Vijayapura News: ವಿದೇಶಕ್ಕೆ ದುಡ್ಡು ಸಂಪಾದಿಸಲು ಹೋಗಿ ಚಿತ್ರಹಿಂಸೆ ಅನುಭವಿಸಿದ ವಿಜಯಪುರದ ಯುವಕರು
Sep 08, 2023 12:04 PM IST
ವಿದೇಶಕ್ಕೆ ಕೆಲಸಕ್ಕೆಂದು ಹೋಗಿ ಅಲ್ಲಿ ಮೋಸ ಹೋದ ವಿಜಯಪುರದ ಯುವಕರು.
- ವಿಜಯಪುರದ ಇಬ್ಬರು ಯುವಕರಿಗೆ ಪ್ಯಾಕ್ಟರಿಯಲ್ಲಿ ಹಣ್ಣು -ತರಕಾರಿ ಪ್ಯಾಕಿಂಗ್ ಕೆಲಸ ಎಂದು ಹೇಳಿ ಕರೆದುಕೊಂಡುಹೋಗಿ ಒಂಟೆ ಕಾಯಲು ಹೇಳಿ ಚಿತ್ರಹಿಂಸೆ ನೀಡಿದ್ದಾರೆ ಕೊನೆಗೆ ಯುವಕರು ಕಿರಾತಕರಿಂದ ಬಚಾವ್ ಆಗಿ ತಾಯ್ನಾಡಿಗೆ ಮರಳಿ ಬಂದು ನಿಟ್ಟುಸಿರು ಬಿಟ್ಟಿದ್ದಾರೆ.
ವಿಜಯಪುರ: ವಿದೇಶಕ್ಕೆ ಹೋಗಿ ದುಡ್ಡು ಸಂಪಾದನೆ ಮಾಡಬೇಕು, ಡಾಲರ್ ಲೆಕ್ಕದಲ್ಲಿ ಹಣಗಳಿಕೆ ಮಾಡಬೇಕು ಎಂದು ಗುಮ್ಮಟ ನಗರಿಯ ಯುವಕರಿಬ್ಬರು ಕುವೈತ್ ದೇಶಕ್ಕೆ ಹೋಗಿ ಚಿತ್ರಹಿಂಸೆ ಅನುಭವಿಸಿದ್ದಾರೆ.
ಹೌದು, ವಿಜಯಪುರದ ಇಬ್ಬರು ಯುವಕರಿಗೆ ಪ್ಯಾಕ್ಟರಿಯಲ್ಲಿ ಹಣ್ಣು -ತರಕಾರಿ ಪ್ಯಾಕಿಂಗ್ ಕೆಲಸ ಎಂದು ಹೇಳಿ ಕರೆದುಕೊಂಡುಹೋಗಿ ಒಂಟೆ ಕಾಯಲು ಹೇಳಿ ಚಿತ್ರಹಿಂಸೆ ನೀಡಿದ್ದಾರೆ ಕೊನೆಗೆ ಯುವಕರು ಕಿರಾತಕರಿಂದ ಬಚಾವ್ ಆಗಿ ತಾಯ್ನಾಡಿಗೆ ಮರಳಿ ಬಂದು ನಿಟ್ಟುಸಿರು ಬಿಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ವಿಶಾಲ್ ಮತ್ತು ಸಚೀನ್ ಡಾಲರ್ ಲೆಕ್ಕದಲ್ಲಿ ಹಣ ಸಂಪಾದಿಸಬೇಕು, ಅಪ್ಪ-ಅಮ್ಮನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕನಸು ಕಂಡು 6 ತಿಂಗಳ ಹಿಂದೆ ಇಬ್ಬರು ಉದ್ಯೋಗಕ್ಕಾಗಿ ಕುವೈತ್ ದೇಶಕ್ಕೆ ಹೋಗಿದ್ದರು. ಮುಂಬೈ ಮೂಲದ ಓರ್ವ ಏಜೆಂಟ್ ಪ್ಯಾಕ್ಟರಿಯಲ್ಲಿ ಹಣ್ಣು -ತರಕಾರಿ ಪ್ಯಾಕಿಂಗ್ ಕೆಲಸ ಎಂದು ಇಬ್ಬರನ್ನು ಕಳುಹಿಸಿಕೊಟ್ಟಿದ್ದ. ಆದರೆ ಕುವೈತ್ ದೇಶಕ್ಕೆ ಹೋಗುತ್ತಿದ್ದಂತೆ ವಿಶಾಲ್ ಹಾಗೂ ಸಚೀನ್ ಶಾಕ್ ಆಗಿತ್ತು. ಅಲ್ಲಿ ಯಾವುದೇ ಪ್ಯಾಕ್ಟರಿಯು ಇರಲಿಲ್ಲ, ಪ್ರೂಟ್ ಪ್ಯಾಕಿಂಕ್ ಕೆಲಸವು ಇರಲಿಲ್ಲ. ಬದಲಿಗೆ ಅಲ್ಲಿ ಒಂಟೆ ಮೇಯಿಸಲು ಹೇಳಿದ್ದರು. ಇದಕ್ಕೆ ತಕರಾರು ತೆಗೆದಾಗ ಚಾಕೂ ತೋರಿಸಿ ಬೆದರಿಸಿದ್ದರು. ಮೊಬೈಲ್ ನಲ್ಲಿ ಮಾತನಾಡಿದರೆ ಹಲ್ಲೆ ನಡೆಸುತ್ತಿದ್ದರು, ಇದರಿಂದ ಇಬ್ಬರು ಯುವಕರು ದೇಶಕ್ಕೆ ಜೀವಂತವಾಗಿ ವಾಪಸ್ ಆಗೋದಿಲ್ಲ ಎಂದುಕೊಂಡು ಭಯಬಿದ್ದಿದ್ದರು. ಆದರೆ ಹಾಗೊ ಹೀಗೊ ಮಾಡಿ ಕುಟುಂಬದವರನ್ನು ಯುವಕರು ಮೊಬೈಲ್ ಮೂಲಕ ಸಂಪರ್ಕಿಸಿದ್ದಾರೆ ಇದರಿಂದ ಕೂಡಲೆ ಎಚ್ಚತ್ತ ಪಾಲಕರು ಅದೇ ಗ್ರಾಮದ ಮುಖಂಡರೊಬ್ಬರ ಸಹಾಯದಿಂದ ಈ ವಿಷಯವನ್ನು ಸಂಸದ ರಮೇಶ ಜಿಗಜಿಣಗಿ ಅವರಿಗೆ ಮುಟ್ಟಿಸಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಕೇಂದ್ರ ವಿದೇಶಾಂಗ ಸಚಿವರ ಮೂಲಕ ಕುವೈತ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯ ನೆರವಿನಿಂದ ಯುವಕರನ್ನು ನಾಲ್ಕು ದಿನಗಳ ಹಿಂದೆ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆ ತಂದಿದ್ದಾರೆ.
ತಿಂಗಳ ಹಿಂದೆ ಕುವೈತ್ ಗೆ ತೆರಳುವಾಗ ಮುಂಬೈ ಮೂಲದ ಎಜೆಂಟ್ ಭಾರತೀಯ ರೂಪಾಯಿಯಲ್ಲಿ 32 ಸಾವಿರ ಸಂಬಳ ನೀಡುವುದಾಗಿ ಹೇಳಿದ್ದ. ಊಟ ವಸತಿ ಸಹ ಪ್ರೀ ಎಂದು ಹೇಳಿದ್ದ. ಇದರಿಂದ ವಿಶಾಲ್ ಹಾಗೂ ಸಚಿನ್ ಖುಷ್ ಆಗಿದ್ದರು. ಕುವೈತ್ ಗೆ ತೆರಳುವ ಮುನ್ನ ಮುಂಬೈ ಎಜೆಂಟ್ ಇಬ್ಬರಿಂದ ತಲಾ ಒಂದು ಲಕ್ಷ ರೂಪಾಯಿ ಸಹ ವಸೂಲಿ ಮಾಡಿದ್ದ. ಇನ್ನು ಕುವೈತ್ ನಲ್ಲಿ ಒಂಟೆ ಮೇಯಿಸೋದಲ್ಲದೆ ಸಂಬಳ ಸಹ ಬರೀ 25 ಸಾವಿರ ನೀಡಲಾಗ್ತಿತ್ತಂತೆ. ಸಧ್ಯ ಸಂಸದ ಜಿಗಜಿಣಗಿ ಪ್ರಯತ್ನದಿಂದ ಹೇಗೋ ಸುರಕ್ಷಿತವಾಗಿ ವಾಪಸ್ ಆಗಿರೋದು ಯುವಕರ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ. ಆದರೆ ಮಕ್ಕಳ ಸಂಕಷ್ಟ ನೆನೆದು ಸಚಿನ್ ತಂದೆ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.
ಒಟ್ಟಿನಲ್ಲಿ ವಿದೇಶಗಳಲ್ಲಿ ಕೆಲಸ ಮಾಡ್ತೀವಿ ಹಣ ಗಳಸ್ತೀವಿ ಎನ್ನುವವರು ಹತ್ತು ಬಾರಿ ಯೋಚಿಸಬೇಕಿದೆ. ಅದರಲ್ಲೂ ಎಜೆಂಟರನ್ನ ನಂಬಿ ಕುವೈತ್-ದುಬೈ ಅಂತಾ ಹೋದ್ರೆ ಸಂಕಷ್ಟ ಗ್ಯಾರಂಟಿ. ಇನ್ನು ವಿದೇಶದಲ್ಲಿ ಕೆಲಸದ ಆಮೀಷವೊಡ್ಡಿ ಯುವಕರನ್ನ ಯಾಮಾರಿಸುವ ಎಜೆಂಟರ ಬಗ್ಗೆಯೂ ಸರ್ಕಾರ ಕಠಿಣ ಕ್ರಮ ಜರುಗಿಸಬೇಕಿದೆ.
(ವರದಿ: ಸಮೀವುಲ್ಲಾ ಉಸ್ತಾದ)