Vijayapura Earthquake: ವಿಜಯಪುರದ ಉಕುಮನಾಳ ಭಾಗದಲ್ಲಿ ಭೂಕಂಪ, 3.1 ತೀವ್ರತೆ ದಾಖಲು
Dec 08, 2023 03:46 PM IST
ವಿಜಯಪುರದಲ್ಲಿ ಇಂದು (ಡಿ.8) ಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ.
ವಿಜಯಪುರದ ಉಕುಮನಾಳ ಗ್ರಾಮದಲ್ಲಿ ಇಂದು (ಡಿ.8) ಬೆಳಗ್ಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ. ನಾಶ ನಷ್ಟದ ವರದಿ ಇಲ್ಲ. ಆದಾಗ್ಯೂ, ಜನರಲ್ಲಿ ಕಳವಳ, ಆತಂಕ ಮನೆಮಾಡಿದೆ.
ಜಿಲ್ಲೆಯ ಉಕುಮನಾಳ ಗ್ರಾಮದಲ್ಲಿ ಶುಕ್ರವಾರ (ಡಿ.8) ಬೆಳಗ್ಗೆ 6.52ಕ್ಕೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ಅನುಭವದಿಂದ ಭಯಭೀತರಾದ ಜನರು ಮನೆಯಿಂದ ಆಚೆ ಬಂದು ಕಾಲಕಳೆಯುವಂತಾಗಿದೆ.
ಇಂದು ಬೆಳಗಿನ ಜಾವ ಭೂಕಂಪನವಾಗಿರುವ ಕುರಿತು ರಿಕ್ಟರ್ ಮಾಪಕದಲ್ಲಿ 3.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ಕೆಎಸ್ಎನ್‌ಡಿಎಂಸಿ ಅಧಿಕಾರಿಗಳು ದೃಢೀಕರಿಸಿದ್ದಾರೆ.
ಇನ್ನು ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪವಾಗುತ್ತಲೆ ಇದ್ದು ಜನರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಇನ್ನು ಜಿಲ್ಲೆಯಲ್ಲಿ ಭೂಕಂಪನದ ಸದ್ದು ಆಗಾಗ ಆಗುತ್ತಿದ್ದು ಇದರಿಂದ ಜನರಲ್ಲಿ ಆತಂಕ ಎದುರಾಗಿದೆ. ರಾತ್ರಿ, ಮಧ್ಯರಾತ್ರಿ ಸಮಯದಲ್ಲಿ ಏಕಾಏಕಿ ಶಬ್ದದೊಂದಿಗೆ ಭೂಮಿ ನಡುಗುತ್ತಿರುವುದು ಜನತೆ ನಿದ್ದೆಗೆಡುವಂತೆ ಮಾಡಿದೆ.
ಇನ್ನು ಕಳೆದೆರಡು ವರ್ಷಗಳಿಂದ ಪದೇಪದೇ ಭೂಮಿ ಕಂಪಿಸುತ್ತಿರುವುದರಿಂದ ಗಲ್ಲಿ-ಗಲ್ಲಿ, ಚಹಾ ಅಂಗಡಿಗಳಲ್ಲಿ ಭೂಕಂಪನದ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. ಜನತೆ ತಮ್ಮಷ್ಟಕ್ಕೆ ತಾವೇ ಕಾರಣ ಹುಡುಕುವಲ್ಲಿ ನಿರತರಾಗಿದ್ದಾರೆ.
ಭೂಕಂಪ ಇದೇ ಮೊದಲಲ್ಲ…
ದಶಕದಿಂದ ಇದೇ ರೀತಿಯಾಗಿ ಭೂಕಂಪನದ ಅನುಭವವಾಗಿದೆ. ವಿಜಯಪುರ ಭಾಗದಲ್ಲಿ 2010ರಲ್ಲಿ 24 ಬಾರಿ ಭೂಮಿ ಕಂಪಿಸಿತ್ತು. ನಂತರ 2011ರಲ್ಲಿ ಒಂದು ಬಾರಿ ಕಂಪಿಸಿತ್ತು. ಇದಾದನಂತರ 2011 ರಿಂದ 2021ರವರೆಗೆ ಭೂಕಂಪನದ ಸದ್ದೇ ಇರಲಿಲ್ಲ. 2021ರಿಂದ ಮತ್ತೆ ಭೂಕಂಪನ ಸಂಭವಿಸುತ್ತಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ.
2010 ರಲ್ಲಿ ತಳೆವಾಡ, ಕಲಗುರ್ಕಿ, ಮಲಘಾಣ, ಹುಣಶ್ಯಾಳ ಭಾಗದಲ್ಲಿ ಪದೇ ಪದೆ ಭೂಕಂಪನಗಳು ಸಂಭವಿಸಿದ ಕಾರಣ ಅಲ್ಲಿ ಭೂಕಂಪ ನಿರೀಕ್ಷಣಾ ಯಂತ್ರಗಳನ್ನು ಅಳವಡಿಸಲಾಗಿತ್ತು. ಅಲ್ಲಿ ದಾಖಲಾದ ಭೂಕಂಪನಗಳನ್ನು ಅವಲೋಕಿಸಿದಾಗ ಸಾಮಾನ್ಯವಾಗಿ 1.2 ಕಡಿಮೆ ತೀವ್ರತೆಯ ಭೂಕಂಪ ದಾಖಲಾಗಿದ್ದರೆ, ಒಂದು ಬಾರಿ ಮಾತ್ರ (29-01-2010)ರಲ್ಲಿ 3.1 ತೀವ್ರತೆ ದಾಖಲಾಗಿತ್ತು. ಇದನ್ನು ಹೊರತು ಪಡಿಸಿ ಉಳಿದೆಲ್ಲವೂ ಕಡಿಮೆ ತೀವ್ರತೆಯ ಭೂಕಂಪನಗಳು ಸಂಭವಿಸಿದ್ದವು. ವಿಶೇಷವಾಗಿ ಕಲಗುರ್ಕಿ ಗ್ರಾಮದಲ್ಲಿ ಅತೀ ಹೆಚ್ಚು ಬಾರಿ ಭೂಕಂಪನ ಸಂಭವಿಸಿತ್ತು.
ಇನ್ನು ಉಕುಮನಾಳ ಗ್ರಾಮದಲ್ಲಿ ಪದೇ ಪದೇ ಭೂಕಂಪನವಾಗುತ್ತಿರುವುದು ಅಲ್ಲಿನ ಜನರಲ್ಲಿ ಆತಂಕವನ್ನು ಹೆಚ್ಚಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ವರದಿ: ಸಮೀವುಲ್ಲಾ ಉಸ್ತಾದ