Uttara Kannada News: ಪಾಕಿಸ್ತಾನ್ ಕಾಂಟ್ರಾಕ್ಟ್ ಹೆಸರಲ್ಲಿ ಅಂಕೋಲಾದ ಪೋಸ್ಟರ್ ವೈರಲ್
Jun 05, 2023 07:22 PM IST
ಅಂಕೋಲಾದ ಅಂಗಡಿಯ ಗೋಡೆ ಮೇಲೆ ಅಂಟಿಸಿದ್ದ ಮೂರು ಭಿತ್ತಿಪತ್ರಗಳು
Uttara Kannada News: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂಗಡಿಯ ಗೋಡೆ ಮೇಲೆ ಅಂಟಿಸಿದ್ದ ಮೂರು ಪೋಸ್ಟರ್‌ಗಳು ರಾಜ್ಯದ ಗಮನಸೆಳೆದಿವೆ. ಇದಕ್ಕೆ ಕಾರಣ ಪಾಕಿಸ್ತಾನ್ ಕಾಂಟ್ರಾಕ್ಟ್ ಎಂಬ ಶೀರ್ಷಿಕೆ. ಇದನ್ನು ಯಾರು ಅಂಟಿಸಿದರು? ಯಾಕೆ ಅಂಟಿಸಿದರು ಎಂಬಿತ್ಯಾದಿ ಸಂದೇಹ ಇದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಸಣ್ಣಮಟ್ಟಿನ ಚರ್ಚೆ ನಡೆದಿದೆ. ಇದರ ವಿವರ ಇಲ್ಲಿದೆ.
ಅಂಕೋಲಾ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆ (Uttara Kannada)ಯ ಪುಟ್ಟ ಪಟ್ಟಣ ಅಂಕೋಲಾ (Ankola)ದ ಅಂಗಡಿಯೊಂದರ ಗೋಡೆ ಮೇಲೆ ಅಂಟಿಸಿದ್ದ ಪೋಸ್ಟರ್‌ಗಳ ಫೋಟೋ ವೈರಲ್ ಆಗಿದೆ. ಕಾರಣ ಅದರ ಮೇಲೆ ಇದ್ದ ಪಾಕಿಸ್ತಾನ್ ಕಾಂಟ್ರಾಕ್ಟ್ (Pakistan Contract) ಎಂಬ ಬರೆಹ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಂಗಡಿಯ ಗೋಡೆ ಮೇಲೆ ಮೂರು ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಮಾಡಿರಬಹುದು ಎಂದು ನಿರ್ಲಕ್ಷಿಸಬಹುದಾದರೂ, ಪಾಕಿಸ್ತಾನ್ ಕಾಂಟ್ರಾಕ್ಟ್ ಎಂಬ ಬರೆಹ ಅನುಮಾನಕ್ಕೆ ಕಾರಣವಾಗಿದೆ.
ಏನಿದು ಪೋಸ್ಟರ್ ಕಹಾನಿ
ಸಂಗ್ಲಾನಿ ವೆಲ್ಫೇರ್ ಟ್ರಸ್ಟ್ ಎಂಬ ಹೆಸರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಬಜಾರ್ ಎಂಬಲ್ಲಿನ ನಾಲ್ಕು ರಸ್ತೆ ಕೂಡುವ ಚಿಕನ್ ಅಂಗಡಿಯೊಂದರ ಪಕ್ಕ ಇರುವ ಅಂಗಡಿಯೊಂದರ ಗೋಡೆಗೆ ಮೂರು ಪೋಸ್ಟರುಗಳು ಅಂಟಿಸಲ್ಪಟ್ಟಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಭಾನುವಾರ ಬೆಳಗಿನ ಜಾವ ಹಲವರು ಇದನ್ನು ಗಮನಿಸಿದ್ದು, ಬಿಳಿ ಹಾಳೆ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಬರೆದ ಸಾಲುಗಳಿವೆ.
ಸಾಂಗ್ಲಾನಿ ವೆಲ್ ಫೇರ್ ಟ್ರಸ್ಟ್ ಪಾಕಿಸ್ತಾನಿ ಕಾಂಟ್ರಾಕ್ಟ್ ಎಂದು ತಲೆಬರೆಹ ಇರುವ ಕಾರಣದಿಂದಾಗಿ ಈ ಪೋಸ್ಟರ್ ಅನುಮಾನಕ್ಕೆ ಕಾರಣವಾಗಿದೆ. ಇದನ್ನು ಯಾರೋ ಕಿಡಿಗೇಡಿಗಳು ಆತಂಕ ಸೃಷ್ಟಿಸಲು ಮಾಡಿರುವರೇ ಅಥವಾ ಬೇರಾವುದೇ ಉದ್ದೇಶಗಳಿವೆಯೇ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಪೋಸ್ಟರ್‌ನಲ್ಲಿದ್ದ ಮಾಹಿತಿ ಏನು
ಸ್ಥಳೀಯ ಹೈಸ್ಕೂಲು, ಫಾರೆಸ್ಟ್, ಕಾಲೇಜುಗಳ ಹೆಸರು ಇದರಲ್ಲಿದ್ದು, 20 ವರ್ಷದಲ್ಲಿ ಎಲ್ಲ ಬೆಟ್ಟ ನೆಲಸಮ ಆಗುತ್ತದೆ. ಎಲ್ಲರಿಗೂ ಜಾಗ ಸಿಗುತ್ತದೆ. ಹೈಸ್ಕೂಲು ಹೋಗುತ್ತದೆ ಎಂಬರ್ಥದ ಕನ್ನಡದಲ್ಲಿ ಬರೆದ ಬರೆಹ ಇದರಲ್ಲಿದೆ.
ಇನ್ನೆರಡು ಪೋಸ್ಟರ್ ಗಳು ಇಂಗ್ಲೀಷ್ ನಲ್ಲಿದ್ದು, ಅಸ್ಪಷ್ಟವಿದೆ. ಮಕ್ಕಳ ಫೊಟೋ, ಇಲೆಕ್ಟ್ರಾನಿಕ್ ಫೊಟೋ, ಸಿವಿಲ್ ಫೊಟೋ ಎಂದೆಲ್ಲಾ ಬರೆಯಲಾಗಿದ್ದ ಒಂದು ಪೋಸ್ಟರ್ ಇದ್ದರೆ, ಸಂಗ್ಲಾನಿ ವೆಲ್ಫೇರ್ ಟ್ರಸ್ಟ್ ಎಂಬ ಹೆಸರಲ್ಲಿ ವಿಶ್ವಸುಂದರಿ ಫಿಲ್ಮ್ ಎಂದು ಬರೆದು, ವರ್ಲ್ಡ್ ಎಕ್ಸ್ ಪೋ, ಡಾಲರ್ ಎಂಬಿತ್ಯಾದಿ ಶಬ್ದಗಳು ಇಲ್ಲಿವೆ. ಉರ್ದು ವೆಲ್ಫೇರ್ ಟ್ರಸ್ಟ್, ಕೆನರಾ ವೆಲ್ಫೇರ್ ಟ್ರಸ್ಟ್ ಗಳ ಹೆಸರು ಇದರಲ್ಲಿದ್ದು, 100 ಲಕ್ಷ ಬಿಲಿಯನ್ ಡಾಲರ್ ಎಂದೆಲ್ಲಾ ವಿಚಿತ್ರವಾಗಿ ಬರೆಯಲಾಗಿದೆ.
ಸದ್ಯಕ್ಕೆ ಅಪರಿಚಿತರು ಬರೆದ ಈ ಪೋಸ್ಟರ್ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಬಿಳಿ ಹಾಳೆ ಮೇಲೆ ಬರೆದದ್ದಾದರೂ ಏನು ಎಂಬುದು ಇನ್ನೂ ಯಾರಿಗೂ ಅರ್ಥವಾದಂತಿಲ್ಲ. ಆದರೆ ಪಾಕಿಸ್ತಾನ್ ಕಾಂಟ್ರಾಕ್ಟ್ ಎಂದು ಬರೆದದ್ದೇ ಸಮಸ್ಯೆಗೆ ಕಾರಣ.
ತಲೆಬುಡ ಅರ್ಥವಾಗದ ವಿಚಿತ್ರ ಬರೆಹ
ಹೈಸ್ಕೂಲ್ ಗರ್ಲ್ಸ್ ಆಂಡ್ ಬಾಯ್ಸ್, ಬಿಲಿಯನ್ ಡಾಲರ್, ಇಂಡಿಯಾ ಫಾರೆಸ್ಟ್ ಮಾರಿದ್ದಾರೆ, 20 ವರ್ಷದಲ್ಲಿ ಎಲ್ಲವೂ ನೆಲಸಮ, ಪಿಎಂ ಹೈಸ್ಕೂಲ್ ಗೆ ಹೋಗಿ, ವೇಸ್ಟೇಜ್ ಫೈನಾನ್ಸ್ ಸಿಗುತ್ತದೆ, ಕೆಎಲ್ ಇ ಕಾಲೇಜು, ಉರ್ದು ವೆಲ್ಫೇರ್ ಟ್ರಸ್ಟ್ ನಿಂದ ಹಣ ಕಮಾಯಿಸಿ, ಜೈಹಿಂದ್ ಹೈಸ್ಕೂಲ್ ಹೀಗೆಲ್ಲಾ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಇದೆ. ಇದು ಯಾರಾದರೂ ಮಾನಸಿಕ ಅಸ್ವಸ್ಥ ಬರೆದದ್ದಾ, ಪಾಕಿಸ್ತಾನ ಕಾಂಟ್ಯಾಕ್ಟಾ ಅಥವಾ ಕಾಂಟ್ರಾಕ್ಟಾ, ಏನಿದರ ನಿಗೂಢತೆ ಎಂಬುದು ರಜಾದಿನವಾದ ಭಾನುವಾರ ಸ್ಥಳೀಯರ ತಲೆಯಲ್ಲಿ ಓಡುತ್ತಿರುವ ವಿಚಾರ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)
ವಿಭಾಗ