎಲ್ಲಿಗೆ ಹೋಗುವುದು ಎಂಬ ಸಮಸ್ಯೆ ತಲೆದೋರಿತು. ಆಗ ಮಂಗಳೂರಿನಲ್ಲಿರುವ ವಿಶೇಷ ಮಕ್ಕಳಿಗಾಗಿ ಇರುವ ಶಾಲೆಗೆ ಸೇರಿಸಿದೆವು. ಅಲ್ಲಿ ಹತ್ತನೇ ತರಗತಿವರೆಗೆ ಶಿಕ್ಷಣ ಪಡೆದಳು. ಎಸ್.ಎಸ್.ಎಲ್.ಸಿ.ಯಲ್ಲಿ ಆಕೆಗೆ ಶೇ.70ರಷ್ಟು ಅಂಕ ಬಂದಿತ್ತು. ಅದಾದ ಬಳಿಕ ಕೆರಾಡಿ ಕಾಲೇಜಿಗೆ ಪಿಯುಸಿಗೆ ಸೇರಿಸಿದೆವು. ಅಲ್ಲಿ ಉಪನ್ಯಾಸಕರು, ಮಕ್ಕಳು, ಪ್ರೀತಿಯಿಂದ ಬರಮಾಡಿಕೊಂಡರು. ಅದರ ಫಲವೇ ಈಗ ದೊರಕಿದ ಮಾರ್ಕು ಎಂದು ಖುಷಿಪಟ್ಟರು ಮಹಾಬಲ ಭಂಡಾರಿ.
ವರದಿ: ಹರೀಶ ಮಾಂಬಾಡಿ ಮಂಗಳೂರು
ಮಕ್ಕಳಲ್ಲಿ ಕಣ್ಣಿನ ಕ್ಯಾನ್ಸರ್ - ಕಡೆಗಣಿಸಬೇಡಿ
ಸುಂದರವಾದ ಜಗತ್ತನ್ನು ನೋಡಲು ಕಣ್ಣು ಅತ್ಯವಶ್ಯಕ. ಕೆಲವೊಮ್ಮೆ ವಿಶೇಷವಾಗಿ ಮಕ್ಕಳಲ್ಲಿ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುವುದುಂಟು. ಮಕ್ಕಳಲ್ಲಿ ಕಣ್ಣು ಮಸುಕಾಗುವುದು, ಕಣ್ಣು ನೋವು ಉಂಟಾದಾಗ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಸ್ಥಳೀಯ ಆಸ್ಪತ್ರೆಯಲ್ಲಿ ನೀಡುವ ಡ್ರಾಪ್‌ಗಳ ಮೊರೆ ಹೋಗುತ್ತಾರೆ. ಪುಟ್ಟ ಮಗುವಿನ ಕಣ್ಣಿನ ತೊಂದರೆಯನ್ನು ಆರಂಭದಲ್ಲಿ ಕಡೆಗಣಿಸುವುದು ತಪ್ಪು. ಮಗುವಿನಲ್ಲಿರುವ ಕಣ್ಣಿನ ತೊಂದರೆ ಆರಂಭಿಕ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಮುಂದೊಂದು ದಿನ ಮಗುವಿನ ಒಂದು ಅಥವಾ ಎರಡೂ ಕಣ್ಣನ್ನು ತೆಗೆಯಬೇಕಾಗಬಹುದು. ಆ ಮಗು ಜೀವನಪೂರ್ತಿ ಅಂಧತ್ವ ಎದುರಿಸಬೇಕಾಗಬಹುದು. ಇಂತಹ ಅಪಾಯಕ್ಕೆ ಈಡಾಗುವ ಬದಲು ಮಕ್ಕಳ ಕಣ್ಣಿನ ಕುರಿತು ಆರಂಭದಲ್ಲಿಯೇ ಜಾಗೃತಿ ವಹಿಸಿ, ಚಿಕಿತ್ಸೆ ನೀಡಿದರೆ ಮಕ್ಕಳನ್ನು ಕಣ್ಣಿನ ಕ್ಯಾನ್ಸರ್‌ನಿಂದ ರಕ್ಷಿಸಬಹುದು ಎನ್ನುತ್ತಾರೆ ಬೆಂಗಳೂರಿನ ಕಣ್ಣಿನ ಕ್ಯಾನ್ಸರ್ ತಜ್ಞೆ ಡಾ. ಫೈರೋಜ್ ಪಿ. ಮಂಜಂದಾವಿಡ.
ಕಣ್ಣಿನ ಕ್ಯಾನ್ಸರ್ ಗುಣಪಡಿಸಬಹುದೇ?
ಆರಂಭದಲ್ಲಿಯೇ ಗುರುತಿಸಿದರೆ ಮತ್ತು ಸೂಕ್ತ ಚಿಕಿತ್ಸೆ ನೀಡಿದರೆ Retinoblastoma ಎಂದು ಹೇಳುವ ಈ ತೊಂದರೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ, ನಮ್ಮಲ್ಲಿ ಬಹುತೇಕರು ಚಿಕಿತ್ಸೆಗೆ ಬರುವಾಗಲೇ ತಡವಾಗಿರುತ್ತದೆ ಎಂದು ಡಾ. ಫೈರೋಜ್ ಪಿ. ಮಂಜಂದಾವಿಡ ಹೇಳಿದ್ದಾರೆ. ಅವರೊಂದಿಗೆ ಎಚ್‌ಟಿ ಕನ್ನಡ ಸಂದರ್ಶನ ನಡೆಸಿದ್ದು, ಕಣ್ಣಿನ ಕ್ಯಾನ್ಸರ್ ಕುರಿತು ಹೆಚ್ಚಿನ ವಿವರ ನೀಡಿದ್ದಾರೆ.