logo
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಕುಸಿಯುತ್ತಿರುವ ಅಂತರ್ಜಲ ಮಟ್ಟ; ವಿಜಯಪುರ ಜಿಲ್ಲೆಯಲ್ಲಿ ಹನಿ ನೀರಿಗಾಗಿ ದಿನವಿಡಿ ಕಾಯುವ ಸ್ಥಿತಿ

Vijayapura News: ಕುಸಿಯುತ್ತಿರುವ ಅಂತರ್ಜಲ ಮಟ್ಟ; ವಿಜಯಪುರ ಜಿಲ್ಲೆಯಲ್ಲಿ ಹನಿ ನೀರಿಗಾಗಿ ದಿನವಿಡಿ ಕಾಯುವ ಸ್ಥಿತಿ

HT Kannada Desk HT Kannada

Jun 22, 2023 07:00 AM IST

google News

ಕುಸಿಯುತ್ತಿರುವ ಅಂತರ್ಜಲ ಮಟ್ಟ; ವಿಜಯಪುರ ಜಿಲ್ಲೆಯಲ್ಲಿ ಹನಿ ನೀರಿಗಾಗಿ ದಿನವಿಡಿ ಕಾಯುವ ಸ್ಥಿತಿ

    • ವಿಜಯಪುರ ಜಿಲ್ಲೆಯಲ್ಲಿ ಜುಲೈ 15ರ ನಂತರವೂ ಮಳೆಯಾಗದಿದ್ದರೆ ಕುಡಿಯುವ ನೀರಿನ ತಾಪತ್ರಯ ಜಿಲ್ಲೆಯ ಜನರಿಗೆ ತಪ್ಪಿದ್ದಲ್ಲ. ಇದರಿಂದ ಒಟ್ಟು 132 ಹಳ್ಳಿಗಳು ಕುಡಿಯುವ ನೀರಿನ ಬವಣೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಕುಸಿಯುತ್ತಿರುವ ಅಂತರ್ಜಲ ಮಟ್ಟ; ವಿಜಯಪುರ ಜಿಲ್ಲೆಯಲ್ಲಿ ಹನಿ ನೀರಿಗಾಗಿ ದಿನವಿಡಿ ಕಾಯುವ ಸ್ಥಿತಿ
ಕುಸಿಯುತ್ತಿರುವ ಅಂತರ್ಜಲ ಮಟ್ಟ; ವಿಜಯಪುರ ಜಿಲ್ಲೆಯಲ್ಲಿ ಹನಿ ನೀರಿಗಾಗಿ ದಿನವಿಡಿ ಕಾಯುವ ಸ್ಥಿತಿ

ವಿಜಯಪುರ: ವಾಡಿಕೆಯಂತೆ ಮುಂಗಾರು ಆರಂಭವಾಗಬೇಕಿತ್ತು. ಆದರೆ ಈ ಬಾರಿ ಇದುವರೆಗೂ ಮಳೆ ಸುರಿಯದ ಹಿನ್ನೆಲೆ, ಅಂತರ್ಜಲ ಮಟ್ಟ ಕುಸಿಯುತ್ತಿದ್ದು ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ಬೋರ್‌ವೆಲ್‌ಗಳಲ್ಲೂ ಸಮರ್ಪಕ ನೀರು ಬಾರದೆ ಹನಿ‌ ನೀರಿಗಾಗಿ ದಿನವಿಡಿ ಕಾಯುವ ಸ್ಥಿತಿ ಬಂದೊದಗಿದೆ

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜಾಗಲಗೇರಿ ಗ್ರಾಮದ ಹೊಸ ಓಣಿಯಲ್ಲಿ ಸುಮಾರು ನೂರು ಮನೆಗಳಿದ್ದು, ಸದ್ಯ ಅಲ್ಲಿನ ಜನ ಬೋರ್‌ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಒಂದು ಕೊಡ ನೀರಿಗಾಗಿ ಮನೆಯ ಒಬ್ಬ ಸದಸ್ಯೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಜಾಗಲೇರಿ ಗ್ರಾಮದಲ್ಲಿ ಜೆ.ಜೆ.ಎಂ ಅಡಿ 24*7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈಗಾಗಲೇ ನಲ್ಲಿಗಳ ಜೋಡಣೆ ಮಾಡಲಾಗಿದೆ. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಆ ನಳಗಳಲ್ಲಿ ಹನಿ ನೀರು ಬರದೆ ಜನ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಬೋರ್‌ವೆಲ್‌ಗಳಲ್ಲೂ ಅಂತರ್ಜಲ ಮಟ್ಟ ಕುಸಿದಿದ್ದರಿಂದ ನೀರು ಸರಿಯಾಗಿ ಬರುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹನಿ ನೀರಿಗಾಗಿ ಬಡಕುಟುಂಬಗಳು ನಿತ್ಯ ಪರಿತಪ್ಪಿಸುವಂತಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನೀರಿಗಾಗಿ ಗುಮ್ಮಟ ನಗರಿ ಜನರು ಬಸವಳಿದು ಹೋಗಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಶುರುವಾಗಿದೆ.

ತಾಲೂಕುವಾರು ನೀರಿನ ಸಮಸ್ಯೆ

ಇನ್ನು ಜುಲೈ 15ರ ನಂತರವೂ ಮಳೆಯಾಗದಿದ್ದರೆ ಕುಡಿಯುವ ನೀರಿನ ತಾಪತ್ರಯ ಜಿಲ್ಲೆಯ ಜನರಿಗೆ ತಪ್ಪಿದ್ದಲ್ಲ. ಜುಲೈ ಅಂತ್ಯದವರೆಗೂ ಮಳೆಯಾಗದಿದ್ದರೆ ಜಿಲ್ಲೆಯ ಒಟ್ಟು 132 ಹಳ್ಳಿಗಳು ಕುಡಿಯುವ ನೀರಿನ ಬವಣೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ವಿಜಯಪುರ 14, ಬಬಲೇಶ್ವರ 4, ತಿಕೋಟಾ 24, ಇಂಡಿ 45, ಮುದ್ದೇಬಿಹಾಳ 15, ಸಿಂದಗಿ 18, ದೇವರಹಿಪ್ಪರಗಿ 2 ಹಾಗೂ ತಾಳಿಕೋಟೆಯ 10 ಗ್ರಾಮಗಳು ಜುಲೈವರೆಗೆ ಮಳೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕೊಳವೆ ಭಾವಿಗಳ ದುರಸ್ತಿಗೆ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದು, ಬಂದ್ ಆಗಿರುವ ಆರ್‌ಓ ಪ್ಲಾಂಟ್‌ಗಳನ್ನು ಆರಂಭಿಸಲು ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ. ಕುಡಿಯುವ ನೀರಿನ ಪಂಪ್ ಸೆಟ್ ಗಳ ದುರಸ್ತಿ, ಕೊಳವೆಭಾವಿಗಳ ಸ್ಥಿತಿಗಳ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಒಂದು ವೇಳೆ ನೀರಿನ ಸಮಸ್ಯೆ ಭೀಕರವಾದರೆ ಶಾಲೆ, ಕಾಲೇಜು, ಖಾಸಗಿ ಕೊಳವೆ ಭಾವಿಗಳನ್ನು ಸ್ವಾಧಿನಪಡಿಸಿಕೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ವಿಜಯಪುರ ನಗರಕ್ಕೂ ತಟ್ಟಲಿದೆ ಕುಡಿಯುವ ನೀರಿನ ಬಿಸಿ

ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ಈ ಹಿನ್ನಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದರೆ ವಿಜಯಪುರ ನಗರಕ್ಕೂ ಕುಡಿಯುವ ನೀರಿನ ಸಮಸ್ಯೆಯ ಬಿಸಿ ತಟ್ಟಲಿದೆ. 40 ಕಿ.ಮೀ ದೂರದ ಕೋಲ್ಹಾರ್ ಬಳಿ ಕೃಷ್ಣಾ ನದಿಯಿಂದ ವಿಜಯಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಒಂದೊಮ್ಮೆ ನದಿ ನೀರು ಖಾಲಿಯಾದರೆ ವಿಜಯಪುರಕ್ಕೂ ಕುಡಿಯುವ ನೀರಿನ ತಾಪತ್ರಯ ತಪ್ಪಿದ್ದಲ್ಲ.

ವಿಜಯಪುರ ನಗರದಲ್ಲಿ 35 ವಾರ್ಡ್‌ಗಳಿದ್ದು ಕೆಲ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿದ್ದರೆ ಇನ್ನು ಕೆಲ ವಾರ್ಡಗಳಲ್ಲಿ 3-4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಈಗಾಗಲೇ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಂಡಿದ್ದು, ನದಿ ದಂಡೆಯ ರೈತರ ಪಂಪ್ ಸೆಟ್‌ಗಳನ್ನು ಬಂದ್ ಮಾಡಿ ನೀರು ಕುಡಿಯುವ ಸಲುವಾಗಿ ಮಾತ್ರ ಬಳಸಬೇಕು ಕೃಷಿಗೆ ಬಳಸದಂತೆ ಕ್ರಮ ಕೈಗೊಂಡಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ