logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಆಲಮಟ್ಟಿ ಜಲಾಶಯಕ್ಕೆ ಬಾರದ ಒಳಹರಿವು; ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರ ಚಿತ್ತ ಮಹಾ ಮಳೆಯತ್ತ!

Vijayapura News: ಆಲಮಟ್ಟಿ ಜಲಾಶಯಕ್ಕೆ ಬಾರದ ಒಳಹರಿವು; ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರ ಚಿತ್ತ ಮಹಾ ಮಳೆಯತ್ತ!

HT Kannada Desk HT Kannada

Jun 09, 2023 04:26 PM IST

google News

ಆಲಮಟ್ಟಿ ಜಲಾಶಯಕ್ಕೆ ಬಾರದ ಒಳಹರಿವು; ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರ ಚಿತ್ತ ಮಹಾ ಮಳೆಯತ್ತ!

    • ವಿಜಯಪುರ ಮತ್ತು ಬಾಗಲಕೋಟೆಯ ಅವಳಿ ಜಿಲ್ಲೆಗಳಿಗೆ ಆಸರೆಯಾಗಿರುವ ಆಲಮಟ್ಟಿ ಜಲಾಶಯದಲ್ಲಿ ಈ ವರೆಗೂ ಒಳಹರಿವು ಕಂಡು ಬಂದಿಲ್ಲ. ಇದು ಈ ಭಾಗದ ರೈತರ ಕಳವಳಕ್ಕೆ ಕಾರಣವಾಗಿದೆ.    
ಆಲಮಟ್ಟಿ ಜಲಾಶಯಕ್ಕೆ ಬಾರದ ಒಳಹರಿವು; ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರ ಚಿತ್ತ ಮಹಾ ಮಳೆಯತ್ತ!
ಆಲಮಟ್ಟಿ ಜಲಾಶಯಕ್ಕೆ ಬಾರದ ಒಳಹರಿವು; ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳ ರೈತರ ಚಿತ್ತ ಮಹಾ ಮಳೆಯತ್ತ!

Vijayapura News: ಈ ಬಾರಿ ಆಲಮಟ್ಟಿ ಜಲಾಶಯದಲ್ಲಿ ಜೂನ್ ತಿಂಗಳು ಆರಂಭವಾಗಿ ಒಂದು ವಾರ ಕಳೆದರೂ ಒಳಹರಿವು ಕಂಡು ಬಂದಿಲ್ಲ. ಈ ಹಿಂದಿನ ಎರಡು ವರ್ಷಗಳ ಪರಿಸ್ಥಿತಿ ಅವಲೋಕಿಸಿದರೆ ಬಹುಬೇಗನೆ ಒಳಹರಿವು ಶುರುವಾಗುತ್ತಿತ್ತು. ಹೀಗಾಗಿ ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುವ ಮಳೆಯತ್ತ ರೈತರ ಚಿತ್ತ ನೆಟ್ಟಿದೆ.

519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ ಬೆಳಗ್ಗೆ 507.840 ಮೀಟರ್ ಎತ್ತರದಲ್ಲಿ 21.831 ಟಿಎಂಸಿ ನೀರು ಸಂಗ್ರಹವಿತ್ತು. ಕುಡಿವ ನೀರು ಸೇರಿದಂತೆ ಒಟ್ಟು 821 ಕ್ಯೂಸೆಕ್‌ ಹೊರಹರಿವು ಇದೆ.

ಕಳೆದ ವರ್ಷ ಜೂ. 6ರಂದು 513.04 ಮೀಟರ್ ಎತ್ತರದಲ್ಲಿ 47.730 ಟಿಎಂಸಿ ನೀರು ಸಂಗ್ರಹವಾಗಿತ್ತು. 2035 ಕ್ಯೂಸೆಕ್‌ ಒಳಹರಿವು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 26.686 ಟಿಎಂಸಿ ನೀರು ಕಡಿಮೆ ಇದೆ. ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹ ಗೊಂಡಿರುವ 21.044 ಟಿಎಂಸಿ ನೀರಿನಲ್ಲಿ ಡೆಡ್ ಸ್ಟೋರೇಜ್ 17.61 ಟಿಎಂಸಿ ಹೊರತುಪಡಿಸಿ 3.434 ಟಿಎಂಸಿ ನೀರು ಬಳಸಬಹುದಾಗಿದೆ. ಈ ನೀರನ್ನು ಕೇವಲ ಕುಡಿವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ.

ಈ ಹಿಂದಿನ ವರ್ಷಗಳಲ್ಲಿ ಹೀಗಾಗಿರಲಿಲ್ಲ.

2019ರಲ್ಲಿ ಆಲಮಟ್ಟಿ ಜಲಾಶಯಕ್ಕೆ ಜು. 3ರಂದು ಒಳಹರಿವು ಕಂಡು ಬಂದಿತ್ತು, 2020ರಲ್ಲಿ ಜೂನ್ 5ರಂದು ಕಂಡು ಬಂದಿತ್ತು, 2021ರಲ್ಲಿ ತೌತೆ ಚಂಡಮಾರುತದ ಪರಿಣಾಮ ಜಲಾಶಯಕ್ಕೆ ಮೇ 24ರಿಂದ ಒಳಹರಿವು ಹೆಚ್ಚಾಗಿತ್ತು. 2022ರಲ್ಲಿ ಅಸಾನಿ ಚಂಡಮಾರುತದ ಪರಿಣಾಮ ಸುರಿದ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅವಧಿಗೂ ಮುನ್ನವೇ ಅಂದರೆ ಮೇ 21ರಿಂದ ಒಳಹರಿವು ಆರಂಭಗೊಂಡಿತ್ತು. ಮೇ ತಿಂಗಳ ಮೂರನೇ ವಾರಕ್ಕೆ ಒಳಹರಿವು ಕಂಡು ಬಂದಿರುವುದು ಜಲಾಶಯ ಇತಿಹಾಸದಲ್ಲಿಯೇ ಅದು ಮೊದಲ ಬಾರಿಯಾಗಿತ್ತು. ಆದರೆ, ಈ ವರ್ಷ ಜೂನ್ ತಿಂಗಳ ಮೊದಲ ವಾರ ಕಳೆಯುತ್ತಾ ಬಂದರೂ, ಇದೂವರೆಗೆ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಬಾರದೇ ಇರುವುದು ಕಳವಳಕ್ಕೆ ಕಾರಣವಾಗಿದೆ.

ಮಹಾ ಮಳೆ ಆಸರೆ

ಆಲಮಟ್ಟಿ ಜಲಾಶಯಕ್ಕೆ ಪ್ರತಿ ವರ್ಷ ಮಹಾರಾಷ್ಟ್ರದ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿವ ಮಳೆಯೇ ಆಸರೆಯಾಗುತ್ತಿದೆ. ರಾಜ್ಯದಲ್ಲಿ ಮಳೆಯಾಗದಿದ್ದರೂ ಕೃಷ್ಣಾ ನದಿ ಉಗಮ ಸ್ಥಾನ ಮಹಾಬಳೇಶ್ವರ ಸೇರಿದಂತೆ ಕೃಷ್ಣ ಜಲಾನಯನ ವ್ಯಾಪ್ತಿಯಲ್ಲಿ ಸುರಿವ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಭರ್ತಿಯಾಗುತ್ತ ಬಂದಿದೆ. ಅಲ್ಲದೇ ಕೆಲ ಬಾರಿ ಪ್ರವಾಹ ಕೂಡ ಉಂಟಾಗಿದೆ. ಆದರೆ ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಇನ್ನೂ ಮಳೆ ಅಬ್ಬರ ಕಂಡು ಬಂದಿಲ್ಲ. ಜತೆಗೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ವಿಳಂಬವಾಗುವ ಸಾಧ್ಯತೆ ಇದೆ. ಆಲಮಟ್ಟಿ ಜಲಾಶಯಕ್ಕೆ ಸಾಮಾನ್ಯವಾಗಿ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಒಳಹರಿವು ಕಂಡು ಬರುತ್ತದೆ. ವಾಡಿಕೆಯಂತೆ ಈ ಬಾರಿ ಒಳಹರಿವು ಕಂಡು ಬಂದರೆ ಉತ್ತಮ, ಆದರೆ ಒಳಹರಿವು ತಡವಾದಷ್ಟು ರೈತರಿಗೆ ತಳಮಳ ಆರಂಭವಾಗುತ್ತದೆ.

ಗುರುಪೂರ್ಣಿಮೆ ಕಳೆದರೂ ಮಳೆಯಿಲ್ಲ

ಕಡ್ಲಿಗರ ಹುಣ್ಣಿಮೆ (ಗುರು ಪೂರ್ಣಿಮೆ)ಯ ದಿನ ಆಲಮಟ್ಟಿ ಜಲಾಶಯ ಭರ್ತಿಯತ್ತ ಸಾಗುತ್ತಿತ್ತು. ಆದರೆ ಈ ಬಾರಿ ಕಡ್ಲಿಗರ ಹುಣ್ಣಿಮೆ ಕಳೆದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯುತ್ತಿಲ್ಲ. ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತರು ಬಿತ್ತನೆಗಾಗಿ ಭೂಮಿ ಹದಗೊಳಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯೂ ಆಗುತ್ತಿಲ್ಲ. ಮಹಾ ಮಳೆಯಿಂದ ಜಲಾಶಯಕ್ಕೆ ನೀರು ಹರಿದು ಬಂದು ಕಾಲುವೆ ಮೂಲಕ ಪಡೆದು ಕೃಷಿ ಕೈಗೊಳ್ಳುವ ರೈತರು ಕೂಡ ಮಳೆ ಮತ್ತು ಮಹಾ ಮಳೆಯತ್ತ ಚಿತ್ತ ಹರಿಸಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ