logo
ಕನ್ನಡ ಸುದ್ದಿ  /  ಕರ್ನಾಟಕ  /  Yellapura News: ಮೂರು ವರ್ಷಗಳ ಹಿಂದೆ ಕೊಚ್ಚಿಹೋಗಿತ್ತು ಗುಳ್ಳಾಪುರ–ಹೆಗ್ಗಾರು ಸೇತುವೆ: ಇಂದಿಗೂ ನದಿ ದಾಟಲು ಪರದಾಟ

Yellapura News: ಮೂರು ವರ್ಷಗಳ ಹಿಂದೆ ಕೊಚ್ಚಿಹೋಗಿತ್ತು ಗುಳ್ಳಾಪುರ–ಹೆಗ್ಗಾರು ಸೇತುವೆ: ಇಂದಿಗೂ ನದಿ ದಾಟಲು ಪರದಾಟ

HT Kannada Desk HT Kannada

Aug 27, 2023 03:56 PM IST

google News

ಯಲ್ಲಾಪುರ-ಹೆಗ್ಗಾರು ಸೇತುವೆ ದಾಟಲು ಜನರ ಪರದಾಟ

    • ಮಾಜಿ ಮಂತ್ರಿ, ಈಗ ಬಿಜೆಪಿಯಲ್ಲಿರುವ ಶಿವರಾಮ ಹೆಬ್ಬಾರ ಮತ್ತೆ ಕಾಂಗ್ರೆಸ್ ಸೇರ್ತಾರಾ, ಬಿಜೆಪಿಯಲ್ಲೇ ಉಳೀತಾರಾ ಎಂಬ ಚರ್ಚೆಗಳು ನಡೆದಿರುವಂತೆಯೇ ಅವರ ಸ್ವಂತ ಕ್ಷೇತ್ರದಲ್ಲಿ ನದಿ ದಾಟಲು ಇಂದಿಗೂ ಪರದಾಡುವ ಜನರು ಸಿಗುತ್ತಾರೆ.
ಯಲ್ಲಾಪುರ-ಹೆಗ್ಗಾರು ಸೇತುವೆ ದಾಟಲು ಜನರ ಪರದಾಟ
ಯಲ್ಲಾಪುರ-ಹೆಗ್ಗಾರು ಸೇತುವೆ ದಾಟಲು ಜನರ ಪರದಾಟ

ಕಾರವಾರ: ಕರ್ನಾಟಕ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ವಿಚಾರಕ್ಕೆ ಬಂದಾಗ ಮಾತ್ರ ಹಿಂದುಳಿಯುತ್ತದೆ ಎಂಬ ಮಾತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಮೂರು ವರ್ಷಗಳ ಹಿಂದೆ ಕೊಚ್ಚಿಹೋದ ಗುಳ್ಳಾಪುರ-ಹೆಗ್ಗಾರು ಸೇತುವೆ ಕಣ್ಣಿಗೆ ಕಾಣಿಸುತ್ತದೆ. ಮಾಜಿ ಮಂತ್ರಿ, ಈಗ ಬಿಜೆಪಿಯಲ್ಲಿರುವ ಶಿವರಾಮ ಹೆಬ್ಬಾರ ಮತ್ತೆ ಕಾಂಗ್ರೆಸ್ ಸೇರ್ತಾರಾ, ಬಿಜೆಪಿಯಲ್ಲೇ ಉಳೀತಾರಾ ಎಂಬ ಚರ್ಚೆಗಳು ನಡೆದಿರುವಂತೆಯೇ ಅವರ ಸ್ವಂತ ಕ್ಷೇತ್ರದಲ್ಲಿ ನದಿ ದಾಟಲು ಇಂದಿಗೂ ಪರದಾಡುವ ಜನರು ಸಿಗುತ್ತಾರೆ.

ಕಳೆದ 3 ವರ್ಷಗಳ ಹಿಂದೆ ಅಪ್ಪಳಿಸಿದ ನೆರೆಗೆ ಕೊಚ್ಚಿಹೋಗಿದ್ದ ಸೇತುವೆ ಇದು. ಮುರಿದುಬಿದ್ದು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳೇ ಭೇಟಿ ನೀಡಿ ತೆರಳಿದ್ದರೂ ಇದುವರೆಗೂ ಸೇತುವೆ ಮರುನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಗ್ರಾಮಸ್ಥರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಸೇತುವೆಯಲ್ಲೇ ಜೀವ ಕೈಯಲ್ಲಿ ಹಿಡಿದು ಪ್ರತಿನಿತ್ಯ ಓಡಾಟ ನಡೆಸುವಂತಾಗಿದೆ.

ಇದ್ದ ಸೇತುವೆ ಕೊಚ್ಚಿಹೋಗಿ 3 ವರ್ಷ ಕಳೆದರೂ ಇದುವರೆಗೂ ನೂತನ ಸೇತುವೆ ನಿರ್ಮಾಣವಾಗದ ಹಿನ್ನಲೆಯಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ದುಃಸ್ಥಿತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹೆಗ್ಗಾರು, ಕಲ್ಲೇಶ್ವರ ಹಾಗೂ ಹಳವಳ್ಳಿ ಗ್ರಾಮಸ್ಥರದ್ದಾಗಿದೆ. ಯಲ್ಲಾಪುರ ತಾಲೂಕಿನ ಗುಳ್ಳಾಪುರದಿಂದ ಹೆಗ್ಗಾರು ಗ್ರಾಮಕ್ಕೆ ಸಂಪರ್ಕಿಸಲು ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕಳೆದ 2020ರಲ್ಲಿ ಸಂಭವಿಸಿದ್ದ ನೆರೆಯಲ್ಲಿ ಕೊಚ್ಚಿಹೋಗಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗಿನ ಸಿಎಂ ಸಿದ್ಧರಾಮಯ್ಯ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನ ಪರಿಶೀಲಿಸಿದ್ದು ಶೀಘ್ರ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಮೂರು ವರ್ಷ ಕಳೆದರೂ ಸೇತುವೆ ನಿರ್ಮಾಣವಾಗಿಲ್ಲ. ಇದೀಗ ತಾತ್ಕಾಲಿಕ ಸೇತುವೆಯಲ್ಲಿ ಸದ್ಯ ಜನರು ಓಡಾಟ ನಡೆಸುತ್ತಿದ್ದಾರೆ. ಅದೂ ಸಹ ಮಳೆ ಹೆಚ್ಚಾದ ಸಂದರ್ಭದಲ್ಲಿ ನೀರಲ್ಲಿ ಮುಳುಗುವುದರಿಂದ ಓಡಾಟಕ್ಕೆ ಅಪಾಯಕಾರಿಯಾಗಲಿದೆ. ಆದಷ್ಟು ಶೀಘ್ರದಲ್ಲಿ ಶಾಶ್ವತ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ನಮ್ಮಲ್ಲಿ ಸ್ಥಳೀಯವಾಗಿ ಸಹಕಾರಿ ಸಂಘಗಳ ಮೂಲಕ ರೇಷನ್ ವಿತರಣೆ ಮಾಡಬಹುದಾದರೂ ಕೂಡ ದೋಣಿ ಮೂಲಕ ರೇಷನ್ ಸಾಗಾಟ ಮಾಡಬಹುದು. ಆದರೆ ಇದು ಸಾಧ್ಯವಾಗದಂತಾಗಿದೆ. ಆಸ್ಪತ್ರೆಗಳಿಗೂ ತೆರಳುವ ಸ್ಥಿತಿ ಇಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು ಹಾಗೂ ಸಚಿವರಿಗೆ ಮನವಿ ಮಾಡಿದ್ದೇವೆ. ಆದ್ದರಿಂದ ಕೂಡಲೇ ಈ ಬಗ್ಗೆ ಅಗತ್ಯ ಕ್ರಮ‌ಕೈಗೊಳ್ಳಬೇಕು ಎಂದು ಹೆಗ್ಗಾರ್ ಗ್ರಾಮದ ಜಯಪ್ರಕಾಶ್ ಗಾಂವಕರ್ ಮನವಿ ಮಾಡಿದ್ದಾರೆ.

ಶಿವರಾಮ ಹೆಬ್ಬಾರರ ಕ್ಷೇತ್ರವಿದು, ಭರವಸೆ ಇನ್ನೂ ಈಡೇರಿಲ್ಲ

ಸೇತುವೆ ಪ್ರದೇಶ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ರ ಕ್ಷೇತ್ರವಾಗಿದ್ದು ಅವರ ಸ್ವಗ್ರಾಮವೂ ಸಹ ಹತ್ತಿರದಲ್ಲೇ ಇದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸೇತುವೆಯನ್ನು ಮರುನಿರ್ಮಿಸಿಕೊಡುವ ಭರವಸೆ ನೀಡಿದ್ದರಾದರೂ ಇದುವರೆಗೂ ಭರವಸೆಯಾಗಿಯೇ ಉಳಿದಿದೆ. ಗಂಗಾವಳಿ ನದಿಯ ಇನ್ನೊಂದು ಅಂಚಿನಲ್ಲಿರುವ ಸುಮಾರು ಹತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದ್ದ ಈ ಸೇತುವೆ ಮುರಿದುಬಿದ್ದ ಹಿನ್ನಲೆ ಈ ಭಾಗದ ಗ್ರಾಮಗಳ ಜನರು, ವಿದ್ಯಾರ್ಥಿಗಳು ಪ್ರತಿನಿತ್ಯ ಓಡಾಡಲು ಪರದಾಡುವಂತಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಅನಾರೋಗ್ಯ ಪೀಡಿತರನ್ನ ಆಸ್ಪತ್ರೆಗೆ ಕರೆದೊಯ್ಯುವುದು ಹರಸಾಹಸವೇ ಆಗಿದ್ದು ಜೀವ ಕೈಯಲ್ಲಿ ಹಿಡಿದು ನದಿಯ ಮಾರ್ಗದಲ್ಲಿ ಓಡಾಟ ನಡೆಸಬೇಕಿದೆ. ಹೀಗಾಗಿ ಈ ಭಾಗದ ಗ್ರಾಮಗಳಿಗೆ ಸೇತುವೆ ತೀರಾ ಅಗತ್ಯವಿದ್ದು ಸರ್ಕಾರ ಒಂದು ವರ್ಷದೊಳಗೆ ನೂತನ ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ