logo
ಕನ್ನಡ ಸುದ್ದಿ  /  ಕರ್ನಾಟಕ  /  ʻUrulu Seveʼ Exvoto: ತೆಲಂಗಾಣದಲ್ಲಿ ಕರೋನಾ ವಾಸಿಯಾದ ಕಾರಣ ಕಲಬುರಗಿಯ ಘತ್ತರಗಿ ಭಾಗಮ್ಮದೇವಿಗೆ ಉರುಳು ಸೇವೆ ಹರಕೆ ಪೂರೈಸುತ್ತಿರುವ ತಾಯಿ!

ʻUrulu seveʼ exvoto: ತೆಲಂಗಾಣದಲ್ಲಿ ಕರೋನಾ ವಾಸಿಯಾದ ಕಾರಣ ಕಲಬುರಗಿಯ ಘತ್ತರಗಿ ಭಾಗಮ್ಮದೇವಿಗೆ ಉರುಳು ಸೇವೆ ಹರಕೆ ಪೂರೈಸುತ್ತಿರುವ ತಾಯಿ!

HT Kannada Desk HT Kannada

Nov 23, 2022 11:25 AM IST

google News

ಉರುಳು ಸೇವೆ ನಡೆಸುತ್ತಿರುವ ಧನಶ್ರೀ ಗ್ರಾಮದ ಮಾತೆ ಶಶಿಕಲಾ ಮತ್ತು ಅವರ ಹಿತೈಷಿಗಳು

  • ʻUrulu seveʼ exvoto: ಎರಡು ಮೂರು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಕರೊನಾ ರೋಗವನ್ನು ರಾಜ್ಯದಿಂದ ತೊಲಗಿಸಿದರೆ 200 ಕಿ.ಮೀ. ಉರುಳುಸೇವೆ ಮಾಡುವುದಾಗಿ ಕಲಬುರಗಿಯ ಘತ್ತರಗಿ ಭಾಗಮ್ಮದೇವಿಗೆ ಹರಕೆ ಹೊತ್ತುಕೊಂಡಿದ್ದರು ಈ ತಾಯಿ. ತೆಲಂಗಾಣದಲ್ಲಿ ಈಗ ಕರೋನಾ ಕಡಿಮೆ ಆಗಿದೆ. ಹರಕೆ ತೀರಿಸಲು ತಮ್ಮೂರಿಂದ ಘತ್ತರಗಿಗೆ ಉರುಳುಸೇವೆ ಶುರುಮಾಡಿದ್ದಾರೆ. 

ಉರುಳು ಸೇವೆ ನಡೆಸುತ್ತಿರುವ ಧನಶ್ರೀ ಗ್ರಾಮದ ಮಾತೆ ಶಶಿಕಲಾ ಮತ್ತು ಅವರ ಹಿತೈಷಿಗಳು
ಉರುಳು ಸೇವೆ ನಡೆಸುತ್ತಿರುವ ಧನಶ್ರೀ ಗ್ರಾಮದ ಮಾತೆ ಶಶಿಕಲಾ ಮತ್ತು ಅವರ ಹಿತೈಷಿಗಳು

ಬೀದರ್: ಜಗತ್ತನ್ನು ಕೋವಿಡ್‌ ಕಾಡಿದ ಪರಿ ಸಣ್ಣದೇನಲ್ಲ. ಬಹುದೊಡ್ಡ ಸಂಕಷ್ಟದಿಂದ ತೆಲಂಗಾಣವನ್ನು ಪಾರುಮಾಡು ತಾಯಿ ಎಂದು ಆ ರಾಜ್ಯದ ಮಹಿಳೆಯೊಬ್ಬರು ಕರ್ನಾಟಕದ ಕಲಬುರಗಿಯ ಘತ್ತರಗಿ ಭಾಗಮ್ಮದೇವಿಗೆ ಹರಕೆ ಹೊತ್ತುಕೊಂಡಿದ್ದರು. ಇದು ನಂಬಿಕೆಯ ವಿಚಾರ.

ಕರ್ನಾಟಕ- ತೆಲಂಗಾಣ ಗಡಿಭಾಗದಲ್ಲಿರುವ ಧನಶ್ರೀ ಗ್ರಾಮದ ಮಾತೆ ಶಶಿಕಲಾ ಈ ರೀತಿ ಹರಕೆ ಹೊತ್ತುಕೊಂಡವರು. ಕಾಲಾನುಕ್ರಮದಲ್ಲಿ ಕರೋನಾ ಸಂಕಷ್ಟ ಮರೆಯಾಗ ತೊಡಗಿದೆ. ಹೇಳಿದ ಹರಕೆ ತೀರಿಸುವುದಕ್ಕೆ ಶಶಿಕಲಾ ಅವರು ಉರುಳುಸೇವೆ ಮಾಡಲು ಸಜ್ಜಾದರು. ಇದರಂತೆ ನ.11ರಂದು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮ್ಮ ಉರುಳುಸೇವೆ ಹರಕೆ ಶುರುಮಾಡಿದ್ದಾರೆ.

ತೆಲಂಗಾಣದ ಜಹೀರಾಬಾದ ತಾಲೂಕಿನ ಧನಶ್ರೀ ಗ್ರಾಮದ ಭವಾನಿ ಮಂದಿರಕ್ಕೆ ತೆರಳಿ ಅಲ್ಲಿ ದೇವಿಯನ್ನು ಆರಾಧಿಸಿ, ಪೂಜಿಸಿದ ಬಳಿಕ ಹೈದರಾಬಾದ್‌-ಮುಂಬೈ ರಾಷ್ಟ್ರೀಯ ಹೆದ್ದಾರಿ 50ರ ಮೇಲೆ ಉರುಳು ಸೇವೆ ಶುರುಮಾಡಿದ್ದಾರೆ. ನಿತ್ಯ ನಾಲ್ಕು ಕಿ.ಮೀ. ಉರುಳುಸೇವೆ ಮಾಡುತ್ತಾರೆ. ಕೆಲವೊಂದು ದಿನ ಸ್ವಲ್ಪ ಹೆಚ್ಚು ಉರುಳುಸೇವೆ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಘತ್ತರಗಿ ಭಾಗಮ್ಮದೇವಿ ಮಂದಿರಕ್ಕೆ 200 ಕಿ.ಮೀ. ದೂರ ಇದೆ. ಉರುಳು ಸೇವೆ ಈಗ ಬೀದರ್‌ ಜಿಲ್ಲೆ ಹುಮನಾಬಾದ್ ತಾಲೂಕಿನ ವ್ಯಾಪ್ತಿಯಲ್ಲಿ ಮುಂದುವರಿದಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಶಶಿಕಲಾ, ಕರೊನಾ ಸಂದರ್ಭದಲ್ಲಿ ದೇಶದ ಜನರಿಗೆ ಅನೇಕ ರೀತಿಯ ಸಂಕಷ್ಟಗಳು ಎದುರಾಗಿದ್ದವು. ಅದೆಷ್ಟೋ ಕುಟುಂಬಗಳು ಹೇಳ ಹೆಸರಿಲ್ಲದಂತೆ ಮರೆಯಾದವು. ಆದ್ದರಿಂದ ಘತ್ತರಗಿ ಭಾಗಮ್ಮದೇವಿಗೆ ಉರುಳುಸೇವೆಯ ಹರಕೆ ಹೊತ್ತುಕೊಂಡಿದ್ದೆ. ಈಗ ಕರೋನಾ ಮುಕ್ತವಾದ ಕಾರಣ ನಿತ್ಯ ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ 6 ಗಂಟೆಯ ವರೆಗೆ ಉರುಳು ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಪ್ರತಿನಿತ್ಯ ಸರಾಸರಿ 5 ರಿಂದ 7 ಕಿ.ಮೀ ದೂರದ ವರೆಗೆ ಉರುಳು ಸೇವೆ ನಡೆಯುತ್ತಿದೆ. 30 ದಿನಗಳಲ್ಲಿ ಘತರಗಾ ದೇವಸ್ಥಾನಕ್ಕೆ ತಲುಪುವ ನಿರೀಕ್ಷೆಯನ್ನು ಅವರು ಇರಿಸಿಕೊಂಡಿದ್ದಾರೆ. ಜತೆಯಲ್ಲಿ 15 ಜನರಿದ್ದು, ಶಶಕಲಾ ಅವರು ಉರುಳು ಸೇವೆ ಮಾಡುವಾಗ, ಈ ತಂಡ ಭಜನೆ, ಕೀರ್ತನೆಗಳು ನಡೆಸುತ್ತಾ ಅವರಿಗೆ ನೆರವಾಗುತ್ತ ಸಾಗುತ್ತಿದ್ದಾರೆ.

ಸಾಗುವ ರಸ್ತೆಗಳಲ್ಲಿ ಆಯಾ ಭಾಗದ ಜನರು, ರಾಜಕೀಯ ಮುಖಂಡರು ಭೇಟಿ ನೀಡಿ ಉರುಳು ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ವಸತಿ, ಪ್ರಸಾದ ವ್ಯವಸ್ಥೆಗಳು ಕೂಡ ಕಲ್ಪಿಸುತ್ತಿದ್ದಾರೆ ಎಂದು ತಂಡದಲ್ಲಿರುವ ವಿಶ್ವನಾಥ್‌ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ