Vijayapura News: ದ್ರಾಕ್ಷಿನಾಡಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಸೈ ಎನ್ನಿಸಿಕೊಂಡ ಬಸವರಾಜ ರಾನಗಟ್ಟಿ ಯಶೋಗಾಥೆಯಿದು
Oct 31, 2023 05:28 PM IST
ಡ್ರ್ಯಾಗನ್ ತೋಟದಲ್ಲಿ ಬಸವರಾಜ ರಾನಗಟ್ಟಿ (ಎಡಚಿತ್ರ), ಮಾರಾಟಕ್ಕೆ ಸಿದ್ಧವಾಗಿರುವ ಡ್ರ್ಯಾಗನ್ ಫ್ರೂಟ್‌ಗಳು (ಬಲಚಿತ್ರ): ಚಿತ್ರ: ಸಮೀವುಲ್ಲಾ ಉಸ್ತಾದ
- ದ್ರಾಕ್ಷಿ ನಾಡು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ ತಿಕೋಟಾ ತಾಲ್ಲೂಕಿನ ಪ್ರಗತಿಪರ ರೈತ ಬಸವರಾಜ ರಾನಗಟ್ಟಿ. ಡ್ರ್ಯಾಗನ್ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿರುವ ಬಸವರಾಜ್ ಅವರ ಯಶೋಗಾಥೆ ಇಲ್ಲಿದೆ. (ಬರಹ: ಸಮೀವುಲ್ಲಾ ಉಸ್ತಾದ)
ವಿಜಯಪುರ: ದೇಹದಲ್ಲಿ ರಕ್ತಕಣಗಳು ಕಡಿಮೆಯಾದಾಗ ರಕ್ತಕಣಗಳನ್ನು ಹೆಚ್ಚಿಸಲು ನೆರವಾಗುವ ಕಿವಿ ಹಾಗೂ ಡ್ರ್ಯಾಗನ್ ಫ್ರೂಟ್‌ಗಳಿಗೆ ಇತ್ತೀಚಿಗೆ ಫುಲ್ ಡಿಮ್ಯಾಂಡ್. ಒಂದಾನೊಂದು ಕಾಲದಲ್ಲಿ ನೋಡಲು ಸಹ ಅಪರೂಪ, ಅಷ್ಟೇ ಅಲ್ಲ ಅಪರಿಚಿತವಾಗಿದ್ದ ʼಡ್ರ್ಯಾಗನ್' ಸಸ್ಯಗಳು ಇದೀಗ ವಿಜಯಪುರದಲ್ಲಿ ಸಮೃದ್ಧವಾಗಿ ಬೆಳೆಯುತ್ತಿವೆ.
ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯುವ ವಿಜಯಪುರದಲ್ಲಿ ಈಗ ಡ್ರ್ಯಾಗನ್ ಫ್ರೂಟ್ ಸಹ ತನ್ನ ವೈಭವ ಸಾರುತ್ತಿದೆ. ಈ ಭೂಮಿಗೆ ಕೊಂಚ ನೀರು ಕೊಟ್ಟರೆ ಸಾಕು ಇದು ಫಲ ಬೆಳೆಯುವ ಕ್ಯಾಲಿಫೋರ್ನಿಯಾ ಆಗುತ್ತದೆ ಎಂಬ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯ ನುಡಿಗಳು ಈಗ ಸಾಕಾರ ರೂಪ ಪಡೆಯುತ್ತಿವೆ.
ಒಂದು ರೀತಿ ಝುರಾಸಿಕ್ ಪಾರ್ಕ್‌ನ ಡ್ರಾಗನ್‌ಗಳಂತೆ ಗೋಚರಿಸುವ ಡ್ರ್ಯಾಗನ್ ಫ್ರೂಟ್ ತಿಳಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸುವ ಹಣ್ಣು. ಈಗ ಈ ಹಣ್ಣು ವಿಜಯಪುರ ನೆಲದಲ್ಲಿ ಬೆಳೆಯುತ್ತಿರುವುದು ವಿಶೇಷ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಪ್ರಗತಿಪರ ರೈತ ಬಸವರಾಜ ರಾನಗಟ್ಟಿ ತಮ್ಮ 11 ಎಕರೆ ಹೊಲದಲ್ಲಿ 2 ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಹಣ್ಣು ಬೆಳೆದು ಕೈ ತುಂಬಾ ಆದಾಯ ಸಂಪಾದಿಸುವ ಮೂಲಕ ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
6 ವರ್ಷದ ಹಿಂದೆ ಡ್ರ್ಯಾಗನ್ ಫ್ರೂಟ್ ಎಂದರೇನು ಎನ್ನುವುದೇ ಏನು ಗೊತ್ತಿರಲಿಲ್ಲ. ಅಂತಹ ಸಮಯದಲ್ಲಿ ಬಸವರಾಜ ತಮ್ಮ ಸ್ನೇಹಿತನಿಂದ ಮಾಹಿತಿ ಪಡೆದುಕೊಂಡು ಡ್ರ್ಯಾಗನ್ ಫ್ರೂಟ್ ಬೆಳೆಯಲು ಆರಂಭಿಸಿದರು. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅವರು ಮಹಾರಾಷ್ಟ್ರದ ವಿವಿಧ 6 ತೋಟಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಅರ್ಧ ಇಂಚು ನೀರು ಇರುವ ತಮ್ಮ ಹೊಲದಲ್ಲಿ ಡ್ರ್ಯಾಗನ್ ಬೆಳೆ ಬೆಳೆಯುವ ಪ್ರಯೋಗಕ್ಕೆ ಮುಂದಾಗಿ ಯಶಸ್ಸು ಕಂಡಿದ್ದಾರೆ.
ಆರಂಭದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಕೆಂಪು ಡ್ರ್ಯಾಗನ್, ಇನ್ನೊಂದು ಎಕರೆ ಪ್ರದೇಶದಲ್ಲಿ ಬಿಳಿ ಬಣ್ಣದ ಡ್ರ್ಯಾಗನ್ ಬೆಳೆದಿದ್ದು, ಕೆಂಪು ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಬಿಳಿ ಡ್ರ್ಯಾಗನ್ ತಗೆದು ತಮ್ಮ 2 ಎಕರೆ ಪ್ರದೇಶದಲ್ಲಿ ಕೆಂಪು ಡ್ರ್ಯಾಗನ್ ಬೆಳೆದಿದ್ದಾರೆ.
ಒಂದು ಎಕರೆ ಡ್ರ್ಯಾಗನ್ ಬೆಳೆಯಲು ಅಂದಾಜು 3 ಲಕ್ಷ ಖರ್ಚಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು 500 ಕಂಬ, 500 ರಿಂಗ್, 2000 ಸಸಿ ನೆಡಬಹುದು. ಒಂದು ಬಾರಿ ಗಿಡ ನೆಟ್ಟರೆ 25 ರಿಂದ 30 ವರ್ಷಗಳ ಕಾಲ ಹಣ್ಣು ನೀಡುತ್ತದೆ. ಆರಂಭದ ವರ್ಷದಲ್ಲಿ ಒಂದಿಷ್ಟು ಖರ್ಚು ಹೆಚ್ಚಿದ್ದರೂ ದಿನ ಕಳೆದಂತೆ ಖರ್ಚು ಕಮ್ಮಿಯಾಗುತ್ತದೆ. ಕೂಲಿ, ಕೀಟನಾಶಕ, ಗೊಬ್ಬರ ಸೇರಿದಂತೆ ಕೇವಲ ರೂ. 1 ಲಕ್ಷ ಒಳಗೆ ಖರ್ಚು ಮಾಡಿ ರೂ. 10 ಲಕ್ಷ ಆದಾಯ ಗಳಿಸಬಹುದು ಎಂದು ರೈತ ಬಸವರಾಜ ರಾನಗಟ್ಟಿ ಮಾಹಿತಿ ನೀಡಿದರು.
ಡ್ರ್ಯಾಗನ್ ವರ್ಷಕ್ಕೆ ಒಂದು ಬೆಳೆಯಾಗಿದ್ದು, ಜೂನ್ ತಿಂಗಳಿಂದ ಅಕ್ಟೋಬರ್‌ವರೆಗೆ ಸೀಜನ್ ಇರುತ್ತದೆ. 20 ದಿನಕ್ಕೊಮ್ಮೆ ಹೂ ಬಿಡುತ್ತದೆ. ಒಂದು ವರ್ಷದಲ್ಲಿ 6 ರಿಂದ 8 ಬಾರಿ ಹಣ್ಣ ಕೊಡುತ್ತದೆ. ಈ ಬೆಳೆಗೆ ರೋಗಾಂಶ ಬಹಳ ಕಡಿಮೆ ಇರುತ್ತದೆ. ಇರುವೆಗಳು ಸಾಯಲು ಸ್ವಲ್ಪ ಕೀಟನಾಶಕ ಸಿಂಪಡಿಸಲಾಗುತ್ತದೆ ಬಿಟ್ಟರೆ ಹೆಚ್ಚಿಗೆ ಏನು ಮಾಡುವುದಿಲ್ಲ. 3 ದಿನಕ್ಕೊಮ್ಮೆ ಒಂದು ಗಂಟೆ ಮಾತ್ರ ನೀರು ಬಿಡುತ್ತೇವೆ. ಬಿಸಿಲು ಹೆಚ್ಚಿದಂತೆ ನೀರು ಕಮ್ಮಿ ಬಿಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಬೇರು ಕೊಳೆತು ಹೋಗುತ್ತದೆ. ಮಳೆ ಹೆಚ್ಚಾದಂತೆ ಹೂ, ಕಾಯಿ ಹೆಚ್ಚಿಗೆ ಬಿಡುತ್ತದೆ. ಇದರಿಂದ ಬೆಳೆ ಹೆಚ್ಚು ಎಂದು ಅವರು ಮಾಹಿತಿ ನೀಡುತ್ತಾರೆ.