Basangouda Patil Yatnal: ಬಸನಗೌಡ ಪಾಟೀಲ ಯತ್ನಾಳರಿಗೆ ಪ್ರತಿಪಕ್ಷ ನಾಯಕ ಪಟ್ಟ ಸಾಧ್ಯತೆ; ಬಿಜೆಪಿ ವಲಯದಲ್ಲಿ ಹೆಚ್ಚಿದ ಒಲವು
Jun 01, 2023 09:08 PM IST
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ
- Karnataka Assembly Opposition Leader: ಅಧಿವೇಶನ ಸಂದರ್ಭದಲ್ಲಿ ಅನೇಕ ಬಾರಿ ಆಡಳಿತ ಪಕ್ಷದ ಭಾಗವಾದರೂ ಸಹ ಮುಲಾಜಿಲ್ಲದೇ ಸರ್ಕಾರದ ಆಡಳಿತ ಯಂತ್ರ, ಬಿಜೆಪಿ ಪ್ರಭಾವಿ ನಾಯಕರ ವಿರುದ್ಧವೂ ಗುಡುಗಿದ್ದರು. ಈಗ ಅವರಿಗೆ ಅಧಿಕೃತವಾದ ಪ್ರತಿಪಕ್ಷ ನಾಯಕನ ಸ್ಥಾನದ ಬಲ ದೊರಕಿದರೆ ಇನ್ನಷ್ಟೂ ಬಲವಾಗಿ ಪ್ರತಿಪಕ್ಷ ಕರ್ತವ್ಯ ನಿಭಾಯಿಸಲು ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ
ವಿಜಯಪುರ : ಪಂಚ ಗ್ಯಾರಂಟಿಗಳ ಭರವಸೆಯೊಂದಿಗೆ ಸಂಪೂರ್ಣ ಬಹುಮತ ಪಡೆದು ರಚನೆಯಾಗಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯ, ತಪ್ಪುಗಳನ್ನು ಸಮರ್ಥವಾಗಿ ಜನರ ಮುಂದೆ ಇಡಲು, ಸದನದಲ್ಲಿ ಪ್ರತಿ ಪಕ್ಷದ ಪ್ರಬಲ ಧ್ವನಿ ಮೊಳಗಿಸಲು ಹಿಂದೂ ಫೈರ್ ಬ್ರ್ಯಾಂಡ್, ನಿಷ್ಠುರ ರಾಜಕಾರಣಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ (Basangouda Patil Yatnal) ವಿಧಾನಸಭೆ ಪ್ರತಿಪಕ್ಷ ನಾಯಕ (Opposition leader) ಸ್ಥಾನವನ್ನು ಬಿಜೆಪಿ ಹೈಕಮಾಂಡ್ ನೀಡಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಆಡಳಿತ ಪಕ್ಷದಲ್ಲಿದ್ದರೂ ಸಹ ಜನಪರ ವಿಷಯದಲ್ಲಿ ಸದಾ ಧ್ವನಿ ಮೊಳಗಿಸುವ ಯತ್ನಾಳ ಈಗ ವಿರೋಧ ಪಕ್ಷದಲ್ಲಿಯೇ ಇರುವುದರಿಂದ ಇನ್ನಷ್ಟು ಸಮರ್ಥವಾಗಿ ಈ ಜವಾಬ್ದಾರಿ ಸ್ಥಾನ ನಿಭಾಯಿಸಲಿದ್ದಾರೆ ಎಂಬ ವಿಶ್ವಾಸದ ಒಲವು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ದೊಡ್ಡ ಒತ್ತಾಯ ಬಿಜೆಪಿ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ. ಈಗ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿದ್ದು ಕಾಂಗ್ರೆಸ್ ಆಡಳಿತ ಪಕ್ಷದಲ್ಲಿದೆ. ಹೀಗಾಗಿ ಯತ್ನಾಳ ಅವರು ಸರ್ಕಾರ ಏನಾದರೂ ವೈಫಲ್ಯವೆಸಗಿದರೆ ಅದನ್ನು ಯಾವ ಮುಲಾಜಿಲ್ಲದೇ ಟೀಕಾಸ್ತ್ರ ಪ್ರಯೋಗಿಸುವುದಂತೂ ಸತ್ಯ.ಜನರ ವಿಷಯ ಬಂದಾಗ ತಮ್ಮ ಸರ್ಕಾರವೇ ತಪ್ಪು ಮಾಡಿದರೂ ಅದನ್ನು ಎತ್ತಿ ತೋರಿಸಿ ಸರ್ಕಾರದ ಚಳಿ ಬಿಡಿಸಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಪ್ರತಿಪಕ್ಷ ನಾಯಕ ಪಟ್ಟ ನೀಡುವಂತೆ ಕೂಗು ಪ್ರಬಲಗೊಳ್ಳುತ್ತಿದೆ.
ನೆರೆ ಬಂದಾಗ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಜನತೆಯ ಸಂತ್ರಸ್ತರ ಧ್ವನಿಯಾಗಿ ಸರ್ಕಾರದ ಕಾರ್ಯವೈಖರಿಯನ್ನು ಯತ್ನಾಳ ತರಾಟೆಗೆ ತೆಗೆದುಕೊಂಡಿದ್ದರು. ಹಿಂದೂತ್ವದ ಐಕಾನ್ ಎಂದು ದೊಡ್ಡ ಸಂಖ್ಯೆಯ ಫ್ಯಾನ್ ಫಾಲೋವರ್ ಹೊಂದಿರುವ ಯತ್ನಾಳರಿಗೆ ಬಿಜೆಪಿ ಪ್ರತಿಪಕ್ಷ ನಾಯಕ ಸ್ಥಾನ ನೀಡಿದರೆ ಸೂಕ್ತ ಎನ್ನುವ ನಿಟ್ಟಿನಲ್ಲಿ ಅನೇಕ ಸಂಘಟನೆಗಳು ಯತ್ನಾಳರ ಪರ ಬ್ಯಾಟಿಂಗ್ ಮಾಡುತ್ತಿವೆ.
ಅಧಿವೇಶನ ಸಂದರ್ಭದಲ್ಲಿ ಅನೇಕ ಬಾರಿ ಆಡಳಿತ ಪಕ್ಷದ ಭಾಗವಾದರೂ ಸಹ ಯಾವ ಮುಲಾಜಿಲ್ಲದೇ ಸರ್ಕಾರದ ಆಡಳಿತ ಯಂತ್ರ, ಅಷ್ಟೇ ಏಕೆ ಬಿಜೆಪಿ ಪ್ರಭಾವಿ ನಾಯಕರ ವಿರುದ್ಧವೂ ಗುಡುಗಿದ್ದರು. ಈಗ ಅವರಿಗೆ ಅಧಿಕೃತವಾದ ಪ್ರತಿಪಕ್ಷ ನಾಯಕನ ಸ್ಥಾನದ ಬಲ ದೊರಕಿದರೆ ಅವರು ಇನ್ನಷ್ಟೂ ಬಲವಾಗಿ ಪ್ರತಿಪಕ್ಷ ಕರ್ತವ್ಯ ನಿಭಾಯಿಸಲು ಸಾಧ್ಯ ಎಂಬ ಮಾತು ಅವಳಿ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೇ ರಾಜ್ಯದಾದ್ಯಂತ ಕೇಳಿಬರುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೊಡ್ಡ ಹಕ್ಕೊತ್ತಾಯ ಸಹ ಬಿಜೆಪಿ ವಲಯದಲ್ಲಿ ಮೊಳಗುತ್ತಿದೆ.
ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಜವಳಿ, ರೈಲ್ವೇ ಖಾತೆ ನಿಭಾಯಿಸಿದ ಅನುಭವವುಳ್ಳ ಯತ್ನಾಳ, ಎರಡು ಬಾರಿ ಸಂಸದರಾಗಿ, ಮೂರು ಬಾರಿ ನಗರ ಶಾಸಕರಾಗಿ ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ `ಮೂರು' ಮನೆಗಳ ಸದಸ್ಯನಾದ ಅನುಭವ ಹೊಂದಿರುವ ಯತ್ನಾಳ ಹಿರಿತನದಲ್ಲೂ ಮುಂದಿದ್ದಾರೆ. ಈ ಎಲ್ಲ ಅರ್ಹತೆ, ಅನುಭವದ ಅಡಿಯಲ್ಲಿ ಅವರಿಗೆ ಪ್ರತಿಪಕ್ಷ ಸ್ಥಾನ ದೊರಕುವುದೇ ಎಂಬುದನ್ನು ಕಾದು ನೋಡಬೇಕಿದೆ.