logo
ಕನ್ನಡ ಸುದ್ದಿ  /  ಕರ್ನಾಟಕ  /  Kumta News: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಕೊಲೆಗೆ 10000 ರೂ ಸುಪಾರಿ ಕೊಟ್ಟ ಪತ್ನಿ, 4 ಆರೋಪಿಗಳ ಬಂಧನ

Kumta News: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಕೊಲೆಗೆ 10000 ರೂ ಸುಪಾರಿ ಕೊಟ್ಟ ಪತ್ನಿ, 4 ಆರೋಪಿಗಳ ಬಂಧನ

HT Kannada Desk HT Kannada

Oct 05, 2023 09:51 PM IST

google News

ಕೊಲೆ ಪ್ರಕರಣ ಬೇಧಿಸಿದ ಪೊಲೀಸರ ತಂಡ

  • ಕುಮಟಾ ತಾಲೂಕಿನ ದೇವಿಮನೆ ಘಟ್ಟದ ಮಾಸ್ತಿಮನೆ ಅರಣ್ಯ ಪ್ರದೇಶದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕೊಲೆಗೆ ಪತ್ನಿಯೇ 10,000 ರೂಪಾಯಿ ಸುಪಾರಿ ಕೊಟ್ಟ ಅಂಶವೂ ಬಹಿರಂಗವಾಗಿದೆ.

ಕೊಲೆ ಪ್ರಕರಣ ಬೇಧಿಸಿದ ಪೊಲೀಸರ ತಂಡ
ಕೊಲೆ ಪ್ರಕರಣ ಬೇಧಿಸಿದ ಪೊಲೀಸರ ತಂಡ

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕೆ ಪತಿ ಸಮಸ್ಯೆ ಆಗುತ್ತಿದ್ದಾನೆ ಎಂದು ಪತ್ನಿಯೇ ಪತಿಯ ಕೊಲೆಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ ಪ್ರಕರಣವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸರು ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ಕುರಿಗಾಹಿ ಬಶೀರಸಾಬ್ ರಾಜಾಸಾಬ್ ಸಂಕನೂರು (32) ಹತ್ಯೆಯಾದ ವ್ಯಕ್ತಿ. ಗಜೇಂದ್ರಗಡ ತಾಲೂಕಿನ ಮುಸಿಗೇರಿ ಗ್ರಾಮದ ಕುರಿಗಾಹಿ ಪರಸುರಾಮ ಮಾದರ (23), ಚಾಲಕ ಆದೇಶ ಕುಂಬಾರ (35), ಬಾದಾಮಿ ತಾಲೂಕಿನ ತೆಮಿನಾಳ ಗ್ರಾಮದ ಕುರಿಗಾಹಿ ರವಿ ಮಾದರ (22) ಹಾಗೂ ಬಶೀರ್ ಸಾಬ್ ಅವರ ಪತ್ನಿ ರಾಜಮಾ ಬಶೀರ್ ಸಾಬ್ (27) ಬಂಧಿತ ಆರೋಪಿಗಳು.

ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಘಟ್ಟದ ಮಾಸ್ತಿಮನೆ ಸಮೀಪದ ಕಾಡಿನಲ್ಲಿ ಇತ್ತೀಚೆಗೆ ಅಪರಿಚಿತ ಪುರುಷನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಗುರುತುಗಳು ಕಂಡು ಬಂದಿದ್ದವು. ಇದು ಕೊಲೆ ಎಂದು ನಿಖರವಾಗಿ ಗುರುತಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಕೊಲೆಗೆ ಅನೈತಿಕ ಸಂಬಂಧವೇ ಕಾರಣ

ಕೊಲೆಯಾದ ಬಶೀರಸಾಬ್ ಪತ್ನಿ ರಾಜಮಾಸಾಬ್‌ ನಾಲ್ಕು ವರ್ಷ ಚಿಕ್ಕವನಾದ ಮತ್ತು ಪರಸುರಾಮ ಮಾದರ ಜತೆ ಅಕ್ರಮ ಸಂಬಂಧವಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನ ತನ್ನ ಪ್ರಿಯಕರ ಪರಶುರಾಮ್, ಆತನ ಸ್ನೇಹಿತರಾದ ರವಿ ಹಾಗೂ ಆದೇಶ ಕುಂಬಾರ ಎನ್ನುವವನ ಜೊತೆ ಸೇರಿ ಕೊಲೆ ಮಾಡಿಸಿರುವ ವಿಷಯ ಬಯಲಾಗಿದೆ.

10 ಸಾವಿರ ರೂಪಾಯಿ ನೀಡಿ ಸುಪಾರಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಪತಿ ಬಶೀರಸಾಬ್ ಕೊಲೆಗೆ ನಿರ್ಧರಿಸಿದ ರಜಮಾ ತನ್ನ ಪ್ರಿಯಕರ ಪರಸುರಾಮ ಮಾದರಗೆ 10 ಸಾವಿರ ರೂ. ನೀಡಿದ್ದಳು. ಪರಸುರಾಮ ಮಂಗಳೂರಿನಲ್ಲಿರುವ ತನ್ನ ಗೆಳೆಯ ಆದೇಶ ಕುಂಬಾರನಿಗೆ ವಿಷಯ ತಿಳಿಸಿ ಆತನ ಸಲಹೆಯಂತೆ ಸೆ.29ರಂದು ಪರಶುರಾಮ, ರವಿ ಮಾದರ ‘ಮಂಗಳೂರಿಗೆ ಹೋಗಿ ಸುತ್ತಾಡಿಕೊಂಡು ಬರೋಣ’ ಎಂದು ಪುಸಲಾಯಿಸಿ ಬಶೀರ್ ಸಾಬನನ್ನು ಸಾರಿಗೆ ಇಲಾಖೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದರು.

ಸಾರಾಯಿ ಕುಡಿಸಿ ಕೊಲೆ ಮಾಡಿದರು

ಮಂಗಳೂರು ಪ್ರವಾಸ ಮುಗಿಸಿ ವಾಪಾಸ್ ಬರುವಾಗ ಶಿರಸಿ ದೇವಿಮನೆ ಘಟ್ಟದಲ್ಲಿ ಬಸ್ಸಿನಿಂದ ಇಳಿದಿದ್ದರು. ದೇವಸ್ಥಾನದ ಹಿಂದೆ ಕುಡಿಯಲು ಕುಳಿತಿದ್ದ ವೇಳೆ ಬಶೀರಸಾಬಗೆ ಹೆಚ್ಚು ಮದ್ಯ ಕುಡಿಸಿ, ನಂತರ ಪರಶುರಾಮ್, ರವಿ ಹಾಗೂ ಆದೇಶ ಮೂವರೂ ಸೇರಿ ಬಶೀರಸಾಬ್ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ದಂಪತಿಗೆ ಇಬ್ಬರು ಮಕ್ಕಳು

ಕುರಿ‌ಕಾಯುವ ಕೆಲಸ ಮಾಡಿಕೊಂಡಿದ್ದ ಬಶೀರಸಾಬ್ ಹಾಗೂ ಆರೋಪಿ ರಾಜಮಾಗೆ ಇಬ್ಬರು ಮಕ್ಕಳಿದ್ದರು. ಬಾದಾಮಿ ತಾಲೂಕಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಕುರಿ ಮಾರಾಟ ಮಾಡಲು ತೆರಳಿದ್ದ ಸಂದರ್ಭದಲ್ಲಿ ಬಶೀರಸಾಬಗೆ ಪರಶುರಾಮನ ಪರಿಚಯ ಆಗಿತ್ತು. ಪರಶುರಾಮ್ ಬಶೀರಸಾಬ್ ಮನೆಗೆ ಬಂದಾಗ ಆತನ ಹೆಂಡತಿ ರಾಜಮಾಳನ್ನ ಪರಿಚಯ ಮಾಡಿಕೊಂಡಿದ್ದ. ಪರಿಚಯ ನಂತರ ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಸೃಷ್ಟಿಯಾಗಿತ್ತು. ಈ ವಿಚಾರವಾಗಿ‌ ಬಶೀರ್ ಸಾಬ್ ಪತ್ನಿ ರಾಜಮಾ ಜೊತೆ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಪ್ರಕರಣ ಬೇಧಿಸಿದ ಪೊಲೀಸರು

ಪಿಎಸ್‌ಐಗಳಾದ ನವೀನ ನಾಯ್ಕ ಹಾಗೂ ಇ.ಸಿ. ಸಂಪತ್ ನೇತೃತ್ವದಲ್ಲಿ ಎರಡು ತಂಡ ರಚಿಸಿ ತನಿಖೆ ಕೈಕೊಳ್ಳಲಾಗಿತ್ತು. ಮೃತದೇಹದ ಗುರುತು ಪತ್ತೆ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ಮೃತ ಬಶೀರಸಾಬ್ ಗ್ರಾಮದಲ್ಲಿ ವಿಚಾರಿಸಿದಾಗ ಆತನಿಗೂ ಆತನ ಪತ್ನಿಗೂ ಆಗಾಗ ಜಗಳ ಆಗುತ್ತಿದ್ದರ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜಮಾ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೇಧಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಬಹುಮಾನ ಘೋಷಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ