logo
ಕನ್ನಡ ಸುದ್ದಿ  /  ಕರ್ನಾಟಕ  /  Hampi News: ಎಡಬಿಡದೇ ಸುರಿದ ಭಾರೀ ಮಳೆಗೆ ಹಂಪಿಯ ಸಾಲು ಮಂಟಪ ಕುಸಿತ

Hampi News: ಎಡಬಿಡದೇ ಸುರಿದ ಭಾರೀ ಮಳೆಗೆ ಹಂಪಿಯ ಸಾಲು ಮಂಟಪ ಕುಸಿತ

Umesha Bhatta P H HT Kannada

May 23, 2024 12:42 AM IST

google News

ಹಂಪಿಯಲ್ಲಿ ಮಳೆಗೆ ಕುಸಿದು ಬಿದ್ದ ಸಾಲು ಮಂಟಪ

    • ಹಂಪಿ ಪಟ್ಟಣ( Hampi)ದ ಪಾರಂಪರಿಕ ಕಟ್ಟಡಳಲ್ಲಿ ಒಂದಾದ ಸಾಲು ಮಂಟಪವು ಭಾರೀ ಮಳೆಗೆ ಕುಸಿದು ಬಿದ್ದಿದೆ.
ಹಂಪಿಯಲ್ಲಿ ಮಳೆಗೆ ಕುಸಿದು ಬಿದ್ದ ಸಾಲು ಮಂಟಪ
ಹಂಪಿಯಲ್ಲಿ ಮಳೆಗೆ ಕುಸಿದು ಬಿದ್ದ ಸಾಲು ಮಂಟಪ

ವಿಜಯನಗರ: ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಐತಿಹಾಸಿಕ ನಗರಿ ಹಂಪಿಯ ಪಾರಂಪರಿಕ ಕಟ್ಟಡಗಳಿಗೂ ಧಕ್ಕೆಯಾಗಿದೆ. ಹಂಪಿ ಪಟ್ಟಣದ ವಿರೂಪಾಕ್ಷ ದೇಗುಲದ ರಥಬೀದಿಯಲ್ಲಿರುವ ಸಾಲು ಮಂಟಪಗಳು ಕುಸಿದು ಬಿದ್ದಿವೆ. ಈಗಾಗಲೇ ಶಿಥಿಲ ಹಂತಕ್ಕೆ ತಲುಪಿರುವ ಕೆಲವು ಕಟ್ಟಡಗಳಿಗೆ ಮರು ಜೀವ ನೀಡುವ ಕೆಲಸವನ್ನು ಭಾರತೀಯ ಪುರಾತತ್ವ ಇಲಾಖೆ ನೀಡುತ್ತಿರುವ ನಡುವೆಯೇ ಕುಸಿತ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೇ ಹಂಪಿಯ ಉಸ್ತುವಾರಿ ನೋಡಿಕೊಳ್ಳುವ ಭಾರತೀಯ ಪುರಾತತ್ವ ಇಲಾಖೆ( Archeology survey of India) ಅಧಿಕಾರಿಗಳ ನಡೆಗೂ ಸ್ಥಳೀಯವಾಗಿ ಅಸಮಾಧಾನ ವ್ಯಕ್ತವಾಗುತ್ತಿದೆ. ಹಂಪಿಯ ಸ್ಮಾರಕಗಳನ್ನು ಉಳಿಸಿಕೊಳ್ಳುವಲ್ಲಿ ಗಂಭೀರ ಪ್ರಯತ್ನಗಳು ಆಗುತ್ತಿಲ್ಲ. ಇದರಿಂದ ಒಂದೊಂದೆ ಕಟ್ಟಡ ಕುಸಿಯುತ್ತಿರುವ ಆರೋಪಗಳು ಕೇಳಿ ಬಂದಿವೆ.

ಮೂರು ದಿನದಿಂದಲೂ ಹಂಪಿಯಲ್ಲಿ ಮಳೆಯಾಗುತ್ತಲೇ ಇದೆ. ಅದೂ ಸಂಜೆ ನಂತರ ಮಳೆ ಸುರಿಯುತ್ತಿದೆ. ಸೋಮವಾರ ಸಂಜೆಯೇ ಸುರಿದ ಮಳೆಗೆ ಹಂಪಿಯಲ್ಲಿ ಸಾಲು ಮಂಟಪ ಕುಸಿದಿತ್ತು.ಮಂಗಳವಾರ ಮೂರು ಮಂಟಪಗಳು ಅಲ್ಲಲ್ಲಿ ಬಿದ್ದಿರುವುದು ಕಂಡು ಬಂದಿತು. ಬುಧವಾರವೂ ಸಾಲು ಮಂಟಪಗಳ ಕಲ್ಲುಗಳು ಉರುಳಿ ಬಿದ್ದಿದ್ದವು. ಇದನ್ನು ಗಮನಿಸಿದ್ದ ಪ್ರವಾಸಿಗರು ಹಾಗೂ ಪ್ರವಾಸಿ ಮಾರ್ಗದರ್ಶಿಗಳು ಮಾಹಿತಿ ನೀಡಿದ್ದರು.

ಈಗಾಗಲೇ ಹಂಪಿಯಲ್ಲಿರುವ ಸಾಲು ಮಂಟಪಗಳಿಗೆ ಪುನಶ್ಚೇತನ ನೀಡುವ ಕೆಲಸವನ್ನೂ ಆರಂಭಿಸಲಾಗಿದೆ. ಹಂಪಿಯ ನಿರ್ವಹಣೆಯ ಹೊಣೆ ಹೊತ್ತ ಭಾರತೀಯ ಪುರಾತತ್ವ ಇಲಾಖೆಯ ಸ್ಥಳೀಯ ಅಧಿಕಾರಿಗಳು ಈಗಾಗಲೇ ಕೆಲಸ ಆರಂಭಿಸಿದ್ದರೂ ಮತ್ತೊಂದು ಕಡೆಯಲ್ಲಿ ಕಟ್ಟಡಗಳು ಬೀಳುತ್ತಲೇ ಇವೆ.

ಇದರೊಟ್ಟಿಗೆ ಶಿವ ದೇವಸ್ಥಾನವೂ ಸೇರಿ ಕೆಲವು ಕಟ್ಟಡಗಳು ಹಿಂದೆಯೇ ಕುಸಿದಿದ್ದರೂ ಅವುಗಳನ್ನು ಸರಿಪಡಿಸುವ ಪ್ರಯತ್ನವೂ ಆಗಿಲ್ಲ ಎನ್ನುವ ಮಾತುಗಳೂ ಕೇಳಿ ಬಂದಿವೆ.

ಹಂಪಿಯಲ್ಲಿರುವ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಅಲ್ಲಲ್ಲಿ ಸಾಲು ಮಂಟಪಗಳನ್ನು ಸರಿಪಡಿಸಲು ಕೈ ಹಾಕಿದ್ದರೂ ಕೆಲವು ಕಡೆ ಬಿದ್ದಿರುವ ಕಟ್ಟಡಗಳನ್ನು ಸರಿಪಡಿಸಲು ಹೋಗಿಲ್ಲ. ಮಾಹಿತಿ ನೀಡಿದರೂ ಸೂಕ್ತ ಸ್ಪಂದನೆ ಸಿಗುವುದಿಲ್ಲ. ಹಂಪಿ ಉಳಿಸಿಕೊಳ್ಳುವ ಪ್ರಾಮಾಣಿಕ ಕೆಲಸ ಅಧಿಕಾರಿಗಳಿಂದ ಆಗಲಿ ಎನ್ನುವುದು ಸ್ಥಳೀಯರ ಆಗ್ರಹ.

ಹಂಪಿಯ ಹಲವಾರು ಕಟ್ಟಡಗಳು ಅವಶೇಷ ರೂಪದಲ್ಲಿಯೇ ಇವೆ. ಮೇಲಾಧಿಕಾರಿಗಳ ಅನುಮತಿ ಪಡೆದು ಅವುಗಳನ್ನು ಪುನಶ್ಚೇತನಗೊಳಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕು. ವಿಳಂಬ ಮಾಡುತ್ತಾ ಕುಳಿತರೆ ಇನ್ನಷ್ಟು ಹಾಳಾಗಲಿದೆ. ಆನಂತರ ಮಾಡಿದರೆ ಪ್ರಯೋಜನವೇನೂ ಆಗದು. ಇನ್ನು ಮಳೆಗಾಲವೂ ಶುರುವಾಗುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಸಲಹೆಯೂ ಕೇಳಿ ಬಂದಿದೆ.

ಈ ಕುರಿತು ಮಾತನಾಡಿರುವ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಅಧೀಕ್ಷಕ ನಿಹಿಲ್‌ ದಾಸ್‌, ಹಂಪಿಯಲ್ಲಿ ಸಾಲು ಮಂಟಪಗಳು ಕುಸಿಯುವ ಹಂತದಲ್ಲಿರುವುದು ನಮ್ಮ ಗಮನಕ್ಕೂ ಬಂದಿದೆ. ಇದಕ್ಕಾಗಿಯೇ ಕೆಲಸವೂ ಶುರುವಾಗಿದೆ. ನಮ್ಮಲ್ಲಿ ಏಕಕಾಲಕ್ಕೆ ಕೆಲಸ ಮಾಡುವಷ್ಟು ಅನುದಾನ ಇಲ್ಲ. ತುರ್ತು ಇರುವ ಕೆಲಸ ಮಾಡಿ ಹಂತ ಹಂತವಾಗಿ ಇತರೆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎನ್ನುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ