Nejar Murder Case: ಉಡುಪಿ ನೇಜಾರಿನ ಹತ್ಯಾಕಾಂಡಕ್ಕೆ ಅತಿಯಾದ ಪೊಸೆಸಿವ್ ನೆಸ್ ಕಾರಣವಾಯಿತೇ
Nov 25, 2023 10:32 AM IST
ಪೊಲೀಸ್ ವಶದಲ್ಲಿ ಆರೋಪಿ ಪ್ರವೀಣ್ ಚೌಗಲೆ
ಉಡುಪಿ ಹತ್ಯಾಕಾಂಡ ಪ್ರಕರಣದಲ್ಲಿ, ಆರೋಪಿ ಪ್ರವೀಣ್ ಚೌಗಲೆಗೆ ಕೊಲೆಯಾದ ಆಯ್ನಾಝ್ ಜೊತೆ ಕಳೆದ ಎಂಟು ತಿಂಗಳಿಂದ ಇದ್ದ ಸ್ನೇಹ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅತಿಯಾದ ಪೊಸೆಸಿವ್ ನೆಸ್ ಕಾರಣವಾಯಿತು ಎಂದು ಎಸ್ಪಿ ವಿವರ ನೀಡಿದ್ದಾರೆ.
ಉಡುಪಿಯ ನೇಜಾರಿನ ತೃಪ್ತಿ ಲೇಔಟ್ ನಲ್ಲಿ ನವೆಂಬರ್ 12ರಂದು ಬೆಳಗಿನ ಜಾವ ಮನೆಗೆ ನುಗ್ಗಿ ನಾಲ್ವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಪ್ರವೀಣ್ ಚೌಗಲೆಯ ತೀವ್ರ ವಿಚಾರಣೆ ನಡೆಯುತ್ತಿದೆ.
ಈ ಸಂದರ್ಭ ಇದುವರೆಗಿನ ತನಿಖೆಯಲ್ಲಿ ಆರೋಪಿಗೆ ಕೊಲೆಯಾದ ಆಯ್ನಾಝ್ ಜೊತೆ ಕಳೆದ ಎಂಟು ತಿಂಗಳಿಂದ ಇದ್ದ ಸ್ನೇಹ ಹಾಗೂ ಅದಕ್ಕೆ ಸಂಬಂಧಿಸಿದಂತೆ ಅತಿಯಾದ ಪೊಸೆಸಿವ್ ನೆಸ್ ಕಾರಣವಾಯಿತು ಎಂಬ ಅಂಶ ಗೊತ್ತಾಗಿದೆ ಎಂದು ಉಡುಪಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ. ಅರುಣ್ ಮಾಹಿತಿ ನೀಡಿದರು.
ಪೊಲೀಸರ ತನಿಖಾ ತಂಡ ಮಹತ್ವದ ಸಾಕ್ಷಿಯಾಗಿದ್ದ ಚೂರಿಯನ್ನು ನ.18 ರಂದು ಮಂಗಳೂರಿನ ಬಿಜೈ ಫ್ಲ್ಯಾಟ್‌ನಿಂದ ವಶಕ್ಕೆ ಪಡೆಯಲಾಗಿತ್ತು. ಪ್ರವೀಣ್ ಚೌಗಲೆಯನ್ನು ಉಡುಪಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 5 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಹಿರಿಯಡ್ಕ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಪ್ರಕರಣದ ತನಿಖೆಗೆ ಒಟ್ಟು 11 ತಂಡ ರಚನೆ
ತನಿಖೆಗೆ ಒಟ್ಟು 11 ತಂಡ ರಚನೆ ಮಾಡಿದ್ದೆವು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ನಾಲ್ವರ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ಪ್ರಕರಣ ಇದಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿ ಪ್ರವೀಣ್ ಚೌಗಲೆಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಸ್ನ್ಯಾಪ್ ಚಾಟ್ ಬಳಸಿ ಲೊಕೇಶನ್ ಹುಡುಕಿದ್ದ
ಆಯ್ನಾಝ್ ಮನೆಯನ್ನು ಹುಡುಕುವ ವೇಳೆ ಆತ ಸ್ನ್ಯಾಪ್ ಚಾಟ್ ಆಪ್ ಬಳಸಿ ಆಕೆಯ ಲೊಕೇಶನ್ ಕಂಡುಹಿಡಿಯಲು ಯತ್ನಿಸಿದ್ದ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆತ ಈ ಕೃತ್ಯ ಎಸಗರುವ ಸಾಧ್ಯತೆಗಳಿವೆ.
ಮಾತು ಬಿಟ್ಟದ್ದಕ್ಕೆ ಹತ್ಯೆ ಮಾಡಿದ್ದನೇ
ತನ್ನೊಂದಿಗೆ ಮಾತು ಬಿಟ್ಟಿದ್ದಕ್ಕೆ ಸ್ಕೆಚ್ ಹಾಕಿ ಅಯ್ನಾಸ್ಳನ್ನು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ಗೊತ್ತಾಗಿದೆ. ತನಿಖೆಗೆ ಬೇಕಾದ ಎಲ್ಲಾ ದಾಖಲಾತಿ ಪ್ರಕ್ರಿಯೆ ಮಾಡಿದ್ದೇವೆ ಎಂದು ಎಸ್ಪಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ.
ಅಯ್ನಾಸ್ ಮತ್ತು ಅರೋಪಿ ಪ್ರವೀಣ್‌ಗೆ ಎಂಟು ತಿಂಗಳಿಂದ ಪರಿಚಯ ಇತ್ತು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಗೆಳೆತನ ಇತ್ತು. ಅರೋಪಿ ಪ್ರವೀಣ್ ಆಯ್ನಾಸ್‌ಗೆ ಹಲವಾರು ಬಾರಿ ಸಹಾಯ ಮಾಡಿದ್ದ ಅಯ್ನಾಸ್ ಪ್ರವೀಣ್ ಜೊತೆ ತಿಂಗಳಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ. ಇದೇ ಕಾರಣಕ್ಕೆ ಕೊಲೆ ಮಾಡಬೇಕೆಂದು ಪ್ರವೀಣ್ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ. ಕೊಲೆ ಮಾಡುವ ದಿನ ಅವನು ಟೋಲ್ಗೇಟ್ ಬಳಿ ಕಾರು ಇಟ್ಟು ಬೇರೆ ಬೇರೆ ವಾಹನದಲ್ಲಿ ಡ್ರಾಪ್ ಪಡೆದುಕೊಂಡು ತೃಪ್ತಿನಗರಕ್ಕೆ ಹೋಗಿದ್ದಾನೆ ಎಂದು ಎಸ್ಪಿ ಡಾ. ಅರುಣ್ ಹೇಳಿದರು.
ಅಯ್ನಾಸ್ ಮನೆಗೆ ನುಗ್ಗಿದ ಪ್ರವೀಣ್, ಆರಂಭದಲ್ಲಿ ಚಾಕುವಿನಿಂದ ಇರಿದು ಅಯ್ನಾಸ್ ಹತ್ಯೆ ಮಾಡಿ ಬಳಿಕ ಸಾಕ್ಷಿ ನಾಶಗೊಳಿಸಲು ಮನೆಯಲ್ಲಿದ್ದ ಹಸೀನಾ, ಅಫ್ನಾನ್, ಆಸಿಂ ಎಂಬುವವರನ್ನು ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ನಂತರ ಬೇರೆ ಬೇರೆ ವಾಹನ ಬಳಸಿಕೊಂಡು ಪರಾರಿಯಾಗಿದ್ದಾನೆ. ಕೈ ಗಾಯಕ್ಕೆ ಚಿಕಿತ್ಸೆ ಪಡೆದು, ಚಾಕು ಮನೆಯಲ್ಲೇ ಇಟ್ಟು ಹೆಂಡತಿಯ ಸಂಬಂಧಿಕರ ಮನೆಗೆ ಹೋಗಿದ್ದಾನೆ. ಕೈಗೆ ಗಾಯವಾಗಿರುವ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾನೆ. ನಾಲ್ವರನ್ನು ಕೊಲೆಗೈದು ಚೂರಿಯನ್ನು ಅಡುಗೆ ಮನೆಯಲ್ಲಿ ಇಟ್ಟಿದ್ದಾನೆ. ಪತ್ನಿಗೆ ಸಂಶಯ ಬರದ ಹಾಗೆ ಮನೆಯಲ್ಲಿ ಪ್ರವೀಣ್ ವರ್ತಿಸಿದ್ದನು ಎಂದು ಎಸ್ಪಿ ಹೇಳಿದರು.
ಆರೋಪಿ ಪ್ರವೀಣ್ ಮತ್ತು ಅಯ್ನಾಸ್ ಕುಟುಂಬ ಫ್ಯಾಮಿಲಿ ತನಿಖೆಗೆ ಬಹಳ ಸಹಕಾರ ಕೊಟ್ಟಿದ್ದಾರೆ. ನೂರ್ ಮೊಹಮ್ಮದ್ ಕುಟುಂಬ ಬಹಳ ನೋವಲ್ಲಿದ್ದಾರೆ. ವಿಶೇಷ ಪಿ.ಪಿ ನೇಮಕಕ್ಕೆ ನಾವು ಸಹಕಾರ ನೀಡುತ್ತೇವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ಕುಟುಂಬ ಮನವಿ ನೀಡಿದೆ ಎಂದು ಎಸ್ಪಿ ಅರುಣ್ ತಿಳಿಸಿದರು.