ಕಾರವಾರ ಸಮೀಪ ಮಾಜಾಳಿಯಲ್ಲಿ ಸೇನಾ ಆಯ್ಕೆಪೂರ್ವ ತರಬೇತಿ ಶಾಲೆ, ಯಾರಿಗೆ ಅವಕಾಶ? ಇಲ್ಲಿ ಏನೇನಿದೆ?
Jul 15, 2024 08:42 PM IST
ಕಾರವಾರ ಸಮೀಪದ ಮಾಜಾಳಿಯಲ್ಲಿ ನಡೆಯುತ್ತಿರುವ ಸೇನಾ ಆಯ್ಕೆಪೂರ್ವ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳು.
- ಸರ್ಕಾರವೇ ನಡೆಸುತ್ತಿರುವ ಈ ಸೇನಾ ಆಯ್ಕೆಪೂರ್ವ ತರಬೇತಿ ಶಾಲೆಯು ಈಗಾಗಲೇ ಅನೇಕ ಯುವಕರನ್ನು ಸೇನೆಗೆ ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸೇನಕಾರವಾರ: ಸೇನಾಪಡೆಗಳನ್ನು ಸೇರಿ ದೇಶಸೇವೆ ಮಾಡಬೇಕೆನ್ನುವುದು ಸಾವಿರಾರು ಯುವಕರ ಕನಸು ಹಾಗೂ ಗುರಿ. ಕಠಿಣವಾದ ಸೇನಾ ಆಯ್ಕೆ ಪ್ರಕ್ರಿಯೆಗಳು, ತನ್ನಲ್ಲಿ ಇರಬೇಕಾದ ಅರ್ಹತೆ, ತಾನು ಪಡೆಯಬೇಕಾದ ತರಬೇತಿ ಇವೆಲ್ಲವುಗಳ ಮಾಹಿತಿಯ ಕೊರತೆಯಿಂದ , ನೇರವಾಗಿ ಸೇನಾ ನೇಮಕಾತಿ ರ್‍ಯಾಲಿಗಳಲ್ಲಿ ಭಾಗವಹಿಸಿ, ಆಯ್ಕೆಯಾಗುವಲ್ಲಿ ವಿಫಲರಾದವರ ಸಂಖ್ಯೆ ಅತ್ಯಧಿಕ.
ಯುವಜನತೆಯ ಈ ಸಮಸ್ಯೆಗೆ ಪರಿಹಾರವೆಂಬಂತೆ, ರಾಜ್ಯದ ಯುವಕರ ದೇಶಸೇವೆಯ ಕನಸನ್ನು ನನಸು ಮಾಡುವಲ್ಲಿ, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಸರಕಾರದ ವತಿಯಿಂದಲೇ ಆರಂಭಿಸಲಾಗಿರುವ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ಉಚಿತ ತರಬೇತಿ ಶಾಲೆ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಅನೇಕ ಯುವಕರನ್ನು ಸೇನೆಗೆ ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದೆ.ಉತ್ತರ ಕನ್ನಡ ಜಿಲ್ಲೆಯ ಗೋವಾ ಬಾರ್ಡರ್‌ನ ಮಾಜಾಳಿ ಎಂಬಲ್ಲಿ ವೀರ್ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಇದೆ.
2022-23 ನೇ ಸಾಲಿನಲ್ಲಿ 2 ಬ್ಯಾಚ್‌ಗಳಲ್ಲಿ ತರಬೇತಿ ನೀಡಿದ 147 ಅಭ್ಯರ್ಥಿಗಳಲ್ಲಿ 31 ಅಭ್ಯರ್ಥಿಗಳು ಅಗ್ನಿ ವೀರ್ ಹುದ್ದೆಗೆ ನೇಮಕಗೊಂಡಿದ್ದು, ಇದರಲ್ಲಿ 6 ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. 2023-24 ನೇ ಸಾಲಿನಲ್ಲಿ 84 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 27 ಅಭ್ಯರ್ಥಿಗಳು ಅಗ್ನಿ ವೀರ್ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ದೈಹಿಕ ಸಹಿಷ್ಣುತಾ ಪರೀಕ್ಷೆಯ ನಿರೀಕ್ಷೆಯಲ್ಲಿರುತ್ತಾರೆ. ಇದರಲ್ಲಿ 8 ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿರುತ್ತಾರೆ. ಈ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಭಾರತೀಯ ಸೇನಾ ಪಡೆ ಮಾತ್ರವಲ್ಲದೇ, ಅಸ್ಸಾಂರೈಫಲ್ಸ್, ಗಡಿ ಭದ್ರತಾ ಪಡೆ ಬಿಎಸ್ ಎಫ್, ,ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಆರ್‌ಪಿಎಫ್, ಸಶಸ್ತ್ರ ಸೀಮಾ ಬಲ್ ಎಸ್.ಎಸ್.ಬಿ, ಇಂಡೋಟಿಬೆಟ್ ಬಾರ್ಡರ್ ಪೊಲೀಸ್ ಐಟಿಬಿಪಿ, ಕೇಂದ್ರಕೈಗಾರಿಕಾ ಭದ್ರತಾ ಪಡೆ ಸಿಐಎಸ್ ಎಫ್, ರಾಜ್ಯ ಪೊಲೀಸ್ ಸೇವೆಗಳು ಸೇರಿದಂತೆ ಇತರೆ ಎಲ್ಲಾ ಯೂನಿಫಾರ್ಮ್ ಸೇವೆಗಳಿಗೆ ಸೇರ್ಪಡೆಯಾಗಲು ಅಗತ್ಯವಿರುವ ಸಮಗ್ರ ತರಬೇತಿಯನ್ನು ನೀಡಲಾಗುವುದು.
ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಆರಂಭಿಸಲಾದ ಶಾಲೆ
ರಾಜ್ಯ ಹಿಂದುಳಿಗ ವರ್ಗಗಳ ಇಲಾಖೆಯ ವತಿಯಿಂದಆರಂಭಿಸಲಾಗಿರುವ ಈ ತರಬೇತಿ ಶಾಲೆಯಲ್ಲಿ, ಭಾರತೀಯ ಸೇನೆ/ಇತರೆ ಯುನಿಫಾರ್ಮ ಸೇವೆಗಳಿಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನು ಉಚಿತ ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಸೇನೆ/ಇತರೆ ಸೇವೆಗಳಿಗೆ ಆಯ್ಕೆಯಾಗಲು ಪ್ರೋತ್ಸಾಹಿಸಲಾಗುತ್ತಿದೆ. ಇಲ್ಲಿನ ತರಬೇತಿ ಅವಧಿ 4 ತಿಂಗಳಾಗಿದ್ದು, ಪ್ರತೀ ಬ್ಯಾಚ್ ನಲ್ಲಿ 100 ಜನರಂತೆ, ವರ್ಷದಲ್ಲಿ 3 ಬ್ಯಾಚ್‌ಗಳಿಗೆ ತರಬೇತಿ ನೀಡಲಾಗುತ್ತದೆ.
ಶಾಲೆಗೆ ಸೇರಲು ಆಯ್ಕೆಯ ಮಾನದಂಡವೇನು
ಈ ಸೇನಾ ತರಬೇತಿ ಶಾಲೆಗೆ ಸೇರ್ಪಡೆಗೊಳ್ಳಲು ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಕರ್ನಾಟಕ ರಾಜ್ಯ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ) ಗಳ ಅಭ್ಯರ್ಥಿಯಾಗಿರಬೇಕು. ಅಭ್ಯರ್ಥಿಯು 10ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ್ಠ 33 ಅಂಕಗಳನ್ನು ಪಡೆದಿರಬೇಕು. ಮತ್ತು ಸರಾಸರಿ ಶೇಕಡ 45 ಅಂಕಗಳನ್ನು ಪಡೆದಿರಬೇಕು. 17 ರಿಂದ 20 ವರ್ಷ ವಯೋಮಿತಿಯೊಳಗಿರಬೇಕು. ಒಬ್ಬ ಅಭ್ಯರ್ಥಿಯು ಒಂದು ಬಾರಿ ಮಾತ್ರ ಈ ತರಬೇತಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅಭ್ಯರ್ಥಿಗಳಿಗೆ ಏನೆಲ್ಲ ಸೌಲಭ್ಯವಿದೆ
ಅಭ್ಯರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಆಟದ ಮೈದಾನವನ್ನು ಕಲ್ಪಿಸಿ, ಉಚಿತ ಊಟ ಹಾಗೂ ವಸತಿ ಸೌಲಭ್ಯ, ಒಂದುಜೊತೆ ಟ್ರ್ಯಾಕ್ ಸೂಟ್, ದೈಹಿಕ ತರಬೇತಿಗೆ ಅಗತ್ಯವಾದ ಒಂದು ಜೊತೆ ಸಮವಸ್ತ್ರ ಹಾಗೂ ಶೂ ಗಳನ್ನು ವಿತರಿಸಲಾಗುತ್ತದೆ.
ಈ ತರಬೇತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ದೈಹಿಕ ಅರ್ಹತೆಗಳಾದ, ಕನಿಷ್ಠ 50 ಕೆಜಿ ತೂಕ, 16.6 ಸೆಂ.ಮೀ ಎತ್ತರ, ಎದೆಯ ಸುತ್ತಳತೆ (77+5) ಹಾಗೂ 1.6 ಕಿಮೀ ದೂರವನ್ನು 6 ನಿಮಿಷದಲ್ಲಿ ಪೂರ್ಣಗೊಳಿಸುವ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರಿಗೆ 4 ತಿಂಗಳ ಸೇನಾ ಪೂರ್ವ ಆಯೆ ಕುರಿತುಮಾಜಿ ಸೈನಿಕರಿಂದ ದೈಹಿಕ ಸಹಿಷ್ಣುತಾ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ನುರಿತ ತರಬೇತುದಾರಿಂದ ಸೇನಾ ಲಿಖಿತ ಪರೀಕ್ಷೆಗೆ ತರಬೇತಿ ಸೇರಿದಂತೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ವೃತ್ತಿ ಮಾರ್ಗದರ್ಶನ ನೀಡಲಾಗುತ್ತಿದೆ.
ಅಭ್ಯರ್ಥಿಗಳಿಗೆ ಲಿಖಿತ ತರಬೇತಿಯ ಬೋಧನೆಯಲ್ಲಿ: ಜನರಲ್ ಇಂಗ್ಲೀಷ್, ಜನರಲ್ ನಾಲೆಡ್ಜ್ ಆಂಡ್ ಅವಾರ್ನೆಸ್, ಕ್ವಾಂಟಿಟಿವ್ ಆಪ್ಟಿಟ್ಯೂಡ್, ರೀಸನಿಂಗ್, ಅರಿತ್ ಮ್ಯಾಟಿಕ್, ಮತು ದೈಹಿಕ ಸಹಿಷ್ಣುತಾ ತರಬೇತಿಯ ಬೋಧನೆಯಲ್ಲಿ, ರನ್ನಿಂಗ್, ಚಿನ್ ಅಪ್ ಬಾರ್, ಲಾಂಗ್ ಜಂಪ್, ಚೆಸ್ಟ್ ಎಕ್ಸ್ಟೆನ್ಶನ್ ಬಾರ್, ಪುಷ್ ಅಪ್, ಪುಲ್ ಅಪ್, ಶಾರ್ಟ್ ರನ್, ಶಟಲ್, ಟೋ ಟಚ್, ಸಿಟ್ ಅಪ್ ತರಬೇತಿ ಇದೆ. ತರಬೇತಿ ಅವಧಿಯಲ್ಲಿ 3 ಬಾರಿ ಪರೀಕ್ಷೆಗಳನ್ನು ನಡೆಸಿ, ಅಭ್ಯರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.
ತರಬೇತಿ ಶಾಲೆ ಬಹಳಷ್ಟು ನೆರವಾಯಿತು
ಸೇನೆ ಸೇರಬೇಕೆಂಬುದು ಬಾಲ್ಯದ ಆಸೆ ಆಗಿತ್ತು. ಆದಕಾರಣ ಹಾವೇರಿಯಲ್ಲಿ ನಡೆದ ಸೇನಾ ರ್‍ಯಾಲಿಯಲ್ಲಿ ಭಾಗವಹಿಸಿದ್ದೆ ಆದರೆ ಯಾವುದೇ ಪೂರ್ವ ತರಬೇತಿ ಇಲ್ಲದ ಕಾರಣ ಅನುತ್ತೀರ್ಣನಾಗಿ ನಿರಾಶೆ ಅನುಭವಿಸಬೇಕಾಯಿತು. ನಂತರ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ಉಚಿತ ತರಬೇತಿ ಶಾಲೆಯಲ್ಲಿ ತರಬೇತಿಗೆ ಆಯ್ಕೆಯಾದೆ. ಇಲ್ಲಿ ಪಡೆದ ಸಮಗ್ರ ತರಬೇತಿಯಿಂದ ಉಡುಪಿಯಲ್ಲಿ ನಡೆದ ಸೇನಾ ರ್‍ಯಾಲಿಯಲ್ಲಿ ಅಯ್ಕೆಯಾದೆ. ಸೇನಾ ಲಿಖಿತ ಪರೀಕ್ಷೆ ಉತ್ತೀರ್ಣವಾಗಲು, ತರಬೇತಿ ಅವಧಿಯಲ್ಲಿ ಪಡೆದ ಕೋಚಿಂಗ್ ಬಹಳಷ್ಟು ಅನುಕೂಲವಾಯಿತು. ಪ್ರಸ್ತುತ ಸೇನಾ ತರಬೇತಿ ಮುಗಿಸಿ, ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಿದರ್ ಕಾನ್ ನ ನಿವಾಸಿ ಸದ್ಯ ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪವನ್ ಕುಮಾರ್ ಹೆಮ್ಮೆಯಿಂದ ಹೇಳುತ್ತಾರೆ.
ಸೇನಾಪಡೆ ಆಯ್ಕೆ ಪೂರ್ವತರಬೇತಿಗಾಗಿ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಆರಂಭಿಸಲಾಗಿರುವ 3 ತರಬೇತಿ ಶಾಲೆಗಳಲ್ಲಿ ನಮ್ಮ ಜಿಲ್ಲೆಯ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ಉಚಿತ ತರಬೇತಿ ಶಾಲೆ ಕೂಡಾ ಒಂದು ಎನ್ನುವುದು ಹೆಮ್ಮೆಯ ವಿಷಯ. ಈ ತರಬೇತಿ ಕೇಂದ್ರದಲ್ಲಿ ,ಯುವಕರಿಗೆ ಸೇನಾ ನೇಮಕಾತಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ರೀತಿಯ ತರಬೇತಿ ನೀಡಲಾಗುತ್ತಿದೆ. ಪ್ರಮುಖರಾಗಿಗ್ರಾಮೀಣ ಭಾಗದ ಹಾಗೂ ಬಡ ಕುಟುಂಬಗಳಿಂದ ಬರುವ ಯುವಕರಿಗೆ ಈ ತರಬೇತಿಯಿಂದ ಹೆಚ್ಚಿನ ಆತ್ಮ ವಿಶ್ವಾಸ ಮೂಡಿದ್ದು, ಅವರಲ್ಲಿ ಸೇನೆ ಸೇರಿದಂತೆ ಇತರೇ ಸ್ಪರ್ದಾತ್ಮಕ ಪರೀಕ್ಷೆಗಳಲ್ಲೂ ಕೂಡಾ ಸ್ಪರ್ಧಿಸಿ, ಯಶಸ್ವಿಯಾಗುವ ಛಲ ಮೂಡಿದೆ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಅಧಿಕಾರಿ ಸತೀಶ್.
-ವರದಿ: ಹರೀಶ್ ಮಾಂಬಾಡಿ