Sirsi News: ಶಿರಸಿಯಲ್ಲೊಬ್ಬ ಆಧುನಿಕ ಭಗೀರಥೆ; ಅಂಗನವಾಡಿ ಮಕ್ಕಳಿಗೆ ಗಂಗೆ ಹರಿಸಲು ಬಾವಿ ತೋಡುತ್ತಿರುವ ಗೌರಿ
Feb 08, 2024 07:30 AM IST
ಏಕಾಂಗಿಯಾಗಿಯೇ ಬಾವಿ ತೋಡುವ ಶಿರಸಿಯ ಗೌರಿ ನಾಯ್ಕ ಆಧುನಿಕ ಭಗೀರಥೆ.
- woman power ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸುತ್ತಮುತ್ತಲ ಜನರಿಗೆ ಗೌರಿ ನಾಯ್ಕ ಯಾರೆಂದು ಕೇಳಿದರೆ ಅದೇ ಬಾವಿ ತೆಗೆದು ನೀರುವ ಕೊಡುವ ಭಗೀರಥೆ ಎಂದೇ ಉತ್ತರ ನೀಡುತ್ತಾರೆ. ಅಷ್ಟರ ಮಟ್ಟಿಗೆ ಗೌರಿ ವಿಭಿನ್ನವಾಗಿ ಕಾಣುತ್ತಾರೆ.
- ವರದಿ: ಹರೀಶ್ ಮಾಂಬಾಡಿ, ಮಂಗಳೂರು
ಕಾರವಾರ: ಏಕಾಂಗಿಯಾಗಿ ಬಾವಿ ತೋಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗೌರಿ. ಸಿ. ನಾಯ್ಕ, ಇದೀಗ ಅಂಗನವಾಡಿ ಮಕ್ಕಳ ನೆರವಿಗೆ ಧಾವಿಸಿದ್ದಾರೆ. ಮಕ್ಕಳ ನೀರಿನ ಕೊರತೆ ನೀಗಿಸುವುದಕ್ಕೆ ಸ್ವತಃ ಬಾವಿ ತೋಡಲು ಮುಂದಾಗಿದ್ದಾರೆ.
ಇಲ್ಲಿಯ ಗಣೇಶನಗರದ ಗೌರಿ ಸಿ.ನಾಯ್ಕ ಅವರಿಗೆ ಈಗ 55 ವರ್ಷ. ಗಣೇಶನಗರದ ಅಂಗನವಾಡಿ ಕೇಂದ್ರದ ವಠಾರದ ಹಿಂಬದಿ ಏಕಾಂಗಿಯಾಗಿ ಬಾವಿ ತೋಡುವ ಕೆಲಸದಲ್ಲಿ ಅವರೀಗ ನಿರತರಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಕೆಲಸ ನಡೆಸುತ್ತಿದ್ದು ಸುಮಾರು ಆರೆಂಟು ಅಡಿ ಆಳದ ಬಾವಿ ತೋಡಿದ್ದಾರೆ.
ಜಲ ಕಾಯಕ
ಶಿರಸಿ ಹೊರವಲಯದಲ್ಲಿರುವ ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶವಾದ ಗಣೇಶನಗರದಲ್ಲಿ ಪ್ರತಿ ಬೇಸಗೆಯಲ್ಲೂ ನೀರಿಗೆ ತತ್ವಾರ. ಹೀಗಾಗಿ ಬಾವಿ, ಬೋರ್ ವೆಲ್ ಗಳಲ್ಲೂ ಸಮಸ್ಯೆ ಉಂಟಾದಾಗ ನೇರ ಪರಿಣಾಮ ಅಂಗನವಾಡಿ ಕೇಂದ್ರದ ಮಕ್ಕಳಿಗೂ ಆಗುತ್ತದೆ. ಹೀಗಾಗಿ ಗೌರಿ ಮತ್ತೊಮ್ಮೆ ಬಾವಿ ತೋಡಲು ಮುಂದಾಗಿದ್ದಾರೆ.ಸಲಿಕೆ, ಹಾರೆ, ಬುಟ್ಟಿಗಳನ್ನು ಬಳಸಿಕೊಂಡು ಒಬ್ಬರೇ ಮಣ್ಣು ಮೇಲೆತ್ತಿ ಹಾಕಿ ಬಾವಿ ತೋಡುತ್ತಿರುವ ಗೌರಿ, ನೀರು ಬಂದರೆ ಇಲ್ಲಿಂದ ಟ್ಯಾಂಕರ್ ಮೂಲಕ ನೀರು ಕೊಂಡೊಯ್ದು ಜಾತ್ರೆಗೆ ಬರುವ ಜನರಿಗೂ ನೀಡಬಹುದು ಎಂಬ ವಿಶ್ವಾಸದಲ್ಲಿದ್ದಾರೆ.
ಗಣೇಶನಗರದ ಅಂಗನವಾಡಿ ಕೇಂದ್ರ-6ರಲ್ಲಿಸುಮಾರು 15 ಮಕ್ಕಳು ಇದ್ದಾರೆ. ಹುತ್ಗಾರ ಗ್ರಾಮ ಪಂಚಾಯಿತಿಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಆದರೆ ಕುಡಿಯುವುದಕ್ಕೆ ಹತ್ತಿರದ ಬಾವಿಯಿಂದ ನಿತ್ಯ ನೀರು ಹೊತ್ತು ತರಬೇಕಾಗುತ್ತದೆ. ಇದನ್ನು ಗಮನಿಸಿದ ಗೌರಿ ನಾಯ್ಕ ಸ್ವಯಂ ಬಾವಿ ತೋಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಗೌರಿ ಸಾಹಸ ಇದೇ ಮೊದಲಲ್ಲ
ಹೀಗೆ ಬಾವಿ ಕೊರೆಯುವ ಕೆಲಸವನ್ನು ಏಕಾಂಗಿಯಾಗಿ ಮಾಡುತ್ತಿರುವುದು ಗೌರಿ ಅವರಿಗೆ ಇದೇ ಮೊದಲ ಅನುಭವವಲ್ಲ. ಈ ಮೊದಲು ಎರಡು ಬಾರಿ ಬಾವಿ ಕೊರೆದಿದ್ದಾರೆ.
ತನ್ನ ಮನೆಯ ಹಿಂಬದಿಯಲ್ಲಿ ಆರು ವರ್ಷಗಳ ಹಿಂದೆ ಒಬ್ಬರೇ ಸುಮಾರು 65 ಅಡಿ ಆಳದ ಬಾವಿ ತೋಡಿದ್ದರು. ಬಳಿಕ ಗಣೇಶನಗರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಇನ್ನೊಂದು ಬಾವಿ ತೋಡಿದ್ದರು. ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವೀರಮಹಿಳೆ ಎಂಬ ಪ್ರಶಸ್ತಿಯನ್ನು ಪಡೆದಿರುವ ಗೌರಿ, ತನ್ನ ಮನೆ ಇರುವ ಪಕ್ಕದಲ್ಲೇ 60 ಅಡಿ ಆಳದ ಬಾವಿ ತೋಡಿದ್ದರು. ಕಲ್ಲು ಮಿಶ್ರಿತ ಮಣ್ಣಿನಿಂದ ಕೂಡಿದ ಜಾಗದಲ್ಲಿ 8 ಅಡಿ ಅಗಲದ ಬಾವಿಯನ್ನು ದಿನಕ್ಕೆ 3 ಅಡಿಯ ಲೇಕ್ಕದಲ್ಲಿ ಬಾವಿಯಿಂದ ಅಗೆಯಲು ಆರಂಭಿಸಿದ ಗೌರಕ್ಕ ಗುದ್ದಲಿ, ಹಾರೆ, ಚಾಣ, ಸುತ್ತಿಗೆ, ಪಿಕಾಸು, 2 ಕಬ್ಬಿಣದ ಬಕೇಟ್ ಬಳಕೆ ಮಾಡಿದ್ದರು. ಗಣೇಶ ನಗರ ಸುತ್ತಮುತ್ತಲು 10ಕ್ಕೂ ಹೆಚ್ಚಿನ ಬಾವಿಗಳನ್ನು ತೋಡಿದ್ದರೂ ನೀರಿನ ಸೆಲೆ ಕಾಣಿಸಿರಲಿಲ್ಲ, ಆದರೆ ಗೌರಿಯನ್ನು ಗಂಗೆ ಬಿಡಲಿಲ್ಲ.
ಲಾಕ್ ಡೌನ್ ನಲ್ಲೂ ಬಾವಿ ತೋಡಿದ್ದರು
ಕೋವಿಡ್ ಕಾರಣದಿಂದ ಲಾಕ್ ಡೌನ್ ಘೋಷಣೆಯಾದಾಗ ಅಡಕೆ ತೋಟ, ಕುಡಿಯಲು ನೀರು ಸಮಸ್ಯೆ ಆಗಬಾರದು ಎಂದು ಇನ್ನೊಂದು ಬಾವಿ ತೋಡಲು ಮುಂದ್ದಾಗಿದ್ದ ಗೌರಿ, ಮನೆ ಹಿಂಭಾಗ ಗುಡ್ಡವನ್ನು ಸುಮಾರು 16 ಅಡಿ ನೆಲ ಸಮತಟ್ಟು ಮಾಡಿ, ಮೇಲ್ಭಾಗದ ಅಡಕೆ ತೋಟಕ್ಕೆ ಸ್ವತ ಹಾಕಿ, ಬಾವಿ ತೋಡಲು ಆರಂಭಿಸಿ 60 ಅಡಿ ಆಳ ಕೊರೆದು ಯಶಸ್ವಿಯಾಗಿದ್ದರು. ಕೊನೆಯ ನಾಲ್ಕು ದಿನದ ಹೊರತಾಗಿ ಯಾರ ಸಹಾಯವನ್ನೂ ಚಾಚದೆ ಒಬ್ಬರೇ ಬಾವಿ ತೋಡಿ ಮುಗಿಸಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು.
ಇವರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿ ಬಂದಿವೆ. ಸನ್ಮಾನಗಳೂ ಆಗಿವೆ. ಅವೆಲ್ಲವನ್ನೂ ಗೌರಿ ತಲೆ ಹತ್ತಿಸಿಕೊಂಡಿಲ್ಲ. ತಮ್ಮ ಜಲ ಕಾಯಕವನ್ನು ಮಾತ್ರ ನಿಲ್ಲಿಸಿಲ್ಲ !.
(ವರದಿ: ಹರೀಶ ಮಾಂಬಾಡಿ.ಮಂಗಳೂರು)
ವಿಭಾಗ