Udupi-Dakshina Kannada News: 55 ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ; ಯಾಕಿಷ್ಟು ಪೋಷಕರ ನಿರಾಸಕ್ತಿ?
Jul 11, 2023 12:49 PM IST
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯೊಂದರ ಸ್ಥಿತಿ ಹೀಗಿದೆ.
- Government Schools: ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರಾವಳಿಯ ಉಡುಪಿ, ದ.ಕ. ಜಿಲ್ಲೆಗಳ 55 ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ. ಪೋಷಕರಿಗೆ ಸರ್ಕಾರಿ ಶಾಲೆ ಮೇಲೆ ಯಾಕೆ ನಿರಾಸಕ್ತಿ?
ದಕ್ಷಿಣ ಕನ್ನಡ/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ 1ನೇ ತರಗತಿಗೆ ತಮ್ಮ ಮಕ್ಕಳನ್ನು ಸೇರಿಸುವ ಪೋಷಕರು ಸರ್ಕಾರಿ ಶಾಲೆಗಳ ಕಡೆಗೆ ಮೊದಲ ಆದ್ಯತೆಯನ್ನೇ ನೀಡಲಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವಾತಾವರಣ ಇದೆ, ನುರಿತ ಶಿಕ್ಷಕರು ಇದ್ದಾರೆ ಎಂದು ಇಲಾಖೆ ಸಾರಿ ಸಾರಿ ಹೇಳಿದರೂ ಉಭಯ ಜಿಲ್ಲೆಗಳ 55 ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಲ್ಲಿ ಶೂನ್ಯ ದಾಖಲಾತಿ ಇತ್ತು.
ಜೂನ್ 30ರವರೆಗಿನ ದಾಖಲಾತಿ ಅಂಕಿ ಅಂಶಗಳು ಇದನ್ನು ದೃಢೀಕರಿಸಿದೆ. ಉಳಿದ ಕೆಲ ತರಗತಿಗಳಲ್ಲಿ ಬೆರಳೆಣಿಕೆಯಷ್ಟು ಮಕ್ಕಳು ಇದ್ದಾರೆ. ಹೀಗಾಗಿ ಯಾವುದೇ ಶಾಲೆಗಳನ್ನು ಮುಚ್ಚಿಲ್ಲ. ಇಂಥ ಪ್ರಕ್ರಿಯೆಗಳು ಮುಂದುವರಿದರೆ, ಅದೂ ನಡೆಯಬಹುದು.
ಉಡುಪಿ – ದ.ಕ. ಹೇಗಿದೆ ಅಂಕಿ ಅಂಶ?
ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ 24 ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ ಇದೆ. ಸುಳ್ಯ ತಾಲೂಕಿನಲ್ಲಿ 8, ಬಂಟ್ವಾಳ 4, ಪುತ್ತೂರು 2, ಬೆಳ್ತಂಗಡಿ 3, ಮಂಗಳೂರು ಉತ್ತರ 2, ಮಂಗಳೂರು ದಕ್ಷಿಣ 2, ಮೂಡುಬಿದಿರೆ 3. ಇವುಗಳಲ್ಲಿ ಸೇರಿದೆ. ಉಡುಪಿ ಜಿಲ್ಲೆಯಲ್ಲಿ 31 ಶಾಲೆಗಳಲ್ಲಿ 1ನೇ ತರಗತಿಗೆ ಮಕ್ಕಳ ಸೇರ್ಪಡೆ ಆಗಿಲ್ಲ. ಉಡುಪಿ 4, ಬ್ರಹ್ಮಾವರ 4, ಕುಂದಾಪುರ 5, ಬೈಂದೂರು 9, ಕಾರ್ಕಳ 9. ಇದು ಜುಲೈ 5ರವರೆಗಿನ ಅಂಕಿ ಅಂಶಗಳು ಹೇಳುವ ವಿಚಾರ. ಬಂಟ್ವಾಳದ ಬಾಳ್ತಿಲಕಂಟಿಕ, ಶಾಂತಿನಗರ, ಎತ್ತುಕಲ್ಲು, ಕುಂಡಡ್ಕ ಶಾಲೆಗಳಿಗೆ ಮಕ್ಕಳೇ ಬಂದಿಲ್ಲ. ಬೆಳ್ತಂಗಡಿಯ ಮೂಲಾರು, ಗಂಡಿಬಾಗಿಲು ಶಾಲೆಗಳು ಹೀಗಾದರೆ ಬಾಗಿಲು ಹಾಕಬೇಕಾಗಬಹುದು. ಪುತ್ತೂರಿನ ಹೊಸಮಠ, ಪೆರ್ನಾಜೆ, ಮಂಗಳೂರು ಉತ್ತರ ಹಾಗೂ ದಕ್ಷಿಣದ ಕಿಲ್ಪಾಡಿ, ಪಡುಪಣಂಬೂರು, ಅಳಕೆ, ಬೋಳಾರ, ಮೂಡುಬಿದಿರೆಯ ಗುಂಡುಕಲ್ಲು, ಕೊಪ್ಪದಕುಮೇರು, ಮೂಡುಬಿದಿರೆ, ಸುಳ್ಯದ ತಂಟೆಪ್ಪಾಡಿ, ಪೈಕ, ಗೋವಿಂದನಗರ, ಹಿರಿಯಡಕ, ಕುಲ್ಕುಂದ, ಮುರ್ದೋಡ್ಕ, ಪೇರಾಲು ಶಾಲೆಗಳಿಗೆ ಮಕ್ಕಳೇ ಸೇರಿಲ್ಲ. ಉಡುಪಿ ಜಿಲ್ಲೆಯ ಇರಿಗೆ, ಮುಂಡುಜೆ, ಪಾಂಗಾಳ, ಎರ್ಮಾಳುಬಡಾ, ಎಳಬೇರು, ಯಡ್ನಾಳಿ, ಹೆಮ್ಮಾಡಿ, ಬೆಳ್ಳಾಲ, ಹಾಲಾಡಿ, ಮೆಕೋಡಿ, ಕಣ್ಕಿ, ಹಡವು, ಬೆಳ್ಮನೆ, ಕಂದಲೂರು, ಮುದವಲ್ಲೂರು, ಕಾವ್ರಾಡಿ, ಬಿಚ್ಚಳ್ಳಿ, ಶಿರೂರು, ಕಜ್ಕೆ, ಹೆರ್ಗ, ಬೊಂಡುಕುಮೇರಿ, ಮೈಂದಳಾಕಾಯಾರು, ಹೆಬ್ರಿ, ಸಳ್ಕೆಕಟ್ಟೆ, ಪುಂಜಾಜೆ, ಕುಕ್ಕೂಂದೂರು, ಕಡಂಬಳ, ಮಿಯಾರು ಶಾಲೆಗಳಿಗೆ ಈ ಬಾರಿ ಮಕ್ಕಳ ಸೇರ್ಪಡೆ ಇಲ್ಲ.
ಪೋಷಕರಿಗೆ ಯಾಕಿಷ್ಟು ನಿರಾಸಕ್ತಿ:
ಮೇಲ್ನೋಟಕ್ಕೆ ಆಂಗ್ಲ ಮಾಧ್ಯಮದ ಪ್ರಭಾವ ಇದರಲ್ಲಡಗಿದೆ ಎಂದುಕೊಂಡರೂ ಬಡತನದಲ್ಲಿರುವ ಪೋಷಕರೂ ಕೇವಲ ಆಂಗ್ಲ ಮಾಧ್ಯಮ ಕಲಿಕೆ ಇದಕ್ಕೆ ಕಾರಣವಲ್ಲ ಎನ್ನುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇರಬಹುದು, ಆದರೆ ಪರಿಪೂರ್ಣವಾಗಿ ಕ್ಲಾಸಿಗೊಂದರಂತೆ ಇಲ್ಲ. ಇನ್ನು ಅಭಿವೃದ್ಧಿ ವಿಚಾರಕ್ಕೆ ಬಂದರೆ, ಹಳ್ಳಿಗಳಲ್ಲಿ ರಾಜಕೀಯ ವ್ಯಕ್ತಿಗಳ ಪ್ರವೇಶವೂ ಆಗುತ್ತದೆ. ಇಂಥ ಸಂದರ್ಭ ಮಕ್ಕಳ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತದೆ. ಅದರ ಬದಲು ಖಾಸಗಿ ಶಾಲೆಗಳಿಗೆ ಹಾಕಿದರೆ, ಅಲ್ಲಿ ಟೀಚರುಗಳು ಟ್ರಾನ್ಸ್ ಫರ್ ಆಗುವುದಿಲ್ಲ, ಪ್ರತಿ ಕ್ಲಾಸಿಗೂ ಟೀಚರ್ ಇರುತ್ತಾರೆ. ಸಮಯಪಾಲನೆಯಿಂದ ಮೊದಲ್ಗೊಂಡು, ಕಲಿಕೆಯವರೆಗೆ ಏಕಾಗ್ರತೆಯನ್ನು ಮೂಡಿಸಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವರ್ಗಾವಣೆ ಹೊಂದಿದರೆ, ಮತ್ತೆ ಇನ್ನೊಬ್ಬರು ಬರಬೇಕಾದರೆ, ವರ್ಷ ದಾಟಲೂಬಹುದು. ಕೆಲವೊಂದು ಶಾಲೆಗಳ ಕಟ್ಟಡಗಳು, ಮೂಲಸೌಕರ್ಯಗಳು ಚೆನ್ನಾಗಿರುವುದಿಲ್ಲ. ಇದರ ದುರಸ್ತಿಗೆ ಇವತ್ತು ಟೆಂಡರ್ ಹಾಕಿದರೆ, ವರ್ಷ ಕಳೆದರೂ ಕಾಮಗಾರಿ ಆಗಿರುವುದಿಲ್ಲ. ಆದರೂ ಸಾಧಾರಣವಾಗಿರುತ್ತದೆ. ಇಂಥ ಸಮಸ್ಯೆಗಳಿರುವ ಶಾಲೆಗಳಿಗೆ ಯಾಕೆ ಕಳುಹಿಸಬೇಕು ಎಂಬುದು ಪೋಷಕರ ಪ್ರಶ್ನೆ. ಹೀಗಾಗಿ ಮೊಟ್ಟೆ, ಊಟ, ಸಮವಸ್ತ್ರ ಉಚಿತವಾಗಿ ಕೊಟ್ಟರೂ ಕಳಪೆ ಕಟ್ಟಡ, ಶಿಕ್ಷಕರು ಕಡಿಮೆ ಇರುವ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ.