logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಬಾಗಲಕೋಟೆ ಬಳಿಕ ವಿಜಯಪುರ ಕಾರ್ಯಕರ್ತರ ಸಮಾವೇಶದಲ್ಲೂ ಗದ್ದಲ; ಯತ್ನಾಳ್ ಬೆಂಬಲಿಗರ ಅಸಮಾಧಾನ

Vijayapura News: ಬಾಗಲಕೋಟೆ ಬಳಿಕ ವಿಜಯಪುರ ಕಾರ್ಯಕರ್ತರ ಸಮಾವೇಶದಲ್ಲೂ ಗದ್ದಲ; ಯತ್ನಾಳ್ ಬೆಂಬಲಿಗರ ಅಸಮಾಧಾನ

HT Kannada Desk HT Kannada

Jun 26, 2023 09:55 PM IST

google News

ಯತ್ನಾಳ್ ಬೆಂಬಲಿರಿಂದ ಸಮಾವೇಶಕ್ಕೆ ಅಡ್ಡಿ

    • Basanagouda Patil Yatnal: ಗದ್ದಲದ ವಾತಾವರಣದಿಂದ ಬೇಸರಗೊಂಡ ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಎಎಸ್ ಪಾಟೀಲ ನಡಹಳ್ಳಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಸಭೆಯಿಂದ ಹೊರನಡೆದರು.
ಯತ್ನಾಳ್ ಬೆಂಬಲಿರಿಂದ ಸಮಾವೇಶಕ್ಕೆ ಅಡ್ಡಿ
ಯತ್ನಾಳ್ ಬೆಂಬಲಿರಿಂದ ಸಮಾವೇಶಕ್ಕೆ ಅಡ್ಡಿ

ವಿಜಯಪುರ : ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಅಸಮಾಧಾನ ಸ್ಪೋಟಗೊಂಡ ಬೆನ್ನಲ್ಲೇ ವಿಜಯಪುರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೂ ವಿಜಯಪುರ ನಗರ ಶಾಸಕ ಯತ್ನಾಳ್ ಅವರ ಬೆಂಬಲಿಗರು ಸಮಾವೇಶಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಆಗಮಿಸುವವರೆಗೂ ಸಮಾವೇಶ ಆರಂಭಿಸಬಾರದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬೆಂಬಲಿಗರು ಪಟ್ಟು ಹಿಡಿದು ವೇದಿಕೆಗೆ ನುಗ್ಗಿದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ದ ಧಿಕ್ಕಾರ ಹಾಕಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಬಿಜೆಪಿ ನಾಯಕರು ಕಾರ್ಯಕ್ರಮ ಉದ್ಘಾಟನೆಗೆ ಮುಂದಾದಾಗ ಯತ್ನಾಳ್ ವೇದಿಕೆಗೆ ಬರುವವರೆಗೂ ಕಾರ್ಯಕ್ರಮ ಉದ್ಘಾಟಿಸಬಾರದು ಎಂದು ಅಡ್ಡಿಪಡಿಸಿದರು.

ಸಭೆಯ ಮುಂಭಾಗದಲ್ಲಿ ನೆರೆದಿದ್ದ ವಿಡಿಎ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ್, ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು. ನಗರ ಶಾಸಕರು ಬರುವವರೆಗೂ ಉದ್ಘಾಟನೆ ಮಾಡಬೇಡಿ ಎಂದು ಪಟ್ಟು ಹಿಡಿದು ಅಸಮಾಧಾನ ಹೊರಹಾಕಿದರು.

ತಕ್ಷಣವೇ ಯತ್ನಾಳ್ ಬೆಂಬಲಿಗರು ಬಿಆರ್‌ಪಿ, ಬಿಆರ್‌ಪಿ ಎಂಬ ಘೋಷಣೆಗಳನ್ನು ಕೂಗಿದರು. ಚುನಾವಣೆಯಲ್ಲಿ ಯತ್ನಾಳ್ ಅವರಿಗೆ ದ್ರೋಹ ಬಗೆದವರನ್ನು ಸಭೆಯಿಂದ ಹೊರಹಾಕಿ ಎಂದು ಒತ್ತಾಯಿಸಿದರು.

ಗದ್ದಲದ ವಾತಾವರಣದಿಂದ ಬೇಸರಗೊಂಡ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಎಎಸ್ ಪಾಟೀಲ ನಡಹಳ್ಳಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಸಭೆಯಿಂದ ಹೊರನಡೆದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲವನ್ನೂ ಮೌನವಾಗಿ ನೋಡುತ್ತಾ ವೇದಿಕೆಯಲ್ಲಿ ಕುಳಿತುಕೊಂಡರು. ಕಾರ್ಯಕ್ರಮದಿಂದ ಹೊರನಡೆದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಮುರುಗೇಶ ನಿರಾಣಿ, ಯತ್ನಾಳ್ ವಿರುದ್ಧ ಪರೋಕ್ಷವಾಗಿ ದೊಡ್ಡ ಮಟ್ಟದಲ್ಲಿ ಟೀಕಾ ಪ್ರಹಾರ ನಡೆಸಿದರು.

ಘಟನೆಯಿಂದಾಗಿ ಆಕ್ರೋಶದಿಂದ ಹೊರ ನಡೆದ ಮಾಜಿ ಸಚಿವ ಮುರುಗೇಶ್‌ ನಿರಾಣಿ, ಯತ್ನಾಳ್‌ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದರು. ನನ್ನನ್ನು ಸೋಲಿಸಲು ದುಡ್ಡು ಕೊಟ್ಟು ಕಳುಹಿಸಿದ್ದಾರೆ ಎಂದು ಪದೇ ಪದೇ ವ್ಯಂಗ್ಯವಾಡುವ ನಗರ ಶಾಸಕರು ತಾಕತ್ತಿದ್ದರೆ ಬಹಿರಂಗವಾಗಿ ಇಲ್ಲಿ ಬಂದು ಉತ್ತರಿಸಲಿ. ನಾನೇ ಸಿಎಂ, ವಿಧಾನಸೌಧದ ಮೂರನೆಯ ಮಹಡಿಯಲ್ಲಿ ನಾನೇ ಕೂಡುವೆ ಎಂದು ಅಹಂಕಾರದಿಂದ ಹೇಳುವ ಅವರು ಮೊದಲು ಈ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.

ದುಡ್ಡು ಕೊಟ್ಟಿದ್ದಾರೆ, ದುಡ್ಡು ಕೊಟ್ಟಿದ್ದಾರೆ ಎಂದು ನಾಲಿಗೆ ಹರಿಬಿಡುವ ನಾಯಕರು, ಮನಬಂದಂತೆ ಮಾತನಾಡುತ್ತಾರೆ. ಅವರ ನಾಲಿಗೆಗೆ ಲಗಾಮು ಇಲ್ಲ. ನಾನು ಹಣ ಕಳಿಸಿದ್ದು ನಮ್ಮ ಪಾರ್ಟಿ ಅವರಿಗೆ ತಿಳಿದಿದೆ ಎಂದರು. ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕರಿರುವ ಸಭೆಯಲ್ಲಿ ಈ ರೀತಿಯ ಆಕ್ಷೇಪ ವ್ಯಕ್ತವಾಗುವಂತೆ ಮಾಡಿದ್ದು ಸರಿಯೇ? ಈ ರೀತಿ ಡೋಂಗಿ ರಾಜಕಾರಣ ನಡೆಯಲ್ಲ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಅಶಿಸ್ತಿನ ನಡವಳಿಕೆಗೆ ಬಿಜೆಪಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಿದೆ ಎಂದು ನಿರಾಣಿ ಹೇಳಿದರು.

ವರದಿ: ಸಮಿ ಉಸ್ತಾದ್‌, ವಿಜಯಪುರ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ