Vande Bharat Express: ಕರ್ನಾಟಕದಲ್ಲಿ ವಂದೇ ಭಾರತ್ ರೈಲಿಗೆ ಎಲ್ಲೆಲ್ಲಿ ಬೇಡಿಕೆ; ಈ ಜಿಲ್ಲೆಗಳಿಗೂ ಬರುತ್ತಾ ಸೆಮಿ ಹೈ ಸ್ಪೀಡ್ ರೈಲು
Jun 27, 2023 11:35 AM IST
ಬೆಂಗಳೂರು-ಧಾರವಾಡ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು
ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕರ್ನಾಟಕದ ಪ್ರಮುಖ ಜಿಲ್ಲೆಗಳಿಂದ ಬೇಡಿಕೆ ಹೆಚ್ಚಿದೆ. ಯಾವುವು ಆ ಜಿಲ್ಲೆಗಳ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಬಹು ನಿರೀಕ್ಷೆಯ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಸೇವೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಜೂನ್ 27, ಮಂಗಳವಾರ) ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಇದು ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮೊದಲು ಅಂದರೆ ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈ ರೈಲು ಸೇವೆೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಶೇಕಡಾ 95 ರಷ್ಟು ರೈಲು ಭರ್ತಿಯಾಗುವ ಮೂಲಕ ಪ್ರಯಾಣಿಕರಿಗೆ ಉತ್ತರ ಸೇವೆ ನೀಡುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಒಟ್ಟಾರೆಯಾಗಿ ಕರ್ನಾಟಕದಲ್ಲಿ ಎರಡು ವಂದೇ ಭಾರತ್ ರೈಲು ಸೇವೆಗಳು ಆರಂಭವಾಗಿದ್ದು, ಪ್ರಯಾಣಿಕ ಸೌಲಭ್ಯಗಳನ್ನು ಹೊಂದಿರುವ ಸೆಮಿ ಹೈ ಸ್ಪೀಡ್ ರೈಲು ಸೇವೆಗೆ ಇದೀಗ ರಾಜ್ಯದ ಕೆಲವು ಜಿಲ್ಲೆಗಳಿಂದಲೂ ಬೇಡಿಕೆ ಇದೆ.
ಪ್ರಮುಖವಾಗಿ ರಾಜ್ಯದ ಕರಾವಳಿ ಎರಡು ಪ್ರಮುಖ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಬೇಕಿದೆ ಎಂದು ಬೇಡಿಕೆಗಳು ಹೆಚ್ಚಾಗಿವೆ. ಮುಂಬೈ-ಗೋವಾ ವಂದೇ ಭಾರತ್ ರೈಲನ್ನು ಉಡುಪಿ ಹಾಗೂ ಮಂಗಳೂರು ವರೆಗೆ ವಿಸ್ತರಿಸಲು ಜನರು ತಮ್ಮ ಜನಪ್ರತಿನಿಧಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇದರ ಜೊತೆಗೆ ಬೆಂಗಳೂರು ನಗರದಿಂದ ಅತಿ ಹೆಚ್ಚು ಪ್ರಯಾಣಿಕ ಸಂಪರ್ಕ ಹೊಂದಿರುವ ಪ್ರಮುಖ ನಗರಗಳಲ್ಲಿ ಹೊಂದಾಗಿರುವ ಹೈದರಾಬಾದ್‌ಗೆ ಕರ್ನಾಟಕದಿಂದ ವಂದೇ ಭಾರತ್ ರೈಲು ಸೇವೆಯನ್ನು ವಿಸ್ತರಿಸಬೇಕೆಂಬ ಒತ್ತಾಯಗಳು ಇವೆ.
ಮೈಸೂರು-ಬೆಂಗಳೂರು-ಹೈದರಾಬಾದ್ ಮಾರ್ಗವಾಗಿ ಈಗಾಲೇ ಹಲವು ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡುತ್ತಿವೆ. ಇದೀಗ ಇದೇ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆಯೂ ಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಲವು ವಿಶ್ವದರ್ಜೆಯ ಸೌಲಭ್ಯಗಳು ಇವೆ. ಈ ರೈಲಿಗೆ ಪ್ರತ್ಯೇಕ ಇಂಜಿನ್ ಸೌಲಭ್ಯವಿಲ್ಲ. ಜೊತೆಗೆ ಉಪಾಹಾರದ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್, ಸ್ವಯಂ ಚಾಲಿತ ಬಾಗಿಲು, ಸಿಸಿಟಿವಿ, ಬಯೋ ಶೌಚಾಲಯ, ಉತ್ತಮ ಸೀಟ್ ಸೇರಿದಂತೆ ಹಲವು ಸೌಲಭ್ಯಗಳಿವೆ.